ಜೂಲಿಯನ್ ೩೩೧-೩೬೩, ರೋಮನ್ ಚಕ್ರವರ್ತಿ.

ಕಂಚಿನ ನಾಣ್ಯದ ಮೇಲೆ ಜೂಲಿಯನ್ ಚಕ್ರವರ್ತಿ

ಹುಟ್ಟಿದ್ದು ಕಾನ್‍ಸ್ಟ್ಯಾಂಟಿನೋಪಲಿನಲ್ಲಿ. ಕಾನ್‍ಸ್ಟೆಂಟೈನ್ ಮಹಾಶಯನ ಭ್ರಾತ್ರೀಯ. ಈತ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಬಹುದಾಗಿದ್ದರಿಂದ, ಕಾನ್‍ಸ್ಟೆಂಟೈನ್‍ನ ಮಕ್ಕಳ ಅಸೂಯೆಗೆ ಇವನು ಗುರಿಯಾಗಿ ಇವನ ಪ್ರಾಣಕ್ಕೆ ಅಪಾಯ ಸಂಭವಿಸಿತ್ತು. ಈತನ ಸೋದರ ಗ್ಯಾಲಸ್‍ನೊಬ್ಬನನ್ನುಳಿದು ಕುಟುಂಬದ ಎಲ್ಲರೂ ಕೊಲೆಯಾಗಿದ್ದರು. ಈತನ ದಾಯಾದಿ ಎರಡನೆಯ ಕಾನ್‍ಸ್ಟ್ಯಾಂಟಿಯಸ್ ಗ್ಯಾಲಸನನ್ನು ಸೀಸóರನಾಗಿ ನೇಮಿಸಿದ್ದ, ಆದರೆ ಅವನ ಮೇಲೆ ಸಂಶಯ ತಾಳಿ ಮರಣದಂಡನೆ ವಿಧಿಸಿದ (೩೫೯). ಫ್ಲೇವಿಯನ್ ಕುಟುಂಬದಲ್ಲಿ ಉಳಿದಿದ್ದ ಗಂಡಸರು ಇಬ್ಬರೇ-ಎರಡನೆಯ ಕಾನ್‍ಸ್ಟ್ಯಾಂಟಿಯಸ್ ಮತ್ತು ಜೂಲಿಯನ್. ಜರ್ಮನ್ ಅಲೆಮ್ಯಾನಿ ಪಂಗಡಗಳು ಗಾಲನ್ನು ಆಕ್ರಮಿಸಿದಾಗ ಕಾನ್‍ಸ್ಟ್ಯಾಂಟಿಯಸ್ ಜೂಲಿಯನನನ್ನು ಸೀಸರ್ ಪದವಿಗೆ ಏರಿಸಿ ಆಕ್ರಮಣಕಾರರನ್ನು ಹತ್ತಿಕ್ಕಲು ಕಳುಹಿಸಬೇಕಾಯಿತು. ಜೂಲಿಯನ್ ದಕ್ಷ ದಳಪತಿಯಾಗಿದ್ದ. ಈತ ಅಲೆಮ್ಯಾನಿಗಳನ್ನು ಸ್ಟ್ರ್ಯಾಸ್‍ಬರ್ಗಿನಲ್ಲಿ ಸೋಲಿಸಿದ (೨೫೭). ಇದರಿಂದ ಈತ ಸೈನ್ಯದ ಪ್ರೀತಿ ಗಳಿಸಿದ. ನಾಲ್ಕು ವರ್ಷಗಳ ನಂತರ ಸೈನಿಕರು ಈತನನ್ನು ಚಕ್ರವರ್ತಿ ಎಂದು ಘೋಷಿಸಿದರು. ಇದರಿಂದ ಜೂಲಿಯನ್ ಕಾನ್‍ಸ್ಟ್ಯಾಂಟಿಯಸನ ವಿರುದ್ಧ ಯುದ್ಧವನ್ನಾರಂಭಿಸಬೇಕಿತ್ತು. ಆದರೆ ಅಷ್ಟರಲ್ಲಿ ಕಾನ್‍ಸ್ಟ್ಯಾಂಟಿಯಸ್ ತೀರಿಕೊಂಡ. ಬಳಿಕ ಜೂಲಿಯನ್ ಸಾಮ್ರಾಟನಾಗಿ ಪರ್ಷಿಯನ್ನರ ವಿರುದ್ಧ ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡ (೩೬೧-೩೬೩). ೩೬೨ರಲ್ಲಿ ಪರ್ಷಿಯನ್ನರ ಮೇಲೆ ಆಕ್ರಮಣ ಮಾಡಿದ. ಆದರೆ ಟಿಸಿಫಾನ್ ನಗರವನ್ನು ವಶಪಡಿಕೊಳ್ಳಲು ಸಾಧ್ಯವಾಗಲಿಲ್ಲ. ಆನಂತರ ೩೬೩ರಲ್ಲಿ ಪರ್ಷಿಯನ್ ಸೈನಿಕರದೇ ಮೇಲುಗೈಯಾಯಿತು ಮತ್ತು ಅವರು ಜೂಲಿಯನನ ಸೈನ್ಯವನ್ನು ಸುತ್ತುಗಟ್ಟಿದರು. ಆನಂತರ ನಡೆದ ಉಗ್ರಕದನದಲ್ಲಿ ಜೂಲಿಯನ್ ಗಾಯಗೊಂಡು ಮಡಿದ. ಈತ ಪೇಗನ್ ಪಂಥವನ್ನು ಕ್ರೈಸ್ತಮತದಂತೆ ಸಂಘಟಿಸಲು ಪ್ರಯತ್ನಿಸಿದ. ಕ್ರೈಸ್ತರನ್ನು ವಿಚಾರಣೆಗೆ ಗುರಿಪಡಿಸದಿದ್ದರೂ ಉನ್ನತ ಹುದ್ದೆಯಿಂದ ಅವರನ್ನು ಕೆಳಗಿಳಿಸಿದ. ಕ್ರೈಸ್ತ ಶಿಕ್ಷಣದಲ್ಲಿ ಅಡ್ಡಿ ಆತಂಕಗಳನ್ನೊಡ್ಡಿದ. ಸುಶಿಕ್ಷಿತನಾಗಿದ್ದ ಜೂಲಿಯನ್ ಗ್ರಂಥಕರ್ತನೂ ಆಗಿದ್ದ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜೂಲಿಯನ್&oldid=1141947" ಇಂದ ಪಡೆಯಲ್ಪಟ್ಟಿದೆ