ಜೋದರ ಮಾಯಣ್ಣ - ವಚನಕಾರ ಕಾಲ ಸು. 1160. ಸದ್ಯದಲ್ಲಿ ಈತನ ಮೂರು ವಚನಗಳು ದೊರೆತಿವೆ. ಶಂಭುಸೋಮನಾಥಲಿಂಗ ಎಂಬುದು ಈತನ ವಚನಗಳ ಅಂಕಿತ. ಈತನು ಒಂದು ವಚನದಲ್ಲಿ ಬಲ್ಲಾಳನನ್ನು ಸ್ಮರಿಸಿದ್ದಾನೆ.

ಒಂದು ಪವಾಡದ ದಂತಕಥೆ

ಬದಲಾಯಿಸಿ

ಮಾಯಣ್ಣ ಬಿಜ್ಜಳನ ಆಸ್ಥಾನದಲ್ಲಿ ಆನೆಯ ಪಡೆಯ ಮೇಲಾಧಿಕಾರಿಯಾಗಿದ್ದ. ತನ್ನ ವರಮಾನದಿಂದ ಜಂಗಮ ದಾಸೋಹವನ್ನು ನಡೆಸುತ್ತಿದ್ದ. ಒಂದು ದಿನ ಪರದೇಶದ ರಾಜಕುಮಾರನೊಬ್ಬ ಆನೆಯ ಮಾಲೆ ಕಲ್ಯಾಣಕ್ಕೆ ಬಂದು ಒಬ್ಬ ವೇಶ್ಯೆಯ ಮನೆಯಲ್ಲಿ ಉಳಿದ. ಅದನ್ನು ನೋಡಿದ ಮತ್ತೊಬ್ಬ ವೇಶ್ಯೆ ತನಗೆ ಒಲಿದಿದ್ದ ಮಿಂಡ ಜಂಗಮನನ್ನು ಕುರಿತು, ಆ ರಾಜಕುಮಾರನಂತೆ ಬಿಜ್ಜಳನ ಪಟ್ಟದಾನೆಯನ್ನು ತನ್ನ ಮನೆಯ ಮುಂದೆ ನಿಲ್ಲಿಸಬಲ್ಲೆಯಾ ಎಂದು ಪ್ರಶ್ನಿಸಿದಳು. ಆಗ ಆ ವಿಟ ಜಂಗಮ ಹಾಗೆಯೇ ಆಗಲೆಂದು ಒಪ್ಪಿಕೊಂಡು ಆನೆಯನ್ನು ಬೇಡುವುದಕ್ಕಾಗಿ ಬಸವಣ್ಣನವರಲ್ಲಿಗೆ ಹೊರಟ. ದಾರಿಯಲ್ಲಿ ಬಿಜ್ಜಳನ ಪಟ್ಟದಾನೆಯೊಂದಿಗೆ ಎದುರಾದ ಮಾಯಣ್ಣನನ್ನು ಕಂಡ ಜಂಗಮ ತಾನು ಬಸವಣ್ಣನವರಲ್ಲಿಗೆ ಹೋಗುತ್ತಿರುವ ವಿಷಯವನ್ನು ತಿಳಿಸಿದ. ಅದನ್ನು ಕೇಳಿದ ಮಾಯಣ್ಣ ಆ ಜಂಗಮನಿಗೆ ಬಿಜ್ಜಳನ ಪಟ್ಟದ ಆನೆಯನ್ನು ಕೊಟ್ಟು ಕಳುಹಿಸಿದ. ಆ ವಿಟ ಜಂಗಮ ತನ್ನ ವೇಶ್ಯೆಯ ಮನೆಯ ಮುಂದೆ ಬಿಜ್ಜಳನ ಪಟ್ಟದಾನೆಯನ್ನು ಕಟ್ಟಿದ. ಇದನ್ನು ಕಂಡವರು ಬಿಜ್ಜಳನಿಗೆ ವಿಷಯವನ್ನು ತಿಳಿಸಿದರು. ಆಗ ಬಿಜ್ಜಳ ಮಾಯಣ್ಣನನ್ನೂ ಬಸವಣ್ಣನನ್ನೂ ಕರೆಸಿ ಕೇಳಲಾಗಿ ಮಾಯಣ್ಣ ಪಟ್ಟದ ಆನೆ ಗಜಶಾಲೆಯಲ್ಲಿದೆ ಎಂದು ಹೇಳಿದ. ಅದನ್ನು ಪರೀಕ್ಷಿಸಬೇಕೆಂದು ಬಿಜ್ಜಳ ಗಜಶಾಲೆಗೆ ಬಂದು ನೋಡಿದಾಗ ಪಟ್ಟದಾನೆ ಅಲ್ಲೇ ಇತ್ತು. ಅಂಥದೇ ಇನ್ನೊಂದು ಆನೆ ವಿಟಜಂಗಮ ವೇಶ್ಯೆಯ ಮನೆಯ ಮುಂದೆಯೂ ಇದ್ದುದನ್ನು ಕಂಡು ಆಶ್ಚರ್ಯ ಚಕಿತನಾಗಿ ಬಿಜ್ಜಳ ಮಾಯಣ್ಣನನ್ನು ಗೌರವಿಸಿದನೆಂದು ವೀರಶೈವ ಪುರಾಣಗಳಿಂದ ತಿಳಿದುಬರುತ್ತದೆ.

ಈತನ ಮೂರು ವಚನಗಳಲ್ಲಿ ಒಂದು ಹೀಗಿದೆ :

ಮುನ್ನ ಪರಸತಿ ಪಾರ್ವತಿಯೆಂದು ನಡಸಿತ್ತು ನುಡಿಸಿತ್ತು ಗುರುವಚನ

ಬಳಕಯೆನ್ನ ಶರಣಸತಿಯೆಂದು ನಡಸಿತ್ತು ನುಡಿಸಿತ್ತು ಗುರುವಚನ

ಇನ್ನು ಸತಿಯರೆಲ್ಲಾ ಗುರುಸತಿಯರೆಂದು ನಡೆಸಿತ್ತು ನುಡಿಸಿತ್ತು ಗುರುವಚನ

ನಡೆದುದು ತಪ್ಪದೆ ನುಡಿದುದು ಹುಸಿಯದೆ ನಡೆಸಿತ್ತು ನುಡಿಸಿತ್ತು ಗುರುವಚನ

ಅಚ್ಚಿಗವಿಲ್ಲದೆ ಮುಚ್ಚಿದ ಮನವನು ನಿಶ್ಚಿಂತದ ಮಾಡಿತ್ತು ಗುರುವಚನ

ಶಂಭು ಸೋಮನಾಥಲಿಂಗಸಂಗ ಸುಸಂಗವ ಮಾಡಿತ್ತು ಗುರುವಚನ||1||


ಮಾಯಣ್ಣನ ವಿಷಯ ಬಸವೇಶ್ವರ ಪುರಾಣದ ಕಥಾಸಾಗರ, ಪಾಲ್ಕುರಿಕೆ ಸೋಮೇಶ್ವರಪುರಾಣ, ಭೈರವೇಶ್ವರಕಾವ್ಯದ ಕಥಾಸೂತ್ರರತ್ನಾಕರ, ಚನ್ನಬಸವಪುರಾಣ ಪ್ರಭುದೇವಪುರಾಣಗಳಲ್ಲಿ ಕಂಡುಬರುತ್ತದೆ.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: