ಜ್ಯಾಕ್ಸನ್ವಿಲ್
ಜ್ಯಾಕ್ಸನ್ವಿಲ್ - ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಫ್ಲಾರಿಡ ರಾಜ್ಯದ ಪ್ರಮುಖ ಬಂದರುನಗರ. ಡೂವಲ್ ಕೌಂಟಿಯ ಆಡಳಿತ ಕೇಂದ್ರ.
ಸೇಂಟ್ಸ್ ಜಾನ್ಸ್ ನದಿಯ ದಂಡೆಯ ಮೇಲಿರುವ ಈ ಬಂದರು ಅಟ್ಲಾಂಟಿಕ್ ಸಾಗರದಿಂದ ಸು. 18 ಮೈ. ಒಳಗಿದೆ. ಇಲ್ಲಿಯ ಹಡಗುಕಟ್ಟಗಳ ಉದ್ದ ಸು. 80 ಮೈ. ಗೂ ಹೆಚ್ಚು. ಸಂಯುಕ್ತ ಸಂಸ್ಥಾನಗಳ ಆಗ್ನೇಯ ತುದಿಯಲ್ಲಿರುವ ಈ ಬಂದರಿಗೆ ದೇಶದ ಪ್ರಮುಖ ರೈಲು ಮತ್ತು ರಸ್ತೆಗಳ ಸಂಪರ್ಕವಿದೆ. ಮರದ ದಿಮ್ಮಿ ಮತ್ತು ಇತರ ಒಳನಾಡ ಉತ್ಪನ್ನಗಳನ್ನು ಈ ಬಂದರಿನ ಮೂಲಕ ರಫ್ತು ಮಾಡುತ್ತಾರೆ. ಪೆಟ್ರೊಲಿಯಂ, ರಾಸಾಯನಿಕಗಳು, ಕಚ್ಚಾ ಎಣ್ಣೆ, ಕಾಫಿ ಮುಂತಾದವನ್ನು ಇಲ್ಲಿಂದಲೇ ಆಮದಿಸುತ್ತಾರೆ. ಈ ಬಂದರು ಪ್ರಧಾನವಾಗಿ ನೌಕಾಸೈನ್ಯ ವಸ್ತುಗಳ ಉಗ್ರಾಣವಾಗಿದೆ. ನೌಕಾ ಪಡೆಗೆ ಬೇಕಾಗುವ ಬಹುಪಾಲು ಪದಾರ್ಥಗಳನ್ನು ಈ ಬಂದರಿನ ಮೂಲಕವೇ ಸಾಗಿಸಲಾಗುತ್ತದೆ. ಫ್ಲಾರಿಡದ ಸೈನಿಕ ಜಿಲ್ಲಾ ಕಚೇರಿಯಲ್ಲದೆ ಇಲ್ಲಿ ಸೈನಿಕ ವಿಮಾನ ನಿಲ್ದಾಣ ಮತ್ತು ಆಸ್ಪತ್ರೆಗಳಿವೆ. ಫ್ಲಾರಿಡ ರಾಜ್ಯದ ಪ್ರಮುಖ ಕೈಗಾರಿಕಾ ನಗರಗಳಲ್ಲಿ ಇದೂ ಒಂದು. ಅಣಿಕಟ್ಟು, ರಾಸಾಯನಿಕ ಗೊಬ್ಬರ - ಇಲ್ಲಿಯ ಪ್ರಮುಖ ಉತ್ಪನ್ನಗಳು. ಅನೇಕ ಮಾಂಸ ಸಂವೇಷ್ಟನ ಕಾರ್ಖಾನೆಗಳು ಇಲ್ಲಿವೆ. ಇಲ್ಲಿ ನೌಕಾ ನಿರ್ಮಾಣ ಮತ್ತು ದುರಸ್ತಿ ಕೆಲಸವೂ ನಡೆಯುತ್ತದೆ. ಎಡ್ವರ್ಡ್ ವಾಟರ್ಸ್ ಕಾಲೇಜು (1966), ಜೋನ್ಸ್ ಕಾಲೇಜು (1918), ಜ್ಯಾಕ್ಸನ್‍ವಿಲ್ ವಿಶ್ವವಿದ್ಯಾಲಯ (1934), ಜ್ಯಾಕ್ಸನ್‍ವಿಲ್ ಕಾಲೇಜ್ ಆಫ್ ಮ್ಯೂಸಿಕ್ - ಇವು ಇಲ್ಲಿಯ ಕೆಲವು ಮುಖ್ಯ ಶಿಕ್ಷಣ ಸಂಸ್ಥೆಗಳು. ಇದೇ ಹೆಸರಿನ ಅನೇಕ ನಗರಗಳು ಸಂಯುಕ್ತ ಸಂಸ್ಥಾನಗಳ ಬೇರೆಬೇರೆ ರಾಜ್ಯಗಳಲ್ಲೂ ಇವೆ.
ಇತಿಹಾಸ
ಬದಲಾಯಿಸಿ16ನೆಯ ಶತಮಾನದ ಉತ್ತರಾರ್ಧದಲ್ಲಿ ಫ್ರೆಂಚ್ ಮತ್ತು ಸ್ಟ್ಯಾನಿಷ್ ವಲಸೆಗಾರರು ಈ ಪ್ರದೇಶದಲ್ಲಿ ವಸಾಹತುಗಳನ್ನು ಸ್ಥಾಪಿಸಿದರು. 1763ರಲ್ಲಿ ಇದನ್ನು ಬ್ರಿಟಿಷರು ವಶಪಡಿಸಿಕೊಂಡರು. 1816ರಲ್ಲಿ ಲೀವಿಸ್ ಹೊಗ್ಯಾನ್ಸ್ ಎಂಬಾತ ಇಲ್ಲಿಗೆ ಬಂದ (1816) ಮೊದಲ ವಲಸೆಗಾರ. ಕೌ ಫೋರ್ಡ್ ಎಂದು ಕರೆಯಲಾಗುತ್ತಿದ್ದ ಇದರ ಹೆಸರನ್ನು ಆಂಡ್ರ್ಯೂ ಜ್ಯಾಕ್ಸನನ ಗೌರವಾರ್ಥವಾಗಿ 1822ರಲ್ಲಿ ಬದಲಾಯಿಸಲಾಯಿತು.