ಜಾನ್ ಜೇಮಿಸನ್ - 1759-1838. ಸ್ಕಾಟ್‍ಲೆಂಡಿನ ಪಾದ್ರಿ ಮತ್ತು ನಿಘಂಟುಕಾರ.

ಗ್ಲಾಸ್ಗೋ ನಗರದಲ್ಲಿ ಪಾದ್ರಿಯೊಬ್ಬನ ಮಗನಾಗಿ ಜನಿಸಿದ. ಆರಂಭದ ವ್ಯಾಸಂಗವನ್ನು ಹುಟ್ಟೂರಿನಲ್ಲಿಯೇ ಮುಗಿಸಿ ಅನಂತರ ಎಡಿನ್‍ಬರೋ ವಿಶ್ವವಿದ್ಯಾಲಯದಲ್ಲಿ ದೇವತಾಶಾಸ್ತ್ರವನ್ನು ವಿಶೇಷವಾಗಿ ವ್ಯಾಸಂಗ ಮಾಡಿದ. ಫಾರ್‍ಫರ್ ಪಟ್ಟಣದ ಚರ್ಚಿನ ಪಾದ್ರಿಯಾಗಿ 1779ರಲ್ಲಿ ನೇಮಕಗೊಂಡ. ಆಗ್ಗೆ ಚರ್ಚಿನ ಸಭೆಗಳಲ್ಲಿ ನಗರಕ್ಕೆ ಸೀಮಿತವಾದ ಸಭೆ ಮತ್ತು ಗ್ರಾಮಾಂತರ ಪ್ರದೇಶವನ್ನೊಳಗೊಂಡ ನಗರ ವಿರೋಧಿ ಸಭೆ ಎಂಬ ಎರಡು ಪಂಗಡಗಳಿದ್ದವು. ಫಾರ್‍ಫರ್ ಪಟ್ಟಣದಲ್ಲಿ ನಡೆದ ನಗರ ವಿರೋಧಿಸಭೆಗೆ ನಾಯಕನಾಗಿದ್ದುಕೊಂಡು ಅವೆರಡರ ಒಕ್ಕೂಟಕ್ಕಾಗಿ ಈತ ಬಹಳ ಶ್ರಮಿಸಿ ಸಫಲನಾದ. 1830ರಲ್ಲಿ ಪಾದ್ರಿ ಕೆಲಸದಿಂದ ನಿವೃತ್ತನಾದ ಈತ ಎಡಿನ್ ಬರೋದಲ್ಲಿಯೇ ನೆಲಸಿ, ಅಲ್ಲಿಯೇ ತೀರಿಕೊಂಡ.

ಜೇಮಿಸನ್ ಬರೆದಿರುವ ಸರ್ಮನ್ಸ್ ಆನ್ ದಿ ಹಾರ್ಟ್ (1790) ಎಂಬುದು ಸ್ಕಾಟ್‍ಲೆಂಡಿನ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಸಿದ್ಧವಾಗಿದೆ. ಎಟಿಮಾಲೋಜಿಕಲ್ ಡಿಕ್ಷನರಿ ಆಫ್ ದಿ ಸ್ಕಾಟಿಷ್ ಲ್ಯಾಂಗ್ವೇಜ್ ಎಂಬುದು ಈತನ ಇನ್ನೊಂದು ಮುಖ್ಯ ಕೃತಿ. ಸ್ಕಾಟಿಷ್ ಭಾಷೆಯ ಅಧಿಕೃತ ನಿಘಂಟು ಎಂದು ಹೆಸರಾಗಿರುವ ಇದು ಎರಡು ಸಂಪುಟಗಳಲ್ಲಿ 1808ರಲ್ಲಿ ಪ್ರಕಟವಾಯಿತು. ಇದಕ್ಕೆ ಪೂರಕವಾಗಿ ಇನ್ನೆರಡು ಸಂಪುಟಗಳು 1825ರಲ್ಲಿ ಹೊರಬಂದವು. ಈ ನಿಘಂಟು ಸುಮಾರು ಒಂದೂವರೆ ಶತಮಾನಗಳ ಕಾಲದ ಬಹು ಜನರ ಬಳಕೆಯಲ್ಲಿತ್ತು. ಈ ಕೃತಿಯಿಂದಾಗಿ ಈತ ರಾಯಲ್ ಲಿಟರರಿ ಸೊಸೈಟಿಯ ಸದಸ್ಯನಾಗಿ (ಅಸೋಸಿಯೇಟ್) ಆಯ್ಕೆಯಾದ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: