ಜೇಕಬಾಬಾದ್
ಜೇಕಬಾಬಾದ್ - ಪಾಕಿಸ್ತಾನದ ಖೈರ್‍ಪುರ್ ವಿಭಾಗದ ಒಂದು ಜಿಲ್ಲೆ; ಜಿಲ್ಲಾ ಕೇಂದ್ರ. ಜಿಲ್ಲೆಯ ವಿಸ್ತೀರ್ಣ 2,046 ಚ. ಮೈ. ಜನಸಂಖ್ಯೆ 4,28,309 (1961).
ಜಿಲ್ಲೆಯ ಬಹುಭಾಗ ಸಿಂಧೂ ನದಿಯ ಪೂರ್ವತೀರದ ಇಳಿಜಾರು ಪ್ರದೇಶದಲ್ಲಿದ್ದು ಮೆಕ್ಕಲು ಮಣ್ಣನ್ನು ಒಳಗೊಂಡಿದೆ. ಕಾಶ್ಮೋರ್ ಒಡ್ಡು ಈ ಪ್ರದೇಶವನ್ನು ಪ್ರವಾಹಗಳಿಂದ ರಕ್ಷಿಸುತ್ತದೆ. ನದಿಯ ಎರಡು ಕಾಲುವೆಗಳ ಮೂಲಕ ನೀರಾವರಿ ಸೌಲಭ್ಯ ಪಡೆದು ಬೇಸಾಯ ಮಾಡುತ್ತಾರೆ. ಇಲ್ಲಿಯ ಸರಾಸರಿ ವಾರ್ಷಿಕ ಮಳೆ 4". ಜೇಕಬಾಬಾದ್ ಪಟ್ಟಣ ಇದೇ ಹೆಸರಿನ ತಾಲ್ಲೂಕಿನ ಕೇಂದ್ರ. ಜನಂಖ್ಯೆ 35,278 (1961). ಇದಕ್ಕೆ ಒಂದು ಪೌರಸಭೆ ಇದೆ. ಪ್ರತಿವರ್ಷ ಇಲ್ಲಿಯ ಉಷ್ಣತೆ ಗರಿಷ್ಠಮಾನವನ್ನು (126ಲಿ ಈ). ಮುಟ್ಟುವುದರಿಂದ ಈ ಪಟ್ಟಣ ಪ್ರಸಿದ್ದವಾಗಿದೆ. ಜೂನಿನಲ್ಲಿ ಇಲ್ಲಿಯ ಸಾಮಾನ್ಯ ಉಷ್ಣತೆ 120 ಫ್ಯಾ. ಇಂಗ್ಲಿಷರ ಆಡಳಿತದ ಕಾಲದಲ್ಲಿ ಸಿಂಧ್ ಅಶ್ವದಳದ ನಾಯಕನಾಗಿದ್ದ ಜನರಲ್ ಜೇಕಬ್ ಎಂಬಾತ 1847ರಲ್ಲಿ ಖಾನ್‍ಘರ್ ಎಂಬ ಹಳ್ಳಿಯ ಬಳಿ ಸ್ಥಾಪಿಸಿದ ಪಟ್ಟಣವೇ ಇಂದಿನ ಜೇಕಬಾಬಾದ್. ಈ ಆಧಿಕಾರಿಯ ನೆನಪಿಗಾಗಿ ಪ್ರತಿವರ್ಷ ಜನವರಿಯಲ್ಲಿ ಇಲ್ಲಿ ಅಶ್ವಪ್ರದರ್ಶನ ಏರ್ಪಡಿಸುತ್ತಾರೆ.