ಜ್ವಾಲಾಮಾಲಿನಿ ದೇವಿ ಬಸದಿ, ಗೇರುಸೊಪ್ಪೆ
ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗು ಮಹಾಮಾತೆ ಶ್ರೀ ಜ್ವಾಲಮಾಲಿನಿ ದೇವಿಯ ಈ ಬಸದಿಯನ್ನು ಹಿರೇ ಬಸದಿ ಎಂದೂ ಕರೆಯುತ್ತಾರೆ.
ಸ್ಥಳ ಮತ್ತು ಮಾರ್ಗ
ಬದಲಾಯಿಸಿಹೊನ್ನಾವರದಿಂದ ೩೯ಕಿ.ಮೀ ದೂರದಲ್ಲಿ ಶರಾವತಿ ಮತ್ತು ಕ¯ಕಟ್ಟೆ ನದಿಯ ಬಳಿಯಲ್ಲಿದೆ. ಗೇರುಸೊಪ್ಪೆ ಸರ್ಕಲ್‌ನಿಂದ ಬಸದಿಗೆ ೭ ಕಿ.ಮೀ ದೂರ. ಗೇರುಸೊಪ್ಪೆ ಪೇಟೆಯಿಂದ ದೋಣಿ ಮುಖಾಂತರ ಬರುವುದಾದರೆ ೧ ಕಿ.ಮೀ ದೂರ. ದೋಣಿ ದಾಟಿ ನಡೆದುಕೊಂಡು ಬರುವುದಾದರೆ ಗೇರುಸೊಪ್ಪೆ ಸರ್ಕಲ್‌ನಿಂದ ಮುಂದೆ ಜೋಗ ರಸ್ತೆಯಲ್ಲಿ ಸ್ವಲ್ಪ ಮುಂದೆ ಹೋದಾಗ ಎಡಭಾಗದಲ್ಲಿ ಅರಣ್ಯ ಇಲಾಖೆಯವರ ಸಿಂಗಳಿಕ ಪಾರ್ಕ್ ಇದೆ. ಅಲ್ಲೇ ಮುಂದೆ ಬಲಭಾಗದಲ್ಲಿ ಡ್ಯಾಂ ಸೈಟಿಗೆ ಹೋಗುವ ದಾರಿಯಿದೆ. ಅದೇ ರಸ್ತೆಯಲ್ಲಿ ಸೇತುವೆ ದಾಟಿ ಮುಂದೆ ಹೋದಾಗ ಸದಿಗೆ ಹೋಗುವ ರಸ್ತೆ ಸಿಗುತ್ತದೆ. ಆ ರಸ್ತೆ ಇಲ್ಲಿಗೇ ಬರುತ್ತದೆ. ಇದುವೇ ಈ ಗೇರುಸೊಪ್ಪೆಯ ಈ ಬಸದಿಗಳ ಸಮುಚ್ಛಯಕ್ಕೆ ಬರುವ ದಾರಿ. ಇದು ಈ ವರೆಗೆ ವಿವರಿಸಿದ ಬಸದಿಗಳ ಹತ್ತಿರದಲ್ಲೇ ಇದೆ. ಇದರ ಪೋಸ್ಟಲ್ ಮಾಹಿತಿ: ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಜ್ವಾಲಾಮಾಲಿನಿ ದೇವಿ ಬಸದಿ, ಬಸದಿ ಕೇರಿ, ನಗರಬಸದಿ ಕೇರಿ ಅಂಚೆ, ಗೇರುಸೊಪ್ಪೆ – ೫೮೧೩೮೪, ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ.
ಇತಿಹಾಸ
ಬದಲಾಯಿಸಿಪ್ರಾಚೀನ ಕಾಲದಲ್ಲಿ ಇಲ್ಲಿ ಶ್ರೀ ಸಮಂತಭದ್ರಾಚಾರ್ಯರಿಂದ ಗೇರುಸೊಪ್ಪದ ಸಾಮ್ರಾಜ್ಯ ಸ್ಥಾಪನೆ ಆಯಿತೆಂದು ಹೇಳಲಾಗುತ್ತಿದೆ. ಇತಿಹಾಸದಲ್ಲಿ ಈ ಕ್ಷೇತ್ರದ ರಾಜಗುರು ಮೂಡುಬಿದಿರೆಯ ಭಟ್ಟಾರಕರು ಎಂಬ ಉಲ್ಲೇಖ ಇದೆ. ಇದು ಸ್ವಾದಿ ಮಠಕ್ಕೆ ಹತ್ತಿರದಲ್ಲಿರುವುದರಿಂದ ಯಾವುದೇ ದೊಡ್ಡ ಧಾರ್ಮಿಕ ಕಾರ್ಯಕ್ರಮ ನಡೆದಾಗ ಅವರ ಮಾರ್ಗದರ್ಶನ ಕೇಳಿ ಅದರಂತೆ ಇಲ್ಲಿಯವರು ನಡೆದುಕೊಳ್ಳುತ್ತಾರೆ. ಹಿಂದೆ ಇಲ್ಲಿ ಮೂಲತಹ ಬಸ್ತಿಕೇರಿಯ ಪುರೋಹಿತ ಕುಟುಂಬದವರು ಇಲ್ಲಿನ ರಾಜಪುರೋಹಿತರಾಗಿದ್ದರು.೧೯೦೦ ಕಾಲಘಟ್ಟದಲ್ಲಿ ಬಸ್ತಿಕೇರಿ ಮಂಜಯ್ಯ ಶೆಟ್ಟಿ ಪುರೋಹಿತರಾಗಿದ್ದರು.ಇವರೇ ಇಲ್ಲಿಯ ಮೂಲಪುರೋಹಿತರು, ಹಾಗು ಮೂಲಪುರೋಹಿತ ವರ್ಗದ ಕೊನೆಯಕುಡಿ. ಪ್ರಾರಂಭದಲ್ಲಿ ನಗರಬಸದಿಕೇರಿಯಲ್ಲೇ ಅವರು ವಾಸವಿದ್ದರು.ನಂತರ ತಮ್ಮ ವಾಸಸ್ಥಾನವನ್ನು ಗೇರುಸೊಪ್ಪದ ಪೇಟೆಯಲ್ಲಿನ ಬಸ್ತಿಕೇರಿಗೆ ಸ್ಥಳಾಂತರಗೊಂಡರು.ಕಾರಣ ಪೌರೋಹಿತ್ಯ ಮಾಡುವವರಿಗೆ ದೇವರ ಹೆಸರಲ್ಗಿ ಉಂಬಳಿಯಾಗಿ ಅಲ್ಲಿ ಜಮೀನನ್ನು ಬಿಡಲಾಗಿತ್ತು.1925-1930 ರಲ್ಲಿ ಇವರು ಬಸ್ತಿಕೇರಿಲ್ಲಿ ಕಾಲವಾದರು.ಅವರಿಗೆ ಸಂತಾನವಿಲ್ಲದ ಕಾರಣ ಪೂಜಾ ಕಾರ್ಯಕ್ಕೆ ಯಾರೂ ಲಭ್ಯವಿಲ್ಲದೆ ಆಯಿತು. ಹೀಗೆ ಮುಂದಿನ ನಾಲ್ಕಾರು ವರ್ಷ ಹೆಗ್ಗಾರುಗದ್ದೆಯ ಮನೆತನ ಹಾಗು ಹಂಜಕ್ಕಿ ಮನೆತನದವರು ಆಡಳಿತ ಮತ್ತು ಪೂಜಾ ಕಾರ್ಯ ನಡೆಸಿಕೊಂಡು ಹೋದರು.ಇದೇ ಸಮಯದಲ್ಲಿ ಸಾಳ್ವ ವಂಶಸ್ತರಾದ ಹಂಜಕ್ಕಿ ಮನೆತನದಲ್ಲಿ, ಗುಚ್ಚಕ್ಕಿ ಮನೆ ಎಂದು ಕರೆಯುವ ಪುರಾತನ ಮನೆಯು ಬೆಂಕಿಗಾಹುತಿಯಾಗಿ ಹಂಜಕ್ಕಿ ಮನೆಯು ಗೇರುಸೊಪ್ಪಕ್ಕೆ ಸ್ಥಳಾಂತರವಾಯಿತು. ಯೋಜನಾ ಶ್ರೇಷ್ಠಿಯ ಮಡದಿ ರಾಮಕ್ಕ ಹಾಗು ರಾಮಕ್ಕಳ ಸಹೋದರ ಬೈಚಿರಾಜ ಗುಚ್ಚಕ್ಕಿ ಮನೆಯವರು. ಯೋಜನಾ ಶ್ರೇಷ್ಠಿ ಹಾಗು ರಾಮಕ್ಕ ನಗರ ಬಸದಿಕೇರಿಯಲ್ಲಿ ಹದಿನಾರು ಬಸದಿಗಳನ್ನು ಕಟ್ಟಿಸಿದ್ದಾರೆ. ಈಗಿರುವ ಪುರೋಹಿತರ ಮನೆಯ ಜಾಗವು ಅಂದು ಹಂಜಕ್ಕಿ ಮನೆಯವರು ಕೆಲ ದಿನಗಳ ಕಾಲ ವಾಸವಿದ್ದ ಜಾಗವಾಗಿತ್ತು. ಹೆಗ್ಗಾರುಗದ್ದೆ ಮನೆತನಕ್ಕೂ ಹಾಗೂ ಹಂಜಕ್ಕಿ ಮನೆತನಕ್ಕೂ ಬಸ್ತಿಕೇರಿ ಮಂಜಯ್ಯಶೆಟ್ಟಿಯೇ ಕುಲಪುರೋಹಿತರು. ಬಹುಶ ಗೇರುಸೊಪ್ಪೆ ಪುರೋಹಿತ ವರ್ಗದ ಕೊನೆಯ ಕೊಂಡಿ ಅಥವಾ ಸಂತತಿಯಾಗಿದ್ದರು. ಹಿರೇಬಸದಿಯನ್ನು ಉಳಿಸಿ ಬೆಳೆಸಿದ ಕೀರ್ತಿ ಹೆಗ್ಗಾರುಗದ್ದೆ ಹಾಗು ಹಂಜಕ್ಕಿ ಮನೆತನಕ್ಕೆ ಸಲ್ಲುತ್ತದೆ.ಗೇರುಸೊಪ್ಪೆಯ ಯೋಜಣಾಶ್ರೇಷ್ಠಿ ತಾಯಿ ಗುಚ್ಚಕ್ಕಿ ಮನೆಯವಳು. ಬೈಚಿರಾಜನೂ ಸಹ ಗುಚ್ಚಕ್ಕಿ ಮನೆತನದವನೇ ಆಗಿದ್ದ. ಶಾಸನದಲ್ಲಿ ಬರುವ ಗುಚ್ಚಕ್ಕಿಯು ಇಂದಿನ ಹಂಜಕ್ಕಿಯಾದರೆ ಹೆಗ್ಗಾರು ಇಂದಿನ ಹೆಗ್ಗಾರುಗದ್ದೆ. ಹೆಗ್ಗಾರುಗದ್ದೆ ಮನೆತನದವರೇ ಪುರೋಹಿತರ ವೇತನವನ್ನು ಹಲವು ವರ್ಷಗಳ ಕಾಲ ನೀಡುತ್ತಿದ್ದರು ಹಾಗು ನೀಡಿದ್ದಾರೆಂದು ವಟ್ಟಕ್ಕಿ ವಂಶಸ್ಥರು ಹಾಗು ಹಂಜಕ್ಕಿ ಮನೆತನದವರು ಹೇಳುತ್ತಿದ್ದರು. ಒಂದು ಅರ್ಥದಲ್ಲಿ ಹೆಗ್ಗಾರುಗದ್ದೆಯವರು ಕ್ಷೇತ್ರದ ವಾರಸ್ದಾರರೇ ಆಗಿದ್ದರು. ನಂತರದ ವರ್ಷಗಳಲ್ಲಿ ಪೂಜಾಕಾರ್ಯ ನಿರ್ವಹಿಸಿದವರುಗಳೆಂದರೆ ಹಳದೀಪುರದ ವರ್ಧಮಾನಶೆಟ್ಟಿ ಮತ್ತು ದೀಪಣ್ಣಶೆಟ್ಟಿ ತದನಂತರ ದ್ಯಾವ್ರಭಟ್ಟ(ಕೆಲವು ತಿಂಗಳು) ನಾಭಿರಾಜ ಇಂದ್ರ ಕೆಲವು ತಿಂಗಳು ಪೂಜಾಕಾರ್ಯ ನೋಡಿಕೊಂಡಿದ್ದರು.1960 ರ ನಂತರ ಜಿನ್ನಯ್ಯ ಜ್ವಾಲಯ್ಯ ಶೆಟ್ಟಿ, ಪುರೋಹಿತರಾಗಿ ಬಂದರು. ನಂತರ ಜಿನ್ನಯ್ಯ ಜ್ವಾಲಯ್ಯ ಮದುವೆ ಆಗದೆ ಇದ್ದುದರಿಂದ ಅವರ ಸಾಕು ಮಗನಾದ ಶ್ರೀ ಚಂದಯ್ಯ ಶೆಟ್ಟಿಯವರು ಇದನ್ನು ನಡೆಸಿಕೊಂಡು ಹೋದರು. ಈಗ ಅವರ ಮಕ್ಕಳಾದ ಶ್ರೀಕಾಂತ ಚಂದಯ್ಯ ಶೆಟ್ಟಿ, ನಾಗರಾಜ ಚಂದಯ್ಯ ಶೆಟ್ಟಿ ಹಾಗು ಸೋಮರಾಜ ಚಂದಯ್ಯ ಶೆಟ್ಟಿ ಹೋದರರು ಇದನ್ನು ನಡೆಸಿಕೊಂಡು ಬರುತ್ತಿದ್ದಾರೆ.ಸಧ್ಯ ಶ್ರಾವಕರೇ ಪುರೋಹಿತರಾಗಿ ಪೂಜಾ ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ.
ಕಾಲ
ಬದಲಾಯಿಸಿಈ ಬಸದಿಯು ಕ್ರಿ.ಶ. ೯ನೇ ಶತಮಾನದಿಂದ ಇದೆ ಎಂದು ಹೇಳುತ್ತಾರೆ. ಇದಕ್ಕೆ ಸಂದಂಧಿಸಿದ ಬೇರೆ ಬೇರೆ ಶಿಲಾ ಶಾಸನಗಳಿದ್ದು ಅವುಗಳ ಅಧ್ಯಾಯನದಿಂದ ಈ ಬಸದಿಯ ಹಿನ್ನಲೆಯ ಕುರಿತು ನಿಖರವಾಗಿ ತಿಳಿದುಬಂದೀತು. ಈ ಬಸದಿಯ ಪೂರ್ಣ ಪ್ರಮಾಣದ ಜೀರ್ಣೋದ್ಧಾರ ಕಾರ್ಯ ನಡೆದಿಲ್ಲ. ಆದರೆ ಸದ್ಯ ಬಹಳ ಉತ್ತಮ ಸ್ಥಿತಿಯಲ್ಲಿದೆ.[೧] ೧೨೭೫ ರಲ್ಲಿ ನಾರಣಾಂಕನಿಂದ ಆರಂಭಗೊಂಡ ಗೇರುಸೊಪ್ಪ ಸಾಳ್ವ ವಂಶಜರ ಆಳ್ವಿಕೆ ಹೈವರಸ ಹೊನ್ನನರೇಂದ್ರ ಹಾಗು ಚನ್ನಭೈರಾದೇವಿ ಕಾಲಕ್ಕೆ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು.
ಐತಿಹಾಸಿಕ ವಿಶೇಷತೆ
ಬದಲಾಯಿಸಿಗಂಧ ಕುಟಿ ಇರಬೇಕಾದ ಈ ಸ್ಥಳದಲ್ಲಿ ಶ್ರೀ ಕೂಷ್ಮಾಂಡಿನಿ ದೇವಿ ಮತ್ತು ಶ್ರೀ ಬ್ರಹ್ಮ ದೇವರ ದೊಡ್ಡ ಮೂರ್ತಿಗಳಿವೆ. ಗರ್ಭಗುಡಿಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಯ ಬಿಂಬವಿದೆ. ಮಹಾಮಾತೆ ಜ್ಡಾಲಾಮಾಲಿನಿ ಹಾಗು ಮಹಾಮಾತೆ ಪದ್ಮಾವತಿ ದೇವಿಯು ಖಡ್ಗಾಸನದಲ್ಲಿದ್ದು, ಉತ್ತರ ದಿಕ್ಕಿಗೆ ಮುಖಮಾಡಿದೆ. ಈ ದೇವಿಗೆ ಸೀರೆ ಉಡಿಸಿ ಬಳೆ ತೊಡಿಸಿ, ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಅಮ್ಮನವರ ಕಾಲಿನ ಬಳಿ ಕುಕ್ಕುಟ ಸರ್ಪ ಇದೆ. ಬಸದಿಯಲ್ಲಿ ಅಡಿಕೆ ಹೂವಿನಿಂದ ಪ್ರಸಾದ ಕೇಳುವ ಪದ್ಧತಿ ಇದೆ. ಒಮ್ಮೆ ತಿಳಿಯದೆ ಅಮ್ಮನವರ ಮೂರ್ತಿಯನ್ನು ಸ್ವಚ್ಛಗೊಳಿಸಲೆಂದು ಪೀಠದಿಂದ ತಂದು ಬಾವಿ ಕಟ್ಟೆಯ ಮೇಲೆ ಜಿನ್ನಯ್ಯ ಶೆಟ್ಟಿಯವರು ಇರಿಸಿ ಸ್ವಚ್ಛಗೊಳಿಸಿದರು. ನಂತರ ಅಮ್ಮನವರ ಬಿಂಬವನ್ನು ಮೇಲಕ್ಕೆ ಎತ್ತಲು ಸಾಧ್ಯವಾಗಲಿಲ್ಲ. ಆಗ ಊರಿನ ಹಿರಿಯರು ಎಲ್ಲರೂ ಸೇರಿ ಪ್ರಾರ್ಥನೆ ಮಾಡಿ ತಾಯಿಗೆ ಇಪ್ಪತೊಂದು ಕಾಯಿ ಒಪ್ಪಿಸುವುದಾಗಿ ಹರಕೆಮಾಡಿಕೊಂಡ ನಂತರ ಮೂರ್ತಿಯ ಭಾರವು ಕಡಿಮೆಯಾಗಿ ಎತ್ತಲು ಸಾಧ್ಯವಾಯಿತು. ಬಸದಿಯ ಗೇಣಿದಾರರಾದ ಈಶ್ವರ ನಾಯ್ಕ ಎಂಬವರು ಹಿಂದೆ ಚಂದಯ್ಯ ಶೆಟ್ಟಿಯವರು ಪೂಜೆ ಮಾಡುವ ಸಮಯದಲ್ಲಿ ಬಸದಿಗೆ ಆರು ಚೆಂಬು ಎಣ್ಣೆ ಮತ್ತು ಆರು ಮಾನಿಗೆ ಅಕ್ಕಿ ದೇವರ ನೈವೇದ್ಯಕ್ಕೆ ಕೊಡಬೇಕಾಗಿತ್ತು. ದೀಪ ಹಚ್ಚಲು ಎಣ್ಣೆಗೆ ತೊಂದರೆಯಾದಾಗ ಚಂದಯ್ಯ ಶೆಟ್ಟರು ಎರಡು ಮೂರು ಸಾರಿ ಕೇಳಿದರೂ ಅವರು ಎಣ್ಣೆ ಕೊಡಲು ತಡ ಮಾಡಿದರು. ತಿರುಗಿ ತಿರುಗಿ ಕೇಳಿ ಸಾಕಾಗಿ ಎಣ್ಣೆ ನೀನೆ ತರಿಸಿಕೋ ಎಂದು ಶೆಟ್ಟರು ಪ್ರಾರ್ಥಿಸಿಕೊಂಡರಂತೆ. ನಂತರ ಗೇಣಿದಾರರಿಗೆ ಎರಡು ಕಣ್ಣುಗಳು ಸರಿಯಾಗಿ ಕಾಣಿಸದಂತೆ ಆಗಿ ಮನುಷ್ಯರ ಗುರುತು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಆಗ ಅವರು ಬೇರೆ ದೇವಾಲಯದಲ್ಲಿ ವಿಚಾರಿಸಿದಾಗ ಅಮ್ಮನವರ ಬಸದಿಗೆ ಸರಿಯಾಗಿ ಎಣ್ಣೆ ಕೊಡು ಎಂದು ತಿಳಿಸಿದರು. ನಂತರ ತಪ್ಪಿನ ಅರಿವಾಗಿ ಅಮ್ಮನವರಲ್ಲಿ ಕ್ಷಮೆ ಕೇಳಿ, ಎಣ್ಣೆ ಅರ್ಪಿಸಿದರು. ನಂತರ ಅವರ ಕಣ್ಣುಗಳು ಸರಿಯಗಿ ಕಾಣಲಾರಂಭವಾಯಿತು.
ಶಿಲಾ ವಿನ್ಯಾಸ
ಬದಲಾಯಿಸಿಬಸದಿಯ ಮೂಲನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿ ಕಪ್ಪುಶಿಲೆ, ಪದ್ಮಾಸನ ಭಂಗಿಯ ಸುಂದರ ಮೂರ್ತಿಯಲ್ಲಿ ವಿರಾಜಮಾನರಾಗಿದ್ದಾರೆ. ಮಕರ ತೋರಣ, ಪೀಠ ಸೇರಿ ೫ ಅಡಿ ಎತ್ತರವಿದ್ದು, ಪ್ರತಿದಿನ ಪಂಚಾಮೃತಾಭಿಷೇಕ, ಜಲಾಭಿಷೇಕ, ಕ್ಷೀರಾಭಿಷೇಕ ನಡೆಯುತ್ತದೆ. ವಾರ್ಷಿಕೋತ್ಸವವು ದಸರಾ ಸಮಯದಲ್ಲಿ ನಡೆಯುತ್ತದೆ. ವಿಶೇಷ ಸಂದರ್ಭಗಳಲ್ಲಿ ೧೦೮ ಕಲಶದ ಅಭಿಷೇಕ, ನವಕಲಶ, ಕಬ್ಬಿನ ಹಾಲು, ಗಂಧ, ಅರಶಿನ ಮತ್ತು ಚಂದನದ ಅಭಿಷೇಕ, ನವಗ್ರಹ ಶಾಂತಿ, ಕಲಿಕುಂಡ ಆರಾಧನೆ, ವಜ್ರ ಪಂಜರ ಆರಾಧನೆ ಮುಂತಾದ ಆರಾಧನೆಗಳು ನಡೆಯುತ್ತವೆ. ಮಹಾಮಾತೆ ಜ್ವಾಲಮಾಲಿನಿ ಅಮ್ಮನವರಿಗೆ ಸಂತಾನ ಪ್ರಾಪ್ತಿಗಾಗಿ ಹರಕೆ ಹೊತ್ತವರು, ವಿವಾಹಕ್ಕಾಗಿ ಹರಕೆ ಹೊತ್ತವರು ಬಂದು ಹರಕೆ ಸಲ್ಲಿಸುತ್ತಾರೆ. ದೇವಸ್ಥಾನದ ಹಿಂಬದಿ ಬಲ ಮೂಲೆಯಲ್ಲಿ ಕ್ಷೇತ್ರಪಾಲ ಸನ್ನಿಧಿಯಿದ್ದು ಅಲ್ಲಿ ಜಟ್ಟಿಗ, ನಾಗ, ವೀರಭದ್ರ, ಮಣಿಭದ್ರ, ಮಹಾಸತಿ ಮತ್ತು ಬ್ರಹ್ಮಯಕ್ಷನ ಮೂರ್ತಿಗಳಿವೆ. ಅವೆಲ್ಲವನ್ನು ಒಂದು ಮುರಕಲ್ಲಿನ ಪೀಠದ ಮೇಲಿಟ್ಟು ಪೂಜಿಸಲಾಗುತ್ತಿತ್ತು. ಈಗ ಆ ಪೀಠವು ಬಹಳ ಶಿಥಿಲಗೊಂಡಿದೆ.
ಉಲ್ಲೇಖಗಳು
ಬದಲಾಯಿಸಿ- ↑ ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂ ಶ್ರೀ ಪ್ರಿಂಟರ್ಸ್. pp. ೩೯೨.