ಜಾನ್ ಬಾಯ್ಡ್‌ ಡನ್ಲಪ್

ಜಾನ್ ಬಾಯ್ಡ್‌ ಡನ್ಲಪ್ (1840-1921). ಸ್ಕಾಟ್ಲೆಂಡಿನ ಉಪಜ್ಞಾಕಾರ. ವಾಯು ತುಂಬುವ (ನ್ಯೂಮ್ಯಾಟಿಕ್) ರಬ್ಬರ್ ಟೈರುಗಳನ್ನು ಮೊತ್ತಮೊದಲಿಗೆ ಉಪಜ್ಞಿಸಿದ ಖ್ಯಾತಿ ಇವನದು

ಜನಿಸಿದ್ದು ಏರ್‍ಷೀರ್ ಕೌಂಟಿಯ ಡ್ರೆಗ್‍ಹಾರ್ನ್ ಎಂಬಲ್ಲಿ. 1867ರಲ್ಲಿ ಈತ ಬೆಲ್‍ಫಾಸ್ಟ್ ಪಟ್ಟಣಕ್ಕೆ ಬಂದು ನೆಲೆಸಿ ಅಲ್ಲೇ ಪಶುಶಸ್ತ್ರವೈದ್ಯನಾಗಿ ವೃತ್ತಿ ಆರಂಭಿಸಿದ. ತನ್ನ ಚಿಕ್ಕ ಮಗನ ಟ್ರೈಸಿಕಲ್ಲಿಗೆ ವಾಯು ತುಂಬಿದ ಟೈರುಗಳನ್ನು ಜೋಡಿಸಿ (1887ರ ಸುಮಾರು) ಅದರ ಪರಿಣಾಮವನ್ನು ಅಧ್ಯಯಿಸಿದ. ಈ ಪ್ರಯೋಗ ಯಶಸ್ವಿಯಾಗಿ ಇಂಥ ಟೈರುಗಳಿಗಾಗಿ ಈತನಿಗೆ 1888ರಲ್ಲಿ ಏಕಸ್ವ ದೊರೆಯಿತು. ವಾಣಿಜ್ಯಮಟ್ಟದಲ್ಲಿ ಇಂಥ ಟೈರುಗಳ ಉತ್ಪಾದನೆ ಪ್ರಾರಂಭವಾದದ್ದು ಏಕಸ್ವ ದೊರೆತ ಎರಡು ವರ್ಷಗಳ ಬಳಿಕವೇ ವಿಲಿಯಮ್ ಹ್ಯಾರಿ ಡುಕ್ರಾಸ್ ಎಂಬಾತ ನೊಡಗೂಡಿ ಬೆಲ್‍ಫಾಸ್ಟಿನಲ್ಲಿ ನ್ಯೂಮ್ಯಾಟಿಕ್ ಟೈರ್ ಅಂಡ್ ಸೈಕಲ್ ಏಜನ್ಸಿ ಎಂಬ ಹೆಸರಿನ ಒಂದು ಉದ್ಯಮವನ್ನು ಸ್ಥಾಪಿಸಿದ. ಕೊನೆಕೊನೆಗೆ ತಾನು ಪಡೆದುಕೊಂಡಿದ್ದ ಏಕಸ್ವವನ್ನು ಅಲ್ಪ ಮೊತ್ತಕ್ಕೆ ಡುಕ್ರಾಸ್‍ಗೇ ಮಾರಿಬಿಟ್ಟು ಆ ಉದ್ದಿಮೆಯಲ್ಲಿ 1500 ಷೇರುಗಳನ್ನು ಕೊಂಡ. ಕೆಲವು ದಿವಸಗಳ ಬಳಿಕ ಡನ್‍ಲಪನ ವಾಯುಪೂರಣ ತತ್ತ್ವ ಅವನದ್ದಲ್ಲವೆಂದೂ ಅದನ್ನು 1845ರಲ್ಲೇ ತಾಮ್‍ಸನ್ ಎಂಬಾತ ಪ್ರತಿಪಾದಿಸಿದ್ದು ಅದರ ಮೇಲಿನ ಏಕಸ್ವವನ್ನು ಮೊದಲೇ ಪಡೆಯಲಾಗಿತ್ತೆಂದೂ ತಿಳಿದು ಬಂದು ಮಧ್ಯೆ ಸ್ವಲ್ಪ ತೊಂದರೆ ಉದ್ಭವಿಸಿತು. ಆದರೆ ಆ ವೇಳೆಗೆ ಈ ಸಂಸ್ಥೆ ಇದೇ ಸಂಬಂಧದ ಇತರ ಉಪಕರಣಗಳ ಏಕಸ್ವಗಳನ್ನು ಪಡೆದುಕೊಂಡಿತ್ತಾದ್ದರಿಂದ ಅದರ ಸ್ಥಾನಭದ್ರತೆಗೆ ಯಾವ ಧಕ್ಕೆಯೂ ಉಂಟಾಗಲಿಲ್ಲ. 1896ರಲ್ಲಿ ಈ ಸಂಸ್ಥೆಯನ್ನು ಇ.ಟಿ. ಹೂಲಿ ಎಂಬವ ಕ್ರಯಕ್ಕೆ ತೆಗೆದುಕೊಂಡು 50 ಲಕ್ಷ ಪೌಂಡುಗಳ ಬಂಡವಾಳದೊಡನೆ ಟೈರಿನ ಉದ್ಯಮವನ್ನು ಪುನರುಜ್ಜೀವನಗೊಳಿಸಿದ. ಈ ವೇಳೆಗೆ ಸಂಸ್ಥೆಯ ಅಭಿವೃದ್ಧಿಯಲ್ಲಿ ಡನ್‍ಲಪ್‍ನಿಗಿದ್ದ ಆಸಕ್ತಿ ಕಡಿಮೆಯಾಗಿತ್ತು. ಇದರಿಂದಾಗಿ ಹೇಳಿಕೊಳ್ಳುವಂಥ ಹೆಚ್ಚಿನ ಐಶ್ವರ್ಯವನ್ನೇನೂ ಈತ ಗಳಿಸಲಿಲ್ಲ. ಅನಂತರ ಜವಳಿ ವ್ಯಾಪಾರ ನಡೆಸುತ್ತಿದ್ದ ಒಂದು ಸಂಸ್ಥೆ ಸೇರಿ ಅಲ್ಲಿ ಕೆಲಕಾಲ ಕೆಲಸಮಾಡಿದ. ಈತನ ಕಾಲಾ ನಂತರ (1921) ಇವನ ಮಗಳು ಜೀನ್ ಮಿಕ್ಲಿಂಟಾಕ್ ಎಂಬುವಳು ವಾಯು ಪೂರಣ ಟೈರುಗಳ ಇತಿಹಾಸವನ್ನು ಕುರಿತಂತೆ ಒಂದು ಪುಸ್ತಕವನ್ನು ಪ್ರಕಟಿಸಿದಳು