ಜಾನ್ ಟೋಲ್ಯಾಂಡ್
ಜಾನ್ ಟೋಲ್ಯಾಂಡ್
1670-1722. ಐರಿಷ್ ಏಕೇಶ್ವರವಾದಿ, ಸಾಹಿತಿ.
ಲಂಡನ್ಡರಿ ಬಳಿ ರೋಮನ್ ಕ್ಯಾತೊಲಿಕ್ ಸಂಸಾರದಲ್ಲಿ ಹುಟ್ಟಿದ. ಎಡಿನ್ಬರೊ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಕ್ಯಾತೊಲಿಕ್ ಮತವನ್ನು ತ್ಯಜಿಸಿ ಪ್ರಾಟೆಸ್ಟೆಂಟ್ ಮತವನ್ನು ಅವಲಂಬಿಸಿದ. ಲೆಯ್ಡನ್ನಲ್ಲಿ ಸ್ಪಾನ್ ಹೀಂನ ಬಳಿ ದೇವಶಾಸ್ತ್ರವನ್ನು ಅಧ್ಯಯನ ಮಾಡಿದ. 1696ರಲ್ಲಿ ಈತ ಬರೆದ ಕ್ರಿಶ್ಚಿಯಾನಿಟಿ ನಾಟ್ ಮಿಸ್ಟೀರಿಯಸ್ ಎಂಬ ಗ್ರಂಥ ವಿವಾದಕ್ಕೊಳಪಟ್ಟಿತು. ಇದರಲ್ಲಿ ಈತ ಕ್ರೈಸ್ತಧರ್ಮಗಳನ್ನು ವಿಚಾರಪೂರ್ವಕವಾಗಿ ವಿಶ್ಲೇಷಿಸಬೇಕೆಂದೂ ಬುದ್ಧಿಯನ್ನು ಮೀರಿದ ಯಾವ ಧರ್ಮತತ್ತ್ವಗಳನ್ನೂ ಸ್ವೀಕರಿಸಲಾಗದು ಎಂದೂ ವಾದಿಸಿದ್ದಾನೆ. ಈತ ಪ್ರಸಿದ್ಧ ತತ್ವಶಾಸ್ತ್ರಜ್ಞ ಲಾಕ್ನಿಂದ ಪ್ರಭಾವಿತನಾಗಿದ್ದನೆಂಬುದು ಸ್ಪಷ್ಟ. ಇದರ ಫಲವಾಗಿ ಈತ 1695 ರಲ್ಲಿ ಬರೆದ ರೀಸನಬಲ್ನೆಸ್ ಆಫ್ ಕ್ರಿಶ್ಚಿಯಾನಿಟಿ ಎಂಬ ಗ್ರಂಥವೂ ಧಾರ್ಮಿಕವಲಯದಲ್ಲಿ ಕೋಲಾಹಲವೆಬ್ಬಿಸಿತು. ಇಂಗ್ಲೆಂಡಿನಲ್ಲಿ ಕಟುವಾದ ಖಂಡನೆಗೆ ಒಳಗಾಗಿ ಈತ ಐರ್ಲೆಂಡಿಗೆ ತೆರಳಿದಾಗ ಅಲ್ಲಿ ಈತನ ಗ್ರಂಥವನ್ನು ಬಹಿರಂಗವಾಗಿ ಸುಡಲಾಯಿತು. ಆಗ ಪುನಃ ಈತ ಲಂಡನ್ನಿಗೆ ಓಡಿಹೋದ. 1699ರಲ್ಲಿ ಈತ ಬರೆದ ಅಮಿಂಟಾರ್ ಗ್ರಂಥದಲ್ಲಿ ಅಪೋಕ್ರಫ ಮುಂತಾದ ಕ್ರೈಸ್ತ ಧಾರ್ಮಿಕ ಗ್ರಂಥಗಳಲ್ಲಿನ ಪುರಾವೆಗಳನ್ನು ವಿಮರ್ಶಿಸುತ್ತ ಅವುಗಳ ತಾರ್ಕಿಕತೆಯನ್ನು ಒಪ್ಪಬಹುದೇ ಎಂಬ ಪ್ರಶ್ನೆಯನ್ನು ಎತ್ತಿದ. ಆ್ಯಂಗ್ಲಿಯ ಲೆಬೆರ ಎಂಬ ಪುಸ್ತಿಕೆಯಲ್ಲಿ ಬ್ರನ್ಸ್ವಿಕ್ ರಾಜ ಮನೆತನದವರನ್ನು ಸಮರ್ಥಿಸಿ ರಾಜಕುಮಾರಿ ಸೋಫಿಯಳ ಅನುಗ್ರಹಕ್ಕೆ ಪಾತ್ರನಾದ. ಆಮೇಲೆ ಹಲವು ವರ್ಷಗಳ ಕಾಲ ಈತನ ಬದುಕು ಏರಿಳಿತಗಳಿಂದ ಕೂಡಿತ್ತು. ಅನೇಕ ವರ್ಷಗಳ ವರೆಗೆ ಸಾಂಪ್ರದಾಯಿಕ ಮತೀಯರನ್ನೂ ಮಡಿವಂತ ಧರ್ಮಪ್ರಭುಗಳನ್ನೂ ತನ್ನ ಉಗ್ರಲೇಖನಗಳಿಂದ ಚುಚ್ಚಿ, ಕೆಣಕಿ ದೂಷಣೆಗೆ ಗುರಿಯಾಗಿದ್ದ ಈತ ಪಟ್ನಿಯಲ್ಲಿ ಕಾಲವಾದ.