ಜಾನ್‌ ಎಫ್‌. ಫ್ಲೀಟ್‌

ಭಾರತವು ಸ್ವಾತಂತ್ರ್ಯ ಪಡೆಯುವುದಕ್ಕೆ ಮುಂಚೆ ಕನ್ನಡ ಮಾತನಾಡುವ ಜನ ಮತ್ತು ನಾಡು ಪ್ರಮುಖವಾಗಿ ನಾಲಕ್ಕು ಪ್ರದೇಶಗಳಲ್ಲಿ ಹರಿದು ಹಂಚಿ ಹೋಗಿದ್ದವು. ಅರಸರ ಆಡಳಿತದ ಹಳೇ ಮೈಸೂರು ರಾಜ್ಯ, ಇಂಗ್ಲಿಷರ ನೇರ ಆಳಿಕೆಯಲ್ಲಿ ಮುಂಬಯಿ ಕರ್ನಾಟಕ ಮತ್ತು ಮದ್ರಾಸು ಪ್ರಾಂತ್ಯ ಹಾಗೂ ಹೈದ್ರಾಬಾದ್‌ ನವಾಬನ ಆಡಳಿತದಲ್ಲಿನ ಪ್ರದೇಶ ಪ್ರತ್ಯೇಕವಾಗಿಯೇ ಇದ್ದವು. ಅಲ್ಲದೆ ಸೊಂಡೂರು, ಜಮಖಂಡಿ, ಸವಣೂರು, ಜತ್ತ ಮೊದಲಾದ ಚಿಕ್ಕ ಪುಟ್ಟ ಸಂಸ್ಥಾನಗಳೂ ಇದ್ದವು. ಬೆಳಗಾವಿ,ಬಿಜಾಪುರ,ಧಾರವಾಡ,ಉತ್ತರ ಕನ್ನಡ ಜಿಲ್ಲೆಗಳು ಮುಂಬಯಿ ಪ್ರಾಂತ್ಯದಲ್ಲಿ, ಬಳ್ಳಾರಿ , ದಕ್ಷಿಣ ಕನ್ನಡ ಕೊಡಗು ಜಿಲ್ಲೆಗಳು ಮದ್ರಾಸು ಪ್ರಾಂತ್ಯದಲ್ಲಿ ಆಂಗ್ಲರ ನೇರ ಆಡಳಿತಕ್ಕೊಳ ಪಟ್ಟಿದ್ದವು. ಅಖಂಡ ಕರ್ನಾಟಕದ ಉಳಿದ ಭಾಗಗಳು ಮೈಸೂರಸರ ಆಳ್ವಿಕೆಗೆ ಒಳ ಪಟ್ಟು ಬ್ರಿಟಿಷರ ಮೇಲುಸ್ತುವಾರಿಯಲ್ಲಿದ್ದವು. ಈ ಎಲ್ಲ ಪ್ರದೇಶಗಳಲ್ಲೂ ಆಡಳಿತದ ಉನ್ನತ ಅಧಿಕಾರವು ಬ್ರಿಟಿಷರಿಗೆ ಮೀಸಲು. ಅದಕ್ಕಾಗಿಯೇ ಇಂಡಿಯನ್‌ ಸಿವಿಲ್‌ ಸರ್ವೀಸ್ ಸೇವೆ ಇದ್ದಿತು. ಆ ತರಬೇತಿಯ ವಿಶೇಷವೆಂದರೆ ಭಾರತಕ್ಕೆ ಬರುವ ಅಧಿಕಾರಿಗಳು ಭಾರತೀಯ ಭಾಷೆ ತಿಳಿದಿರುವುದು ಕಡ್ಡಾಯವಾಗಿತ್ತು. ಜನಸಾಮಾನ್ಯರ ಭಾಷೆ ಗೊತ್ತಿದ್ದರೆ ಆಡಳಿತ ಸುಗಮ ಎಂಬ ಯೋಚನೆಯೇ ಅದಕ್ಕೆ ಕಾರಣವಾಗಿತ್ತು. ಇನ್ನು ಧರ್ಮ ಪ್ರಚಾರಕ್ಕೆ ಬಂದ ಮಿಷನರಿಗಳಂತೂ ಜನಸಾಮಾನ್ಯರನ್ನು ಓಲೈಸಲು ಅವರ ಭಾಷೆಯಲ್ಲಿಯೇ ವ್ಯವಹರಿಸಲು ಸ್ಥಳೀಯ ಭಾಷೆಯ ಕಲಿಕೆಗೆ ಆದ್ಯತೆ ಕೊಟ್ಟರು. ಕೆಲವರಂತೂ ಭಾಷೆಯ ಸಾಹಿತ್ಯ, ಸಂಸ್ಕೃತಿ ಇತಿಹಾಸದ ಅಧ್ಯಯನಕ್ಕೆ ಮನ ಮಾಡಿದರು. ಆ ಕಾಲದಲ್ಲಿ ಈ ರಂಗವು ಕನ್ಯ ನೆಲವಾಗಿತ್ತು ಅದು ಒಂದು ರೀತಿಯಲ್ಲಿ ಕನ್ನಡ ಭಾಷೆ , ಸಾಹಿತ್ಯ ಮತ್ತು ಇತಿಹಾಸದ ಬಗ್ಗೆ ಕೆಲವು ವಿದೇಶಿ ವಿದ್ವಾಂಸರಿಗೆ ಆಸಕ್ತಿ ಮೂಡಿಸಿ,ಈ ದಿಶೆಯಲ್ಲಿ ಅವರು ಕೆಲಸ ಮಾಡಲು ಪ್ರೇರಣೆ ನೀಡಿತು .ಕನ್ನಡದ ಬೆಳವಣಿಗೆಗೆ ಅವರು ಶ್ರಮಿಸಿದರು ಆಡಳಿತಗಾರರು ವಿದ್ವಾಂಸರಾದುದೂ ಅಪರೋಕ್ಷವಾಗಿ ಭಾಷೆಯ ಬೆಳವಣಿಗೆಗೆ ಉತ್ತೇಜನ ದೊರಕಿತು. ಅವರಲ್ಲಿ ಜಾನ್‌ ಫೇಥ್‌ ಫುಲ್‌ಫ್ಲೀಟ್, ಬಿ.ಎಲ್‌.ರೈಸ್‌, ಮೆಕೆಂಜಿ , ಝಿಗ್ಲರ್ ಮೊದಲಾದವರು ಕನ್ನಡ ಸೇವೆ ಸಲ್ಲಿಸಿದ ವಿದೇಶಿಯರಲ್ಲಿ ಪ್ರಮುಖರು ಜಾನ್‌ಫೇಥ್ ಫುಲ್ ಫ್ಲೀಟ್‌ ಭಾರತದ ಅದರಲ್ಲೂ ಮುಂಬಯಿ ಪ್ರಾಂತ್ಯ ಹಾಗೂ ಅದಕ್ಕೆ ಸೇರಿದ ಕನ್ನಡ ಪ್ರದೇಶಗಳಲ್ಲಿನ ಶಾಸನ ಮತ್ತು ,ಜಾನಪದ ಸಂಪತ್ತಿನ ಶೋಧನೆಯ ಪಿತಾಮಹ ಎನ್ನಬಹುದು. ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಿಜಾಪುರ, ಬೆಳಗಾವಿ. ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಆಗ ಮುಂಬಯಿ ಪ್ರಾಂತ್ಯದ ದಕ್ಷಿಣ ಜಿಲ್ಲೆಗಳೆಂದು ಹೆಸರಾಗಿದ್ದವು ಅಲ್ಲಿನ ಅಧಿಕಾರಿಗಳಲ್ಲಿ ಜಾನ್‌ ಫೇಥ್ ಫುಲ್‌ ಫ್ಲೀಟ್‌ನ ಕನ್ನಡದ ಸೇವೆ ಮರೆಯಲಾಗದು.ಶಾಸನ ಜಗತ್ತಿನಲ್ಲಿ ಅವರ ಹೆಸರು ಚಿರಸ್ಥಾಯಿ ಮತ್ತು ಕನ್ನಡ ಜಾನಪದ ಸಂಗ್ರಾಹಕರಲ್ಲಿ ಮೊದಲಿಗ ಎನ್ನಬಹುದು.ಅವರ ಕೆಲಸ ಹಳೆ ಮೈಸೂರು ಪ್ರದೇಶದಲ್ಲಿ ಬಿಎಲ್‌ರೈಸ್‌ ಮಾಡಿದ ಕೆಲಸಕ್ಕೆ ಹೋಲಿಸಬಹುದು. ಜಾನ್‌ಎಫ್‌ ಫ್ಲೀಟ್‌ ಇಂಗ್ಲೆಂಡಿನ ಚಿಸ್ವಿಕ್‌ನಲ್ಲಿ ೧೮೪೭ ರಲ್ಲಿ ಜನಿಸಿದರು.ತಂದೆ ಜಾರ್ಜ ಫೇತ್‌ಫುಲ್‌ ಫ್ಲೀಟ್, ಸಕ್ಕರೆಯ ಸಗಟು ವ್ಯಾಪಾರಿ. ತಾಯಿ ಎಸ್ತರ್‌ ಫೇತ್‌ಫುಲ್‌. ಅವರ ವಿದ್ಯಾಭ್ಯಾಸ ಹುಟ್ಟುಸ್ಥಳದಲ್ಲಿಯೇ. ಪದವಿ ಶಿಕ್ಷಣ ಲಂಡನ್‌ವಿಶ್ವ ವಿದ್ಯಾಲಯದಲ್ಲಿ. ಅವರ ಜೀವನದ ಗುರಿ ಪೂರ್ವ ನಿಶ್ಚಿತವಾಗಿತ್ತು . ಭಾರತದಲ್ಲಿ ಸೇವೆ ಸಲ್ಲಿಸುವುದು ಅವರ ಹೆಬ್ಬಯಕೆಯಾಗಿತ್ತು. ಅದಕ್ಕಾಗಿ ಭಾರತೀಯ ಆಡಳಿ ಸೇವೆ ಸೇರಲು ನಿರ್ಧರಿಸಿದರು. ಐಚ್ಛಿಕ ಭಾಷೆಯಾಗಿ ಸಂಸ್ಕೃತವನ್ನು ಅಭ್ಯಾಸ ಮಾಡಿದ್ದರು. ಅವರೇ ಹೇಳಿದಂತೆ ಭಾರತೀಯ ಭಾಷೆಗಳನ್ನು ಅರಿಯಲು ಸಂಸ್ಕೃತ ಜ್ಞಾನ ಅತ್ಯಗತ್ಯ. ಐ. ಸಿ. ಎಸ್‌. ಪರೀಕ್ಷೆಯನ್ನು ೧೮೬೭ ರಲ್ಲಿ ಪಾಸು ಮಾಡಿಕೊಂಡರು. ಪಾಸಾದ ಎರಡು ವರ್ಷದ ತರುವಾಯ ಭಾರತಕ್ಕೆ ಬಂದರು. ಅವರ ಮೊದಲ ನೇಮಕಾತಿ ಬಾಂಬೆ ಪ್ರೆಸಿಡೆನ್ಸಿಯಲ್ಲಾಯಿತು, ಕೊಲ್ಲಾಪುರದಲ್ಲಿ ಅಸಿಸ್ಟೆಂಟ್‌ ಕಲೆಕ್ಟರ್‌ರಾಗಿ ನೇಮಕವಾದರು ನಂತರ ಎಜುಕೇಷನ್‌ ಇನಸ್ಪೆಕ್ಟರ್‌, ಕಲೆಕ್ಟರ್, ಪೊಲಿಟಿಕಲ್‌ ಏಜೆಂಟ್‌ ಮೊದಲಾದ ವಿವಿಧ ಹುದ್ದೆಗಳಲ್ಲಿ , ಶೊಲ್ಲಾಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದರು.ಅದಕ್ಕೆ ಮೊದಲೇ ಓರಿಯಂಟಲ್‌ ಇನ್ಸ್ಟಿಟ್ಯೂಟ್‌ನಲ್ಲಿ ಪ್ರಾದೇಶಿಕಭಾಷೆ , ಇತಿಹಾಸ ಮತ್ತು ಸಂಸ್ಕೃತಿಗಳ ಪರಿಚಯವಾಯಿತು.ತಮ್ಮ ಆಡಳಿತ ಪ್ರದೇಶದಲ್ಲಿ ಶಾಸನ ಸಂಪತ್ತು ಅವರನ್ನೂ ಸೆಳೆಯಿತು. ಭಾರತದ ಅದರಲ್ಲೂ ಉತ್ತರ ಕರ್ನಾಟಕದ ಶಾಸನ ಸಂಗ್ರಾಹಕಾರಲ್ಲಿ ಅವರ ಸಾಧನೆ ಹಿರಿದು. ಕರ್ನಾಟಕದ ದಕ್ಷಿಣ ಭಾಗದಲ್ಲಿ ಬಿ.ಎಲ್‌. ರೈಸ್‌ ಸಂಶೋಧನೆ ಮಾಡುವ ತುಸು ಮುಂಚೆಯೇ ಫ್ಲೀಟ್‌ ಉತ್ತರ ಕರ್ನಾಟಕ ಭಾಗದಲ್ಲಿ ಶಾಸನ ಸಂಶೋಧನೆಯ ಕೆಲಸ ಪ್ರಾರಂಭ ಮಾಡಿದರು. ಕಂದಾಯ ಅಧಿಕಾರಿಯಾಗಿ ತಮ್ಮ ಪ್ರದೇಶದಲ್ಲಿ ಸಂಚರಿಸುವಾಗ ಅಲ್ಲಿನ ಶಾಸನ ಮತ್ತು ಜನಪದ ಸಂಪತ್ತು ಅವರ ಮನಸೆಳೆಯಿತು. ಅವುಗಳ ಸಂಗ್ರಹ ಮಾಡಿ ಮೊದಲ ಬಾರಿಗೆ ಪ್ರಕಟನೆಗೆ ಮುಂದಾದರು. ಭಾರತೀಯ ಇತಿಹಾಸವನ್ನು ಶಾಸನಗಳ ಆಧಾರದಮೇಲೆ ಸಂಶೋಧಿಸಲು ತೊಡಗಿದರು. ಕೆಲವು ಕಾಲ ಅಂದರೆ ಮೊದಲಬಾರಿಗೆ ಭಾರತದಲ್ಲಿ “ಮುಖ್ಯ ಲಿಪಿಶಾಸ್ತ್ರಜ್ಞ” ಹುದ್ದೆಯು ೧೯೮೨ ರಲ್ಲಿ ರಚನೆಯಾದಾಗ ಮೂರು ವರ್ಷಗಳ ಕಾಲ ಆ ಕಾರ್ಯನಿರ್ವಹಿಸಿದರು. ಬ್ರಿಟಿಷ್ ಅಧಿಕಾರಿಗಳು ಮಿಶನರಿ ಜನರಂತೆ ನೇರವಾಗಿ ಕನ್ನಡ ಸಾಹಿತ್ಯ ನಿರ್ಮಿತಿಗೆ ತೊಡಗಿದವರಲ್ಲ. ಆದರೆ ಕನ್ನಡದ ಭಾಷೆ ಮತ್ತು ಇತಿಹಾಸಗಳಿಗೆ ಸಂಬಂಧಿಸಿದ ಅನೇಕ ಹೊಸ ಅಂಶಗಳನ್ನು ಹೊರಗೆಡಹಿದರು. ಮತ್ತು ಮುಂದಿನ ಕಾರ್ಯಕ್ಕೆ ದೇಶಿಯರನ್ನು ಅಣಿಗೊಳಿಸಿದರು. ಇಂಥ ಕಾರ್ಯದ ನಾಂದಿಯನ್ನು ಹಾಡಿದವರು ವಾಲ್ಟರ್ ,ಎಲಿಯೆಟ್. ರೈಸ್ ಮತ್ತು ಫ್ಲೀಟ್‌ ಅದನ್ನು ಬಹುವಾಗಿ ವಿಸ್ತರಿಸಿದರು. ಯಾವುದೇ ಒಂದು ಶಾಸನದಿಂದ ನೇರವಾದ ಇತಿಹಾಸ ಸಾಮಗ್ರಿಯು ಸಿಕ್ಕುವುದು ಕಡಿಮೆ. ಅವನ್ನು ಇತರ ಶಾಸನಗಳೊಂದಿಗೆ ಹೋಲಿಸಿ ನೋಡಬೇಕಾಗುತ್ತದೆ. ಅನೇಕ ಶಾಸನಗಳಿಂದ ವಿಶೇಷ ಸಂಗತಿ ಹೊರಡಲಿಕ್ಕೂ ಇಲ್ಲ. ಇವಲ್ಲದೆ.ಕೆಲವು ಖೊಟ್ಟಿ ಶಾಸನಗಳೂ ಇರುತ್ತವೆ ಎಂಬುದರ ಕುರಿತು ಫ್ಲೀಟ್‌ ೧೮೯೯ರಂದು ರೋಮ್‌ನಲ್ಲಿ ನಡೆದ ಪ್ರಾಚ್ಯವಿಷಯಕ ಸಮ್ಮೇಳನದಲ್ಲಿ ಪ್ರಬಂಧವನ್ನು ಓದಿ ಸಂಶೋಧಕರಿಗೆ ಎಚ್ಚರಿಕೆಯನ್ನಿತ್ತಿದ್ದಾರೆ.ತಮ್ಮದಲ್ಲದ ಅದರಲ್ಲೂ ಆಸ್ತಿ ಪಾಸ್ತಿಗಳನ್ನು ದಕ್ಕಿಸಿಕೊಳ್ಳಲು ಖೊಟ್ಟಿ ತಾಮ್ರಪತ್ರಗಳನ್ನು ಸೃಷ್ಠಿಸುವವರೂ ಇದ್ದಾರೆ ಎಂಬುದನ್ನು ಬೆಳಕಿಗೆ ತಂದರು. ಇಂಥ ಶಾಸನಗಳ ಖೊಟ್ಟಿತನವನ್ನು ಕಂಡು ಹಿಡಿಯಲು ಅನುಕೂಲವಾಗುವಂತೆ ಅವುಗಳ ಭಾಷೆ, ಕಾಲ ಮತ್ತು ಆ ಕಾಲದ ರಾಜರ ಮತ್ತು ಅವರ ವಂಶದ ಪರಿಶೀಲನೆ ಅಗತ್ಯವೆಂದು ಪ್ರತಿಪಾದಿಸಿ ಕೆಲವು ಮಾದರಿಗಳನ್ನೂ ಅವರು ಕೊಟ್ಟಿದ್ದಾರೆ.ಅವರು ಸತತವಾಗಿ ಭಾರತೀಯ ಇತಿಹಾಸ ಕುರಿತಾದ ಲೇಖನಗಳನ್ನು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿಸುತಿದ್ದರು. ‘ಎಂಟಿಕ್ವೆರಿ’ ಪತ್ರಿಕೆಯಲ್ಲಿ ಬರತೊಡಗಿದ್ದ ಇವರ ಲೇಖನಮಾಲೆಯನ್ನು ಕಂಡು ಭಾರತ ಸರಕಾರದವರು, ಅದುವರೆಗೆ ದೊರೆತಿದ್ದ ಮಹತ್ವದ ಶಾಸನಗಳನ್ನು ಒಂದೆಡೆ ಸಂಕಲಿಸಿ ಪೀಠಿಕೆ, ಟಿಪ್ಪಣಿಗಳೊಡನೆ ಶಾಸ್ತ್ರೀಯವಾಗಿ ಸಂಪಾದಿಸುವ ಕೆಲಸವನ್ನು ಫ್ಲೀಟ್‌ರಿಗೆ ಒಪ್ಪಿPali, Sanskrit, and old Canarese inscriptionsIndian epigraphy ಎಂಬ ಕೃತಿಯು ೧೮೭೮ರಲ್ಲಿ ಹೊರಬಂದಿತು. ಅದರಲ್ಲಿ ಫ್ಲೀಟ್‌ರು ತಮಗೆ ದೊರೆತಿದ್ದ ಶಾಸನಗಳನ್ನೂ ಸೇರಿಸಿದ್ದಾರೆ. ಭಾರತದ ಇತಿಹಾಸ ರಚನೆಯಲ್ಲಿ ಕನ್ನಡ ನಾಡಿನ ಶಾಸನಗಳ ಪಾತ್ರವು ಹಿರಿದೆಂಬ ಕಲ್ಪನೆಯನ್ನು ಈ ಕೃತಿಯು ಕನ್ನಡೇತರ ವಿದ್ವಾಂಸರಲ್ಲಿ ನೆಲೆಗೊಳಿಸುವಂತಹದಾಗಿದೆ. ಅವರ ಇನ್ನೊಂದು ಗ್ರಂಥವು ಪ್ರಾಚೀನ ಕನ್ನಡ ರಾಜಮನೆತನಗಳಿಗೆ ಸಂಬಂಧಪಟ್ಟುದು. ಮೂಲತಃ ‘ಬಾಂಬೆ ಗೆಜೆಟಿಯರ್’ಗೆ ಬರೆಯಲಾದ (೧೮೮೨) ಈ ಕೃತಿಯು (Dynasties of the Canarese Districts of the Bombay Presidency’s) ಚಿಕ್ಕದಾದರೂ ಮೌಲಿಕವಾದುದು. ಶಾಸನಗಳ ಆಧಾರದ ಮೇಲೆ ಔತ್ತರೇಯ ಕನ್ನಡ ರಾಜರ (ಕದಂಬ, ಬದಾಮಿ, ಚಾಳುಕ್ಯ, ರಾಷ್ಟ್ರಕೂಟ, ಕಳಚುರಿ, ಹೊಯ್ಸಳ, ರಟ್ಟ, ಯಾದವ, ಸೆವುಣರು ,ಶಿಲಾಹಾರ ಮುಂತಾದ, ಆದರೆ ಮುಸ್ಲಿಮರ ಆಗಮನಪೂರ್ವದ ರಾಜಮನೆತನಗಳ ಇತಿಹಾಸವನ್ನು ನಿರ್ದುಷ್ಟವಾಗಿ ವರ್ಣಿಸಲಾಗಿದೆ. ಕರ್ನಾಟಕವೆಂಬುದು ಪ್ರತ್ಯೇಕ ಅಸ್ತಿತ್ವವುಳ್ಳ ನಾಡು, ಸದರ್ನ್ ಮರಾಠಾ ಕಂಟ್ರಿ ಅಲ್ಲ ಎಂಬ ಫ್ಲೀಟ್‌ರ ಸಮರ್ಥಯುತ ಪ್ರತಿಪಾದನೆಯು ಇದರಲ್ಲಿಯೇ ಬಂದಿದೆ.ಅವರ ಲೇಖನಗಳು ವಿದ್ವತ್‌ ಪತ್ರಿಕೆಗಳಾದ ಇಂಡಿಯನ್‌ ಅಂಟಿಕ್ವರಿ ಮತ್ತು ರಾಯಲ್‌ ಏಷಿಯಾಟಿಕ್‌ ಜರ್ನಲ್‌ಗಳಲ್ಲಿ ಪ್ರಕಟವಾಗಿವೆ. ಬಸವಣ್ಣ ಪುರಾಣ ಪುರುಷನಲ್ಲ ಐತಿಹಾಸಿಕ ವ್ಯಕ್ತಿ ಎಂದು ಸಿದ್ಧ ಮಾಡಿದವರು ಅವರೇ. ಏಕಾಂತ ರಾಮಯ್ಯ ಮತ್ತು ಕದಂಬ ರಾಜವಂಶದ ಬಗೆಗಿನ ಅವರ ಶೋಧವು ಅಮೂಲ್ಯವಾದುದು. ಶಾಸನಗಳಿಗೆ ಅನ್ವಯಿಸಿದ ಅವರ ಒಂದು ಮಹತ್ವದ ವಿಧಾಯಕ ಸೂಚನೆಯೆಂದರೆ, ವಿವಿಧ ರಾಜ ಮನೆತನಗಳಿಗೆ ಸಂಬಂಧಿಸಿದ ಪ್ರಮುಖ ಶಾಸನಗಳನ್ನು ಒಂದೊಂದು ಸಂಪುಟದಲ್ಲಿ ಸಂಕಲಿಸಿ ವಿಮರ್ಶಾತ್ಮಕ ಟಿಪ್ಪಣಿಗಳೊಡನೆ ಪ್ರಕಟಿಸಿರುವುದು ಮಹತ್ವದ ಸಾಧನೆ. ಅದಾಗಲೇ ಅಶೋಕನ ಶಾಸನಗಳ ಸಂಪುಟವು ಹೊರಬಂದಿದ್ದಿತು. ಅದರ ಮೂರನೆಯ ಸಂಪುಟವೇ ಫ್ಲೀಟ್‌ ಸಂಪಾದಿತ ಗುಪ್ತಕಾಲೀನ ಶಾಸನ ಸಂಗ್ರಹ. ಶಾಸನಗಳ ವೈಧಾನಿಕ ವಿವೇಚನೆಗೆ ಹಾಗೂ ಫ್ಲೀಟ್‌ರ ವಿದ್ವತ್‌ಗೆ ಕನ್ನಡಿ ಹಿಡಿದಂತಿದೆ. ಈ ಕೃತಿಯು ಭಾರತೀಯ ವಿದ್ವತ್ಪರಂಪರೆಯಲ್ಲಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವಂತಹುದಾಗಿದೆ. ಫ್ಲೀಟ್‌ರ ಶಾಸನ ಪರಿವೀಕ್ಷಣೆಗೆ ಆನುಷಂಗಿಕವಾಗಿ ನೆರವಾದ ಅಂಶವೆಂದರೆ ಅವರ ಜ್ಯೋತಿಷ್ಯ ಶಾಸ್ತ್ರದ ಹಾಗೂ ಕಾಲಗಣನೆಯ ಪರಿಣತಿ. ಶಾಸನಗಳಲ್ಲಿ ಅನೇಕ ಶಕ ವರ್ಷಗಳು ಉಲ್ಲೇಖವಾಗಿವೆ.ಶಕೆ ,ಸಂವತ್ಸರ, ತಿಥಿಗಳನ್ನು ಹೊಂದಿಸಿಕೊಂಡು ಕ್ರಿಸ್ತೀಯ ಕಾಲ ಗಣನೆಗೆ ಅನುಗುಣವಾಗಿ ಹೇಳುವ ಸುಲಭ ಹಾಗೂ ಖಚಿತವಾದ ಪದ್ಧತಿಯು ಅದುವರೆಗೂ ನೆಲೆಗೊಂಡಿರಲಿಲ್ಲ. ವಿದ್ವಾಂಸರ ಸಹಾಯದಿಂದ ಅದನ್ನು ನಿರ್ದಿಷ್ಟಪಡಿಸಿದುದು ಫ್ಲೀಟ್‌ರ ಒಂದು ಸಾಧನೆ ಎನ್ನಬಹುದು. ಪ್ರಾಚೀನ ಭಾರತದಲ್ಲಿ ಹಲವಾರು ಶಕ, ಯುಗಗಳು ಆರಂಭವಾಗಿದ್ದು ಅವುಗಳ ಕಾಲವನ್ನು ಖಚಿತಗೊಳಿಸಲು ಫ್ಲೀಟ್‌ ಬಹುಮುಖವಾಗಿ ಶ್ರಮಿಸಿ ಕೆಲವು ಹೊಸ ಸಿದ್ಧಾಂತಗಳನ್ನು ಪ್ರತಿಪಾದಿಸಿದರು. ಈಚಿನ ಪುನರ್ವಿಮರ್ಶನದಿಂದ ಅವುಗಳಲ್ಲಿ ತುಸು ವ್ಯತ್ಯಾಸ ತೋರಿ ಬಂದರೂ ಆ ದಿಶೆಯಲ್ಲಿ ಫ್ಲೀಟ್‌ ಇತರರಿಗಿಂತ ಹೆಚ್ಚು ಮುಂದುವರಿದಿದ್ದಾರೆ. ಸಮಕಾಲೀನ ವಿದ್ವನ್ಮಂಡಲಿಯಲ್ಲಿ ಫ್ಲೀಟ್‌ ಮಹಾ ಮೇಧಾವಿಯೆನಿಸಿದ್ದರೂ ತನ್ನ ಮಾತೇ ಸರಿಯೆಂದು ಸಾಧಿಸುವ ಹಠವಾದಿಯಾಗಿರಲಿಲ್ಲ. ಶಾಸನಗಳಿಂದ ಮಥಿತವಾದ ಹೊಸ ವಿಚಾರವನ್ನು ಕೂಡಲೆ ಬರೆದು ಪ್ರಕಟಣೆಗೆ ಕಳಿಸುತ್ತಿದ್ದರೂ ಅದನ್ನು ಮುಂದೊಮ್ಮೆ ಪರಿಷ್ಕರಿಸಿ ಪ್ರಕಟಿಸಬೇಕೆಂಬ ವಿಚಾರ ಅವರಲ್ಲಿ ಅಭಿಪ್ರಾಯ ಬೇಧವಿದ್ದಿತು. ತಮ್ಮ ಸಾಧನೆಯ ಬಗ್ಗೆ ಅವರ ಈ ಹೇಳಿಕೆಯು “ವಿದ್ಯಾ ದದಾತಿ ವಿನಯಂ “ಎಂಬ ಉಕ್ತಿಗೆ ನಿದರ್ಶನವಾಗಿದೆ: ಇದರ ಫಲವೇ ರೈಸ್ ಫ್ಲೀಟ್‌ರ ನಡುವೆ ಆಗೀಗ ನಡೆಯುತ್ತಿದ್ದ ಸೈದ್ಧಾಂತಿಕ ವಾದ! ರೈಸ್‌ರ ಅನೇಕ ವಿಧಾನಗಳನ್ನು ಫ್ಲೀಟ್‌ ಖಂಡಿಸಿದ್ದಾಗ, ರೈಸ್ ಸಮರ್ಥಿಸಿಕೊಂಡದ್ದನ್ನು ಪತ್ರಿಕೆಗಳಲ್ಲಿ, ಆಗೀಗ ಕಾಣುತ್ತೇವೆ. ತನ್ನ ಅಭಿಪ್ರಾಯವನ್ನು ತಪ್ಪೆಂದು ತೋರಿಸಿದರೆ ಫ್ಲೀಟ್‌ ಅದನ್ನು ಪ್ರಾಂಜಲವಾಗಿ ಒಪ್ಪಿಕೊಂಡ ಸಂದರ್ಭಗಳೂ ಇಲ್ಲದಿಲ್ಲ. ಇದಂತಿರಲಿ, ಅವರು ಪರಸ್ಪರರಲ್ಲಿ ತೋರುತ್ತಿದ್ದ ಸೌಹಾರ್ದವೂ ಸಹಾಯ ತತ್ಪರತೆಯೂ ಗಣನೀಯವಾಗಿದೆ. ಸಂದೇಹವು ತಲೆದೋರಿದಾಗ ಪತ್ರವ್ಯವಹಾರ ನಡೆಸಿ ಸ್ಪಷ್ಟೀಕರಣವನ್ನು ಪಡೆದುದೂ, ಅಂಥ ಸಹಾಯವನ್ನು ಕೃತಜ್ಞತೆಯಿಂದ ನೆನೆದುದೂ ಅದೆಷ್ಟು ಸಲವೊ! ಸತ್ಯಾನ್ವೇಷಣೆಯಲ್ಲಿ ನಿರತರೂ, ನಿಷ್ಠರೂ ಆದ ವಿದ್ವಾಂಸದ್ವಯರ ಈ ಬಗೆಯ ಬಿಚ್ಚುಮನದ ವಾದ ಹಾಗೂ ಸಾಹಚರ್ಯಗಳು ಅನುಕರಣೀಯವಾಗಿವೆ. "ಪಾಳಿ, ಸಂಸ್ಕೃತ. ಮತ್ತು ಹಳೆ ಗನ್ನಡ ಶಾಸನಗಳು” ಅವರ ನೆನಪಿಡುವ ಕೃತಿ ಪ್ರಾಚೀನ ಗುಪ್ತರು ಮತ್ತು ಅವರ ಉತ್ತರಾಧಿಕಾರಿಗಳ ಶಾಸನಗಳ ಸಂಗ್ರಹ ಮತ್ತು ಅಧ್ಯಯನಕ್ಕೆ ಸರ್ಕಾರ ಅವರನ್ನು ಕೇಳಿಕೊಂಡಾಗ ಗುಪ್ತರ ಇತಿಹಾಸ ರಚನೆಗೆ ಭದ್ರ ಬುನಾದಿ ದೊರಕಿತು. ಅವರ ೧೮೮೮ರ ಮುಂಬಯಿ. ಪ್ರಾಂತ್ಯದ, ಕನ್ನಡ ಜಿಲ್ಲೆಗಳಲ್ಲಿನ ರಾಜವಂಶಗಳ ಅಧ್ಯಯನವು ಒಂದು ಉಪಯುಕ್ತ ದಾಖಲೆಯಾಗಿದೆ. ೧೮೭೨ ರಲ್ಲಿ ವಿದ್ಯಾಧಿಕಾರಿಯಾದರು. ಆಗ ತಮ್ಮ ಆಡಳಿತದ ಪ್ರದೇಶಗಳಲ್ಲಿನ ನೂರಾರು ಶಾಸನಗಳನ್ನು ಸಂಗ್ರಹಿಸಿ ಅವುಗಳ ಟೀಕೆ ಟಿಪ್ಪಣಿಗಳ ಸಮೇತ ೧೮೭೦ಮೊದಲಿಗೆ ಪ್ರಕಟಿಸಿದರು. ಅವರು ಹಳ್ಳಿಗಳಲ್ಲಿ ಸಂಚರಿಸಿಜನರೊಡನೆ ಬೆರೆತು ಲಾವಣಿಗಳನ್ನು ಜನರಿಂದ ಕೇಳಿ ಅವುಗಳ ಇಂಗ್ಲಿಷ್‌ ಅನುವಾದವನ್ನೂ ಮಾಡಿ ಪ್ರಕಟನೆಮಾಡಿ ಜಾನಪದ ಸಂಪತ್ತನ್ನು ಬೆಳಕಿಗೆ ತಂದು ಉತ್ತರ ಕರ್ನಾಟಕದ ಜಾನಪದ ಪಿತಾಮಹನೆಂಬ ಹಿರಿಮೆ ಗಳಿಸಿದರು. ಇಂಡಿಯನ್‌ಆಂಟಿಕ್ವರಿ ಜರ್ನಲ್‌ನಲ್ಲಿ ಸತತ ಬರವಣಿಗೆ- ನಂತರ ಸಂಪಾಕಿಯ ಮಂಡಳಿಯಲ್ಲಿ ಕೆಲಸ-ಬಾದಾಮಿ ಚಾಲುಕ್ಯರ ಇತಿಹಾಸ -ಐಹೊಳೆ ಶಾಸನ- ಮಹಾಕೂಟದ ಸ್ಥಂಭ ಶಾಸನ- ರಾಷ್ಟ್ರಕೂಟಮೊದಲಾದವುಗಳ ಶೋಧನೆ ಮತ್ತು ಪ್ರಕಟಣೆ ಅವರ ಸಾಧನೆಯಾಗಿವೆ. ನಾಣ್ಯ ಮತ್ತು ಸ್ಥಳ ನಾಮಗಳ ಬಗ್ಗೆ ಅಧ್ಯಯನ ಅವರ ಇನ್ನೊಂದು ಕಾಣಿಕೆ. ಅವರು ಜೀವನದ ಉದ್ದಕ್ಕೂ ಪ್ರತಿಷ್ಠಿತ ಐತಿಹಾಸಿಕ ಸಂಸ್ಥೆಗಳ ಸಂಪರ್ಕ ಹೊಂದಿದ್ದರು. ರಾಯಲ್‌ ಏಷಿಯಾಟಿಕ್‌ ಸೊಸೈಟಿ ಅಫ್‌ ಗ್ರೇಟ್‌ ಬ್ರಿಟನ್‌ಮತ್ತು ಐರಲೇಂಡ್‌, ಅದರ ಬಾಂಬೆ ಶಾಖೆ, ಬೆಂಗಾಲ್ ಏಷಿಯಾಟಿಕ್‌ ಸೊಸೈಟಿ, ರಾಯಲ್‌ ಸೊಸೈಟಿ ಅಫ್‌ ಸೈನ್ಸ್,ಇವುಗಳ ಸಕ್ರಿಯ ಯ ಸದಸ್ಯರು. ಬಾಂಬೆ ಯುನಿವರ್ಸಿಟಿ ಯ ಫೆಲೋ ಆಗಿದ್ದರು. ನಿವೃತ್ತರಾಗಿ ಇಂಗ್ಲೆಂಡಿಗೆ ಮರಳಿ ಹೋದ ಮೇಲೆ ಫ್ಲೀಟ್‌ರು ಲಂಡನ್ನಿನ ರಾಯಲ್ ಏಶಿಯಾಟಿಕ್ ಸೊಸೈಟಿಯ ಪ್ರಮುಖ ಕಾರ್ಯಕರ್ತರಾಗಿ ನಿಂತರು. ಹನ್ನೊಂದು ವರ್ಷಗಳ ಕಾಲ ಅದರ ಗೌರವ ಕಾರ್ಯದರ್ಶಿಯಾಗಿದ್ದರು. ಸಂಸ್ಥೆಯ ಪತ್ರಿಕೆಯ ಪ್ರತಿ ಸಂಚಿಕೆಯಲ್ಲಿಯೂ ಇವರ ಲೇಖನಗಳು ಪ್ರಕಟವಾಗಿವೆ. ಅವೆಲ್ಲ ಪ್ರಾಚೀನ ಭಾರತಕ್ಕೆ ಸಂಬಂಧಪಟ್ಟವಾಗಿದ್ದು, ವಿಷಯ ವಿವೇಚನೆಯಲ್ಲಿ ನಾಣ್ಯಶಾಸ್ತ್ರ, ಕಾವ್ಯ, ಪುರಾಣ ಹಾಗೂ ಭಾಷಾಶಾಸ್ತ್ರ ಇವುಗಳ ಆಧಾರವನ್ನೂ ಪಡೆಯಲಾಗಿದೆ. ಸಂಗೊಳ್ಳಿರಾಯಣ್ಣ, ಕಿತ್ತೂರವೀರಮ್ಮ, ನರಗುಂದದ ಬಂಡಾಯ, ಬದಾಮಿಕೋಟೆ ಪತನ,ಹಲಗಲಿ ಬೇಡರ ಶಸ್ತ್ರತ್ಯಾಗದ ಆಜ್ಞೆಯವಿರುದ್ದದ ಪ್ರತಿಭಟನೆಗಳು ಸರ್ಕಾರದ ವಿರುದ್ಧದ ಭಾವನೆಯನ್ನು ಕೆರಳಿಸುವಂತಿದ್ದರೂ ಆ ಲಾವಣಿಗಳ ಗಾಯಕರು ಬ್ರಿಟಿಷ್‌ ಅಧಿಕಾರಿಯ ಎದುರು ಯಾವುದೇ ಸಂಕೋಚವಿಲ್ಲದೆ ಹಾಡಿರುವುದು ಗಣನೀಯ. ತಮ್ಮ ಅಧಿಕೃತ ಕೆಲಸ ಮುಗಿದ ಮೇಲೆ ವಿಶ್ರಾಂತಿಯ ಸಮಯದಲ್ಲಿ ಫ್ಲೀಟ್‌ ಲಾವಣಿಕಾರರ ತಂಡಕ್ಕೆ ಹೇಳಿಕಳುಹಿಸುವರು. ಸಾಹೇಬರ ಎದುರು ನಡೆಯುವ ಈ ಕಾರ್ಯಕ್ರಮಕ್ಕೆ ಊರ ಜನರೂ ಗುಂಪಾಗಿ ಸೇರುತಿದ್ದರು. ಹಾಡುಗಾರರು ಸಿಗುತಿದ್ದ ಸಂಭಾವನೆಗೆ ಮಾತ್ರವಲ್ಲ ತಮ್ಮೊಡನೆ ಮುಕ್ತವಾಗಿ ಬೆರೆತು ಹಾಡಿದುದನ್ನು ಕೇಳಿಸಂತೋಷ ಪಡುವ ಸಜ್ಜನಿಕೆಗೆ ಮನಸೋತು ಮನ ದುಂಬಿ ಹಾಡುವರು.ತಮ್ಮ ಸಜ್ಜನಿಕೆಯಸ್ವಭಾವದಿಂದ ಹಳ್ಳಿಗರೊಡನೆ ಬೆರೆತು, ಜನರ ವಿಶ್ವಾಸವನ್ನು ಗಳಿಸಿಕೊಂಡಿದ್ದರು.. ಈ ಸನ್ನಿವೇಶವನ್ನು ಅವರು ನಿವೃತ್ತರಾದ ನಂತರವೂ ನೆನೆಯುತಿದ್ದರೆಂದು ಅವರ ಕಿರಿಯ ಸಹಾಯಕ ಎಸ್‌.ಡಿ.ಬರ್ನೆಟ್‌ ಉಲ್ಲೇಖಿಸಿದ್ದಾರೆ. ಜನಪದ ಸಾಹಿತ್ಯವನ್ನು ಸಂಗ್ರಹಿಸುವ ಕಾರ್ಯ ಇಪ್ಪತ್ತನೆ ಶತಮಾನದಲ್ಲಿ ಭರದಿಂದ ಸಾಗಿದೆ. ಅದಕ್ಕಾಗಿ ಪ್ರತ್ಯೇಕ ಅಕಾದೆಮಿ ಮತ್ತು ವಿಶ್ವ ವಿದ್ಯಾಲಯಗಳೂ ಇವೆ. ಆದರೆ ಆವುಗಳ ಮಹತ್ವನ್ನು ಒಂದು ಶತಮಾನ ಮೊದಲೇ ಅರಿತು ಆ ದಿಶೆಯಲ್ಲಿ ಕೆಲಸ ಮಾಡಿದವರು ಫ್ಲೀಟ್‌ ಎಂಬುದು ಉಲ್ಲೇಖನೀಯ. ಬ್ರಿಟಿಷರನ್ನು ನೇರವಾಗಿ ಇಲ್ಲವೇ ಪರ್ಯಾಯವಾಗಿ ಟೀಕಿಸುವ, ಆಂಗ್ಲರ ಆಡಳಿತದ ವಿರುದ್ಧ ಭಾವನೆಗಳು ವ್ಯಕ್ತವಾಗುವ ಲಾವಣಿಗಳನ್ನೂ ಅವರುಯಾವುದೇ ಪೂರ್ವಾಗ್ರಹವಿಲ್ಲದೆ ಸಂಗ್ರಹಿಸಿ ಪ್ರಕಟಿಸಿರುವುದು ಅವರವೃತ್ತಿನಿಷ್ಠತೆಯ ಸಂಕೇತ ಫ್ಲೀಟ್‌ ೧೮೯೭ ರಲ್ಲಿ ನಿವೃತ್ತರಾದರು. ನಂತರ ಇಂಗ್ಲೆಂಡಿಗೆ ಹೋಗಿ ನೆಲಸಿದರು. ಆಲ್ಲಿಯೂ ಅವರ ಪ್ರವೃತ್ತಿ ಮುಂದುವರಿಯಿತು. ತಮ್ಮ ಪೂರ್ಣಾವಧಿ ಸಮಯವನ್ನು ಶಾಸನಅಧ್ಯಯನ ಮತ್ತು ಜಾನಪದದ ಕೆಲಸಕ್ಕೆ ಮೀಸಲಿಟ್ಟರು. ರಾಯಲ್‌ ಏಷಿಯಾಟಿಕ್‌ ಸೊಸೈಟಿ ಮತ್ತು ಎಪಿಗ್ರಾಫಿಯಾ ಇಂಡಿಕಾಗಳಲ್ಲಿ ತಮ್ಮ ಪ್ರಕಟನೆಯನ್ನು ಮುಂದುವರಿಸಿದರು. ಅವರು ತಮ್ಮ ಕೊನೆಯುಸಿರು ಇರವವವರೆಗೆ ,ಅಂದರೆ ಮರಣದ ಮೊದಲು , ೧೯೧೭ ರಲ್ಲಿ, “ ಬ್ಯಾಲಡ್ಸ ಅಫ್ ಪೆಜಂಟರಿ” ಯನ್ನು ಸಂಗೀತ ಸಮೇತ “ ಇಂಡಿಯನ್‌ ಅಂಟಿಕ್ವರಿ” ಯಲ್ಲಿ ಪ್ರಕಟಿಸಿರುವುದು ಅವರ ಕಾರ್ಯತತ್ಪರತೆ ಮತ್ತು ಬದ್ಧತೆಯ ಸೂಚಕವಾಗಿದೆ. ಉತ್ತರ ಕರ್ನಾಟಕದ ಶಾಸನಗಳ ಅಧ್ಯಯನಕ್ಕೆ ಅಡಿಗಲ್ಲುಹಾಕಿದವರೇ ಜಾನ್‌ ಫೇಥ್‌ ಫುಲ್‌ಫ್ಲೀಟ್‌