ಜಾನ್ ಟ್ರಂಬಲ್ (1750-1831). ಅಮೆರಿಕದ ಕವಿ. ನ್ಯಾಯಶಾಸ್ತ್ರಜ್ಞ.

ಜಾನ್ ಟ್ರಂಬಲ್ ಒಂದು ಚಿತ್ರ

ಬದುಕು ಮತ್ತು ಸಾಧನೆ

ಬದಲಾಯಿಸಿ

ಹುಟ್ಟಿದ್ದು ಕನೆಕ್ಟಿಕಟ್ ಪ್ರಾಂತ್ಯದ ವೆಸ್ಟ್‍ಬರಿ (ಈಗಿನ ವಾಟರ್ ಟೌನ್) ಎಂಬ ಊರಿನಲ್ಲಿ. ತಂದೆ ರೆವರಂಡ್ ಜಾನ್ ಟ್ರಂಬಲ್. ತಾಯಿ ಸಾರಾ (ವ್ಹಿಟ್‍ಮನ್). ಪ್ರತಿಭಾವಂತರ ವಂಶದಲ್ಲಿ ಹುಟ್ಟಿದ ಈತನ ಮನೆತನದಲ್ಲಿ ಮೂವರು ಗವರ್ನರುಗಳು. ಒಬ್ಬ ಸೇನಾದಂಡನಾಯಕ. ಒಬ್ಬ ಭಾಷಾಶಾಸ್ತ್ರಜ್ಞ. ಒಬ್ಬ ಇತಿಹಾಸಕಾರ. ಒಬ್ಬ ಚಿತ್ತಕಲಾವಿದ ಆಗಿ ಹೋಗಿದ್ದರು.

ಬಾಲ್ಯದಲ್ಲಿಯೆ ಅಸಾಧಾರಣ ಮೇಧಾವಿಯಾಗಿದ್ದ ಈತ ಬಾಲಪ್ರತಿಭೆಗೆ ಅದ್ಭುತ ನಿದರ್ಶನವಾಗಿದ್ದ. ಐದನೆಯ ವಯಸ್ಸಿಗೆ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳನ್ನು ಕಲಿತು ಏಳನೆಯ ವಯಸ್ಸಿನಲ್ಲಿ ಯೇಲ್ ಕಾಲೇಜಿನ ಪ್ರವೇಶ ಪರೀಕ್ಷಗೆ ವಿನೋದಕ್ಕೆಂದು ಕೂತು ಉತ್ತಮ ದರ್ಜೆಯಲ್ಲಿ ಉತ್ತೀರ್ಣನಾಗಿ ಎಲ್ಲರನ್ನು ಅಚ್ಚರಿಸಿಗೊಳಿಸಿದ. 13ನೆಯ ವಯಸ್ಸಿಗೆ ಮ್ಯಾಟ್ರಿಕ್ ಪಾಸು ಮಾಡಿ ಯೇಲ್ ವಿಶ್ವವಿದ್ಯಾಲಯವನ್ನು ಸೇರಿದ. 1767ರಲ್ಲಿ ಬಿ.ಎ. ಮತ್ತು 1770ರಲ್ಲಿ ಎಂ.ಎ. ಪದವಿಗಳನ್ನು ಪಡೆದ. ಅನಂತರ ಅದೇ ವಿಶ್ವವಿದ್ಯಾಲಯದ ಫೆಲೋ ಮತ್ತು ಟ್ಯೂಟರ್ ಆಗಿ ಒಟ್ಟು ಐದು ವರ್ಷ ಕಳೆದ. ಈ ಮಧ್ಯೆ ಕನೆಕ್ಟಿಕಟ್ ಜರ್ನಲ್ ಎಂಬ ಪತ್ರಿಕೆಗೆ ಕವನ ಹಾಗೂ ಸಾಹಿತ್ಯ ಪ್ರಬಂಧಗಳನ್ನು ಬರೆದು ಕೊಡುತ್ತಿದ್ದ.

ತನ್ನ ವಿದ್ವತ್ತಿನಿಂದ ಎಲ್ಲರನ್ನೂ ಬೆರಗುಗೊಳಿಸಿದ ಈತ ಅಂದಿನ ಶಿಕ್ಷಣ ಪದ್ಧತಿಯ ಪಠ್ಯಕ್ರಮದ ದೋಷಗಳನ್ನೆತ್ತಿ ತೋರಿಸಿ ಲೇವಡಿ ಮಾಡಿ ಶಿಕ್ಷಣ ತಜ್ಞರನ್ನೆಲ್ಲ ಬೆಚ್ಚು ಬೀಳಿಸಿದ. ಅದೇ ವಸ್ತುವನ್ನು ಕುರಿತು ದಿ ಪ್ರೋಗ್ರೇಸ್ ಆಫ್ ಡಲನೆಸ್ ಎಂಬ ದೀರ್ಘ ವಿಡಂಬನ ಕಾವ್ಯದ ಮೊದಲ ಭಾಗವನ್ನು ರಚಿಸಿ (1772) ಪ್ರಕಟಸಿದ. ಉಳಿದ ಭಾಗಗಳನ್ನು 1773ರಲ್ಲಿ ಪ್ರಕಟಿಸಿದ. ಇದೇ ಈತನ ಮೊದಲ ಹಾಗೂ ಮಹತ್ತರವಾದ ಸಾಹಿತ್ಯ ಕೃತಿ.

1773ರ ವೇಳೆಗೆ ನ್ಯಾಯಶಾಸ್ತ್ರದಲ್ಲಿ ಪದವೀಧರನಾಗಿ ಬಾಸ್ಟನ್ ನಗರದಲ್ಲಿ ಪ್ರಸಿದ್ಧ ನ್ಯಾಯವಾದಿ ಜನಿಸಿದ. ಕ್ರಾಂತಿಗೆ ಹಾದಿಯಾಗುವ, ರಕ್ತ ಕುದಿಸುವ ಕೆಲವು ಘಟನೆಗಳು ಈತನನ್ನು ರಾಜಕೀಯ ರಂಗ ಪ್ರವೇಶ ಮಾಡುವಂತೆ ಮಾಡಿದವು. 1776ರಲ್ಲಿ ಕ್ರಾಂತಿ ಆರಂಭವಾಗುವುದಕ್ಕೆ ಸ್ವಲ್ಪ ಮುಂಚೆ ಮ ಫಿಂಗಲ್ ಎಂಬ ವಿಡಂಬನ ಕಾವ್ಯದ ಮೊದಲ ಎರಡು ಆಶ್ವಾಸಗಳನ್ನು ಪ್ರಕಟಿಸಿದ. ಈ ಕಾವ್ಯ ಅತ್ಯಂತ ಜನಪ್ರಿಯವಾಯಿತು. ಕವಿಯ ಜೀವಿತ ಕಾಲದಲ್ಲೇ ಮೂವತ್ತು ಪುನರ್ಮುದ್ರಣಗಳನ್ನು ಕಂಡಿತು. ಮೊದಲ ಎರಡು ಭಾಗ ಪ್ರಕಟವಾಗಿ ಐದು ವರ್ಷಗಳ ಅನಂತರ ಉಳಿದೆರಡು ಭಾಗಗಳನ್ನು ಬರೆದು ಮುಗಿಸಿದ. ಅನಂತರ ಟ್ರಂಬಲ್ ಹಾರ್ಟ್‍ಫರ್ಡ್ ಎಂಬ ಊರಿಗೆ ಹೋಗಿ ನೆಲಸಿದೆ. ಅಲ್ಲಿನ ಹಾರ್ಟ್‍ಫರ್ಡ್‍ವಿಟ್ಸ್ ಎಂದು ಹೆಸರಾದ ಕವಿಬಳಗದಲ್ಲಿ ಒಬ್ಬನಾದ . ಈ ಬಳಗದವರೆಲ್ಲ ಪ್ರತಿಭಾವಂತ ಕವಿಗಳು. 18ನೆಯ ಶತಕದ ಕಡೆಯ ಎರಡು ದಶಕಗಳ ಕಾಲ ಹಾರ್ಟ್‍ಫರ್ಡ್ ಸಾಹಿತ್ಯ ಸಾಂಸ್ಕøತಿಕ ಚಟುವಟಿಕೆಗಳಿಗೆ ಕೇಂದ್ರವಾಗಲೂ ಇವರೇ ಕಾರಣ.

ಕರ್ನಲ್ ಲೆವರ್ಟ್‍ನ ಮಗಳು ಸಾರಾ ಹಬರ್ಡ್‍ಳನ್ನು ಟ್ರಂಬಲ್ ಮದುವೆಯಾದ. ಕನೆಕ್ಟಿಕಟ್‍ನ ಕೆಲವು ಕವಿಗಳ ಜೊತೆಗೂಡಿ ದಿ ಅನಾರ್ಕಿಯಡ್ ಎಂಬ ದೀರ್ಘ ವಿಡಂಬನ ಕಾವ್ಯವನ್ನು ರಚಿಸುವ ಕಾರ್ಯದಲ್ಲಿ ತೊಡಗಿ ಶಾಂತ ಜೀವನ ನಡೆಸತೊಡಗಿದ. ನ್ಯಾಯಶಾಸ್ತ್ರದಲ್ಲಿ ವಿಶೇಷ ಪಾಂಡಿತ್ಯವನ್ನು ಸಂಪಾದಿಸಿದನಲ್ಲದೆ ರಾಜಕೀಯದಲ್ಲೂ ಮುಂದಾದ.

ಈತನದು ಸಮಾಧಾನ ಸಂತೃಪ್ತಿಯ ಸ್ವಭಾವ. ಎಲ್ಲದರಲ್ಲೂ ಅಚ್ಚುಕಟ್ಟು ; ಮೆಚ್ಚುವಂಥ ಶಿಷ್ಟಾಚಾರ, ಸೌಜನ್ಯ, ಆಗರ್ಭ ಶ್ರೀಮಂತ ಮನೆತನಕ್ಕೆ ಸೇರಿದವನ ನಡವಳಿಕೆ.

1789ರಲ್ಲಿ ಟ್ರಂಬಲ್ ಹಾರ್ಟ್‍ಫರ್ಡ್ ಕೌಂಟಿಯಿಂದ ಸಂಸ್ಥಾನದ ಮುಖ್ಯ ನ್ಯಾಯವಾದಿಯಾಗಿ ಚುನಾಯಿತನಾದ. ಶಾಸನ ಸಭಾ ಸದಸ್ಯನಾಗಿ ಕೆಲವು ಕಾಲ ಇದ್ದ. 1801ರಲ್ಲಿ ಉಚ್ಚ ನ್ಯಾಯಲಯದ ನ್ಯಾಯಾಧೀಶನಾಗಿ ನೇಮಕಗೊಂಡ. 1808ರಲ್ಲಿ ಅಪರಾಧಗಳ ಪರಮೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಹನ್ನೊಂದು ವರ್ಷ ಸೇವೆ ಸಲ್ಲಿಸಿದ. 1820ರಲ್ಲಿ ಈತನ ಕವನಗಳನ್ನೆಲ್ಲ ಸಂಗ್ರಹಿಸಿ ಎರಡು ಸಂಪುಟಗಳಲ್ಲಿ ಪ್ರಕಟಿಸಲಾಯಿತು. ಆದರೆ ಕಾವ್ಯಪ್ರಿಯರು ಈ ಸಂಪುಟಗಳನ್ನು ಅಷ್ಟಾಗಿ ಸ್ವಾಗತಿಸಲಿಲ್ಲ. ಟ್ರಂಬಲ್ ತನ್ನ 81ನೆಯ ವಯಸ್ಸಿನಲ್ಲಿ ಡೆಟ್ರಾಯಿಟ್‍ನಲ್ಲಿ ಮರಣಹೊಂದಿದ. ಈತನ ಮ ಫಿಂಗಲ್ ವಿದ್ವತ್ಪೂರ್ಣವಾದ ಕೃತಿ. ಲಾಂಗ್ ಫೆಲೊ ಎಂಬ ಕವಿಯ ಇವ್ಯಾಂಜೆಲಿನ್ ನೀಳ್ಗಾವ್ಯ ಬರುವ ಮೊದಲು ಅಮೆರಿಕದ ಸಾಹಿತ್ಯಕ್ಕೆ ಇದೇ ಅದ್ವಿತೀಯವಾದ ಕಾಣಿಕೆಯಾಗಿತ್ತು. ಎಲಿಜಿ ಮಾದರಿಯ ಕಾವ್ಯವನ್ನು ಇಲ್ಲವೆ ಮಹಾಕಾವ್ಯವನ್ನು ರಚಿಸುವ ಪ್ರತಿಭೆ ತನ್ನದೆಂಬ ಭ್ರಮೆಯನ್ನು ಈ ಕಾವ್ಯ ಟ್ರಂಬಲ್‍ನಿಗೆ ಉಂಟುಮಾಡಿತ್ತು. ಆದರೆ ಆತನದು ಭಾವನಾಶೀಲವಾದ ಕಲ್ಪನಾಸಾಮರ್ಥ್ಯವಲ್ಲ, ಬುದ್ಧಿಜನ್ಯವಾದ ವಿಡಂಬಕ ಪ್ರತಿಭೆಯಷ್ಟೆ.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: