ಜೈಗ್ಯಾಂಟೊಪಿತಿಕಸ್

ಜೈಗ್ಯಾಂಟೊಪಿತಿಕಸ್ - ಪ್ಲೀಸ್ಟೊಸೀನ್ ಅವಧಿಯಲ್ಲಿ ಜೀವಿಸಿದ್ದನೆಂದು ಹೇಳಲಾದ ಕಪಿಮಾನವ. ಇದುವರೆಗೆ ಈತನಿಗೆ ಸೇರಿದುವೆಂದು ಹೇಳಲಾಗುವ 80 ಹಲ್ಲುಗಳು ಮತ್ತು 3 ದವಡೆ ಮೂಳೆಗಳು ಮಾತ್ರ ಸಿಕ್ಕಿವೆ. ಚೀನದ ಕ್ಯಾಂಟನಿನಲ್ಲಿಯೂ ಹಾಂಕಾಂಗಿನಲ್ಲಿಯೂ ಗ್ರಂಥಿಗೆ ಅಂಗಡಿಗಳಲ್ಲಿ ಈ ಹಲ್ಲುಗಳನ್ನು ಡ್ರ್ಯಾಗನ್ ಪ್ರಾಣಿಯ ಹಲ್ಲುಗಳೆಂದೂ ಇವಕ್ಕೆ ಔಷಧೀಯ ಮಹತ್ತ್ವವುಂಟೆಂದೂ ಮಾರುತ್ತಿದ್ದುದನ್ನು ಗಮನಿಸಿದ ಜಿ. ಎಚ್. ಆರ್. ಫಾನ್ ಕ್ಯೋನಿಗ್ಸ್‍ವಾಲ್ಟ್ ಎಂಬಾತ 6 ದವಡೆಹಲ್ಲುಗಳನ್ನು ಸಂಗ್ರಹಿಸಿ ಪರೀಕ್ಷಿಸಿದ. ಅರೆಮಾನವ ಲಕ್ಷಣಗಳನ್ನು ತೋರುತ್ತಿದ್ದ ಇವು ಹಲವಾರು ವರ್ಷಗಳ ಹಿಂದೆ ಜೀವಿಸಿದ್ದ ಕಪಿಮಾನವನ ಹಲ್ಲುಗಳೆಂದು ಈತ ನಿಷ್ಕರ್ಷಿಸಿ (1935) ಈ ಮಾನವನಿಗೆ ಜೈಗ್ಯಾಂಟೊಪಿತಿಕಸ್ ಬ್ಲಾಕೈ ಎಂಬ ಹೆಸರನ್ನಿತ್ತ. ಅದೇ ವರ್ಷ ವೈಡೆನ್‍ರೈಕ್ ಎಂಬ ಇನ್ನೊಬ್ಬ ವಿಜ್ಞಾನಿ ಈ ಮಾನವ ಹಾಮಿನಿಡ್ ಗುಂಪಿಗೆ ಸೇರಿದವನೆಂದು ತಿಳಿಸಿ ಈತನಿಗೆ ಜೈಗ್ಯಾಂತ್ರಪಸ್ ಬ್ಲಾಕೈ ಎಂಬ ಹೆಸರುಕೊಟ್ಟ. ಅನಂತರ 1956ರಲ್ಲಿ ಪೈ ಎಂಬಾತ ಕ್ವಾಂಗ್ಸೀಯ ಗುಹೆಗಳಲ್ಲಿ 3 ಹಲ್ಲುಗಳನ್ನೂ 2 ದವಡೆಯೆಲುಬುಗಳನ್ನೂ ಪತ್ತೆ ಮಾಡಿದ. 1957ರಲ್ಲಿ ಇನ್ನೊಂದು ದವಡೆಯೆಲುಬು ಪತ್ತೆಯಾಯಿತು. ಇವೆಲ್ಲವೂ ದೈತ್ಯಾಕಾರದವಾಗಿದ್ದು ಹಾಮಿನಿಡ್ ಲಕ್ಷಣಗಳನ್ನು ಹೋಲುತ್ತಿದ್ದವು. ದವಡೆ ಮತ್ತು ಹಲ್ಲುಗಳ ಗಾತ್ರದ ಆಧಾರದ ಮೇಲೆ ಜೈಗ್ಯಾಂಟೊಪಿತಿಕಸ್ ಕಪಿಮಾನವ ಸುಮಾರು 12 ಎತ್ತರದವನಿರಬೇಕೆಂದು ಅಂದಾಜು ಮಾಡಲಾಗಿದೆ. ಈತನ ಗಾತ್ರ ಈಗಿನ ಗೊರಿಲದ ಎರಡರಷ್ಟು ಇತ್ತೆಂದೂ ಕಾಲಕ್ರಮೇಣ ಗಾತ್ರ ಕಡಿಮೆಯಾಗುತ್ತ ಬಂದು ಆಧುನಿಕ ಹಾಮಿನಿಡ್ ಜೀವಿಗಳ ಉಗಮಕ್ಕೆ ದಾರಿಯಾಯಿತೆಂದೂ ವೈಡೆನ್‍ರೈಕ್ ಅಭಿಪ್ರಾಯಪಡುತ್ತಾನೆ. ಈ ಅಭಿಪ್ರಾಯವನ್ನು ಒಪ್ಪಿದರೆ ಜೈಗ್ಯಾಂಟೊಪಿತಿಕಸ್ ಆಧುನಿಕ ಮಾನವನ (ಹೋಮೊ ಸೇಪಿಯನ್ಸ್) ಪೂರ್ವಜನಾಗುತ್ತಾನೆ. ಆದರೆ ಎರಡು ಕಾರಣಗಳಿಂದ ಈ ವಾದ ಸರಿದೋರದು : 1 ಜೈಗ್ಯಾಂಟೊಪಿತಿಕಸ್ ಕಪಿಮಾನವನ ಹಲ್ಲುಗಳು ಆಧುನಿಕ ಹಾಮಿನಿಡ್ ದಂತಲಕ್ಷಣಗಳನ್ನು ಹೋಲುವುದು. 2 ಈತನಿಗಿಂತ ಇತ್ತೀಚೆಗೆ ಉಗಮಿಸಿದ ವಾನರರ ಕಪಿಮಾನವರ ಹಲ್ಲುಗಳು ಇನ್ನೂ ಪ್ರಾಚೀನ ಬಗೆಯ ಹಲ್ಲುಗಳಂತಿರುವುದು. ಇದರಿಂದ ಮಾನವವಿಕಾಸದ ಮೊದಲ ಹಂತಗಳಲ್ಲಿ ಉದಯಿಸಿದ ಜೈಗ್ಯಾಂಟೊಪಿತಿಕಸ್ ಅನಂತರ ಏಕೆ ನಶಿಸಿಹೋದ ಎಂಬ ಪ್ರಶ್ನೆಗೆ ಉತ್ತರ ದೊರಕದಂತಾಗಿದೆ ಹೀಗಾಗಿ ಈ ಕಪಿಮಾನವ ಮಾನವನ ಪೂರ್ವಜನಲ್ಲವೆಂದೂ ಬಹುಶಃ ಮಾನವಕುಲಕ್ಕೆ ಸಮಾಂತರವಾಗಿ ವಿಕಾಸವಾಗುತ್ತಿದ್ದು ಬಹು ಹಿಂದೆಯೇ ನಶಿಸಿಹೋದ ಇನ್ನೊಂದು ಕುಲದ ಕೊನೆಯ ಪ್ರತಿನಿಧಿಯಾಗಿದ್ದನೆಂದೂ ಈಗ ಭಾವಿಸಲಾಗಿದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: