ಟಗ್ ಆಫ್ ವಾರ್ - ಎರಡು ತಂಡಗಳ ನಡುವೆ ನಡೆಯುವ ಹಗ್ಗ ಎಳೆಯುವ ಸ್ಪರ್ಧೆ.

ಸ್ಪರ್ಧೆಯ ವಿವರ ಬದಲಾಯಿಸಿ

ಒಂದೊಂದು ತಂಡದಲ್ಲೂ ಎಂಟು ಮಂದಿ ಇರುತ್ತಾರೆ. 35ಗೆ ಕಡಿಮೆಯಿರದ, 4” ಸುತ್ತಳತೆಯ ಹಗ್ಗವೊಂದನ್ನು ಸ್ಪರ್ಧೆಗಾಗಿ ಬಳಸುವುದಿದೆ. ಹಗ್ಗದ ನಡುಭಾಗದಲ್ಲಿ ಮತ್ತು ಆ ಭಾಗದ ಇಕ್ಕೆಲಗಳಲ್ಲಿ 6ಯಷ್ಟು ಸಮದೂರದಲ್ಲಿ ಗುರುತಿಗಾಗಿ ಬಣ್ಣದ ಪಟ್ಟೆಗಳನ್ನು ಕಟ್ಟಿರುತ್ತಾರೆ. ಈ ಗುರುತುಗಳಿಗೆ ಅನುಗುಣವಾಗಿ ನೆಲದ ಮೇಲೂ ಗುರುತು ಮಾಡಿರುವುದುಂಟು. ಇಷ್ಟು ಸಿದ್ಧತೆಗಳಾದ ಮೇಲೆ ಹಗ್ಗದ ಎರಡು ಕಡೆ ಏಳೆಂಟು ಮಂದಿ ನಿಂತು ಕೈಯಲ್ಲಿ ಹಗ್ಗವೆನ್ನೆತ್ತಿಕೊಳ್ಳುತ್ತಾರೆ. ಹೀಗೆ ಎತ್ತಿಕೊಂಡಾಗ ಹಗ್ಗದ ನಡುವಿನ ಗೆರೆ ನೆಲದಲ್ಲಿ ಮಾಡಿದ ನಡುವಿನ ಗೆರೆಯ ಮೇಲೆ ಇರಬೇಕು. ನಿರ್ಣಯಾಧಿಕಾರಿ ಸೀಟಿ ಊದಿದಾಗ ಎರಡೂ ಕಡೆ ಎಳೆತ ಪ್ರಾರಂಭವಾಗುತ್ತದೆ. ಎಳೆತದ ಸಾಮಥ್ರ್ಯ ಪ್ರದರ್ಶನವೇ ಈ ಆಟದ ಗುರಿ, ಯಾವ ತಂಡ 6 ಗುರುತಿನ ಪಟ್ಟೆಯ ಸ್ಥಾನವನ್ನು (ಅಂದರೆ ನೆಲದ ಮೇಲಿನ ಅನುಕ್ರಮ ಗುರುತನ್ನು) ನಡುಭಾಗದ ಗುರುತಿನ ಮೂಲಕ ಹಾಯುವುದೋ ಆಗ ಎದುರು ತಂಡ ಗೆದ್ದಂತೆಯೇ. ಯಾವುದೇ ಒಂದು ತಂಡದ ಯಾವೊಬ್ಬನ ಕಾಲಿನ ಪಾದ ವಿರುದ್ಧ ದಿಶೆಯ 6 ಗುರುತನ್ನು ಮುಟ್ಟಿದರೂ ಸಾಕು ಇದುರಾಳಿಯವರು ಗೆದ್ದಂತೆಯೇ ಸರಿ. ಸಮಾನ್ಯವಾಗಿ ಇಂಥ ಎಳೆತ ಮೂರು ಸಲ ನಡೆಯುತ್ತದೆ. ಎರಡು ಎಳೆತಗಳಲ್ಲಿ ಯಾವ ತಂಡ ಗೆದ್ದರೂ ಅದು ಅಂತಿಮವಾಗಿ ಜಯಶಾಲಿಯಾದಂತೆ. ವಿಶೇಷ ತರಬೇತು ಪಡೆದ ಯುವಕರು ಸಾಮಾನ್ಯವಾಗಿ ಇಂಥ ಎಳೆತದ ಸ್ಪರ್ಧೆಗಳಲ್ಲಿ ಭಾಗವಹಿಸುವುದು ರೂಢಿ. ಹೀಗಾಗದಿದ್ದಲ್ಲಿ ಹೆಚ್ಚಿನ ಆಯಾಸವಾಗುವ ಸಂಭವವುಂಟು.

ಇತಿಹಾಸ ಬದಲಾಯಿಸಿ

ಟಗ್ ಆಫ್ ವಾರ್ ಸ್ಪರ್ಧೆ ಬಹಳ ಪ್ರಾಚೀನ ಕಾಲದಿಂದಲೂ ಇದೆಯೆನ್ನಲಾಗಿದೆ. ಹಿಂದೆ, ಕೊಯ್ಲಿನ ಕಾಲದಲ್ಲಿ. ರೈತಾಪಿ ಜನ ಧಾನ್ಯದ ದೈವತ್ವದ ಸಂಕೇತದಂತಿದ್ದ ಹುಲ್ಲಿನ ಹುರಿಯನ್ನೋ ಇಲ್ಲವೇ ಧಾನ್ಯದ ಕೊನೆಯ ಹೊರೆಯನ್ನೋ ತಮ್ಮದನ್ನಾಗಿಸಿಕೊಳ್ಳುವುದಕ್ಕಾಗಿ ಇಂಥ ಒಂದು ಸ್ಪರ್ಧೆಯನ್ನು ನಡೆಸುತ್ತಿದ್ದರಂತೆ. ಈ ಬಗೆಯ ಹೋರಾಟ ಸಾಮಾನ್ಯವಾಗಿ ಹಳ್ಳಿಗಳ ನಡುವೆ ಆಗಾಗ್ಗೆ ನಡೆಯುತ್ತಲೇ ಇತ್ತು. ಗೆದ್ದವರಿಗೆ ಒಳ್ಳೆಯ ಫಸಲು ಆಗುತ್ತವೆಂಬ ನಂಬಿಕೆ ಇತ್ತು. ಇಂಗ್ಲೆಂಡಿನಲ್ಲಿ ಇಂಥದೇ ಒಂದು ಆಟ ಅಲ್ಲಿನ ಮಕ್ಕಳಲ್ಲಿ ಉಂಟು. ಹಿಯರ್ ವಿ ಗೋ ಗ್ಯಾದರಿಂಗ ನಟ್ಸ್ ಇನ್ ಮೇ ಎಂದು ಹಾಡುತ್ತ ಆಡುವ ಆಟ ಟಗ್ ಆಫ್ ವಾರನ್ನೇ ಹೋಲುತ್ತದೆ. ಹಲವಾರು ಬಗೆಯ ಟಗ್ ಆಫ್ ವಾರ್‍ಗಳುಂಟು. ಹಗ್ಗವನ್ನು ಬಳಸದೆ ಆಡುವುದು, ಕುದುರೆ ಸವಾರರ ಅನುಕರಣೆ ಮಾಡುವುದು, ಮೊಣಕಾಲಿಗೆ ಹಗ್ಗವನ್ನು ಕಟ್ಟುವುದು, ಸೈಕಲ್ ಸವಾರರು ಪಾಲ್ಗೊಳ್ಳುವುದು_ಇತ್ಯಾದಿ. ಪ್ರತಿಯೊಂದರಲ್ಲೂ ಒಂದೊಂದು ವೈಶಿಷ್ಟ್ಯವಿದೆ. ಈ ಸ್ಪರ್ಧೆಗೆ ಬಳಸುವ ಹಗ್ಗದ ಉದ್ದ, ಸುತ್ತಳತೆ, ಪಾಲ್ಗೊಳ್ಳುವ ಆಟಗಾರರ ದೇಹದ ತೂಕ_ಮುಂತಾದವುಗಳ ಮೇಲೆ ಕೆಲವೊಂದು ನಿರ್ಬಂಧಗಳನ್ನು ಹೇರಿರುವುದೂ ಉಂಟು.



 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: