ಜಾರ್ಜ್ ಟರ್ಬರ್ವಿಲ್
ಜಾರ್ಜ್ ಟರ್ಬರ್ವಿಲ್ (ಜನನ ಸುಮಾರು ೧೫೪೦-೧೫೯೭ ಕ್ಕೂ ಮೊದಲು ಮರಣ). ಕವಿ. ಡಾರ್‍ಸೆಟ್‍ಷೈರ್‍ನ ಒಂದು ಹಳೆಯ ಮನೆತನಕ್ಕೆ ಸೇರಿದವ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ವಿಂಚೆಸ್ಟರ್ ಹಾಗೂ ನ್ಯೂ ಕಾಲೇಜುಗಳಲ್ಲಿ ಕಾನೂನುಶಾಸ್ತ್ರವನ್ನು ವ್ಯಾಸಂಗ ಮಾಡಿದ. ಪ್ರಥಮ ಇಂಗ್ಲಿಷ್ ರಾಯಭಾರಿ ಥಾಮಸ್ ರ್ಯಾಂಡಾಲ್ಫ್‍ನ ಕಾರ್ಯದರ್ಶಿಯಾಗಿ ರಷ್ಯಕ್ಕೆ ಹೋದ. ತನ್ನ ನಲ್ಲೆಗೆ ಕವನಸಂಕಲನವನ್ನು ಅರ್ಪಿಸಿದ ಮೊಟ್ಟ ಮೊದಲ ಇಂಗ್ಲಿಷ್ ಕವಿ ಈತ. ಈ ರೀತಿಯ ಪ್ರೇಮಗೀತೆ ಎಲಿಜಬೆತ್ ಯುಗದಲ್ಲಿ ಜನಪ್ರಿಯವಾಯಿತು.
ಜಾರ್ಜ್ ಲ್ಯಾಟಿನ್ ಹಾಗೂ ಇಟಾಲಿಯನ್ ಭಾಷೆಯಿಂದ ವಿಪುಲವಾಗಿ ಅನುವಾದ ಮಾಡಿದ್ದಾನೆ. ಎಪಿಟ್ಯಾಫ್ಸ್, ಎಪಿಗ್ರಾಂಸ್, ಸಾಂಗ್ಸ್ ಅಂಡ್ ಸಾನೆಟ್ಸ್ ಎಂಬ ಪುಸ್ತಕ ೧೫೬೭ ರಲ್ಲಿ ಪ್ರಕಟವಾಯಿತು. ದಿ ಬುಕ್ ಆಫ್ ಫ್ಯಾಲ್ಕನ್ರಿ ಹಾಗೂ ದಿ ನೋಬಲ್ ಆರ್ಟ್ ಆಫ್ ವೆನೆರಿ ಎಂಬವು ಈತನ ಮತ್ತೆರಡು ಪುಸ್ತಕಗಳು (೧೫೬೭). ಸರಳ ರಗಳೆಯನ್ನು ಬಳಕೆಗೆ ತಂದವರಲ್ಲಿ ಜಾರ್ಜ್ ಒಬ್ಬನೆನ್ನಲಾಗಿದೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: