ಜೇಲ- ಸಿಸಿಲಿಯ ದಕ್ಷಿಣ ತೀರದಲ್ಲಿರುವ ಒಂದು ನಗರ. ಮೊದಲಿನ ಹೆಸರು ಟರನೋವ ಡೀ ಸಿಸಿಲೀಯ. ಜನಸಂಖ್ಯೆ 65,289 (1968). ಮರಳು ದಿಣ್ಣೆಯ ಮೇಲಿರುವ ಈ ನಗರದ ಉತ್ತರದಲ್ಲಿ ತುಂಬ ಫಲವತ್ತಾದ ಬಯಲು ಪ್ರದೇಶವಿದೆ. 1950ರಲ್ಲಿ ನಗರದ ಹೊರವಲಯದಲ್ಲಿ ಪೆಟ್ರೋಲಿಯಂ ನಿಕ್ಷೇಪ ಪತ್ತೆಯಾಯಿತು.

ಇತಿಹಾಸ

ಬದಲಾಯಿಸಿ

ಜೇಲ ಪಟ್ಟಣವನ್ನು ಸ್ಥಾಪಿಸಿದವರು ಕ್ರೀಟನ್ ಮತ್ತು ರೋಡಿಯನ್ ವಸಾಹತುಗಾರರು (ಕ್ರಿ. ಪೂ. ಸು. 688). ಹಿಪೊಕ್ರಟೀಸನ ಕಾಲದಲ್ಲಿ ನಗರ ಉನ್ನತಿಯ ಶಿಖರ ಮುಟ್ಟಿತ್ತು. ಅನಂತರ ಕ್ಷೀಣದೆಸೆಗೆ ಬಂದ ಈ ನಗರ ಟೈಮೊಲೀಯಾನನ ಕಾಲದಲ್ಲಿ ಮತ್ತೆ ಅಭಿವೃದ್ಧಿ ಹೊಂದಿತು. ಇಲ್ಲಿಯ ಕೋಟೆಯನ್ನು ಬಲಪಡಿಸಲಾಯಿತು. ಅನೇಕ ಹೊಸ ಕಟ್ಟಡಗಳು ನಿರ್ಮಾಣವಾದ್ದು ಈ ಕಾಲದಲ್ಲೇ. ಮತ್ತೆ ಹಲವು ಬಾರಿ ದಾಳಿಗಳಿಗೆ ಗುರಿಯಾಗಿ ನಷ್ಟವಾದ ನಗರವನ್ನು ಎರಡನೆಯ ಫ್ರೆಡರಿಕ್ 1223ರಲ್ಲಿ ಪುನಃ ಸ್ಥಾಪಿಸಿದ. ಜೇಲ ಪ್ರಸಿದ್ಧ ಕವಿಯಾದ ಈಸ್ಕಿಲಸನ ಊರು. ಎರಡನೆಯ ಮಹಾಯುದ್ದದಲ್ಲಿ (1943) ಈ ನಗರ ವಿಪರೀತ ಬಾಂಬ್ ದಾಳಿಗೆ ತುತ್ತಾಯಿತು. ಇಂದು ಈ ನಗರ ಪೆಟ್ರೊರಾಸಾಯನಿಕಗಳು ಮತ್ತು ಮೀನುಗಾರಿಕೆಗೆ ಪ್ರಸಿದ್ಧವಾಗಿದೆ.

ಐತಿಹಾಸಿಕ ಸ್ಮಾರಕಗಳು

ಬದಲಾಯಿಸಿ

ಈ ನಗರ ಪ್ರಾಚೀನ ಐತಿಹಾಸಿಕ ಸ್ಮಾರಕಗಳಿಗಾಗಿ ಪ್ರಸಿದ್ಧವಾಗಿದೆ. ನಗರದ ಪೂರ್ವದಲ್ಲಿ ಡೋರಿಕ್ ಶೈಲಿಯ ದೇವಸ್ಥಾನದ (ಕ್ರಿ. ಪೂ. ಸು. 480-440) ಅವಶೇಷಗಳುಂಟು. ಇದರ ಸಮೀಪದಲ್ಲೇ ಇನ್ನೂ ಎರಡು ದೇವಾಲಯಗಳ ಅವಶೇಷಗಳು ಸಿಕ್ಕಿವೆ. ಕ್ರಿ. ಪೂ. ಸುಮಾರು 7ನೆಯ ಶತಮಾನದ ಇವು ಆಥೀನ ದೇವಾಲಯಗಳಾಗಿರಬಹುದು. ಇಲ್ಲಿಯ ದೇವಾಲಯದ ಕಂಬಸಾಲಿನ ಅಡಿಪಾಯದ (ಸ್ಟೈಲೊಬೇಟ್) ಅಳತೆ 115 ( 58. ಇದೇ ಪ್ರದೇಶದಲ್ಲೇ ಸುದ್ದೆಮಣ್ಣಿನ ಸುಂದರವಾದ ಅನೇಕ ಪದಾರ್ಥಗಳು ಸಿಕ್ಕಿವೆ. ಪುರಾತನ ಕಾಲದ ಶ್ಮಶಾನದ ನಿವೇಶನ ಇರುವುದು ನಗರದ ಪಶ್ಚಿಮದಲ್ಲಿ, ಪುರಾತನ ಗ್ರೀಕರ ಅನೇಕ ಗೋರಿಗಳು ಇಲ್ಲಿ ಪತ್ತೆಯಾಗಿವೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜೇಲ&oldid=1083738" ಇಂದ ಪಡೆಯಲ್ಪಟ್ಟಿದೆ