ಜಲಗಾಜು
ಜಲಗಾಜು ( ರಾಸಾಯನಿಕವಾಗಿ ಸೋಡಿಯಮ್ ಸಿಲಿಕೇಟ್ ); ಇದು ಸಿಲಿಕದೊಡನೆ ಕೂಡಿರಬಹುದು (ವಾಟರ್ ಗ್ಲಾಸ್). ಇದರ ರಾಸಾಯನಿಕ ಪ್ರತೀಕ ಮರಳು ಮತ್ತು ವಾಷಿಂಗ್‍ಸೋಡಗಳನ್ನು ಕುಲುಮೆಯಲ್ಲಿ ಕಾಸಿ ಜಲಗಾಜನ್ನು ತಯಾರಿಸುತ್ತಾರೆ. ಅದರೊಳಗೆ ಕರಗಿದ ವಸ್ತು ಘನೀಭವಿಸಿ ಗಾಜಿನಂತಾಗುತ್ತದೆ. ಇದಕ್ಕೆ ದ್ರಾವ್ಯಗಾಜು (ಸಾಲ್ಯುಬಲ್ ಗ್ಲಾಸ್) ಎಂದೂ ಹೆಸರುಂಟು. ಇದನ್ನು ಪುಡಿಮಾಡಿ ಒತ್ತಡದಲ್ಲಿ ನೀರಿನೊಳಗೆ ಕರಗಿಸಿದರೆ ಒಂದು ಸ್ನಿಗ್ಧವಾದ ಪದಾರ್ಥ ಬರುತ್ತದೆ. ಜಲಗಾಜು ನೀರಿನಲ್ಲಿ ದ್ರಾವ್ಯ. ಈ ದ್ರಾವಣದಲ್ಲಿ (ಸಾಪೇಕ್ಷ ಸಾಂದ್ರತೆ ೧.೧) ನಾನಾ ಲವಣಗಳ ಹರಳುಗಳನ್ನಿಟ್ಟಾಗ ಸಸ್ಯಗಳನ್ನು ಹೋಲುವ ಮನೋಹರವಾದ ಬೆಳಸು ಕಂಡುಬರುತ್ತದೆ. ಇದಕ್ಕೆ ಸಿಲಿಕ ಗಾರ್ಡನ್ ಎಂದು ಹೆಸರು. ಸಾಬೂನಿನೊಡನೆ ಬೆರೆಸಲು, ಬಟ್ಟೆ ಮತ್ತು ಮರಗಳನ್ನು ಬೆಂಕಿಯಿಂದ ಸುಡದಂತೆ ಮಾಡಲು ಜಲಗಾಜನ್ನು ಉಪಯೋಗಿಸುತ್ತಾರೆ. ಕೋಳಿಮೊಟ್ಟೆಯನ್ನು ಇದರ ದ್ರಾವಣದಲ್ಲಿ ಅದ್ದಿದರೆ ಅದರ ರಂಧ್ರಗಳು ಮುಚ್ಚಿ ವಾಯು ಮತ್ತು ಬ್ಯಾಕ್ಟೀರಿಯ ಒಳಕ್ಕೆ ಹೋಗುವುದಿಲ್ಲ. ಹೀಗೆ ಮೊಟ್ಟೆಗಳ ಸಂರಕ್ಷಣೆಯಲ್ಲಿ ಜಲಗಾಜಿನ ಬಳಕೆಯುಂಟು.