ಜಹೋರ್
ಜಹೋರ್ - ಮಲೇಷ್ಯ ಒಕ್ಕೂಟದ ಒಂದು ರಾಜ್ಯ. ಅತ್ಯಂತ ದಕ್ಷಿಣದಲ್ಲಿದೆ. ವಿಸ್ತೀರ್ಣದಲ್ಲಿ ಮೂರನೆಯದು (7,330 ಚ.ಮೈ.). ಜನಸಂಖ್ಯೆ 12,76,969 (1970). ರಾಜಧಾನಿ ಜಹೋರ್ ಬಾರೂ.
ಜಹೋರ್ ರಾಜ್ಯದ 2/3 ಭಾಗ ಅರಣ್ಯದಿಂದ ಆವೃತ. ನಡುನಡುವೆ ವಿಶಾಲವಾದ ಜೌಗುಪ್ರದೇಶಗಳಿಂದಾಗಿ ಸಾರಿಗೆ ಸಂಪರ್ಕಕ್ಕೂ ಅಭಿವೃದ್ಧಿಗೂ ಅಡಚಣೆಯುಂಟಾಗಿದೆ. ಬತ್ತ ಬೆಳೆಯುವವರ ಸಂಖ್ಯೆ 1,000ಕ್ಕೂ ಕಡಿಮೆ. 10 ಲಕ್ಷ ಎಕರೆಗಳಿಗಿಂತ ಹೆಚ್ಚಿನ ನೆಲದಲ್ಲಿ ರಬ್ಬರ್ ಬೆಳೆಯುತ್ತದೆ.
ಇಲ್ಲಿಯ ಗ್ರಾಮಸ್ಥರಲ್ಲಿ ಶೇ.೭೯ ರಷ್ಟು ಜನ ಚೀನೀಯರು. ಆದರೆ ಒಟ್ಟು ರಾಜ್ಯದಲ್ಲಿ ಅವರ ಸಂಖ್ಯೆ ಶೇ.42 ರಷ್ಟು ಮಾತ್ರ. ಜಹೋರ್ ವಲಯ ಜನರು ಶೇ.48 ರಷ್ಟು ಇದ್ದಾರೆ. 20ನೆಯ ಶತಮಾನದ ಆದಿಯವರೆಗೂ ಅವರು ಮೀನುಗಾರರಾಗಿದ್ದರು. ಸುಮಾತ್ರ ಬುಡಕಟ್ಟಿಗೆ ಸೇರಿದ ಮಲಯ ಜನರೂ ಹಲವರಿದ್ದರು. ಹಿಂದಿನ 60 ವರ್ಷಗಳಲ್ಲಿ ಅವರು ಇಲ್ಲಿಗೆ ಬಂದಿದ್ದರು. ಚೀನೀಯರ ಆಗಮನದಿಂದ ಪಾಶ್ಚಾತ್ಯ ರೀತಿಯ ಆರ್ಥಿಕತೆ ಇಲ್ಲಿ 19ನೆಯ ಶತಮಾನದ ನಡುಗಾಲದಿಂದ ಬೆಳೆಯತೊಡಗಿತು. ಅವರು ಮೆಣಸು ವ್ಯಾಪಾರಕ್ಕಾಗಿ ನದಿಗಳ ಮೂಲಕ ಒಳನಾಡಿನಲ್ಲಿ ವ್ಯಾಪಿಸಿದರು. 1919ರಲ್ಲಿ ತವರ ಮತ್ತು ರಬ್ಬರ್ ಪ್ರದೇಶದಿಂದ ಜಹೋರ್ ಮೂಲಕ ಸಿಂಗಪುರಕ್ಕೆ ರೈಲುಮಾರ್ಗ ನಿರ್ಮಾಣವಾದಾಗ ಅವರು ಧಾರಾಕಾರವಾಗಿ ಬರತೊಡಗಿದರು. ಸರಕು ಸಾಗಣೆ ಈಗ ವಿಶೇಷವಾಗಿ ಭೂಮಾರ್ಗಗಳ ಮೂಲಕ ನಡೆಯುತ್ತಿದೆ. ಸಿಂಗಪುರದ ಒಡ್ಡುದಾರಿಯಿಂದ ಹಲವು ರಸ್ತೆಗಳು ರಾಜ್ಯದಲ್ಲಿ ಕವಲೊಡೆಯುತ್ತವೆ. ಮಲಕ್ಕದವರೆಗೆ ಸಾಗುವ ಪಶ್ಚಿಮ ಕರಾವಳಿ ರಸ್ತೆ, ಕ್ವಾಲಲುಂಪುರದವರೆಗಿನ ಒಳನಾಡ ರಸ್ತೆ, ಮರ್ಸಿಂಗ್ ಒಂದಿಗೆ ಸಂಪರ್ಕ ಕಲ್ಪಿಸುವ ಪೂರ್ವ ಕರಾವಳಿ ರಸ್ತೆ-ಇವು ಮುಖ್ಯವಾದವು. ರಾಜ್ಯದ ಕರಾವಳಿಯ ರೇವುಗಳು ಆಳವಿಲ್ಲ. ಆದ್ದರಿಂದ ಇದರ ವ್ಯಾಪಾರ ಮುಖ್ಯವಾಗಿ ಸಿಂಗಪುರದ ಮೂಲಕವೇ. ಬಾಕ್ಸೈಟ್, ಕಬ್ಬಿಣ ಅದಿರು ಮುಖ್ಯ ಖನಿಜಗಳು. ತವರದ ಗಣಿಗಾರಿಕೆಯೂ ನಡೆಯುತ್ತದೆ. ಇಲ್ಲಿಯ ಮೀನು, ಹಂದಿ, ಮೊಟ್ಟೆ, ಹಣ್ಣು ವಿಶೇಷವಾಗಿ ಸಿಂಗಪುರದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆ.