ಟಬಾಸ್ಕೋ - ಆಗ್ನೇಯ ಮೆಕ್ಸಿಕೋದಲ್ಲಿರುವ ಒಂದು ರಾಜ್ಯ. ಪಶ್ಚಿಮದಲ್ಲಿ ವೆರ ಕ್ರೂಜ್ ರಾಜ್ಯ, ದಕ್ಷಿಣದಲ್ಲಿ ಚಿಯಾ ಪಾಸ್ ರಾಜ್ಯ, ಪೂರ್ವದಲ್ಲಿ ಕ್ಯಾಂಪೀಚೀ ರಾಜ್ಯ, ಆಗ್ನೇಯದಲ್ಲಿ ಗ್ವಾಟಮಾಲ ದೇಶ, ಉತ್ತರದಲ್ಲಿ ಕ್ಯಾಂಪೀಚೀ ಕೊಲ್ಲಿ-ಇವು ಇದರ ಮೇರೆಗಳು. ವಿಸ್ತೀರ್ಣ 9,522 ಚ.ಮೈ. (24,661 ಚ. ಕಿಮೀ.), ಜನಸಂಖ್ಯೆ 7,66,346 (1970). ರಾಜಧಾನಿ ವೀಯಎರ್ಮೋಸ. ಟಬಾಸ್ಕೋದ ಭೂಪ್ರದೇಶ ಚಿಯಾಪಾಸ್ ಪ್ರದೇಶದಿಂದ ಕ್ಯಾಂಪೀಚೀ ಕೊಲ್ಲಿಯ ಕಡೆಗೆ ಇಳಿಜಾರಾಗಿದೆ. ಇಲ್ಲಿ ಅನೇಕ ಸರೋವರಗಳೂ ಜವುಗು ನೆಲಗಳೂ ಇವೆ. ತೀರಪ್ರದೇಶ ಅನೇಕ ವಿಶಾಲವಾದ ಲಗೂನ್‍ಗಳಿಂದ ಕೂಡಿದೆ. ಟಬಾಸ್ಕೋದಲ್ಲಿ ಬಹಳ ಹೆಚ್ಚಿನ ಮಳೆಯಾಗುವುದರಿಂದ (120") ರಾಜ್ಯದಲ್ಲಿ ದಟ್ಟವಾದ ಉಷ್ಣವಲಯ ಕಾಡುಗಳಿವೆ. ಈ ರಾಜ್ಯದ ಎರಡು ಮುಖ್ಯ ನದಿಗಳು ಗ್ರೀಹಾಲ್ವ ಮತ್ತು ಊಸಮಸಿಂಟ. ಗ್ರೀಹಾಲ್ವಕ್ಕೆ ಟಬಾಸ್ಕೋ ನದಿಯೆಂದೂ ಹೆಸರಿದೆ. ಸುಮಾರು 62 ಮೈ. (100 ಕಿಮೀ.) ದೂರ ಇದು ಯಾನಯೋಗ್ಯ. ಊಸಮಸಿಂಟ ನದಿಯ ಮೇಲೆ 310 ಮೈ. ದೂರ ನೌಕೆಗಳು ಸಂಚರಿಸಬಹುದು. ಟಬಾಸ್ಕೋದಲ್ಲಿ ಹೆಚ್ಚು ರಸ್ತೆಗಳಿಲ್ಲ. ನದಿಗಳೇ ಮುಖ್ಯ ಸಂಚಾರಮಾಧ್ಯಮಗಳು. 1950ರಲ್ಲಿ ನಿರ್ಮಿಸಲಾದ ರೈಲುಮಾರ್ಗ ರಾಜ್ಯದ ಪೂರ್ವದಿಂದ ಪಶ್ಚಿಮದ ಕಡೆಗೆ ಸಾಗಿದೆ. ರಾಜಧಾನಿ ವೀಯಎರ್ಮೋಸ (78,034) (1969) ಗ್ರೀಹಾಲ್ವ ನದಿಯ ಮೇಲಿದೆ. ಅದೊಂದು ಜಾನುವಾರು ಹಾಗೂ ಬನಾನಾ ವ್ಯಾಪಾರಕೇಂದ್ರ. ಅಲ್ಲೊಂದು ವಿಮಾನ ನಿಲ್ದಾಣವಿದೆ. ರಾಜ್ಯದ ಎರಡನೆಯ ದೊಡ್ಡ ಪಟ್ಟಣ ಹಾಗೂ ಮುಖ್ಯ ಬಂದರು ಫ್ರಂಟೀರ (8,375) (1960). ಇದು ಗ್ರೀಹಾಲ್ವ ನದಿಯ ಮುಖದಿಂದ 3 ಮೈ. ಮೇಲಕ್ಕೆ, ಅದರ ದಂಡೆಯ ಮೇಲೆ ಇದೆ. ಹಿಂದೆ ಇದಕ್ಕೆ ಆಲ್ವರೋ ಓಬ್ರಿಗಾನ್ ಎಂಬ ಹೆಸರಿತ್ತು. ರಾಜ್ಯದ ಜನರ ಮುಖ್ಯ ಕಸುಬು ವ್ಯವಸಾಯ ಕೊಬ್ಬರಿ, ಬಾಳೆ, ಕೋಕೋ, ಕಾಫಿ, ಬತ್ತ, ಕಬ್ಬು, ರಬ್ಬರ್, ವೆನಿಲ, ಹಣ್ಣುಗಳು, ಮುಸುಕಿನ ಜೋಳ ಮುಖ್ಯ ಬೆಳೆಗಳು. ದನಗಳನ್ನು ಸಾಕುತ್ತಾರೆ. ರಬ್ಬರ್ ಮತ್ತು ಚೌಬೀನೆ ಮುಖ್ಯ ಅರಣ್ಯೋತ್ಪನ್ನಗಳು. ತೈಲ ವಿನಾ ಬೇರಾವ ಖನಿಜನಿಕ್ಷೇಪಗಳೂ ಇಲ್ಲಿ ಇಲ್ಲ.

ಇತಿಹಾಸ ಬದಲಾಯಿಸಿ

ವಾನ್ ಡ ಗ್ರೀಹಾಲ್ವ 1518ರಲ್ಲಿ ಈ ಪ್ರದೇಶವನ್ನು ಪರಿಶೋಧಿಸಿದ. ಮುಂದಿನ ವರ್ಷಗಳಲ್ಲಿ ಸ್ಪ್ಯಾನಿಷರು ಇಲ್ಲಿಯ ಇಂಡಿಯನರೊಂದಿಗೆ ಯುದ್ಧ ಮಾಡಿ ಕ್ರಮಕ್ರಮವಾಗಿ ಈ ಪ್ರದೇಶವನ್ನು ಆಕ್ರಮಿಸಿಕೊಂಡರು. ಟಬಾಸ್ಕೋ ಎಂಬುದು ಇಂಡಿಯನ್ ಹೆಸರು. ತೇವದ ನೆಲ ಎಂದು ಇದರ ಅರ್ಥ. ಇದು 1824ರಲ್ಲಿ ಒಂದು ರಾಜ್ಯವಾಯಿತು.




 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟಬಾಸ್ಕೋ&oldid=1082932" ಇಂದ ಪಡೆಯಲ್ಪಟ್ಟಿದೆ