ಜಾನ್ ರಾಬಿನ್ಸನ್ ಜೆಫರ್ಸ್
ಜಾನ್ ರಾಬಿನ್ಸನ್ ಜೆಫರ್ಸ್ (1887-1962). ಅಮೆರಿಕದ ಕವಿ. ವಿವಾದಾತ್ಮಕ ವ್ಯಕ್ತಿ.
ಬದುಕು
ಬದಲಾಯಿಸಿಪೆನ್ಸಿಲ್ವೇನಿಯದ ಪಿಟ್ಸಬರ್ಗ್‍ನಲ್ಲಿ ಹುಟ್ಟಿದ. ತಂದೆ ವೇದಾಂತ ಶಿಕ್ಷಕ. ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ವೈದ್ಯಶಾಸ್ತ್ರವನ್ನೂ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಅರಣ್ಯಶಾಸ್ತ್ರವನ್ನೂ ವ್ಯಾಸಂಗ ಮಾಡಿದ. ಕಾಲೇಜಿನಲ್ಲಿ ವ್ಯಾಯಾಮಪಟು ಎನಿಸಿಕೊಂಡಿದ್ದ.
ಕಾವ್ಯ
ಬದಲಾಯಿಸಿಕಾವ್ಯದ ಕಡೆ ಒಲವಿದ್ದ ಈತ ಕ್ಯಾಲಿಪೋರ್ನಿಯ ಕಡಲತೀರದ ಕಾರ್ಮೆಲ್ ಬಳಿ ಒಂದು ಏಕಾಂತ ಪ್ರದೇಶದಲ್ಲಿ ಮನೆಮಾಡಿಕೊಂಡು ನಾಗರಿಕ ಜಗತ್ತಿನ ಸಂಸರ್ಗದಿಂದ ದೂರನಾಗಿ ಹಳ್ಳಿಗಾಡಿನ ಆದಿವಾಸಿಗಳ ಬಾಳಿನ ಪ್ರಭಾವಕ್ಕೆ ಒಳಗಾಗಿ ಕವಿತೆಗಳನ್ನು ರಚಿಸತೊಡಗಿದ. ಈತನ ಕವಿತೆಗಳಲ್ಲೆಲ್ಲ ಪ್ರಧಾನವಾಗಿ ಮಿಡಿಯುವುವೆಂದರೆ ಬಾಳಿನ ವಿಷಾದ, ಭಯಾನಕ ಹಾಗೂ ನೈತಿಕ ಹತಾಶಾಭಾವಗಳು. ಪ್ರಕಟವಾದ ಸುಮಾರು ಇಪ್ಪತ್ತು ಕವನ ಸಂಕಲನಗಳಲ್ಲಿ ಈತನಿಗೆ ಮೊದಲು ಕೀರ್ತಿ ತಂದ ಕೃತಿ ಟಾಮರ್ ಅಂಡ್ ಅದರ್ ಪೊಯಮ್ಸ್ (1924); ಇದರಲ್ಲಿ ವ್ಯಕ್ತವಾದ ಕವಿಯ ವಿಶಿಷ್ಟ ಶೈಲಿ, ವಿಕ್ಷಿಪ್ತಮನೋಧರ್ಮಗಳೇ ಅನಂತರದ ಕಾಡರ್ (1928); ಥರ್ಮೋಸ್ ಲ್ಯಾಂಡಿಂಗ್ (1932); ಬಿ ಆ್ಯಂಗ್ರಿ ಟು ದಿ ಸನ್ (1941); ದಿ ಡಬಲ್ ಆ್ಯಕ್ಸ್ (1948); ಹಂಗರ್ ಫೀಲ್ಡ್ (1954) ಎಂಬ ಕವನಸಂಕಲನಗಳಲ್ಲೂ ಬೆಳೆದು ಪ್ರಕಾಶಗೊಂಡವು. ಈತನ ಭಾವಗೀತೆಗಳಲ್ಲಿ, ಕಥನಕವನಗಳಲ್ಲಿ ಕಾರ್ಮೆಲ್ ಕಡಲತೀರದ ವರ್ಣಮಯ ಬಾಳು ಚಿತ್ರಿತವಾಗಿದೆ. ಹಿಂಸಾರಭಸಮತಿಯಾಗಿದ್ದ ಈತನ ತಾತ್ವಿಕ ವಿಚಾರಗಳು ಅನೇಕ ಕಾವ್ಯ ವಿಮರ್ಶಕರ ಕಟುವಾದ ಟೀಕೆಗೆ ಗುರಿಯಾಗಿವೆ. ವಿಮರ್ಶಕರು ಈತನ ಅತಿಯಾದ ಶಬ್ದಾಡಂಬರವನ್ನೂ ದೀರ್ಘಪಂಕ್ತಿಗಳ ಶೈಲಿಯನ್ನೂ ನಿಷ್ಠುರವಾಗಿ ಖಂಡಿಸಿದ್ದಾರೆ. ಆದರೂ ಸ್ವೋಪಜ್ಞತೆಯಿರುವ ಸತ್ವಶಾಲಿಯಾದ ಈ ಕವಿಯ ಸ್ಥಾನ ಅಮೆರಿಕನ್ ಕಾವ್ಯಾಲೋಕದಲ್ಲಿ ಅಚಲವಾಗಿದೆ. ಯೂರಿಪಿಡೀಸ್‍ನ ಮೀಡಿಯ ಎಂಬ ನಾಟಕವನ್ನು ಇಂಗ್ಲಿಷಿಗೆ ಪ್ರತಿಭಾಪೂರ್ಣವಾಗಿ ಅಳವಡಿಸಿರುವ ಶ್ರೇಯಸ್ಸು ಈತನದು. ಗ್ರೀಕ್ ಪೌರಾಣಿಕ ಕಥೆಗಳಿಂದ ಪಾತ್ರಗಳನ್ನೊ ಸನ್ನಿವೇಶಗಳನ್ನೊ ಆರಿಸಿ ತನ್ನ ಕಾವ್ಯದ ಪ್ರತಿಮೆಗಳನ್ನಾಗಿ ಪರಿವರ್ತಿಸಿಕೊಂಡಿರುವುದು ಈತನ ವೈಶಿಷ್ಟ್ಯ.