ಜಿನೀವ ಸರೋವರ
ಜಿನೀವ ಸರೋವರ - ಮಧ್ಯ ಯೂರೋಪಿನ ಅತ್ಯಂತ ದೊಡ್ಡ ಸರೋವರ.
ನೈಋತ್ಯ ಸ್ವಿಟ್‍ಜರ್ಲೆಂಡಿಗೂ ಆಗ್ನೇಯ ಫ್ರಾನ್ಸಿನ ಓಟ್-ಸವಾಯ್ ವಿಭಾಗಕ್ಕೂ ನಡುವೆ ಇದೆ. ಸಮುದ್ರ ಮಟ್ಟದಿಂದ 1,220' ಎತ್ತರದಲ್ಲಿರುವ ಈ ಸರೋವರದ ವಿಸ್ತೀರ್ಣ 224ಳಿ ಚ.ಮೈ. ಇದರಲ್ಲಿ 134 ಚ.ಮೈ. ಸ್ವಿಸ್ ಎಲ್ಲೆಯೊಳಗೂ 90 1/2 ಚ.ಮೈ. ಫ್ರೆಂಚ್ ಎಲ್ಲೆಯೊಳಗೂ ಇವೆ. ಈ ಸರೋವರ ಬಾಲಚಂದ್ರಾಕಾರದಲ್ಲಿದೆ. ಈ ಸರೋವರವನ್ನು ರೋನ್ ನದಿ ಇದರ ಪೂರ್ವತುದಿಯಲ್ಲಿ ಪ್ರವೇಶಿಸಿ, ಪಶ್ಚಿಮ ತುದಿಯಿಂದ ಮುಂದುವರಿದು ಜಿನೀವ ನಗರದ ಮೂಲಕ ಹರಿಯುತ್ತದೆ. ಪೂರ್ವದಿಂದ ಪಶ್ಚಿಮಕ್ಕೆ ಇದರ ಉದ್ದ 72 ಕಿ.ಮೀ, ಗರಿಷ್ಟ ಆಳ 1.017', ಸರಾಸರಿ ಆಳ 500', ಗರಿಷ್ಟ ಅಗಲ 14 ಕಿ.ಮೀ., ಸರಾಸರಿ ಅಗಲ 8 ಕಿ.ಮೀ. ಪ್ರೊಮೆಂತೂ ಜಲಸಂಧಿಯಿಂದ ಈ ಸರೋವರದಲ್ಲಿ ಎರಡು ಭಾಗಗಳಾಗಿವೆ. ಈ ಜಲಸಂಧಿಯ ಬಳಿ ನೀರಿನ ಆಳ ಹೆಚ್ಚಿಲ್ಲ; ಸ್ವಲ್ಪ ದೂರ 100' ಮಾತ್ರ. ಸರೋವರದ ನೀರು ಸಾಮಾನ್ಯವಾಗಿ ನೀಲಿ. ರೋನ್ ನದಿ ಸೇರುವಲ್ಲಿ ನೀರು ಬಗ್ಗಡವಾಗಿದೆ. ಸರೋವರದ ನೀರು ಒಂದು ದಡದಿಂದ ಇನ್ನೊಂದು ದಡಕ್ಕೆ ತೊಟ್ಟಿಲಂತೆ ತೂಗುವುದರಿಂದ 2-5 ಮಿನಿಟುಗಳಿಗೊಮ್ಮೆ ಜಿನೀವದ ಬಳಿ ನೀರಿನ ಮಟ್ಟದಲ್ಲಿ 2'-5' ಗಳಷ್ಟು ಏರಿಕೆಯಾಗುತ್ತದೆ. ಸ್ವಿಟ್‍ಜûರ್ಲೆಂಡಿನ ಇತರ ಸರೋವರಗಳಲ್ಲಿ ಇರುವಷ್ಟು ಮತ್ಸ್ಯಸಂಪತ್ತು ಈ ಸರೋವರದಲ್ಲಿಲ್ಲ. ಇಲ್ಲಿ ಕೇವಲ 20 ಸ್ಥಳೀಯ ಜಾತಿಗಳ ಮೀನುಗಳಿವೆ. ದಡದ ಗುಂಟ ವಿಹಾರಕ್ಕೆ ಭಿನ್ನಭಿನ್ನ ಸಂದರ್ಭಗಳಲ್ಲಿ ಜನರು ಬಂದು ಬಿಡಾರ ಹಾಕುತ್ತಾರೆ. ಸರೋವರದ ಮೇಲೆ ಸ್ಟೀಮರುಗಳ ಸಂಚಾರವುಂಟು. ಜಿನೀವ ರೇವಿನಲ್ಲಿ ಎರಡು ಗ್ರಾನೈಟ್ ಬಂಡೆಗಳು ಥಟ್ಟನೆ ಎದ್ದು ನಿಂತಿವೆ.