ಜೇಮ್ಸ್ ಲಿಸ್ಟರ್ ಕತ್ಬರ್ಸ್ಟನ್
ಕತ್ಬರ್ಸ್ಟನ್, ಜೇಮ್ಸ್ ಲಿಸ್ಟರ್ : 1851-1910. ಸ್ಕಾಟ್ಲೆಂಡಿನ ಗ್ಲಾಸ್ಗೊ ನಗರದಲ್ಲಿ ಹುಟ್ಟಿ, ಕಾಲಾನುಕ್ರಮದಲ್ಲಿ ಗ್ಲೆನ್ ಆಮಂಡ್ ಕಾಲೇಜಿನಲ್ಲಿ ಓದಿದ. ಇಂಡಿಯನ್ ಸಿವಿಲ್ ಸರ್ವಿಸಿಗೆ ಅಭ್ಯರ್ಥಿಯಾಗಿದ್ದನಾದರೂ ನಿಯಮಿತ ಪರೀಕ್ಷೆಯಲ್ಲಿ ಉತ್ತೀರ್ಣನಾಗದುದರಿಂದ ಭಾರತದಲ್ಲಿ ಕೆಲಸ ಮಾಡಲು ಆಗಲಿಲ್ಲ.
ಈತನ ತಂದೆ ಆಸ್ಟ್ರೇಲಿಯದ ಅಡಿಲೇಡ್ ನಗರದಲ್ಲಿ ದಕ್ಷಿಣ ಆಸ್ಟ್ರೇಲಿಯದ ಬ್ಯಾಂಕ್ ಮ್ಯಾನೇಜರ್ ಆಗಿದ್ದ. 1874ರಲ್ಲಿ ಕತ್ಬರ್ಸ್ಟನ್ ಆಸ್ಟ್ರೇಲಿಯದ ಗೀಲಾಂಗ್ ಪ್ರಾಥಮಿಕ ಶಾಲೆಯಲ್ಲಿ ಲ್ಯಾಟಿನ್ ಮತ್ತು ಗ್ರೀಕ್ ಭಾಷಾಬೋಧಕನಾಗಿ ಸೇರಿದ. 1879ರಲ್ಲಿ ಗ್ರಾಮರ್ ಸ್ಕೂಲ್ ಪದ್ಯಗಳು ಎಂಬ ಇವನ ಕವನಸಂಕಲನ ಪ್ರಕಟವಾಯಿತು. ಈತನಿಗೆ ಆಸ್ಟ್ರೇಲಿಯದ ಮೇಲೆ ಮೋಹವಿದ್ದರೂ ಇಂಗ್ಲೆಂಡಿನ ಮೇಲೆ ಹೆಚ್ಚು ಮಮತೆ ಇತ್ತಾಗಿ 1882ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಬಿ.ಎ. ಪರೀಕ್ಷೆ ಮುಗಿಸಿದ (1885). ಪುನಃ ಆಸ್ಟ್ರೇಲಿಯಕ್ಕೆ ಬಂದು ಅದೇ ಹುದ್ದೆಗೆ ಸೇರಿದ. 1893ರಲ್ಲಿ ಪ್ರಕಟವಾದ ಬಾರವನ್ ಬ್ಯಾಲಡ್ಸ್ ಎಂಬ ಕವನಸಂಕಲನ ಈತನಿಗೆ ಕೀರ್ತಿ ತಂದಿತು.
ಈತನ ಪದ್ಯಗಳು ಹೆಚ್ಚಾಗಿ ಶಾಲಾಪದ್ಯಗಳು. ಈತನ ಶೈಲಿ ಪ್ರೌಢಪಾಂಡಿತ್ಯ ಪ್ರದರ್ಶಕವಾಗಿದ್ದು ಕವನಗಳಲ್ಲಿ ದೇಶಪ್ರೇಮ ಚೆನ್ನಾಗಿ ಅಭಿವ್ಯಕ್ತವಾಗಿದೆ. ಆಗೊಮ್ಮೆ ಈಗೊಮ್ಮೆ ಸತ್ತ್ವಯುತ ಕಾವ್ಯದ ಹೊಳಪು ಮೂಡಿರುವುದೂ ಉಂಟು. ಹಳೆಯ ಶಾಲೆಯ ಮೇಲಿನ ಮಮತೆ. ಪೊದೆಗಳು, ನದಿ, ಸಮುದ್ರತೀರ, ದೋಣಿಯಲ್ಲಿ ಕುಳಿತು ಹುಟ್ಟು ಹಾಕುವುದು ಮುಂತಾದವು ಆತನಿಗೆ ಭಾವೋದ್ರೇಕಕಾರಕ ವಸ್ತುಗಳು. ಉಳಿದ ಪದ್ಯಗಳಲ್ಲಿ ಸರಳ ವರ್ಣನೆ, ಲಯ ಇವೆ. ಆಸ್ಟ್ರೇಲಿಯನ್ ಸನ್ರೈಸ್, ದಿ ಬುಷ್, ದಿ ಉಡ್ ಮ್ಯೂಸಿಕ್-ಎಂಬ ಗ್ರಂಥಗಳು ಪ್ರಖ್ಯಾತವಿವೆ. ದಿ ರೇಸಿಂಗ್ಎಯ್ಟ್ ಎಂಬ ದೋಣಿಯ ಹಾಡು ಅಮರವೆನಿಸಿದೆ.
ಉಲ್ಲೇಖನಗಳು
ಬದಲಾಯಿಸಿ- P. L. Brown, 'Cuthbertson, James Lister (1851 - 1910)', 'Australian Dictionary of Biography', Volume 3, Melbourne University Pre, 1969, pp 514-515