ಜಲ್ಪಾಯ್ಗುರಿ - ಪಶ್ಚಿಮ ಬಂಗಾಳದ ಒಂದು ಜಿಲ್ಲೆ;

ಅದರ ಮುಖ್ಯ ಪಟ್ಟಣ ಜಲ್ಪೈಗುರಿ ಪಟ್ಟಣದ ಜನಸಂಖ್ಯೆ 55,159 (1971) ಇದು ತಿಸ್ತಾ ನದಿಯ ಬಲದಂಡೆಯ ಮೇಲೆ ಡಾರ್ಜಿಲಿಂಗಿಗೆ ಆಗ್ನೇಯದಲ್ಲಿ 50 ಮೈಲು ದೂರದಲ್ಲಿದೆ. ಇದೊಂದು ಸುಂದರ ಪಟ್ಟಣ. ಅಗಲವಾದ ರಸ್ತೆಗಳ ಎರಡೂ ಬದಿಗಳಲ್ಲಿ ಹಸುರು ದಟ್ಟೆಲೆಗಳಿಂದ ಕೂಡಿದ ಮರಗಳಿವೆ. ದೂರದಲ್ಲೆ ಹಿಮಾಲಯ ಶ್ರೇಣಿಗಳು ಮಂಜಿನ ಮುಸುಕು ಹೊದ್ದು ಹಬ್ಬಿವೆ. ಜಲ್ಪೈಗುರಿ ಒಂದು ರೈಲು ನಿಲ್ದಾಣ, ಇದೊಂದು ವ್ಯಾಪಾರ ಸ್ಥಳ. ಇಲ್ಲಿ ಕಲ್ಕತ್ತ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಮೂರು ಕಾಲೇಜುಗಳಿವೆ.

ಜಲ್ಪೈಗುರಿ ಜಿಲ್ಲೆಯ ವಿಸ್ತೀರ್ಣ 6,245 ಚ. ಕಿ.ಮೀ. ಜನಸಂಖ್ಯೆ 17,50,159 (1971), ಪೂರ್ವದಲ್ಲಿ ಅಸ್ಸಾಂ, ಪಶ್ಚಿಮದಲ್ಲಿ ಬಿಹಾರ, ಉತ್ತರದಲ್ಲಿ ಭೂತಾನ್, ದಕ್ಷಿಣದಲ್ಲಿ ಬಾಂಗ್ಲಾದೇಶದ ಕುಚ್‍ಬಿಹಾರ್ ಜಿಲ್ಲೆ-ಇವು ಇದರ ಮೇರೆಗಳು. ರಾಜ್‍ಗಂಜ್ (1,28,744), ಜಲ್ಪೈಗುರಿ (2,17,410), ಮಾಲ್ (1,66,142), ಮಿಟಿಯಾಲಿ (61,045), ಮಯನಗುರಿ(1,59,764), ನಗರಕಾಟಾ (66,002), ಧೂಬ್‍ಗುರಿ (2,16,330), ಬೀರ್ಪಾರಾ (57,942), ಫಲಕಾಟಾ (1,30.529), ಮಧಾರಿ ಹಟ್ (42,807), ಅಲೀಪುರ್‍ದ್ವಾರ್ (2,71,766), ಕಾಲ್ಚೀನಿ (1,34,407), ಕುಮಾರಗ್ರಾಮ್ (97,211), ಇವು ಇದರ ತಹಸೀಲುಗಳು. (1971) ರಲ್ಲಿದ್ದ ಜನಸಂಖ್ಯೆಗಳನ್ನು ಆವರಣದಲ್ಲಿ ಕೊಟ್ಟಿದೆ). ಭೂತಾನಕ್ಕೂ ಜುಲ್ಪೈಗುರಿ ಜಿಲ್ಲೆಗೂ ನಡುವೆ ಇರುವ ಸಿಂಚುಲಾ ಪರ್ವತಶ್ರೇಣಿಯ ಕೆಲವು ಶಿಖರಗಳು ಸುಮಾರು 6,000' ಎತ್ತರ ಉಂಟು. ತಿಸ್ತಾ ನದಿಯಿಂದ ಈ ಜಿಲ್ಲೆ ಎರಡು ಭಾಗಗಳಾಗಿ ಪರಿಣಮಿಸಿದೆ. ಒಂದು ಮೊದಲಿನಿಂದಲೂ ಭಾರತದ ಭಾಗವೇ ಆಗಿದ್ದ ವಿಸ್ತಾರವಾದ ಪ್ರದೇಶ. ಮತ್ತೊಂದು 1864-65ರ ಯುದ್ಧದ ಬಳಿಕ ಭೂತಾನದಿಂದ ಈ ಜಿಲ್ಲೆಗೆ ಸೇರಿದೆ. 35ಕಿ.ಮೀ. ಅಗಲವಾಗಿ ಹಿಮಾಲಯದ ಅಡಿಗುಂಟ ವ್ಯಾಪಿಸಿರುವ ಭೂಪಟ್ಟಿ, ಈ ಭಾಗವನ್ನು ಪಶ್ಚಿಮ ದ್ವಾರವೆಂದು ಕರೆಯಲಾಗುತ್ತದೆ. ಏಕೆಂದರೆ ಇಲ್ಲಿಂದ ಭೂತಾನಕ್ಕೆ ಹೋಗುವ ಐದು ಕಣಿವೆ ಮಾರ್ಗಗಳುಂಟು. ಈ ಭೂಪಟ್ಟಿ ಚಹ ಬೆಳೆಗೆ ಹೆಸರಾಗಿದೆ. ಚಹದ ಫಸಲಿನ ದೃಷ್ಟಿಯಿಂದ ಈ ಭೂಭಾಗ ಡಾರ್ಜಿಲಿಂಗಿನ ಸೆರಗು ಎನ್ನಬಹುದು. ಕಣ್ಣು ಹಾಯಿಸಿದಲ್ಲೆಲ್ಲ ಚಹ ತೋಟಗಳುಂಟು. ಇಲ್ಲಿಂದ ಪರದೇಶಗಳಿಗೂ ಅನ್ಯಪ್ರದೇಶಗಳಿಗೂ ಚಹ ರಫ್ತಾಗುತ್ತದೆ. ತಿಸ್ತಾ ನದಿಗೆ ಪಶ್ಚಿಮದಲ್ಲಿರುವ ಭಾಗ ಹೆಚ್ಚು ಜನನಿಬಿಡವಾದ್ದು, ಅಲ್ಲಿ ಭತ್ತ, ಸೆಣಬು ಮತ್ತು ಕಬ್ಬು ಬೆಳೆಯುತ್ತವೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 129” ಅರಣ್ಯಾವೃತ ಪ್ರದೇಶ 662 ಚ.ಮೈ. ಇಲ್ಲಿ ಅಮೂಲ್ಯವಾದ ಮರಗಳೂ ವನ್ಯಮೃಗಗಳೂ ಇವೆ. ಜಿಲ್ಲೆಯಲ್ಲಿ ಅನೇಕ ಅಭಯಾರಣ್ಯಗಳುಂಟು. ಗರುಮಾರಾ ಅಭಯಾರಣ್ಯ ಮುಖ್ಯವಾದ್ದು. ಇಲ್ಲಿ ಖಡ್ಗಮೃಗಗಳನ್ನೂ ಕಾಡೆಮ್ಮೆಗಳನ್ನೂ ರಕ್ಷಿಸಲಾಗಿದೆ. ಬಾಗ್ರಕೋಟನಲ್ಲಿ ಆಂತ್ರಸೈಟ್ ಗಣಿಗಳಿವೆ. ಜಲ್ಪೈಗುರಿ ಅಲ್ಲದೆ ಅಲೀಪುರ್‍ದ್ವಾರ್ ಒಂದು ಪ್ರಮುಖ ಪಟ್ಟಣ. ಇದರ ಜನಸಂಖ್ಯೆ 54,454 (1971).

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: