ಜೀನಂಗಿ -ಲೆಗ್ಯೂಮಿನೋಸೀ ಕುಟುಂಬಕ್ಕೆ ಸೇರಿದ ಒಂದು ಪೊದೆಸಸ್ಯ. ಸೆಸ್ಬೇನಿಯ ಈಜಿಪ್ಟಿಯಾಕ ಇದರ ಶಾಸ್ತ್ರೀಯ ನಾಮ. ಅರಿಸಿನ ಜೀನಂಗಿ ಪರ್ಯಾಯನಾಮ. ಉಷ್ಣದೇಶಗಳ ಮೂಲನಿವಾಸಿಯಾದ ಇದು ಶ್ರೀಲಂಕಾ, ಭಾರತ, ಥಾಯ್ಲೆಂಡುಗಳಲ್ಲಿ ಹೇರಳವಾಗಿ ಬೆಳೆಯುತ್ತದೆ.

ಇದೊಂದು ಮೃದುಕಾಂಡದ ಪೊದೆ, ತೇವವಿರುವ ಸ್ಥಳಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದರ ಎತ್ತರ ಸುಮಾರು 3 ಮೀ. ಎಲೆಗಳು ಏಕಪಿಚ್ಛಕ ಮಾದರಿಯವು. ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಒಂದೊಂದು ಎಲೆಯಲ್ಲೂ 10-20 ಜೊತೆ ಕಿರುಪತ್ರಗಳಿವೆ. ಹೂಗಳು ಎಲೆಗಳ ಕಂಕುಳಲ್ಲಿ ರೆಸೀಮ್ ಮಾದರಿಯ ಗೊಂಚಗಳಲ್ಲಿ ಸಮಾವೇಶಗೊಂಡಿವೆ. ಹೂಗಳ ಬಣ್ಣ ಹಳದಿ. ಫಲ ಪಾಡ್ ಮಾದರಿಯದು; 15 - 25 ಸೆಂ.ಮೀ. ಉದ್ದ ಇದೆ.

ಜೀನಂಗಿಯನ್ನು ಬೀಜಗಳಿಂದ ವೃದ್ಧಿಸಲಾಗುತ್ತದೆ. ಜೀನಂಗಿಗೆ ಹಲವಾರು ಉಪಯೋಗಗಳುಂಟು. ಇದರ ಮರದ ತಿರುಳಿನಿಂದ ಮೀನುಗಾರರು ತೇಲುವ ಚಂಡನ್ನು ಮಾಡಿಕೊಳ್ಳುತ್ತಾರೆ. ಮರದ ತಿರುಳಿನಿಂದ ಬಂದೂಕುಗಳಲ್ಲಿ ಉಪಯೋಗಿಸುವ ಇದ್ದಿಲು ಪುಡಿಯನ್ನು ಮಾಡುತ್ತಿದ್ದರು. ತೊಗಟೆಯಿಂದ ಪಡೆಯುವ ನಾರಿನಿಂದ ಹಗ್ಗ ಮಾಡುವುದಿದೆ. ಇದರ ಎಲೆ ಮತ್ತು ಬೀಜಗಳಿಗೆ ಔಷಧೀಯ ಗುಣಗಳಿವೆ. ಬೀಜಗಳನ್ನು ಪ್ರಚೋದಕಗಳಾಗಿ ಉಪಯೋಗಿಸುತ್ತಾರೆ. ಎಲೆಗಳನ್ನು ಅರೆದು ಕರುಗಳಿಗೆ ಸಂಧಿವಾತದ ಬಾವುಗಳಿಗೆ ಬೆಚ್ಚಾರವಾಗಿ ಬಳಸಲಾಗುತ್ತದೆ. ಎಲೆಗಳ ರಸ ಜಂತುನಾಶಕವೆಂದು ಹೆಸರಾಗಿದೆ. ಬೇರಿನ ಕಣಕ ಚೇಳು ಕಡಿತಕ್ಕೆ ಉತ್ತಮ ಔಷಧಿ. ಜೀನಂಗಿಯ ಎಳೆಚಿಗುರು ಕುರಿಮೇಕೆಗಳಿಗೆ ಅಚ್ಚು ಮೆಚ್ಚಿನ ಮೇವು. ವೀಳೆಯದೆಲೆ, ಅಡಕೆ, ಬಾಳೆ ತೋಟಗಳಲ್ಲಿ ನೆರಳಿಗಾಗಿ ಜೀನಂಗಿ ಗಿಡವನ್ನು ಬೆಳೆಸುವುದೂ ಉಂಟು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಅಗಸೆ (ಸೆಸ್ಬೇನಿಯ ಗ್ರ್ಯಾಂಡಿಪ್ಲೋರ), ಮುಳ್ಳು ಜೀನಂಗಿ (ಸೆ.ಅಕ್ಯೂಲಿಯೇಟ), ಕರೀಜೀನಂಗಿ (ಸೆ.ಪ್ಯಾಲುಡೋಸ) ಮುಂತಾದವಕ್ಕೆ ಇದು ಹತ್ತಿರ ಸಂಬಂಧಿ.

"https://kn.wikipedia.org/w/index.php?title=ಜೀನಂಗಿ&oldid=1081631" ಇಂದ ಪಡೆಯಲ್ಪಟ್ಟಿದೆ