ಜೂಜಿಟ್ಸು ಆಯುಧರಹಿತವಾಗಿ ಶತ್ರುವಿನೊಡನೆ ಹೋರಾಡುವುದಕ್ಕೂ ಆತ್ಮರಕ್ಷಣೆ ಮಾಡಿಕೊಳ್ಳುವುದಕ್ಕೂ ಬಹಳ ಬಳಕೆಯಲ್ಲಿರುವ ಜಪಾನೀಯರ ಮಲ್ಲವಿದ್ಯೆ.

ಪ್ರಾಚೀನ ಕಾಲದಲ್ಲಿ ಚೀನದಲ್ಲಿದ್ದ ಲಾಮಾ ಜೋಗಿಗಳು ನಿರಾಯುಧರಾಗಿ ನಿರ್ಜನ ರಸ್ತೆಗಳಲ್ಲಿ ಹೋಗುತ್ತಿದ್ದಾಗ ಶಸ್ತ್ರಸಜ್ಜಿತರಾದ ದರೋಡೆಕಾರರ ಹಾವಳಿಯಿಂದ ರಕ್ಷಣೆ ಪಡೆಯಲು ಒಂದು ಬಗೆಯ ಕಾದಾಟವನ್ನು ಅನುಸರಿಸಿದರು. ಜಪಾನೀಯರು ಅದನ್ನು ಬಹಳ ವೃದ್ಧಿಪಡಿಸಿ ಜೂಜಿಟ್ಸುವನ್ನು ಸ್ಥಾಪಿಸಿದರು. ಮೊದಲು ಅದನ್ನು ಮಧ್ಯಯುಗದಲ್ಲಿ ಜಪಾನಿನ ಸಾಮುರಾಯ್ ಎಂಬ ಯುದ್ಧವೀರರು ಸಾಮಾನ್ಯ ಜನರಿಗೆ ಗೊತ್ತಾಗದಂತೆ ಗೂಢಕಲೆಯನ್ನಾಗಿ ಆಚರಿಸಿದರು. ಒಂದು ಪೀಳಿಗೆಯವರು ಮುಂದಿನ ಪೀಳಿಗೆಯವರಿಗೆ ರಹಸ್ಯವಾಗಿ ಕಲಿಸುತ್ತ ಆ ಕಲೆ ವಂಶಾನುಗತವಾಗಿ ಸಾಗಿತು. ಅದರಲ್ಲಿ ಅನೇಕ ರಹಸ್ಯ ಪಂಥಗಳಿದ್ದುವು. ಅದನ್ನು ಎರಡನೆಯ ಮಹಾಯುದ್ಧದ ಕಾಲದಲ್ಲಿ ಅಮೆರಿಕದ ಮತ್ತು ಇತರ ಕೆಲವು ದೇಶಗಳ ಸೈನಿಕರಿಗೆ ಜಪಾನೀ ಸೈನಿಕರೊಡನೆ ಕಾದಾಡಬೇಕಾಗಿದ್ದಾಗ ಉಪಯೋಗಿಸಲು ಕಲಿಸಲಾಗಿತ್ತು.

ಜೂ ಎಂದರೆ ಜಪಾನೀ ಭಾಷೆಯಲ್ಲಿ ಮೃದುವಾದ ಎಂದರ್ಥ; ಮೆದುವಾದ ಮತ್ತು ಸುಲಭವಾಗಿ ಮಣಿಯುವ ಕಲೆ ಎಂಬ ಅಭಿಪ್ರಾಯ. ವೈರಿಯು ಪಶುಶಕ್ತಿಯನ್ನು ಪ್ರಯೋಗಿಸಿ ಆಕ್ರಮಣ ಮಾಡಿದಾಗ ಅವನನ್ನು ಬಲದಿಂದ ಎದುರಿಸದೆ ಸೌಮ್ಯ ಕಲಾಕೌಶಲದಿಂದ ನಿಗ್ರಹಿಸಬೇಕೆಂಬುದು ಈ ಕಲೆಯ ಮೂಲತತ್ತ್ವ. ಸನ್ನೆಕೋಲಿನ ಬಳಕೆಯಿಂದ ತೂಕದ ಹೊರೆಯನ್ನು ಹತೋಟಿಯಲ್ಲಿಡುವಂತೆ ಒಬ್ಬ ಬಲಹೀನ ವ್ಯಕ್ತಿ ಕೂಡ ಬಲಿಷ್ಠನನ್ನು ಜಯಿಸಬಲ್ಲ. ಆಕ್ರಮಣಕಾರ ಮೇಲ್ಬೀಳಲು ನುಗ್ಗುತ್ತಿರುವಾಗ ವ್ಯಕ್ತಿ ಪಕ್ಕಕ್ಕೋ ಹಿಂದಕ್ಕೋ ಸರಿಯುತ್ತ ಅವನನ್ನು ಎಳೆದರೆ ಅಥವಾ ಅವನನ್ನು ಕ್ಷಣಮಾತ್ರ ಎದುರಿಸಿ ಬಳಿಕ ಪ್ರತಿಭಟನೆಯನ್ನು ಏಕಾಏಕಿ ನಿಲ್ಲಿಸಿದರೆ ಅವನ ಸಮತೋಲ ಕೆಡುತ್ತದೆ. ಆಗ ಅವನನ್ನು ತಳ್ಳಲೂ ಎಳೆಯಲೂ ಹಿಡಿದೆಸೆಯಲೂ ಸುಲಭವಾಗುತ್ತದೆ. ಅವನ ತೂಕವೂ ಓಡುವಿಕೆಯ ರಭಸವೂ ಅವನನ್ನು ಹಿಡಿದೆಸೆಯಲು ಅನುಕೂಲವಾಗುತ್ತವೆ.

ಹೋರಾಟದ ವಿಧಾನಗಳು

ಬದಲಾಯಿಸಿ

ಎದುರಾಳಿಯನ್ನು ಗಟ್ಟಿಪಟ್ಟಿನ ಹಿಡಿತದಲ್ಲಿ ಸಿಕ್ಕಿಸಿಕೊಂಡು ಅವನನ್ನು ನಾನಾ ರೀತಿಗಳಲ್ಲಿ ನೆಲಕ್ಕೆ ಎಸೆಯುವುದು. ಅವನು ಪ್ರತಿಭಟಿಸಿದರೆ ಅವನ ಮೊಣಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ಅವನು ಒಟ್ಟಿಗೆ ಹಿಸುಕುತ್ತ ಎಡಪಾದವನ್ನು ಅವನ ಕಾಲುಗಳ ಮಧ್ಯೆ ತೂರಿಸಿ, ಅವನ ಮೇಲೆ ಬಿದ್ದು, ಬಲಪಾದವನ್ನು ಹೊಟ್ಟೆಯ ಮೇಲೆ ಇಟ್ಟು, ಅವನನ್ನು ತಲೆಯ ಮೇಲೆ ಎಸೆಯುವುದು, ಎದುರಾಳಿಯನ್ನು ಅವನ ಮೊಣಕಾಲು ಮಂಡಿಯ ಹಿಂದೆ ಕಾಲಿನಿಂದ ಹೊಡೆದು ಅವನ ಮೈಹವಣಿಕೆಯನ್ನು ತಪ್ಪಿಸಿ ಅವನನ್ನು ಹಿಂದಕ್ಕೆ ಎಸೆಯುವುದು-ಹೀಗೆ ಅನೇಕ ವಿಧಗಳಿವೆ.


ನರಗಳನ್ನು ಎಲುಬಿಗೆ ಒತ್ತಿದರೆ ಬಹಳ ನೋವಾಗಿ, ಸೂಜಿಗಳು ಚುಚ್ಚಿದಂತೆ ವೇದನೆಯಾಗಿ, ಜೋಮೇರಿದಂತೆ ಆಗುತ್ತದೆ. ಕೆಲವು ಸಂಚಲೆಗಳಿಂದ ಎದುರಾಳಿಯ ಕೀಲುಗಳನ್ನು ತಪ್ಪಿಸಬಹುದು. ಕಾಲುಗಳನ್ನು ಅಸ್ವಾಭಾವಿಕ ಸ್ಥಿತಿಗಳಲ್ಲಿ ನಿರ್ಬಂಧಿಸಿ ಸ್ನಾಯುಗಳು ಕಿತ್ತುಹೋಗುವಂತೆ ಮಾಡಬಹುದು. ಆಗ ಕಾಲು ಮುರಿಯಲೂಬಹುದು. ನರಗಳನ್ನು ಜೋರಾಗಿ ಹೊರಳಿಸಿ ಉಳುಕಿಸಬಹುದು. ಗಂಟಲು ಹಿಸುಕಿ ಉಸಿರು ಕಟ್ಟಿಸಿ ಪ್ರಜ್ಞೆ ತಪ್ಪುವಂತೆ ಮಾಡಬಹುದು. ಅಭಿಧಮನಿಯನ್ನು ಒತ್ತಿ ರಕ್ತಚಲನೆಯನ್ನು ನಿಲ್ಲಿಸಬಹುದು. ಅಪಧಮನಿಯನ್ನು ಒತ್ತಿ ಸ್ಮøತಿ ತಪ್ಪಿಸಬಹುದು. ಗಂಟಲ ಬಳಿ ಇರುವ ಆ್ಯಡಮ್ಸ್ ಆಪಲನ್ನೂ ಯಕೃತ್ತುಗಳನ್ನೂ ಹೊಡೆದು ಹಾನಿ ಮಾಡಬಹುದು. ಅಲೆಮಿವಾಜಾ ಎಂಬ ಜೂಜಿಟ್ಸುವಿನ ಶಾಖೆಯಲ್ಲಿ ಬರಿಯ ಕೈಗಳಿಂದ ಎದುರಾಳಿಯನ್ನು ಕೊಲ್ಲುವ ತಂತ್ರವಿದೆ. ಪಕ್ಕೆಲುಬುಗಳ ಕೆಳಗೆ ಹೊಟ್ಟೆಯ ಮೇಲಿರುವ ಸೋಲಾರ್ ಪೆಕ್ಸಸ್ ಎಂಬ ನರ, ಮೊಣಕೈ ನರ, ತೋಳುಗಳ ಗುಣಿಗಳು, ಕೈಹರಡು, ಕಾಲುಹರಡು, ಕಿವಿಯವರೆಗೆ ಹೋಗಿರುವ ಸ್ನಾಯು, ತೋಳಿನ ಮೇಲ್ಭಾಗ, ಮೇಲಿನ ತುಟಿ-ಇವುಗಳಲ್ಲಿರುವ ನರಗಳು ಶೀಘ್ರಸಂವೇದಿಗಳು. ಅವನ್ನು ಅಮುಕುವುದರಿಂದಲೂ ಚಿವುಟುವುದರಿಂದಲೂ ಎದುರಾಳಿಗೆ ವಿಪರೀತ ನೋವಾಗಿ ತಾತ್ಕಾಲಿಕ ಪಾಶ್ರ್ವವಾಯುವನ್ನು ಉಂಟುಮಾಡಿ ಅವನು ಮೇಲಕ್ಕೇಳದಂತೆ ಮಾಡಬಹುದು. ಇದರಿಂದ ಅವನ ನರವ್ಯೂಹ ಮತ್ತು ಮಿದುಳಿಗೆ ಹಾನಿಯಾಗಬಹುದು. ಎದುರಾಳಿಯನ್ನು ಬಿಗಿಯಾದ ಹಿಡಿತದಲ್ಲಿ ಬಂಧಿಸಿ ಅವನು ಸ್ವಲ್ಪವೂ ಹರಿದಾಡದಂತೆ ಮಾಡಬಹುದು. ಈ ಹಿಡಿತಗಳನ್ನು ಅವನು ನಿಂತಿದ್ದಾಗಲೂ ಬೋರಲಾಗಿ ಬಿದ್ದಿದ್ದಾಗಲೂ ಪ್ರಯೋಗಿಸಬಹುದು. ಪ್ರವೀಣನಾದವ ಎದುರಾಳಿಗೆ ಕ್ಷಣಿಕವಾಗಿ ವಶನಾಗಿ, ಏಕಾಏಕಿ ತನ್ನ ಟೋಪಿಯನ್ನೋ ಕೈವಸ್ತ್ರವನ್ನೋ ಎದುರಾಳಿಯ ಮುಖದ ಮೇಲೆಸೆದು ಅವನ ದೃಷ್ಟಿಯನ್ನು ಮುಚ್ಚಿ ಅವನ ಮೇಲೆ ಹಿಡಿತವನ್ನು ಪ್ರಯೋಗಿಸುತ್ತಾನೆ; ಅಥವಾ ಅವನನ್ನು ಎಸೆಯುತ್ತಾನೆ. ಗಂಟಲನ್ನು ಬಿಗಿಯಾಗಿ ಹಿಡಿದು ತೋಳಿನಿಂದ ದೂಡುತ್ತಾನೆ. ಅವನ ಸಮತೋಲವನ್ನು ತಪ್ಪಿಸಿ ಮೊಣಕಾಲು ಮಂಡಿಯನ್ನು ಹೊಡೆದು ಕೆಡವುತ್ತಾನೆ. ಆತ್ಮರಕ್ಷಣೆಗೂ ಅನೇಕ ಪ್ರತಿಕ್ರಿಯೆಗಳಿವೆ. ಅವನ್ನು ಆಕ್ರಮಣಕಾರನ ಮೇಲೆ ಬಲುತ್ವರೆಯಿಂದ ನಿಖರವಾಗಿ ಪ್ರಯೋಗಿಸಬೇಕು. ವ್ಯಕ್ತಿ ಬೀಳುವಾಗ ಅಥವಾ ಎಸೆಯಲ್ಪಟ್ಟಾಗ ಸಂದುಗಳ ಮೇಲೆ ಅಥವಾ ತಲೆಯ ಮೇಲೆ ಬೀಳದಂತೆ ತನ್ನ ತೋಳನ್ನು ನೆಟ್ಟಗೆ ಮಾಡಿ ಶರೀರ ಭೂಮಿಯನ್ನು ಮುಟ್ಟುವುದಕ್ಕೆ ಒಂದು ಸೆಕೆಂಡು ಮುಂಚೆ ನೆಲವನ್ನು ತನ್ನ ಅಂಗೈಯಿಂದ ಬಲವಾಗಿ ಹೊಡೆಯುತ್ತಾನೆ. ಮುಖ ಕೆಳಗೆ ಬೀಳದಂತೆ ಶರೀರವನ್ನೂ ಕಾಲುಗಳನ್ನೂ ನೆಟ್ಟಗಿಟ್ಟು ನೆಲವನ್ನು ಮುಂದೋಳು ಮತ್ತು ಅಂಗೈಗಳಿಂದ ಬಡಿದು ಬೀಳುವಾಗ ತೋಳುಗಳನ್ನು ಬಗ್ಗಿಸುತ್ತಾನೆ.

ಜೂಜಿಟ್ಸಿನ ಆಧುನಿಕ ರೂಪ

ಬದಲಾಯಿಸಿ

ಜಪಾನ್ ಹಳೆಯ ಪದ್ಧತಿಗಳನ್ನು ಬಿಟ್ಟು ಆಧುನಿಕ ರಾಷ್ಟ್ರವಾದಾಗ ಸಾಮುರಾಯ್ ಸಂಸ್ಥೆಯೂ ರದ್ದಾಯಿತು. ಜೂಜಿಟ್ಸು ಅಲಕ್ಷಿಸಲ್ಪಟ್ಟು ಅಪಕೀರ್ತಿಯನ್ನು ಪಡೆಯಿತು. 1882ರಲ್ಲಿ ಜಿಗೋರೋ ಕಾನೇ ಎಂಬ ಜೂಜಿಟ್ಸು ಪ್ರವೀಣ ಬೇರೆ ಬೇರೆ ಜೂಜಿಟ್ಸು ಕೇಂದ್ರಗಳಿಗೆ ಹೋಗಿ ಅವುಗಳ ರಹಸ್ಯಗಳನ್ನೆಲ್ಲ ಕಲಿತು ಜೂಜಿಟ್ಸುವಿನಲ್ಲಿದ್ದ ಅಪಾಯಕಾರಿ ಅಂಶಗಳನ್ನು ತೆಗೆದುಹಾಕಿ, ಸುಧಾರಣೆಗಳನ್ನು ಮಾಡಿ, ಜನಸಾಮಾನ್ಯರಿಗೂ ದೊರೆಯುವಂತೆ ಜೂಡೋ ಎಂಬ ಕ್ರಮವನ್ನು ಟೋಕಿಯೋದ ಕೇಡೊಕಾನ್ ಅಕಾಡಮಿಯಲ್ಲಿ ಸ್ಥಾಪಿಸಿದ. ಹಿಂದೆ ಕದನಕ್ಕೆ ಮಾತ್ರ ಬಳಕೆಯಲ್ಲಿದ್ದ ಜೂಜಿಟ್ಸುವನ್ನು ವಿನೋದದ ಆಟ ಮತ್ತು ಶಾರೀರಿಕ ಮತ್ತು ಮಾನಸಿಕ ವ್ಯಾಯಾಮಸಾಧನವನ್ನಾಗಿ ಮಾರ್ಪಡಿಸಿದ. ಜೂಜಿಟ್ಸುವಿನ ಆಧುನಿಕ ರೂಪ ಜೂಡೋ. ಅದು ಹೋರಾಟದ ಕಲೆ ಮತ್ತು ಸ್ಪರ್ಧಾತ್ಮಕ ಕ್ರೀಡೆ. ಅದರಲ್ಲಿ ವೈವಿಧ್ಯಪೂರ್ಣ ಎಸೆತಗಳ, ಹಿಡಿತಗಳ ಮತ್ತು ಕಟ್ಟುಗಳ ಸುಂದರ ಜೋಡಣೆ ಉಂಟು. ಪ್ರಮಾಣ ಬದ್ಧವಾದ ಶಾಸನಗಳಿವೆ. ಅದು ಜಪಾನಿನಲ್ಲೂ ಇತರ ದೇಶಗಳಲ್ಲೂ ಬಹು ಜನಪ್ರಿಯವಾಯಿತು. ಸ್ತ್ರೀಯರೂ ಹುಡುಗಿಯರೂ ಕಲಿಯಲು ಸುರಕ್ಷಿತವಾಗಿದೆ. ಹುಡುಗರು ಅದನ್ನು ಕಲಿತು ಚಿಕ್ಕ ವಯಸ್ಸಿನಲ್ಲೇ ಜೂನಿಯರ್ ಸ್ಪರ್ಧೆಗಳಲ್ಲಿ ಪ್ರವೇಶಿಸುತ್ತಾರೆ. ಶಾಲೆಗಳಲ್ಲೂ ಖಾಸಗಿ ವ್ಯಾಯಾಮಶಾಲೆಗಳಲ್ಲೂ ಅದರ ಶಿಕ್ಷಣ ದೊರೆಯುತ್ತದೆ. ಅದರಲ್ಲಿ ಐದು ದರ್ಜೆಗಳಿವೆ. ಅವನ್ನು ಬೇರೆ ಬೇರೆ ಬಣ್ಣಗಳ ನಡುಕಟ್ಟುಗಳಿಂದ ಸೂಚಿಸಲಾಗುತ್ತದೆ. ಪ್ರಾಥಮಿಕ ದರ್ಜೆಗೆ ಬಿಳಿಯ ಬಣ್ಣ; ಪ್ರವೀಣ ದರ್ಜೆಗೆ ಕಪ್ಪು ಬಣ್ಣ. ಸೈನಿಕರಿಗೂ ನೌಕಾಪಡೆಯವರಿಗೂ ಪೊಲೀಸರಿಗೂ ಅಗ್ನಿಶಾಮಕದಳದವರಿಗೂ ಜೂಡೋ ಶಿಕ್ಷಣವಿದೆ. ನಾನಾ ಮುಖ್ಯ ಪಟ್ಟಣಗಳಲ್ಲಿ ಜೂಡೋ ಕ್ಲಬ್ಬುಗಳಿವೆ. 1952ರಲ್ಲಿ ಇಪ್ಪತ್ತು ಜನಾಂಗದವರು ಸೇರಿ ಸ್ಥಾಪಿಸಿದ ಅಂತಾರಾಷ್ಟ್ರೀಯ ಜೂಡೊ ಫೆಡರೇಷನ್ ವಿಶ್ವದ ಛಾಂಪಿಯನ್ ಪಂದ್ಯಾಟಗಳನ್ನು ಏರ್ಪಡಿಸುತ್ತದೆ. 1964ರಲ್ಲಿ ಜೂಡೋ ಒಪಿಂಪಿಕ್ ಪಂದ್ಯಾಟಗಳಲ್ಲಿ ಸೇರಿಕೊಂಡಿತು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: