ಜರ್ಮನ್ ಸಾಹಿತ್ಯ
ಜರ್ಮನ್ ಸಾಹಿತ್ಯ - ಎಂದರೆ ಜರ್ಮನಿ, ಆಸ್ಟ್ರಿಯ ಮತ್ತು ಸ್ವಿಟ್‍ಜರ್‍ಲೆಂಡ್‍ಗಳಲ್ಲಿ ವಾಸಿಸುತ್ತಿದ್ದು ಜರ್ಮನ್ ಮಾತನಾಡುವ ಐರೋಪ್ಯರ ಸಾಹಿತ್ಯ.
ಜರ್ಮನ್ ಸಾಹಿತ್ಯದ ಭಾಗಗಳು
ಬದಲಾಯಿಸಿಜರ್ಮನ್ ಸಾಹಿತ್ಯವನ್ನು ಸುಲಭವಾಗಿ ಎಂಟು ಭಾಗಗಳಾಗಿ ವಿಭಜಿಸಬಹುದು.
- ಹಳೆಯ ಹೈ ಜರ್ಮನ್ ಯುಗ
- ಮಧ್ಯದ ಹೈ ಜರ್ಮನ್ ಯುಗ
- ಹದಿನೈದು ಮತ್ತು ಹದಿನಾರನೆಯ ಶತಮಾನಗಳು
- ಹದಿನೇಳನೆಯ ಶತಮಾನ
- ಹೊಸ ಅರಿವಿನ ಕಾಲ
- ಗಯಟೆಯ ಯುಗ
- ಹತ್ತೊಂಬತ್ತನೆಯ ಶತಮಾನ
- ಇಪ್ಪತ್ತನೆಯ ಶತಮಾನ
ಹಳೆಯ ಹೈ ಜರ್ಮನ್ ಯುಗ
ಬದಲಾಯಿಸಿಜರ್ಮನ್ ಭಾಷೆಯಲ್ಲಿನ ಮೊಟ್ಟಮೊದಲ ಲಿಖಿತ ದಾಖಲೆಗಳು 8ನೆಯ ಶತಮಾನದ ಉತ್ತರಾರ್ಧ ಕಾಲದಷ್ಟು ಹಿಂದಿನವು. ಜರ್ಮನ್ ಜನಾಂಗಗಳ ನಡುವೆ ಕ್ರೈಸ್ತಧರ್ಮವನ್ನು ಪ್ರಸಾರ ಮಾಡುತ್ತಿದ್ದವರ ಪ್ರಯತ್ನಗಳ ಫಲಶ್ರುತಿಯೇ ಈ ಪಾಠಗ್ರಂಥಗಳು. ಇವು ನೀತಿಬೋಧಕವಾಗಿದ್ದು, ಲ್ಯಾಟಿನ್ ಬೈಲನಿನ ಅಥವಾ ಚರ್ಚಿನ ಮತ ವಿಧಾನಗಳನ್ನು ಕುರಿತ ಭಾಷಾಂತರಗಳಾಗಿದ್ದುವು. ಉದಾಹರಣೆಗೆ ನಾವು ಟಾಷಿಯನ್ನನ ಇವ್ಯಾಂಜೆಲಿಯನ್ ಹಾರ್ಮೊನಿ ಅಥವಾ ಗಾಸ್ಪೆಲ್ ಹಾರ್ಮೊನಿ, ಅಥವಾ ಪ್ರಸಿದ್ಧ ಲ್ಯಾಟಿನ್ ಗ್ರಂಥಕರ್ತರ ಪ್ರವಚನಗಳನ್ನು ನೋಡಬಹುದು. ಚಕ್ರವರ್ತಿ ಚಾರ್ಲ್‍ಸ್ ಮಹಾಶಯ (768-814), ತನ್ನ ಮತಪ್ರಚಾರಕರ ಕೆಲಸವನ್ನು ಹೆಚ್ಚು ಪರಿಣಾಮಶಾಲಿಯಾಗಿಸಲು ಲ್ಯಾಟಿನ್ ಭಾಷೆಯ ಬದಲು ದೇಶಭಾಷೆಯ ಬಳಕೆಯನ್ನು ಸಮರ್ಥಿಸಿದ. ಮೌಖಿಕ ಪ್ರಸಾರ ಪರಂಪರೆಯ ಮೇಲೆಯೇ ನಿಂತಿದ್ದ ಕ್ರಿಸ್ತಪೂರ್ವ ಯುಗದ ಪುರಾತನ ಸಾಹಿತ್ಯವನ್ನು ಉಳಿಸಿಕೊಳ್ಳಬೇಕೆನ್ನುವುದು ಅವನ ಇನ್ನೊಂದು ಉದ್ದೇಶವಾಗಿತ್ತು. ಚಿಕ್ಕ ಚಿಕ್ಕ ವೀರಕಾವ್ಯಗಳು (ಹೆಲ್ಡನ್ ಲೀಡರ್) ಹಾಗೂ ಪ್ರಖ್ಯಾತ ವೀರರ ಸಾಹಸಗಳನ್ನು ಪ್ರಶಂಸಿಸುವ ಕಥನ ಕವನಗಳು ಬಹುತೇಕ, ಆ ಸಾಹಿತ್ಯದಲ್ಲಿ ತುಂಬಿದ್ದವು. ಕ್ರೈಸ್ತ ಧರ್ಮಕ್ಕೆ ಸಂಬಂಧಪಡದ (ಪೇಗನ್) ಕೃತಿಗಳ ಬಗ್ಗೆ ಆಸಕ್ತಿ ತೋರಿಸಬಾರದೆನ್ನುವುದು ಕ್ರೈಸ್ತಚರ್ಚಿನ ಧೋರಣೆಯಾಗಿತ್ತು. ಆದರೆ ಮರ್ಸ್‍ಬರ್ಗರ್ ಟ್ಸೌಬರ್ಸ್ ಷ್ಪ್ರೂಕೆ (ಮರ್ಸ್‍ಬರ್ಗ್ ಮಂತ್ರಗಳು, ಸು. 760) ಮುಂತಾದ ಕೆಲವು ಲೌಖಿಕ ಗ್ರಂಥಗಳೂ ಉಳಿದುಕೊಂಡುವು. ಇದರಲ್ಲಿ, ಕುದುರೆಗಳಿಗೆ ಯುದ್ಧದಲ್ಲಿ ಗಾಯವಾಗದಂತೆ, ಯುದ್ಧ ಖೈದಿಗಳನ್ನು ಸೆರೆಯಿಂದ ಬಿಡಿಸುವಂತೆ, ಹೇಗೆ ಮಂತ್ರ ಹಾಕಬಹುದು ಎಂಬ ವಿವರಗಳಿವೆ. ಹಳೆಯ ಹೈ ಜರ್ಮನ್ ಭಾಷೆಯ ವೀರಕಾವ್ಯವನ್ನು ಪ್ರತಿನಿಧಿಸುವ ಒಂದೇ ಉದಾಹರಣೆಯಾಗಿ ಉಳಿದಿರುವ ಅಪೂರ್ಣಕೃತಿ ಹಿಲ್ಡೆಬ್ರಾಂಡ್ಸ್ ಲೀಡ್ (ಹಿಲ್ಡೆಬ್ರಾಂಡನ ಹಾಡು ಸು. 800). ರಾಜನಾದ ಡೀಟ್ರಿಕ್‍ನ ಜೊತೆಗೆ ದೇಶಚ್ಯುತನಾಗಿದ್ದ ಹಿಲ್ಡೆಬ್ರಾಂಡ್ ತನ್ನ ಮಗ ಹ್ಯಾಡುಬ್ರಾಂಡನನ್ನು ದ್ವಂದ್ವಯುದ್ಧದಲ್ಲಿ ಎದುರಿಸುತ್ತಾನೆ. ಪುರಾಣಕಾವ್ಯದ ವಿಶಿಷ್ಟ ರೀತಿಯಲ್ಲಿ, ಇಬ್ಬರೂ ತಮ್ಮ ತಮ್ಮ ಹೆಸರುಗಳನ್ನು ಘೋಷಿಸುತ್ತಾರೆ. ತಮ್ಮ ತಂದೆ ಬಹುಕಾಲದ ಹಿಂದೆಯೇ ಸತ್ತುಹೋಗಿದ್ದನೆಂದು ಭ್ರಮಿಸಿದ್ದ ಹ್ಯಾಡುಬ್ರಾಂಡ್ ತನ್ನ ಎದುರಿಗೆ ನಿಂತವನು ತನ್ನ ತಂದೆಯೆಂದು ನಂಬಲು ನಿರಾಕರಿಸುತ್ತಾನೆ: ಹೇಡಿಯೆಂದು ಅವನನ್ನು ಹಂಗಿಸುತ್ತಾನೆ. ಹಿಲ್ಡೆಬ್ರಾಂಡ್ ಪುತ್ರವಾತ್ಸಲ್ಯ ಮತ್ತು ಆತ್ಮಗೌರವಗಳ ನಡುವೆ ಸಿಕ್ಕಿಬಿದ್ದು ಹೆಣಗುತ್ತ ಒಲ್ಲದ ಮನಸ್ಸಿನಿಂದ ಯುದ್ಧ ಮಾಡುತ್ತಾನೆ. ಅಷ್ಟಕ್ಕೇ ಆ ಕಾವ್ಯ ನಿಂತುಹೋಗಿದೆ. ಆದರೆ ಸೊಹ್ರಾಬ್-ರುಸ್ತುಮರ ಪರ್ಷಿಯನ್ ಕಥೆಯಲ್ಲಿ ಬರುವಂತೆ, ಕುಕುಲೈನ್-ಕೊನ್‍ಲಾ ಕೆಲ್ಟಿಕ್ ಕಥೆಯಲ್ಲಿ ಬರುವಂತೆ, ಇಲ್ಲಿಯೂ ಮಗನ ಸಾವಿನಿಂದ ಯುದ್ಧ ಪರ್ಯವಸಾನವಾಗುತ್ತದೆ ಎಂದು ಊಹಿಸಬಹುದು. ಈ ಅಮೂಲ್ಯ ಹಸ್ತಪ್ರತಿಯಲ್ಲಿ ಓಲ್ಡ್ ಇಂಗ್ಲಿಷ್ ಮತ್ತು ಓಲ್ಡ್ ನಾರ್ಸ್ ಕಾವ್ಯದಲ್ಲಿ ಸಾಮಾನ್ಯವಾಗಿ ಬಳಸುವ ಪುರಾತನ ಅನುಪ್ರಾಸ ರಚನೆಯ ವಿಶಿಷ್ಟ ಸ್ವರೂಪವನ್ನು ಕಾಣಬಹುದು. ಧರ್ಮಪ್ರಚಾರಕರು ಪೇಗನ್ ವೀರಕಾವ್ಯಗಳಿಗೆ ಸರಿಸಾಟಿಯಾಗುವಂತೆ ಕ್ರಿಸ್ತನ ಜೀವನವನ್ನು ನಿರೂಪಿಸಲು ಜನಪದೀಯ ಪರಂಪರೆಯನ್ನು ಬಳಸಿಕೊಂಡರು. ಹಳೆಯ ಸ್ಯಾಕ್ಸನ್ (ಹಳೆಯ ಲೋ ಜರ್ಮನ್) ಭಾಷೆಯ ಹೀಲಿಯಂಡ್ (ಉದ್ಧಾರಕ ಸು. 830) ಎನ್ನುವ ಕೃತಿಯಲ್ಲಿ ಅದನ್ನು ಬರೆದ ಅಜ್ಞಾತ ಕವಿ ಕ್ರೈಸ್ತನನ್ನು ಜರ್ಮನ್ ವೀರನೆಂಬಂತೆ ವರ್ಣಿಸಿದ್ದಾನೆ. ವೈಸನ್‍ಬರ್ಗಿನ ಸಂನ್ಯಾಸಿ ಆಟ್‍ಫ್ರೀಡ್ ವಿರಚಿತ ಇವ್ಯಾಂಜೆಲಿಯನ್ ಬುಕ್ಕಿನಲ್ಲಿ (ಗಾಸ್ಟೆಲ್ ಗ್ರಂಥ-ಸು.870) ಮೊಟ್ಟಮೊದಲ ಬಾರಿಗೆ ಅನುಪ್ರಾಸದ ಬದಲು ಮಧ್ಯಯುಗದ ಲ್ಯಾಟಿನ್ ಕಾವ್ಯದ ಅಂತ್ಯಪ್ರಾಸವನ್ನು (ಎಂಡ್ ರ್ಹೈಮ್) ಬಳಸಲಾಗಿದೆ. ಲುಡ್‍ವಿಗ್ಸ್ ಲೀಡ್ (ಲುಡ್‍ವಿಗ್ಗನ ಹಾಡು-881) ಜರ್ಮನ್ ಭಾಷೆಯ ಪ್ರಪ್ರಥಮ ಐತಿಹಾಸಿಕ ಲಾವಣಿ. ಇದರಲ್ಲಿ ದೊರೆ ಲುಡ್‍ವಿಗ್ಗನ ಸಾಹಸಗಳನ್ನು ಕೊಂಡಾಡಲಾಗಿದೆ. ಅನೇಕ ವಿದ್ವಾಂಸರು ಹೆಚ್ಚಾಗಿ ಲ್ಯಾಟಿನ್‍ನಲ್ಲೇ ಬರೆಯಲು ಆಶಿಸುತ್ತಿದ್ದುದರಿಂದ, ಜರ್ಮನ್ ಭಾಷೆ ತಾನೊಂದು ಸಾಹಿತ್ಯಕ ಭಾಷೆಯೆಂಬ ಮನ್ನಣೆ ಪಡೆಯಲು ಬಹಳವಾಗಿ ಹೆಣಗಬೇಕಾಯಿತು.
ಮಧ್ಯ ಹೈ ಜರ್ಮನ್ ಯುಗ
ಬದಲಾಯಿಸಿಹಳೆಯ ಹೈ ಜರ್ಮನ್ ಭಾಷೆ, ಮಧ್ಯ ಹೈ ಜರ್ಮನ್ ಭಾಷೆಯಾಗಿ ಕೆಲವು ಮಾರ್ಪಾಡುಗಳಿಗೆ ಪಕ್ಕಾಗಿದ್ದ 11ನೆಯ ಶತಮಾನದ ಮಧ್ಯದ ಸುಮಾರಿನಲ್ಲಿ ಈ ಯುಗ ಪ್ರಾರಂಭವಾಯಿತು. ಈ ಯುಗ ಜರ್ಮನ್ ಸಾಹಿತ್ಯದ ಪ್ರಥಮ ಕ್ಲಾಸಿಕಲ್ (ಅಭಿಜಾತ) ಯುಗಕ್ಕೆ ದಾರಿ ಮಾಡಿಕೊಟ್ಟಿತು. ಈ ಯುಗದ ಪ್ರಾರಂಭದಲ್ಲಿ ಹೊಸ ಲಕ್ಷಣಗಳು ಸ್ಪಷ್ಟವಾಗಿ ಎದ್ದು ಕಾಣಿಸಿಕೊಳ್ಳದಿದ್ದರೂ ಕ್ರಮೇಣ ಹಳೆಯ ಧಾರ್ಮಿಕ ನೀತಿಪರತೆ ಮಾಯವಾಗಿ ಅದರ ಬದಲು ಪ್ರೊವೆನ್ಸಿನ ಆಸ್ಥಾನಗಳಲ್ಲಿ ರೂಪಗೊಂಡ ಆಸ್ತಾನಿಕ ಊಳಿಗಮಾನ್ಯ ಪದ್ಧತಿಯ ಹೊಸ ಪ್ರಭಾವಗಳು ಕಾಣಿಸಿಕೊಂಡವು. ಪಾದ್ರಿಯ ಬದಲು ಶ್ರೀಮಂತ ವೀರ ಕವಿಯೆಂಬ ಗೌರವಕ್ಕೆ ಪಾತ್ರನಾಗಿ, ಅವನ ಆಸ್ಥೆ ಆದರ್ಶಗಳು ಹೊಸ ಸಾಹಿತ್ಯಕ್ಕೆ ವಸ್ತುವಾದವು. ಹೊಹೆನ್ ಸ್ಟೌಫೆನ್ ಚಕ್ರವರ್ತಿಗಳಾದ ಮೊದಲನೆಯ ಬಾರ್ಬರೋಸ ಫ್ರೆಡರಿಕ್, ನಾಲ್ಕನೆಯ ಹೆನ್ರಿ, ಎರಡನೆಯ ಫ್ರೆಡರಿಕ್ ಮುಂತಾದವರ ಆಳ್ವಿಕೆಯ (1152-1250) ಅವಧಿಯಲ್ಲಿ ಪ್ರೇಮಗೀತೆ (ಮಿನ್ನೆಸಾಂಗ್) ಮತ್ತು ಪುರಾಣಕಾವ್ಯ ಪ್ರಭೇದಗಳು ಹುಟ್ಟಿದವು. ಹೊಸ ಕಾವ್ಯ ಬರೆದವರು ಹೆಚ್ಚಾಗಿ ಶ್ರೀಮಂತರೇ. ಅವರು ಆಸ್ಥಾನಿಕ ಸಂಪ್ರದಾಯಗಳಿಗೆ ತಕ್ಕಂತೆ ತಮ್ಮ ಪ್ರೇಮವನ್ನು ವ್ಯಕ್ತಪಡಿಸುತ್ತಿದ್ದರು; ಸಾಂಪ್ರದಾಯಿಕವಾದ ಯುದ್ಧ ವರ್ಣನೆಯ ಕಥೆಗಳನ್ನೂ ಅದ್ಭುತ ರಮ್ಯ ಕಥೆಗಳನ್ನೂ ನಿರೂಪಿಸುತ್ತಿದ್ದರು. ಜನಪದೀಯ ಮೌಖಿಕ ಪರಂಪರೆಯ ಜೊತೆಗೆ ಅವರು ಫ್ರಾನ್ಸಿನ ಪ್ರಭಾವದಿಂದ ಪಡೆದ ಹೊಸ ಸಾಮಾಜಿಕ ನಡವಳಿಕೆ ಮತ್ತು ಹೊಸ ಹೊಸ ಛಂದೋರೂಪಗಳು ಮುಂತಾದ ವಿಶಿಷ್ಟ ಮೌಲ್ಯಗಳನ್ನು ರೂಢಿಸಿಕೊಂಡರು. ಜರ್ಮನಿಯ ರಾಷ್ಟ್ರೀಯ ಪುರಾಣಗಳಲ್ಲಿ ಅತ್ಯಂತ ಮಹತ್ತ್ವಪೂರ್ಣವಾದ ನೀಬೆಲುಂಗೆನ್ ಲೀಡ್ (ಸು. 1200) ಜನಪದೀಯ ಪರಂಪರೆಯೊಂದಿಗೆ ಅತ್ಯಂತ ನಿಕಟ ಸಂಪರ್ಕ ಪಡೆದಿದೆ. ಅದು ಸೀಗ್‍ಫ್ರೀಡ್ ಎಂಬ ವೀರನ ಕಥೆ. ಹಾಗೆನ್ ಎಂಬಾತನೂ ಬರ್ಗಂಡಿಯನ್ನರೂ ಸೇರಿ ಸೀಗ್‍ಫ್ರೀಡ್‍ನನ್ನು ಕೊಲ್ಲುವುದು, ಸೀಗ್‍ಫ್ರೀಡನ ಪತ್ನಿ ಕ್ರೀಮ್ ಹಿಲ್ಡ್ ತನ್ನ ಸಹೋದರರ ಮೇಲೆ ಪ್ರತೀಕಾರವೆಸಗುವುದು-ಈ ಕಾವ್ಯದ ವಸ್ತು. ಇದನ್ನು ರಚಿಸಿದ ಅಜ್ಞಾತ ಕವಿ ಬಹುಶಃ ಆಸ್ಟ್ರಿಯದ ಯಾವನೋ ಒಬ್ಬ ಹಾಡುಕವಿ (ಮಿನ್‍ಸ್ಟ್ರಲ್) ಆಗಿರಬೇಕು. ಇದರಲ್ಲಿ ಕವಿ ಬರ್ಗಂಡಿಯನ್ನರ ಪೈಕಿ ಜರ್ಮನ್ ಬುಡಕಟ್ಟಿಗೆ ಸೇರಿದ್ದವರು ಐತಿಹಾಸಿಕ ಘಟನೆಯನ್ನು ಹಲವಾರು ವೀರ ಕವನಗಳು ಮತ್ತು ಪುರಾಣ, ಅಖ್ಯಾಯಿಕೆಗಳ ಅಂಶಗಳೊಂದಿಗೆ ಬೆರೆಸಿಬಿಟ್ಟಿದ್ದಾನೆ. ಅತ್ಯಂತ ಜನಪ್ರಿಯವಾದ ಈ ಪುರಾಣ ಕಾವ್ಯ ಅಂದಿನಿಂದಲೂ (ಕೊನೆಯ ಪಕ್ಷ 36 ಬೇರೆ ಬೇರೆ ಪ್ರತಿಗಳಲ್ಲಿ ಉಳಿದುಕೊಂಡಿದ್ದು) ಅನೇಕ ಕವಿಗಳಿಗೆ ಸ್ಫೂರ್ತಿ ನೀಡಿದೆ. ಮಹಾಶಯ ತಿಯೋಡರಿಕ್ ಮತ್ತು 6ನೆಯ ಶತಮಾನದ ತಿರುವಿನಲ್ಲಿ ಇಟಲಿಯನ್ನು ಆಳುತ್ತಿದ್ದ ಗಾತಿಕ್ ದೊರೆ ಡೀಟ್ರಿಕ್ ಫಾನ್ ಬರ್ನ್ ಮುಂತಾದವರ ಜೀವನಕ್ಕೆ ಸಂಬಂಧಿಸಿದಂತೆ ತೋರುವ ಅದ್ಭುತ ರಮ್ಯಕಥೆಗಳು, ಗುಡ್ರನ್ (ಸು. 1210) ಎನ್ನುವ ಇನ್ನೊಂದು ಕಾವ್ಯ-ಇವು ರಾಷ್ಟ್ರವೀರರನ್ನು ಕುರಿತ ಪುರಾಣ ಕಾವ್ಯಗಳ ಪರಂಪರೆಗೆ ಸೇರಿವೆ. ಇವು ಹೆಚ್ಚಾಗಿ ಜರ್ಮನಿಯ ದಕ್ಷಿಣ ಭಾಗದಲ್ಲಿ, ಆಗ್ನೇಯ ಪ್ರದೇಶಗಳಲ್ಲಿ ರಚಿತವಾದವು. ಆದರೆ ಆರ್ಥರ್ ದೊರೆಯ ಜೀವನಕ್ಕೆ ಸಂಬಂಧಿಸಿದ ಒಂದು ರೀತಿಯ ಆಸ್ಥಾನಿಕ ಪುರಾಣ ಕಾವ್ಯಗಳು (ಫ್ರಾನ್ಸಿನ ವಿಶೇಷ ಪ್ರಭಾವದಿಂದ ಪ್ರೇರಿತವಾಗಿ) ಜರ್ಮನಿಯ ದೂರ ಪಶ್ಚಿಮದಲ್ಲಿ ರೂಪ ತಳೆದವು. ಜರ್ಮನಿಯ ಆಸ್ಥಾನಿಕ ಪುರಾಣ ಕಾವ್ಯಗಳನ್ನು ಬರೆದವರಲ್ಲಿ ಹಾರ್ಟ್‍ಮನ್ ಫಾನ್ ಔವೆ, ವುಲ್ಫ್‍ರ್ಯಾಮ್ ಫಾನ್ ಎಸ್ಕೆನ್‍ಬಾಕ್ ಮತ್ತು ಗಾಟ್‍ಫ್ರೀಡ್ ಫಾನ್ ಸ್ಟ್ರ್ಯಸ್‍ಬರ್ಗ್ ಅತ್ಯಂತ ಪ್ರಮುಖ ಕವಿಗಳು. ಇವರು 1190ರಿಂದ 1210ರವರೆಗಿನ ಅವಧಿಯಲ್ಲಿ ಕಾವ್ಯರಚನೆ ಮಾಡಿದರು. ಹಾರ್ಟ್‍ಮನ್ನನ ಎರಿಕ್ ಮತ್ತು ಐವೈನ್ ಕಾವ್ಯಗಳು 12ನೆಯ ಶತಮಾನದ ಫ್ರೆಂಚ್ ಕವಿ, ಕ್ರೇಷಿಯನ್‍ದ ಟ್ರಾಯ್‍ನ ಎರಡು ಬೇರೆಬೇರೆ ಕಾವ್ಯಗಳ ಆಧಾರದ ಮೇಲೆ ರಚಿತವಾಗಿವೆ. ವಿಭಿನ್ನ ರೀತಿಯ ಕರ್ತವ್ಯ ನಿಷ್ಠೆಯನ್ನು ಪ್ರತಿನಿಧಿಸುವ ಇಬ್ಬರು ವ್ಯಕ್ತಿಗಳು ಎದುರಿಸುವ ಸಂಘರ್ಷವೇ ಈ ಕಾವ್ಯಗಳ ವಸ್ತು. ಎನಿಟೆಯನ್ನು ಮದುವೆಯಾಗಿ ಸುಖದಿಂದಿರುವ ಎರಿಕ್ ಶ್ರೀಮಂತವೀರನಾಗಿ ತಾನು ಮಾಡಬೇಕಾಗಿದ್ದ ವೀರ ಸಾಹಸಗಳನ್ನು ನಿರ್ಲಕ್ಷಿಸುತ್ತಾನೆ. ತದ್ವಿರುದ್ಧವಾಗಿ ಐವೈನ್ ಎರಿಕ್ ನಡವಳಿಕೆಯಿಂದ ಮುನ್ನೆಚ್ಚರಗೊಂಡು, ತನ್ನ ಪತ್ನಿ ಲಾಡೀನಳನ್ನು ಆಗಲಿ ಒಂದು ವರ್ಷದ ಅನಂತರ ಹಿಂದಿರುಗುವ ವಾಗ್ದಾನವಿತ್ತು ಹೊರಟುಹೋಗುತ್ತಾನೆ. ಆ ಅವಧಿ ಕಳೆದ ಮೇಲೂ ತನ್ನ ಕರ್ತವ್ಯದಲ್ಲಿ ಮಗ್ನನಾಗಿದ್ದ ಐವೈನ್, ಕೊಟ್ಟ ಮಾತಿನಂತೆ ಹಿಂದುರುಗಿ ಬರುವುದಿಲ್ಲ. ಇಬ್ಬರೂ ತಮ್ಮ ತಮ್ಮ ದೋಷಗಳಿಗೆ ಪ್ರಾಯಶ್ಚಿತ ಮಾಡಿಕೊಂಡಮೇಲೆ ನಿಜವಾದ ಕರ್ತವ್ಯ ನಿಷ್ಠೆ ಎಂದರೇನು ಎಂಬುದನ್ನು ಅರಿತುಕೊಳ್ಳುತ್ತಾರೆ. ಯಾವುದರಲ್ಲೂ ಹಾಳತ ತಪ್ಪಬಾರದು, ಎಲ್ಲದರಲ್ಲೂ ಇತಿಮಿತಿಬೇಕು-ಎನ್ನುವ ಔಚಿತ್ಯ ಪ್ರಜ್ಞೆಯೇ ಈ ಕಾವ್ಯಗಳಲ್ಲಿ ಪ್ರತಿಪಾತವಾಗಿರುವ ನೀತಿ. ಇದು ಮಧ್ಯ ಹೈ ಜರ್ಮನ್ ನೀತಿತತ್ತ್ವದ ಒಂದು ಮುಖ್ಯ ಅಂಶ. ದರ್ ಆರ್ಮಿ ಹೈನ್ರಿಕ್ (ಬಡ ಹೆನ್ರಿ) ಎನ್ನುವ ಕವನಗಳಲ್ಲಿ ಹಾರ್ಟ್‍ಮನ್ ದೇವಮಾನವ ಸಂಬಂಧವನ್ನು ಚಿತ್ರಿಸಿದ್ದಾನೆ. ಒಬ್ಬ ಪುಟ್ಟ ಹುಡುಗಿಯ ನಿಷ್ಕಪಟ ಭಕ್ತಿಯಿಂದಾಗಿ ಶ್ರೀಮಂತ ವೀರನೊಬ್ಬ ಹೇಗೆ ಕುಷ್ಠರೋಗದಿಂದ ಗುಣಮುಖನಾಗುತ್ತಾನೆಂಬುದು ಈ ಕವನದ ವಸ್ತು. ವುಲ್ಫ್ ರ್ಯಾಮ್ ಫಾನ್ ಎಸ್ಕೆನ್‍ಬಾಕ್‍ನ ಪರ್ಸಿವಲ್ ಆಸ್ತಾನಿಕ ಪುರಾಣ ಕಾವ್ಯಗಳಲ್ಲಿ ಅತ್ಯಂತ ಶ್ರೇಷ್ಠ ಕೃತಿ. ಮನುಷ್ಯ ಮತ್ತು ದೇವರ ನಡುವಣ ಸಂಬಂಧದಲ್ಲಿ ಮನುಷ್ಯ ನಡೆಸುವ ಸತ್ಯಾನ್ವೇಷಣೆ ಈ ಕವನದ ವಸ್ತು. ಇದನ್ನು ಕವಿ ಅತ್ಯಂತ ಸೂಕ್ಷ್ಮವಾಗಿ, ಬೃಹತ್ ಪ್ರಮಾಣದಲ್ಲಿ ನಿರ್ವಹಿಸಿದ್ದಾನೆ. ಇದರಲ್ಲಿ ಮೊಟ್ಟಮೊದಲು ಹಮ್ಮು ಮತ್ತು ವ್ಯಥೆಗಳಿಗೆ ಸಿಕ್ಕಿ ಸೋತು ಪರಿತಪಿಸುವ ನಿಷ್ಕಪಟ ಹೃದಯಿಯಾದ ಹುಂಬನೊಬ್ಬ ಆ ಮೇಲೆ ವಿಚಾರಮತಿಯೂ ಸಾಹಸಿಯೂ ಆಗಿ, ದಿವ್ಯ ಪಾತ್ರೆಯ ಪಾಲಕನಾಗಿ ವಿಕಾಸಗೊಳ್ಳುವ ಕಥೆಯಿದೆ. ಗಾಟ್‍ಫ್ರೀಡ್ ಫಾನ್ ಸ್ಟ್ರ್ಯಾಸ್‍ಬರ್ಗ್ ತನ್ನ ಟ್ರಿಸ್ಟಾನ್ ಎನ್ನುವ ಕವನದಲ್ಲಿ ಆದರ್ಶಪ್ರೇಮದ ಉತ್ಕøಷ್ಟತೆಯನ್ನು ಚಿತ್ರಿಸಿದ್ದಾನೆ. ಜರ್ಮನ್ ಸಾಹಿತ್ಯದಲ್ಲಿ ಪ್ರೇಮದ ದುರಂತವನ್ನು ಚಿತ್ರಿಸುವ ಮೊಟ್ಟಮೊದಲ ಕಥೆ ಅದು. ಈ ಮೂವರು ಸಾಹಿತಿಗಳೂ ತದನಂತರ ಅನೇಕ ಚಿಕ್ಕ ಪುಟ್ಟ ಕವಿಗಳ ಮೇಲೆ ವ್ಯಾಪಕ ಪ್ರಭಾವ ಬೀರಿದರು. ಇವರನ್ನು ಅನುಕರಿಸಿ ಹಲವರು ಅನೇಕ ಆಸ್ಥಾನಿಕ ಪುರಾಣ ಕಾವ್ಯಗಳನ್ನು ಬರೆದರಾದರು ಯಾರೂ ಈ ಅಗ್ರಗಣ್ಯರನ್ನು ಮೀರಿಸುವ ಮಟ್ಟಕ್ಕೆ ಏರಲಿಲ್ಲ. ಆದರೆ 1280ರ ಹೊತ್ತಿಗೆ ಆಗಲೇ ವೆರ್ನ್‍ಹರ್ ಡೆರ್ ಗಾರ್ಟ್‍ನರ್ ತನ್ನ ಮೈಯರ್ ಹೆಲ್ಮ್‍ಬ್ರೆಕ್ಟ್ (ರೈತ ಹೆಲ್ಮ್ ಬ್ರೆಕ್ಟ್) ಎಂಬ ಪುರಾಣ ಕಾವ್ಯದಲ್ಲಿ, ಅವನತಿಗೆ ಗುರಿಯಾಗುತ್ತಿರುವ ಊಳಿಗಮಾನ್ಯ ಸಮಾಜದ (ವ್ಯೂಡಲ್) ಸ್ವಚ್ಛಂದತೆಯನ್ನೂ ಹಿಂಸಾತ್ಮಕ ಪ್ರವೃತ್ತಿಯನ್ನೂ ಯಥಾರ್ಥವಾಗಿ ಚಿತ್ರಿಸಿ ಆಸ್ಥಾನಿಕ ಸಾಹಿತ್ಯದ ಮುಕ್ತಾಯವನ್ನು ಘೋಷಿಸಿದ.
ಮಿನ್ನೆಸಾಂಗ್ ಎನ್ನುವ ಶಬ್ದ ಮಧ್ಯ ಹೈ ಜರ್ಮನ್ ಸಾಹಿತ್ಯದ ಭಾವಗೀತೆಯ ಸಮಗ್ರ ಪ್ರಕಾರಕ್ಕೇ ಅನ್ವಯಿಸುತ್ತದೆ. ಅದರಲ್ಲಿ ಮೂರು ಮುಖ್ಯ ರೂಪಗಳಿವೆ. ಲೀಟ್ ಎನ್ನುವುದು ವ್ಯಕ್ತಿ ನಿಷ್ಠ ಭಾವನೆಗಳನ್ನು ರೂಪಿಸುತ್ತದೆ. ಹೆಚ್ಚು ವ್ಯವಸ್ಥಿತ ರಚನೆಯಿಲ್ಲದ, ಧಾರ್ಮಿಕ ಭಾವಗೀತೆಯಂತಿರುವ ಲೈಕ್ ಮತ್ತು ರಾಜಕೀಯ, ನೀತಿಬೋಧಕ, ಜಿಜ್ಞಾಸೆಗಳನ್ನು ವಸ್ತುವಾಗುಳ್ಳ ಸ್ಪ್ರೂಕ್-ಮಿನ್ನ್ ಸಾಂಗಿನ ಉಳಿದ ಎರಡು ರೂಪಗಳು, ಕವಿಗಳು ತಮ್ಮ ರಚನೆಗಳನ್ನು ತಾವೇ ಹಾಡುವುದು ಆಗಿನ ಪದ್ಧತಿಯಾಗಿತ್ತು. ಪಿಟೀಲು ಹಾರ್ಪ್ ಮುಂತಾದ ವಾದ್ಯಗಳನ್ನು ನುಡಿಸುವುದು ಕವಿಯ ಶಿಕ್ಷಣದ ಭಾಗವಾಗಿತ್ತು. ಹೊಸ ಹೊಸ ಶಬ್ದ ಪುಂಜಗಳನ್ನು ರಚಿಸಿ ಸಂಗೀತಕ್ಕೆ ಅಳವಡಿಸುವುದು, ಬೇರೆಯವರು ರಚಿಸಿದುದನ್ನು ಅನುಕರಣೆ ಮಾಡದಿರುವುದು, ಇವು ಕವಿಯ ವೃತ್ತಿಗೆ ಹೆಮ್ಮೆ ತರುವ ವಿಷಯವಾಗಿದ್ದವು. ಭಾವ ಗೀತೆಗಳನ್ನು ಬರೆದ ಜರ್ಮನಿಯ ಅತ್ಯುನ್ನತ ಕವಿಗಳಲ್ಲಿ ಒಬ್ಬನಾದ ವಾಲ್ಟರ್ ಫಾನ್ ಡೆರ್ ಫೋಗೆಲ್‍ವೈಡೆ ಮಿನ್ನೆಸಾಂಗ್ ಪ್ರಭೇದದ ಉತ್ಕøಷ್ಟ ಲಕ್ಷಣಗಳನ್ನು ಸಾಧಿಸುವ ಶ್ರೇಷ್ಠ ಸಾಹಿತಿ, ಸರಳ ಹಾಗೂ ಉನ್ನತ ಪ್ರೇಮ ಕವನಗಳನ್ನೂ ಧಾರ್ಮಿಕ ಕಾವ್ಯಗಳನ್ನೂ ರಾಜಕೀಯ ಮತ್ತು ದೇಶಭಕ್ತಿ ಗೀತೆಗಳನ್ನೂ ಬರೆಯುವುದರಲ್ಲಿ ನಿಷ್ಣಾತನೆನಿಸಿಕೊಂಡ. ಸು. 1170ರಲ್ಲಿ ಹುಟ್ಟಿದ ಈತ 1230ರಲ್ಲಿ ಕಾಲವಾದ. ತನ್ನ ಕವನಗಳಲ್ಲಿ ಈತ ಜರ್ಮನಿಯ ಪ್ರಭುಗಳನ್ನು ಪ್ರಶಂಸಿಸಿ, ಲೌಕಿಕ ಆಸೆಗಳಿಗೆ ಬಾಯಿಬಿಡುವ ಪೋಪ್ ಗುರುಗಳನ್ನು ಖಂಡಿಸುತ್ತ ಜರ್ಮನಿಯ ಉದ್ದಗಲದಲ್ಲಿ ಸಂಚರಿಸಿದ. ಈತ ಜರ್ಮನ್ ಸಾಹಿತ್ಯ ಚರಿತ್ರೆಯಲ್ಲಿ ಮೊಟ್ಟಮೊದಲ ಒಬ್ಬ ರಾಜಕೀಯ ಕವಿ.
ಹದಿನೈದು ಮತ್ತು ಹದಿನಾರನೆಯ ಶತಮಾನಗಳು
ಬದಲಾಯಿಸಿ15ನೆಯ ಶತಮಾನ ಜನಪದೀಯ ಸಾಹಿತ್ಯದ ಕಾಲ. ಧಾರ್ಮಿಕ ವಸ್ತುಗಳನ್ನು ಬಳಸಿಕೊಂಡ ನೀತಿಪ್ರಧಾನವಾದ ಮಿಸ್ಟರಿ ಮತ್ತು ಮೊರ್ಯಾಲಿಟಿ ನಾಟಕಗಳು ದೇಶದ ಮೂಲೆಮೂಲೆಯಲ್ಲಿನ ಜನರ ನಾಟಕಾಸಕ್ತಿಯನ್ನು ಕೆರಳಿಸಿದವು. ಅವು ಸಾಮಾನ್ಯ ಜನರಿಗೆ ಬೈಬಲ್ ಕಥೆಗಳಲ್ಲಿನ ಮುಖ್ಯ ಪಾತ್ರಗಳ ಪರಿಚಯವಾಗುವಂತೆ ಮಾಡಿದವು. ಜನಪದ ಹಾಡುಗಳು ಹುಲುಸಾಗಿ ಬೆಳೆದವು ; ಪ್ರೇಮ ಮತ್ತು ಪ್ರಕೃತಿ, ಯುದ್ಧ, ಸಾವು ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಹಾಡುಗಳು, ಧಾರ್ಮಿಕ ಭಾವಗೀತೆಗಳು, ಪುರಾಣೀತಿಹಾಸಗಳಿಗೆ ಸಂಬಂಧಿಸಿದ ಲಾವಣಿಗಳು ವಿಶೇಷವಾಗಿ ರಚಿತವಾದವು. ಅವು ಕ್ಲಾರಾ ಹೆಟ್ಸರ್ಲಿನ್ಸ್ ಸಾಂಗ್ ಬುಕ್ (1471) ಮುಂತಾದ ಆ ಕಾಲದ ಹಲವು ಕವನಸಂಗ್ರಹಗಳಲ್ಲಿ ಇನ್ನೂ ಅಚ್ಚಳಿಯದೆ ಉಳಿದುಕೊಂಡಿವೆ. ಒಂದೇ ವ್ಯಕ್ತಿಯ ಸುತ್ತಲೂ ಹೆಣೆಯಲಾದ ಹಾಸ್ಯಮಯ ದಂತಕಥೆ (ಷ್ವೆಂಕೆ)ಗಳಲ್ಲಿ ಫಾರರ್ ಫಾನ್ ಕ್ಯಾಲೆನ್‍ಬರ್ಗ್ (ಕ್ಯಾಲೆನ್‍ಬರ್ಗಿನ ಪಾದ್ರಿ. ಮುದ್ರಣ-1473) ಟೆಲ್‍ಯೂಲೆನ್ ಪ್ಪೀಗೆಲ್ (ಮುದ್ರಣ-1515) ಮೊದಲಾದವು ಬಹುಬೇಗ ಜನಪ್ರಿಯತೆ ಗಳಿಸಿದವು. ಜರ್ಮನಿಯ ಗುಟಿನ್‍ಬರ್ಗ್ ಮುದ್ರಣಯಂತ್ರವನ್ನು ಕಂಡುಹಿಡಿಯುವುದಕ್ಕೆ ಮುಂಚೆ ಸಾಹಿತ್ಯದ ಅಮೂಲ್ಯ ಹಸ್ತಪ್ರತಿಗಳು ಸಾಮಾನ್ಯರ ಕೈಗೆ ಎಟುಕುವಂತಿರಲಿಲ್ಲ. ಆದರೆ ಮುದ್ರಣಯಂತ್ರ ಬಂದ ಮೇಲೆ ಸಾಹಿತ್ಯ ಕೃತಿಗಳು ವ್ಯಾಪಕವಾಗಿ ಪ್ರಸಾರಗೊಂಡು ಹೆಚ್ಚು ಜನಪ್ರಿಯವಾದವು. ಮುದ್ರಿತವಾಗುತ್ತಿದ್ದ ಪುಸ್ತಕ ಪುಟಗಳಲ್ಲಿ ಎದ್ದುಕಾಣುತ್ತಿದ್ದ ಒಂದು ಮುಖ್ಯವಸ್ತು ಪಾದ್ರಿಗಳ ನೈತಿಕ ಅವನತಿ. ಅದು ವೈವಿಧ್ಯಮಯವಾದ ವಿಡಂಬನ ರಚನೆಗಳಿಗೂ ಗಹನವಾದ ಧಾರ್ಮಿಕ ಜಿಜ್ಞಾಸೆಗಳಿಗೂ ಪ್ರೇರಣೆ ಒದಗಿಸಿತು. ಸೆಬ್ಯಾಸ್ಟಿಯನ್ ಬ್ರ್ಯಾಂಟ್ ವಿರಚಿತ ನಾರೆನ್‍ಪಿಫ್ (ಗಾಂಪರ ಹಡಗು-1494) ಆತೆರನ ಒಂದು ಪ್ರಖ್ಯಾತ ವಿಡಂಬನ ಕೃತಿ ಅದರಲ್ಲಿ ಆ ಕಾಲದ ಎಲ್ಲ ರೀತಿಯ ದುರಾಚಾರಗಳನ್ನೂ ಕುರಿತ ವ್ಯಂಗ್ಯ ವಿಮರ್ಶೆ ಇದೆ. ಈ ಗ್ರಂಥಕ್ಕೆ ಸಮಗ್ರ ಯೂರೋಪಿನಲ್ಲಿ ವ್ಯಾಪಕ ಖ್ಯಾತಿ ಸಿಕ್ಕು, ಆಮೇಲೆ, ದಡ್ಡರನ್ನು ಕುರಿತ ಗಾಂಪಸಾಹಿತ್ಯಪ್ರಭೇದವೇ ವಿಶಿಷ್ಟವಾಗಿ ರೂಢಿಗೆ ಬಂತು.
1450ರ ಅನಂತರ ಹ್ಯೂಮನಿಸ್ಟ್ (ಮಾನವತಾವಾದದ) ಚಳವಳಿ ಜರ್ಮನ್ ಸಾಹಿತ್ಯದಲ್ಲಿ ಒಂದು ಹೊಸ ಅಂಶಗಳನ್ನು ಸೃಷ್ಟಿಸಿತು. ಸಾಹಿತಿಗಳಲ್ಲಿ ಹಲವರಿಗೆ ವಿಶ್ವವಿದ್ಯಾಲಯದ ವಿದ್ವತ್‍ಗೋಷ್ಠಿಗಳ ಸಂಪರ್ಕವಿದ್ದುದರಿಂದ ಅವರು ಸಂಪೂರ್ಣವಾಗಿ ಲ್ಯಾಟಿನ್ ಭಾಷೆಯಲ್ಲೇ ಬರೆದರು. ಆ ಕೃತಿ ಶಿಲ್ಪಕಲೆಗಳಲ್ಲಿ (ಪ್ಲಾಸ್ಟಿಕ್ ಆರ್ಟ್ಸ್) ಇಡೀ ಯೂರೋಪಿನಲ್ಲೇ ವಿಖ್ಯಾತರೆನಿಸಿಕೊಂಡ ಆಲ್‍ಬ್ರೆಕ್ಟ್ ಡ್ಯೂರರ್ ಮತ್ತು ಹ್ಯಾನ್ಸ್ ಹಾಲ್‍ಬೈನರಂಥ ಉಜ್ವಲ ಚಿತ್ರಕಾರರಿದ್ದರೂ ಪ್ರಾದೇಶಿಕ ಸಾಹಿತ್ಯದಲ್ಲಿ ಉತ್ಕøಷ್ಟ ಲೇಖಕರು ತೀರ ವಿರಳವಾಗಲು ಇದೇ ಕಾರಣ. ಆ ಕಾಲವನ್ನೂ ಅನಂತರದ ಯುಗವನ್ನೂ ಮೈಸ್ಟರ್ ಸ್ಯಾಂಗರ್ ಅಥವಾ ಕರ್ಮಚಾರಿ ಕವಿಗಳ ಯುಗವೆಂದು ಕರೆಯಬಹುದು. ಛಂದೋಬದ್ಧ ಷ್ವೆಂಕೆಗಳನ್ನೂ (ಹಾಸ್ಯಮಯ ದಂತಕಥೆ) ಫಾಸ್ಟ್‍ನಾಕ್ಟ್‍ಪ್ಪೀಲೆಗಳನ್ನೂ (ವಿಡಂಬನ ನಾಟಕ) ಬರೆದ ನ್ಯೂರೆಂಬರ್ಗಿನ ಮೋಚಿ ವೃತ್ತಿಯ ಹ್ಯಾನ್ಸ್ ಸ್ಯಾಚ್ಸ್ (1494-1576) ಕರ್ಮಚಾರಿ ಕವಿಗಳೆನ್ನುವ ಪಂಥದ ಅತ್ಯಂತ ಪ್ರಸಿದ್ಧ ಲೇಖಕ. ಇವರು ಆ ಹೊತ್ತಿಗೆ ಆಗಲೇ ತಮ್ಮ ವೃತ್ತಿಗೆ ಸಂಬಂಧಿಸಿದ ಸಂಘಗಳನ್ನು ರಚಿಸಿಕೊಂಡಿದ್ದರು. ಕಾವ್ಯ ರಚನೆ ಮಾಡುವುದಕ್ಕೂ ಅಂಥ ಸಂಘಗಳನ್ನು ಸ್ಥಾಪಿಸಿ ಉತ್ತಮ ಕಾವ್ಯ ನಿರ್ಮಾಣಕ್ಕೆ ಬೇಕಾದ ಮಾದರಿ, ಪ್ರಮಾಣಗಳನ್ನೂ ಸೂತ್ರಗಳನ್ನೂ ರಚಿಸಬೇಕೆಂಬ ಯೋಚನೆ ಅವರಿಗೆ ಹೊಳೆಯಿತು. ಆ ಕಾಲದ ಅತ್ಯಂತ ಮಹತ್ತ್ವದ ಘಟನೆಯೆಂದರೆ ರೆಫರ್ಮೇಷನ್. ಅನುಭಾವ ಸಿದ್ಧಾಂತ (ಮಿಸ್ಟಿಸಿಸಮ್) ಹಾಗೂ ಮಾನವತಾವಾದಿಗಳು (ಹ್ಯೂಮನಿಸಮ್) ಅದಕ್ಕೆ ದಾರಿ ಹಾಕಿಕೊಟ್ಟವು. ಮೂಲತಃ ಅನುಭಾವ ಸಿದ್ಧಾಂತ ಕ್ರೈಸ್ತಧರ್ಮವನ್ನು ಕುರಿತ ವೈಯಕ್ತಿಕ ವ್ಯಾಖ್ಯಾನವಾದುದರಿಂದ ಅದು ಪ್ರಾಟಿಸ್ಟಂಟ್ ಧರ್ಮ ಎತ್ತಿ ಹಿಡಿಯುವ ವ್ಯಕ್ತಿಸ್ವಾತಂತ್ರ್ಯಕ್ಕೆ ಸಮರ್ಥನೆ ಒದಗಿಸಿತು. ಮಾನವತಾದಿಗಳಲ್ಲಿ ಅತ್ಯಂತ ಶ್ರೇಷ್ಠನಾದ ರಾಡರ್‍ಡ್ಯಾಮಿನ ಎರ್ಮಾಸ್ಮಸ್ (1466-1536) ಜ್ಞಾನಾರ್ಜನೆ ಹಾಗೂ ಚಿಂತನೆಯಲ್ಲಿ ಎಲ್ಲರಿಗೂ ಸಾತಂತ್ರ್ಯವಿರಬೇಕೆಂದು ಹೋರಾಡಿದ. ಮಾರ್ಟಿನ್ ಲೂಥರ್ (1483-1546) ಕ್ರೈಸ್ತಧರ್ಮದ ಕೆಲವು ತತ್ತ್ವಗಳನ್ನು ಟೀಕಿಸಿ ಧರ್ಮಪ್ರಭುಗಳು ನಡೆಸುತ್ತಿದ್ದ ಅನಾಚಾರಗಳ ವಿರುದ್ಧ ಪ್ರತಿಭಟಿಸಿದ; ಆ ಮೂಲಕ ರೆಫರ್ಮೇಷನ್ ಚಳವಳಿಯನ್ನು ಪ್ರಚೋದಿಸಿದ. ಇದು ಜರ್ಮನಿಯ ಸಮಗ್ರ ರಾಜಕೀಯ ಹಾಗು ಸಾಮಾಜಿಕ ಜೀವನದ ಮೇಲೆ ಆಳವಾದ ಪ್ರಭಾವ ಬೀರಿತು. ಲೂಥರ್ ಮೂರು ರೀತಿಯಲ್ಲಿ ಜರ್ಮನ್ ಸಾಹಿತ್ಯದ ಮೇಲೆ ಪ್ರಬಲ ಪ್ರಭಾವ ಬೀರಿದ. ಆತ ತನ್ನ ಬೈಬಲ್ ಭಾಷಾಂತರದಲ್ಲಿ ಶಕ್ತಿಯುತವಾದ ಜನಪ್ರಿಯ ಶೈಲಿಯನ್ನು ರೂಪಿಸಿ (1522-1534) ಮುಂದಿನ ಪೀಳಿಗೆಯ ಜರ್ಮನ್ ಸಾಹಿತಿಗಳಿಗೆ ಒಂದು ಸೊಗಸಾದ ಮಾದರಿಯನ್ನು ಸೃಷ್ಟಿಸಿದ. ಹೊಸ ಹೈ ಜರ್ಮನ್ ಎಂಬ ಸರ್ವಾದರಣೀಯ ಮಟ್ಟದ ಸಾಹಿತ್ಯಕ ಭಾಷೆ ವಿಕಾಸವಾಗುವುದಕ್ಕೆ ಲೂಥರನ ಬೈಬಲ್ ಭಾಷಾಂತರವೇ ಮುಖ್ಯ ಕಾರಣ. ಎರಡನೆಯದಾಗಿ ಪ್ರಾರ್ಥನಾ ಗೀತವನ್ನು ಹಾಡುವ (ಹಿಮ್ ಸಿಂಗಿಂಗ್) ಸಂಪ್ರದಾಯ ಪ್ರಾಟೆಸ್ಟಂಟ್ ಧಾರ್ಮಿಕ ವಿಧಿಯ ಮುಖ್ಯ ಭಾಗವಾಗಿರಬೇಕೆಂಬ ಆಚರಣೆಯನ್ನು ಆತ ಜಾರಿಗೆ ತಂದ. ಸ್ವತಃ ತಾನೇ ಪ್ರಾರ್ಥನಾಗೀತಗಳನ್ನು ರಚಿಸುವುದರ ಮೂಲಕ ಹೊಸದೊಂದು ಸಾಹಿತ್ಯ ಪ್ರಭೇದವನ್ನು ಸೃಷ್ಟಿಸಿದ. ಜರ್ಮನ್ ಸಾಹಿತಿಗಳು ಬೆಳೆಸಿದ ಈ ಪರಂಪರೆಯ ಪ್ರಾರ್ಥನಾಗೀತೆಗಳು ಯೂರೋಪಿನ ಸಾಹಿತ್ಯಕ್ಕೆ ಅವರು ಕೊಟ್ಟ ಶ್ರೇಷ್ಠ ಕೊಡುಗೆಗಳಾಗಿವೆ. ಮೂರನೆಯದಾಗಿ, ಲೂಥರ್ ಬೈಬಲ್ಲಿನ ವಸ್ತುಗಳ ಆಧಾರದ ಮೇಲೆ ನಾಟಕಗಳನ್ನು ಬರೆಯಬಹುದೆಂದು ಸೂಚಿಸಿದ. ಇದರಿಂದಾಗಿ ಹಲವು ಜರ್ಮನ್ ನಾಟಕಕಾರರು ಲೂಥರನ ತತ್ತ್ವಗಳ ಪ್ರಸಾರಕ್ಕಾಗಿ ನಾಟಕ ಮಾಧ್ಯಮವನ್ನು ಬಳಸಿಕೊಂಡು ಮಧ್ಯಯುಗದ ಸಾಂಪ್ರದಾಯಿಕ ನಾಟಕಗಳಿಂದ ತೀರ ಭಿನ್ನವಾದ ಹೊಸ ಕೃತಿಗಳನ್ನು ರಚಿಸಿದರು.
ಹದಿನೇಳನೆಯ ಶತಮಾನ
ಬದಲಾಯಿಸಿಈ ಯುಗವನ್ನು ಬರೋಕ್ ಸಾಹಿತ್ಯದ ಕಾಲವೆನ್ನುತ್ತಾರೆ. ಸಣ್ಣಸಣ್ಣ ರಾಜರುಗಳು ನಿರಂಕುಶ ಪ್ರಭುಗಳಾಗಿದ್ದರು, ಸಾಮಾಜಿಕ ಸ್ಥಿತಿಗತಿಗಳು ಮಾರ್ಪಾಡಾಗುತ್ತಿದ್ದವು. ರಾಜಕೀಯ ಅನಿಶ್ಚಿತತೆಯ ಜೊತೆಗೆ, ಧಾರ್ಮಿಕ ಜಗಳಗಳು ಮೂವತ್ತು ವರ್ಷಗಳ ಯುದ್ಧದ (1618-1648) ಹೊತ್ತಿಗೆ ಅಸಹನೀಯ ಪರಿಸ್ಥಿತಿಗೆ ಬಂದಿದ್ದವು. ಜರ್ಮನಿಯ ಬರೋಕ್ ಸಾಹಿತ್ಯದ ನಾಟಕ, ಪುರಾಣಕಾವ್ಯ, ಭಾವಗೀತೆ ಮುಂತಾದ ಪ್ರಕಾರಗಳಲ್ಲಿ ಕೆಲವು ವಿಶಿಷ್ಟ ಆಶಯಗಳು ರೂಢಿಯಾಗಿ ಕಾಣಿಸಿಕೊಂಡವು. ಇವು 17ನೆಯ ಶತಮಾನದ ಸಮಗ್ರ ಯೂರೋಪಿನ ಸಾಹಿತ್ಯದಲ್ಲೂ ಕಂಡುಬಂದವು. ಅನಿಶ್ಚಿತವಾದ ಜಗತ್ತನ್ನು ಆಳುವವಳು ಅದೃಷ್ಟದೇವತೆ. ಅವಳು ಚಂಚಲಮನಸ್ಸಿನವಳು. ಎಲ್ಲವೂ ಕ್ಷಣಿಕವಾಗಿರುವ ಈ ಲೋಕ ಕಣ್ಣೀರಿನ ಕಣಿವೆ. ಜಗತ್ತಿನ ಲೌಕಿಕ ಸುಖಗಳಿಗೂ ಮರಣಾನಂತರ ಬರುವ ಶಾಶ್ವತ ಮೌಲ್ಯಗಳಿಗೂ ವೈದೃಶ್ಯವಿದೆ-ಇವು ಬರೋಕ್ ಸಾಹಿತ್ಯದಲ್ಲಿ ಆಗಾಗ ಬರುವ ಆಶಯಗಳು. ಬರೋಕ್ ಹುತಾತ್ಮ ಈ ಲೋಕವನ್ನು ನಿಕೃಷ್ಟವಾಗಿ ಕಾಣುತ್ತಾನೆ. ಸಂನ್ಯಾಸಿ ಬೆಬ್ಬುತಿರುಗಿಸಿ ಪಲಾಯನ ಮಾಡುತ್ತಾನೆ. ವಿರಕ್ತನಾದವ ಎಲ್ಲ ಕ್ಲೇಶಗಳನ್ನೂ ದೃಢ ಮನಸ್ಸಿನಿಂದ ತಾಳಿಕೊಳ್ಳುತ್ತಾನೆ-ಎಂಬ ವೈಚಾರಿಕ ವಸ್ತುಗಳು ಎಲ್ಲಕ್ಕಿಂತ ಮಿಗಿಲಾಗಿ ಭಾವಗೀತೆಯಲ್ಲಿ ಅಭಿವ್ಯಕ್ತಿ ಪಡೆದಿವೆ. ಪಾಲ್ ಫ್ಲೇಮಿಂಗ್, ಆ್ಯಂಡ್ರಿಯಾಸ್ ಗ್ರಿಫಿಯಸ್, ಕ್ರಿಶ್ಚನ್ ಫಾನ್ ಹಾಫ್‍ಮನ್ಸ್‍ವಾಲ್‍ಡೊ, ಏಂಜಲಸ್ ಸೈಲೀಷಿಯಸ್ ಮತ್ತು ಫ್ರೀಡ್ರಿಕ್ ಫಾನ್ ಲೋಗೋ ಇವರ ಹೆಸರುಗಳನ್ನು ಇಲ್ಲಿ ಉಲ್ಲೇಖಿಸಬೇಕು. ಇವರೆಲ್ಲರೂ ಆ ಕಾಲದ ಪ್ರಖ್ಯಾತ ಸಾಹಿತಿ ಮಾರ್ಟಿನ್ ಓಪಿಟ್ಸ್‍ನಿಂದ (1597-1639) ಪ್ರಭಾವಿತರಾದರು. ಫ್ರೆಂಚರ ಆಚಾರ ವ್ಯವಹಾರಗಳು, ಫ್ರೆಂಚ್ ಭಾಷೆಯ ಪ್ರಭಾವ, ಜರ್ಮನಿಯ ಶಿಷ್ಟ ಸಾಹಿತ್ಯಕ್ಕೆ ನಿಚ್ಚಳವಾಗಿ ರೂಪುಕೊಟ್ಟಿದ್ದವು. ಆ ಕಾಲದಲ್ಲಿ ಆ ಪ್ರಭಾವಗಳಿಂದ ತಪ್ಪಿಸಿಕೊಂಡು (ಸುಸಂಸ್ಕೃತಗೊಳಿಸಲಾಗಿದ್ದ) ಜರ್ಮನ್ ಭಾಷೆಯನ್ನು ಸಾಹಿತ್ಯಾಭಿವ್ಯಕ್ತಿಯ ಮಾಧ್ಯಮವಾಗಿ ಬಳಸಿಕೊಳ್ಳಲು ಸಾಧ್ಯವೆಂದು ತೋರಿಸಿಕೊಟ್ಟವ ಓಪಿಟ್ಸ್. ಅಂದಿನ ನಾಟಕದ ವಿಷಯವಾಗಿ ಹೇಳುವುದಾದರೆ ಅದು ಕೇವಲ ಸಾಹಿತ್ಯಪ್ರಕಾರವಾಗಿತ್ತೇ ಹೊರತು ಜನತೆಯೊಡನೆ ಸಂಪರ್ಕ ಪಡೆದಿರಲಿಲ್ಲ. ಆ ಮೇಲಿನ ಪೀಳಿಗೆಗಳ ಮೇಲೆ ಯಾವ ವರ್ಚಸ್ಸನ್ನೂ ಬೀರಿರಲಿಲ್ಲ. ಆದರೆ ಕಾದಂಬರಿಗಳ ವಿಷಯ ಮಾತ್ರ ಬೇರೆಯೇ ಆಗಿತ್ತು. ಆ ಕಾಲದ ಕಾದಂಬರಿಗಳಲ್ಲಿ ಗ್ರಿಮೆಲ್ಸ್ ಹೌಸನ್ ಬರೆದ ಡೆರ್ ಅಬೆಂಟಾಯರ್‍ಲಿಖೆ ಜಿûಂಪ್ಲಿಟ್ಸೆಸಿಮಸ್ ಎನ್ನುವ ಕೃತಿ ಜರ್ಮನ್ ಸಾಹಿತ್ಯದಲ್ಲಿ ಒಂದು ಮಹತ್ತ್ವದ ಕಾದಂಬರಿ ಎನಿಸಿಕೊಂಡಿತು. (ಅಲೆಮಾರಿ ಕಥಾನಾಯಕನ ವಿವಿಧ ಸಾಹಸಗಳನ್ನು ವರ್ಣಿಸುವ) ಪಿಕಾರೆಸ್ಕ್ ಪ್ರಕಾರದ ಕಾದಂಬರಿಯಂತಿರುವ ಈ ಕೃತಿಯಲ್ಲಿ ಮೂವತ್ತುವರ್ಷಗಳ ಯುದ್ಧ ನಡೆಯುತ್ತಿದ್ದ ಕಾಲದ ಜರ್ಮನಿಯ ಕಡುವಾಸ್ತವಿಕ ಚಿತ್ರಣವಿದೆ.
ಹೊಸ ಅರಿವಿನ ಕಾಲ
ಬದಲಾಯಿಸಿಹದಿನೇಳನೆಯ ಶತಮಾನದ ಜೀವನದಲ್ಲಿ ಮತಧರ್ಮಗಳೇ ಪ್ರಬಲ ಅಂಶಗಳಾಗಿದ್ದವು. ಆದರೆ ಹೊಸ ಅರಿವಿನ ಕಾಲದಲ್ಲಿ ವಿಭಿನ್ನ ಪ್ರತಿಕ್ರಿಯೆಗಳುಂಟಾದುವು. ಅಲೌಕಿಕ ದಿವ್ಯದರ್ಶನದ ಸಹಾಯವಿಲ್ಲದೆ ಕೇವಲ ವಿವೇಚನಾಶಕ್ತಿಯಿಂದ ಮನುಷ್ಯ ಪ್ರಪಂಚವನ್ನು ಅರಿಯಬಹುದು ಎನ್ನುವಂತಾಯಿತು. ಅನೇಕರು ಉದ್ಧತ ಧರ್ಮದ ಸಾಂಪ್ರದಾಯಿಕ ಅಧಿಕಾರತೆಯನ್ನು ತಿರಸ್ಕರಿಸಿ ಮನುಷ್ಯನ ಪರಿಪೂರ್ಣತೆ ಸಾಧ್ಯವೆಂದು ಹೇಳುವ ಆಶಾವಾದವನ್ನು ತಳೆದರು. ಜರ್ಮನಿಯ ಮೊಟ್ಟಮೊದಲಿನ ಶ್ರೇಷ್ಠ ದಾರ್ಶನಿಕರಲ್ಲೊಬ್ಬನಾದ ಲೈಬ್ನಿಟ್ಸ್ (1646-1716) ಮನುಷ್ಯನ ಗ್ರಹಿಕೆಗೆ ಸಾಧ್ಯವಾದ ಲೋಕಗಳಲ್ಲಿ ಈ ಪ್ರಪಂಚವೇ ಅತ್ಯಂತ ಶ್ರೇಷ್ಠವಾದುದೆಂದು ಹೇಳಿದ. ಲೈಪ್‍ಸಿಂಗ್‍ನಲ್ಲಿ ಪ್ರಾಧ್ಯಾಪಕನಾಗಿದ್ದ ಗಾಟ್‍ಷೆಡ್ ತನ್ನ ಕ್ರಿಟಿಷೆ ಡಿಕ್ಟ್‍ಕುನ್‍ಸ್ಟ್ (1730) (ಕಾವ್ಯದ ವಿಮರ್ಶನಾಕಲೆ) ಎಂಬ ಗ್ರಂಥದಲ್ಲಿ ವಿವೇಚನೆಯ ಆಧಾರದ ಮೇಲೆ ಎಲ್ಲ ಸಾಹಿತ್ಯ ಪ್ರಕಾರಗಳನ್ನೂ ನಿಯಂತ್ರಿಸಲು ಪ್ರಯತ್ನಿಸಿದ. ಫ್ರೆಂಚ್ ಕ್ಲಾಸಿಕಲ್ ಪರಂಪರೆಯ ಪ್ರಮಾಣಗಳನ್ನು ಅನುಸರಿಸಬೇಕು, ಎನ್ನುವುದು ಅವನ ಸೂತ್ರವಾಗಿತ್ತು. ಆದರೆ ಅದೇ ಕಾಲದಲ್ಲಿ ಫ್ರೆಂಚ್ ಸಾಹಿತ್ಯಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಸಾಹಿತ್ಯ ಅತಿಯಾದ ವರ್ಷಸ್ಸು ಬೀರಿ ಫ್ರೆಂಚ್ ಮಾದರಿಗಳು ಮೊಲೆಗುಂಪಾಗುವಂತೆ ಮಾಡಿತು. ಗಾಟ್‍ಷೆಡ್‍ನ ವೈಚಾರಿಕತೆಗೆ ಪ್ರತಿಕ್ರಿಯೆಯಾಗಿ ಸ್ವಿಟ್ಸರ್ಲೆಂಡಿನ ವಿದ್ವಾಂಸರುಗಳಾದ ಬಾಡ್ಮರ್ ಮತ್ತು ಬ್ರೈಟಿಂಗರ್ ಇಬ್ಬರೂ ಮಿಲ್ಟನನ ಪ್ಯಾರಡೈಸ್ ಲಾಸ್ಟ್ ಕಾವ್ಯವನ್ನು ಆಧಾರವಾಗಿಟ್ಟುಕೊಂಡು, ಕಾವ್ಯರಚನೆಯಲ್ಲಿ ಪ್ರತಿಭೆ ಮತ್ತು ಸ್ಫೂರ್ತಿಯ ಚಲನೆಗೂ ಅವಕಾಶವಿರಬೇಕೆಂದು ವಾದಿಸಿದರು. ಹದಿನೆಂಟನೆಯ ಶತಮಾನದ ಅತಿಶ್ರೇಷ್ಠ ಕವಿ ಕ್ಲಾಪ್‍ಸ್ಟಾಕ್ (1724-1803) ತನ್ನ ಡೆರ್ ಮೆಸಯಾಸ್‍ನಲ್ಲಿ (1748) ಪ್ಯಾರಡೈಸ್ ಲಾಸ್ಟ್ ಕಾವ್ಯವನ್ನೇ ಮಾದರಿಯಾಗಿ ಅನುಸರಿಸಿದ. ದೇಶಪ್ರೇಮ ಮುಂತಾದ ಭಾವುಕ ವಿಚಾರಗಳೇ ಹೆಚ್ಚಾಗಿರುವ ಅವನ ಹಾಡುಗಳು ಮತ್ತು ಪ್ರಗಾಥಗಳು ಅವನಿಗೆ ಅಪಾರ ಜನಪ್ರಿಯತೆ ಗಳಿಸಿಕೊಟ್ಟವು. ಪ್ರಕೃತಿ ಸೃಷ್ಟಿಕರ್ತನ ವಿವೇಚನೆಯ ಅಭಿವ್ಯಕ್ತಿಯಾಗಿದ್ದು ಅದು ಭಗವಂತ ಉದ್ದೇಶಿಸಿದ ವ್ಯವಸ್ಥೆ ಹಾಗೂ ಸಾಮರಸ್ಯಗಳ ಪ್ರತೀಕವಾಗಿದೆ ಎನ್ನುವ ವಿಚಾರ ಅಂದಿನ ಕಾವ್ಯಗಳಲ್ಲಿ ಹಾಸುಹೊಕ್ಕಾಗಿ ಬಂದಿದೆ. ಇದಕ್ಕೆ ಉತ್ತಮ ಉದಾಹರಣೆಗಳೆಂದರೆ ಹಾಲರ್‍ನ ಡೀ ಆಲ್ಪೆನ್ (ಆಲ್ಪ್ಸ್ ಪರ್ವತಗಳು 1729) ಮತ್ತು ಇವಾಲ್ಡ್ ಫಾನ್ ಕ್ಲೈಸ್ಟ್‍ನ ಡೆರ್ ಫ್ರ್ಯೂಲಿಂಗ್ (ವಸಂತ ಋತು 1749). ಜಿ. ಇ. ಲೆಸಿಂಗ್ (1729-1781) ನಿಸ್ಸಂದೇಹವಾಗಿ ಆ ಯುಗದ ಅತ್ಯುನ್ನತ ಲೇಖಕ. ಜರ್ಮನ್ ಸಾಹಿತ್ಯ ಆಗ ಸಾಧಿಸಿದ ಮಹತ್ತ್ವದ ಪ್ರಗತಿಗೆ ಅವನೇ ಪ್ರೇರಕಶಕ್ತಿ. ಆತ ತನ್ನ ವಿಮರ್ಶಾತ್ಮಕ ಲೇಖನಗಳಲ್ಲಿ ಕ್ಲಾಸಿಕ್ ಎಂಬ ಮಾತು ಫ್ರೆಂಚ್ ಕ್ಲಾಸಿಕಲ್ ತತ್ತ್ವಕ್ಕೆ ಸಂಬಂಧಿಸಿದುದಲ್ಲ-ಗ್ರೀಕ್ ಕಲೆ ಮತ್ತು ಸಾಹಿತ್ಯಗಳಿಂದ ಅದರ ಅರ್ಥವನ್ನು ಗ್ರಹಿಸಬೇಕು. ಎಂದು ವಾದಿಸಿ ಫ್ರೆಂಚ್‍ನಿಯೋ ಕ್ಲಾಸಿಕಲ್ ನಾಟಕಕಾರರಿಗಿಂತ ಷೇಕ್ಸ್‍ಪಿಯರ್ ಅತ್ಯಂತ ಶ್ರೇಷ್ಠನೆಂಬುದನ್ನು ಒತ್ತಿ ಹೇಳಿದ. ಲೆಸಿಂಗ್ ಬರೆದ ಪುರೋಗಾಮಿ ನಾಟಕಗಳು ವಿಶೇಷ ವರ್ಚಸ್ಸಿನಿಂದ ಕೂಡಿದ್ದು ಜರ್ಮನಿಯ ರಂಗಭೂಮಿಯನ್ನು ಪುನರುಜ್ಜೀವನ ಗೊಳಿಸಿದವು. ಮಿಸ್ ಸಾರಾ ಸ್ಯಾಂಪ್ಸನ್ (1755) ಎಂಬುದು ಇಂಗ್ಲಿಷ್ ಕೃತಿಗಳನ್ನು ಅನುಸರಿಸಿ ಬರೆದ, ಗ್ರಹಕೃತ್ಯದ ಜೀವನಕ್ಕೆ ಸಂಬಂಧಿಸಿದ ದುರಂತನಾಟಕ. ಮಿನಾ ಫಾನ್ ಬಾರ್ನ್‍ಹೆಲ್ಮ್ (1767)ಎನ್ನುವ ನಾಟಕವನ್ನು ಬರೆದು ಲೆಸಿಂಗ್ ವಿನೋದನಾಟಕ ಕ್ಷೇತ್ರದಲ್ಲಿ ಅನನ್ಯ ಸ್ಥಾನಗಳಿಸಿದೆ. ಎಮೀಲಿಯ ಗಲೋಟ್ಟಿ (1772) ಜರ್ಮನ್ ಭಾಷೆಯಲ್ಲಿ ಮೊಟ್ಟಮೊದಲನೆಯ ಕ್ಲಾಸಿಕಲ್ ದುರಂತನಾಟಕ. ನ್ಯಾಥನ್ ಡೆರ್ ವೈಸೆ (ವಿವೇಕಸ್ಥ ನ್ಯಾಥನ್-1779) ಎಂಬ ಇನ್ನೊಂದು ನಾಟಕದಲ್ಲಿ ಬದುಕಿನಲ್ಲಿ ವಿವೇಚನಾಯುತವಾದ ಅರಿವು, ಅಹಿಷ್ಣತೆಗಳೀರಬೇಕೆಂಬ ವಿಚಾರವನ್ನು ಲೆಸಿಂಗ್ ಪ್ರತಿಪಾದಿಸಿದ್ದಾನೆ. ಇಷ್ಟಲ್ಲದೆ ಆತ ಬರೆದ ಅನೇಕ ಕಟ್ಟುಕಥೆಗಳು, ಎಪಿಗ್ರಾಮುಗಳು, ವಿಡಂಬನೆಗಳು-ಮುಂತಾದ ಬೇರೆಬೇರೆ ಪ್ರಕಾರದ ನೀತಿಪ್ರಧಾನ ಕೃತಿಗಳನ್ನು ಹೊಸ ಅರಿವಿನ ಯುಗದ ಜನರು ಬಹಳವಾಗಿ ಮೆಚ್ಚಿಕೊಂಡರು. ಕಾದಂಬರಿಕಾರರಲ್ಲಿ ವೀಲ್ಯಾಂಡನ ಹೆಸರು ಉಲ್ಲೇಖಾರ್ಹ. ಆತ ಅಗೆಥಾನ್ (1766) ಎಂಬ ಮನೋವೈಜ್ಞಾನಿಕ ಕಾದಂಬರಿಯನ್ನು ಡೀ ಅಬ್‍ಡೆರಿಟನ್ (ಅಬ್‍ಡೆರೀಟನಿಂದ ಬಂದವರು 1774) ಎಂಬ ಹಾಸ್ಯಭರಿತ ವಿಡಂಬನೆಯನ್ನು ಬರೆಯುವುದರ ಜೊತೆಗೆ ಷೇಕ್ಸ್‍ಪಿಯರ್‍ನ 22 ನಾಟಕಗಳನ್ನು ಅನುವಾದ ಮಾಡಿದ.
ಗಯಟೆಯ ಯುಗ
ಬದಲಾಯಿಸಿಈ ಯುಗದ ಮೂರು ಘಟ್ಟಗಳನ್ನು ಸ್ಟುರ್ಮ್‍ಉಂಟ್ ಡ್ರಾಂಗ್, ಕ್ಲಾಸಿಸಿಸಮ್ ಮತ್ತು ರೊಮ್ಯಾಂಟಿಕ್ ಕಾಲ ಎಂಬುದಾಗಿ ವಿಭಜಿಸಬಹುದು. ಇದರಲ್ಲಿ ಮೊದಲಿನ ಎರಡು ಘಟ್ಟಗಳು ಒಂದೇ ಪೀಳಿಗೆಯ ಸಾಹಿತಿಗಳ ಸಾಧನೆಯನ್ನು ಪ್ರತಿನಿಧಿಸುವಂತಿದ್ದು, ಮೂರನೆಯ ಘಟ್ಟ ಹೊಸ ತಲೆಮಾರಿನ ಸಾಹಿತಿಗಳನ್ನು ಒಳಗೊಂಡಿದೆ. ಪ್ರಕೃತಿ, ಪ್ರತಿಭೆ ಮತ್ತು ಸ್ವೋಪಜ್ಞತೆ-ಇವು ಸ್ಟುರ್ಮ್ ಉಂಟ್ ಡ್ರಾಂಗ್ ಕಾಲದ ಘೋಷಣೆಗಳಾಗಿದ್ದವು. ವಿಚಾರ ತತ್ತ್ವವನ್ನು (ರ್ಯಾಷನಲಿಸಮ್) ವಿರೋಧಿಸುವುದು ಅದರ ಉದ್ದೇಶವಾಗಿತ್ತು. ಈ ತತ್ತ್ವಗಳು ಮುಖ್ಯವಾಗಿ ನಾಟಕಪ್ರಕಾರದಲ್ಲಿ ವಿಶಿಷ್ಟ ಅಭಿವ್ಯಕ್ತಿ ಪಡೆದವು. ನಾಟಕದಲ್ಲಿ ವಸ್ತುವಿಗಿಂತ, ರೂಪಕ್ಕಿಂತ, ಬೃಹದಾಕಾರದ ಭಾವೋದ್ರೇಕಗಳಿಂದ ತುಂಬಿದ ಪಾತ್ರಗಳಿಗೆ ಹೆಚ್ಚು ಗಮನ ಕೊಡಲಾಯಿತು. ಇಂಥ ನಾಟಕಗಳಲ್ಲಿ ಷೇಕ್ಸ್‍ಪಿಯರನ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಬಹುದು. ಇದಕ್ಕೆ ಉದಾಹರಣೆಯಾಗಿ ನಾವು ಗಯಟೆಯ ಗಾಟ್ಸ್ ಫಾನ್ ಬರ್ಲಿಕಿಂಗೆನ್ (1773), ಷಿಲ್ಲರನ ಡೀ ರಾಯ್‍ಬರ್ (ದರೋಡೆಗಾರರು 1781) ಮತ್ತು ಲೆಂಟ್ಸ್ ಕ್ಲಿಂಗರ್ (ಸ್ಟುರ್ಮ್ ಉಂಟ್ ಡ್ರಾಂಗ್ ಚಳವಳಿ ಹೆಸರು ಬಂದದ್ದು ಕ್ಲಿಂಗರನ ಒಂದು ನಾಟಕದ ಶೀರ್ಷಿಕೆಯಿಂದ) ಲೈಸೆವಿಟ್ಸ್ ಮತ್ತು ಇತರ ಸಾಹಿತಿಗಳ ಕೃತಿಗಳನ್ನು ನೋಡಬಹುದು. ಕಾದಂಬರೀ ಪ್ರಕಾರದಲ್ಲಿ ಗಮನಾರ್ಹವೆನಿಸಿಕೊಂಡ, ಗಯಟೆಯ ಡೀ ಲೈಡನ್ ಡೆಸ್ ಯುಂಗನ್ ವರ್ದರ್ (ಯುವಕ ವರ್ದರನ ದುಃಖಗಳು)-ಅವನನ್ನು ವಿಶ್ವವಿಖ್ಯಾತನನ್ನಾಗಿ ಮಾಡಿತು. ನಾಗರಿಕತೆಯ ವಿಷಯವಾಗಿ ಅತೃಪ್ತಿ, ಪ್ರಕೃತಿಯಲ್ಲಿ ಹಾಗೂ ವ್ಯಕ್ತಿಯ ಭಾವುಕತೆಯಲ್ಲಿ ನಂಬಿಕೆ-ಈ ಅಂಶಗಳಿಂದಾಗಿ ಕಾದಂಬರಿಯ ನಾಯಕ ಐಹಿಕ ಬೇಸರಕ್ಕೆ (ವೆಲ್ಟ್‍ಷ್ಮಟ್ರ್ಸ) ತುತ್ತಾಗುತ್ತಾನಾಗಿ ಆತ್ಮಹತ್ಯೆಮಾಡಿಕೊಳ್ಳುತ್ತಾನೆ. ಇಂಥ ಪ್ರತಿಭಟನಾ ಮನೋವೃತ್ತಿಯನ್ನು ಷಿಲರ್‍ನ ಗದ್ಯನಾಟಕಗಳಾದ ಫೀಸ್ಕೊ (1783), ಕಬಾಲೆ ಉಂಟ್ ಲೀಬೆ (ಒಳಸಂಚು ಮತ್ತು ಪ್ರೇಮ 1784) ಮುಂತಾದವುಗಳಲ್ಲಿ ಕಾಣಬಹುದು. ಆದರೆ ಇಂಥ ಪ್ರತಿಭಟನೆ ದುರಂತದಲ್ಲಿ ಪರ್ಯವಸಾನವಾಗಿ-ಲೆಂಟ್ಸ್‍ನಂಥ ಹಲವು ಸಾಹಿತಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಸೋಲನ್ನು ಅನುಭವಿಸಬೇಕಾಯಿತು. ಸ್ಟುರ್ಮ್ ಉಂಟ್ ಡ್ರಾಂಗ್ ಚಳವಳಿ ಬಹುಬೇಗ ಹೊತ್ತಿ ಉರಿದು ತಣ್ಣಗಾದಾಗ, ವ್ಯಕ್ತಿ ಸ್ವಾತಂತ್ರ್ಯ, ಕರ್ತವ್ಯ ಮತ್ತು ಅಂತರಂಗದ ಪ್ರವೃತ್ತಿಗಳ ನಡುವಣ ಸಂಘರ್ಷ ಮುಂತಾದ ಸಮಸ್ಯೆಗಳಿಗೆ ಕ್ಲಾಸಿಸಮ್ ಚಳವಳಿ ಒಂದು ಹೊಸ ಪರಿಹಾರವನ್ನೂ ನೂತನ ಆದರ್ಶವನ್ನೂ ನೀಡಿತು. 1780ರಲ್ಲಿ ಗಯಟೆ ಇಟಲಿಗೆ ಪ್ರವಾಸ ಕೈಕೊಂಡ ಮೇಲೆ 11 ವರ್ಷಗಳ ಕಾಲ ವೈಮರ್ ಆಸ್ಥಾನದಲ್ಲಿ ಹಲವಾರು ಹೊಣೆಗಾರಿಕೆಯನ್ನು ಹೊತ್ತು ವೈವಿಧ್ಯಮಯವಾದ ಅನುಭವಗಳನ್ನು ರೂಢಿಸಿಕೊಳ್ಳುತ್ತಿದ್ದ. ಅದೇ ಸಮಯದಲ್ಲಿ, 1787ರಲ್ಲಿ ಷಿಲರ್‍ನ ಡಾನ್ ಕಾರ್ಲೋಸ್ ಪ್ರಕಟವಾದಾಗ ಜರ್ಮನ್ ಸಾಹಿತ್ಯದ ಕ್ಲಾಸಿಕಲ್ ಯುಗ ಪ್ರಾರಂಭವಾಯಿತೆನ್ನಬೇಕು. ಆಗ ಪ್ರಾರಂಭವಾದ ಹೊಸ ಯುಗದ (1794 ರಿಂದ 1850ರವರೆಗಿನ) ಅವಧಿಯಲ್ಲಿ ವೈಮರ್‍ನಲ್ಲಿಯ ಗಯಟೆ ಮತ್ತು ಷಿಲರ್ ಇಬ್ಬರ ಸ್ನೇಹ ಪರಿಪಕ್ವವಾಗಿ, ಕ್ಲಾಸಿಕಲ್ ಚಳವಳಿ ಶಿಖರಕ್ಕೇರಿತೆನ್ನಬಹುದು. ಮಾನವೀಯತೆ ಈ ಹೊಸ ಚಳವಳಿಯ ಮುಖ್ಯ ಸೂತ್ರ. ಅಂತರಂಗದಲ್ಲಿ ಬುದ್ಧಿ ಭಾವಗಳೆರಡೂ ಸಮುಚಿತವಾಗಿ ಬೆಳೆದು ಸಮತೋಲನ ಸಾಧಿಸಿಕೊಂಡಾಗ ಸಂಪೂರ್ಣ ವ್ಯಕ್ತಿತ್ವದ ಅವಿರ್ಭಾವವಾಗುತ್ತದೆಂಬುದು ಕ್ಲಾಸಿಸಿಸಮ್ ಚಳವಳಿಯ ಒಂದು ಮುಖ್ಯ ಆದರ್ಶ, ಸಾಮಾಜಿಕ ವ್ಯವಸ್ಥೆ, ಬಹಿರಂಗದ ರೂಪ, ಸೌಮ್ಯತತ್ತ್ವ ಇವನ್ನು ಪ್ರತ್ಯೇಕವಾಗಿ ಪರಿಶೀಲಿಸಿದರೂ ಅವು ಉತ್ತಮ ಮೌಲ್ಯಗಳೇ ಆಗಿವೆ. ಫ್ರೆಂಚ್ ಮಹಾಕ್ರಾಂತಿ, ಅದರಿಂದ ಉದ್ಭವಿಸಿದ ಯುದ್ಧ ಪರಂಪರೆಗಳು, ನೆಪೋಲಿಯನನ ಉದಯವಾಗಿ ಅವನ ಸೇನೆಗಳು ವಿಜಯದುಂದುಭಿ ಮೊಳಗಿಸುತ್ತ ಜರ್ಮನ್ ಪ್ರಾಂತ್ಯಗಳ ಮೂಲಕ ಹಾದುಹೋದದ್ದು ಮುಂತಾದ ರಾಜಕೀಯ ಘಟನಾವಳಿಗಳಿಂದ ಪ್ರಭಾವಿತರಾಗಿ ಗಯಟೆ, ಷಿಲರರು ಕ್ರಿಯಾತ್ಮಕವಾಗಿ ತಮ್ಮ ಸೂಕ್ಷ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದರು. ಅವರ ದೃಷ್ಟಿಗೆ ಮನುಷ್ಯನ ಅಂತರಂಗದ ಸಂಸ್ಕೃತಿ, ನೈತಿಕ ಶಿಕ್ಷಣ ಹಾಗೂ ವಿಶ್ವಮಾನವೀಯತೆ ಇವು ಪ್ರಾದೇಶಿಕ, ರಾಜಕೀಯ ಘಟನೆಗಳಿಗಿಂತ ಹೆಚ್ಚು ಮುಖ್ಯವೆಂದು ತೋರಿದವು. ಜರ್ಮನ್ ಸಾಹಿತ್ಯದ ಹಲವು ಉದ್ದಾಮ ಕೃತಿಗಳು ಆ ಕಾಲದಲ್ಲಿ ಪೂರ್ಣಗೊಳಿಸಲ್ಪಟ್ಟವು-ಗಯಟೆಯ ಕಾವ್ಯನಾಟಕ ಟ್ಯಾಸೋ 1790ರಲ್ಲಿ ರಚಿತವಾದರೂ ಇಟಲಿಯ ಪ್ರವಾಸ ಕಾಲದಲ್ಲಿ ಆತ ಅದನ್ನು ಪುನಃ ಪರಿಷ್ಕರಿಸಿದ. ಪುರಾಣ ಕಾವ್ಯದ ಶೈಲಿಯಲ್ಲಿ ರಚಿತವಾದ ಗ್ರಾಮೀಣ ಕಾವ್ಯ ಹರ್ಮನ್ ಉಂಟ್ ಡೊರೋತಿಯವನ್ನು (1797) ಬರೆದ. ಗಯಟೆಯ ವಿಲ್‍ಹೆಲ್ಮ್ ಮೈಸ್ಟರ್ಸ್ ಲೆರ್‍ಯಾರೆ (ವಿಲ್ಹ್‍ಹೆಲ್ಮ್ ಮೈಸ್ಟರನ ಕಲಿಕೆಯ ದಿನಗಳು) ಎನ್ನುವ ಕಾದಂಬರಿಯಲ್ಲಿ ಮನುಷ್ಯ ಕ್ರಿಯಾತ್ಮಕವಾದ ನಡವಳಿಕೆಯ ಮೂಲಕ ತನ್ನ ಬದುಕನ್ನು ಹೇಗೆ ಸಾರ್ಥಕಗೊಳಿಸಿಕೊಳ್ಳಬಹುದೆಂಬ ವಸ್ತುವಿದೆ. ಗಯಟೆಯ ಈ ಕಾದಂಬರಿ ಬಿಲ್ಡುಂಗ್ಸ್ ರೊಮನ್ ಅಥವಾ ಶೈಕ್ಷಣಿಕ ಕಾದಂಬರಿ ಎಂಬ ಹೊಸ ಕಾದಂಬರೀ ಪ್ರಕಾರವನ್ನೇ ಸೃಷ್ಟಿಸಿತು. ಷಿಲರ್ ಸೌಂದರ್ಯಮೀಮಾಂಸೆ ಹಾಗೂ ದರ್ಶನ ಶಾಸ್ತ್ರಗಳಿಗೆ ಸಂಬಂಧಿಸಿದಂತೆ ಹಲವು ಪ್ರಬಂಧಗಳನ್ನು ಬರೆದು ಕಲೆಯ ಶೈಕ್ಷಣಿಕ ಉದ್ದೇಶವನ್ನು ಒತ್ತಿ ಹೇಳಿದ. ಇವಲ್ಲದೆ, ಅವನ ಪ್ರಸಿದ್ಧ ಲಾವಣಿಗಳೂ ವ್ಯಾಲೆನ್‍ಸ್ಟೈನ್ ನಾಟಕದಿಂದ (1799) ಹಿಡಿದು ವಿಲ್‍ಹೆಲ್ಮ್ ಟೆಲ್ (1804) ವರೆಗಿನ ಅವನ ಅಸಂಖ್ಯಾತ ನಾಟಕಗಳೂ ಆಗ ಬೆಳಕಿಗೆ ಬಂದವು. 1781, 1788 ಮತ್ತು 1790ರಲ್ಲಿ ಕಾಂಟ್‍ನ ಜಗದ್ವಿಖ್ಯಾತ ಕ್ರಿಟೆಕೆನ್ (ಕ್ರೀಟೀಕ್ಸ್) ಪ್ರಕಟವಾಯಿತು. ಆದರೆ ಜರ್ಮನಿ ವಿಶ್ವಸಾಹಿತ್ಯಕ್ಕೆ ಕೊಡುಗೆಯಾಗಿ ಕೊಟ್ಟ ಸರ್ವ ಶ್ರೇಷ್ಠ ಕೃತಿಯೆಂದರೆ ಗಯಟೆಯ ಫೌಸ್ಟ್ ನಾಟಕ. ಇದರ ಮೊದಲ ಭಾಗ ಪ್ರಕಟವಾದದ್ದು 1808ರಲ್ಲಿ. ಇದರಲ್ಲಿ ಫಸ್ಟ್‍ನ ಅದಮ್ಯ ಎಳಸಿಕೆಗಳ, ಹತಾಶೆ, ಮೆಫಿಸ್ಟೋಫೆಲೀಸನೊಡನೆ ಮಾಡಿಕೊಂಡ ಒಡಂಬಡಿಕೆ, ಗ್ರೆಟ್ಷನ್‍ಳ ಮೇಲಿನ ಪ್ರೇಮ-ಇವು ಮುಖ್ಯ ಎಳೆಗಳಾಗಿ ಬರುತ್ತವೆ. 1832ರಲ್ಲಿ ಪೂರ್ಣಗೊಳಿಸಲ್ಪಟ್ಟ ಫೌಸ್ಟ್ ನಾಟಕದ ಎರಡನೆಯ ಭಾಗದಲ್ಲಿ ರಾಜಸ್ಥಾನದಲ್ಲಿ ಮಾಂತ್ರಿಕ ಫೌಸ್ಟ್‍ನ ಜೀವನ, ಟ್ರಾಯ್ ದೇಶದ ಹೆಲೆನ್ನಳನ್ನು ಆತ ಗೆಲ್ಲುವುದು, ಫೌಸ್ಟ್‍ನ ಪ್ರಾಯಶ್ಚಿತ್ತ, ವಿಮೋಚನೆ-ಇವುಗಳು ರೂಪುಗೊಂಡಿವೆ. ಪ್ರಯತ್ನ, ಅಸ್ವಾರ್ಥಪರ ಕಾರ್ಯ ಪಟುತ್ವ ಇವುಗಳ ಮೂಲಕ ಬದುಕನ್ನು ಸಾರ್ಥಕಗೊಳಿಸಬೇಕೆನ್ನುವುದು ಗಯಟೆಯ ಪರಿಪಕ್ವ ವಿವೇಚನೆಗೆ ಮೂಲಾಧಾರವಾಗಿತ್ತು. ಗಯಟೆಯ ಬಹುಮುಖ ಪ್ರತಿಭೆ ಅವನ ಕವನಗಳು, ನಾಟಕಗಳು, ಕಾದಂಬರಿಗಳು ಇವುಗಳಲ್ಲಿ ಮಾತ್ರವಲ್ಲದೆ (ಗಯಟೆ ಕವನಗಳು ಅವನ ಶ್ರೇಷ್ಠ ಸಾಹಿತ್ಯ ಸಾಧನೆಗಳೆಂದು ಕೆಲವು ವಿಮರ್ಶಕರು ಅಭಿಪ್ರಾಯಪಡುತ್ತಾರೆ) ಅವನ ವೈಜ್ಞಾನಿಕ ಬರಹಗಳು, ಪತ್ರಗಳು, ದಿನಚರಿಗಳು ಹಾಗೂ ಸಂವಾದಗಳಲ್ಲಿ ಪೂರ್ಣಾಭಿವ್ಯಕ್ತಿ ಪಡೆದಿವೆ. ವೈಮರ್‍ನಲ್ಲಿನ ಅವನ ನಿವಾಸ ಒಂದು ಯಾತ್ರಾಸ್ಥಳದಂತಾಗಿ ಅವನ ಖ್ಯಾತಿ ಕೇವಲ ಜರ್ಮನಿಯಲ್ಲಿ ಮಾತ್ರವಲ್ಲದೆ ದೇಶವಿದೇಶಗಳಲ್ಲೂ ಹರಡಿತು. ಏತನ್ಮಧ್ಯೆ ಬೇರೆ ಇಬ್ಬರು ಗಣ್ಯಸಾಹಿತಿಗಳು ಸಾಹಿತ್ಯದಲ್ಲಿ ಹೊಸ ಹೊಸ ಬೆಳವಣಿಗೆಗೆ ಪ್ರೇರಕವಾದರು. ಎಫ್. ಹೇಲ್ಡರಲಿನ್‍ನ (1770-1843) ಪ್ರತಿಭೆ ಅವನ ಭಾವಗೀತೆಗಳಲ್ಲಿ ಸಮುಚಿತವಾಗಿ ಪ್ರಕಾಶಿತವಾಯಿತು. (ಜೀನ್ ಪಾಲ್ ಎಂಬ ಕಾವ್ಯ ನಾಮದ ) ಜೆ.ಪಿ.ಎಫ್. ರಿಕ್ಟರ್ (1763-1825) ಅನೇಕ ಕಾದಂಬರಿಗಳನ್ನು ರಚಿಸಿ ಜರ್ಮನ್ ಕಾದಂಬರೀ ಪ್ರಕಾರವನ್ನು ಶ್ರೀಮಂತಗೊಳಿಸಿದ. ಅವನ ಕೃತಿಗಳ ರಚನೆಯಲ್ಲಿ ಶಿಥಿಲತೆ ಕಾಣಿಸಿದರೂ ಅವುಗಳಲ್ಲಿಯ ಹಾಸ್ಯ, ಭಾವುಕತೆಗಳು ಉಳಿದೆಲ್ಲ ಕೊರತೆಗಳನ್ನೂ ತುಂಬಿಕೊಡುತ್ತವೆ. ಆ ಶತಮಾನದ ಕೊನೆಯ ದಶಕದಲ್ಲಿ ವೈಮರ್ ಅಭಿಜಾತ ಚಳವಳಿ ಆದರ್ಶಗಳ, ಅಭಿವ್ಯಕ್ತಿರೂಪಗಳ, ವಿರುದ್ಧವಾಗಿ ಒಂದು ವಿಶಿಷ್ಟ ಪ್ರತಿಕ್ರಿಯೆ ಪ್ರಾರಂಭವಾಯಿತು. ಟೀಕ್ ವ್ಯಾಕನ್‍ರೋಡರ್ ಮತ್ತು ಸೊವಾಲೆಸ್ ಮೊದಲಾದವರ ವಿಭಾವನಾಯುತ ಕೃತಿಗಳು, ಎ. ಡಬ್ಲ್ಯು. ಷ್ಲೆಗೆಲ್ ಸೋದರರ ವಿಮರ್ಶಾತ್ಮಕ ಲೇಖನಗಳು, ಎ. ಡಬ್ಲ್ಯು. ಷ್ಲೆಗೆಲ್ ಮತ್ತು ಟೀಕ್ ರಚಿಸಿದ ಷೇಕ್ಸ್‍ಪಿಯರ್ ಕೃತಿಗಳ ಭಾಷಾಂತರಗಳು-ಇವುಗಳ ಮೂಲಕ ಜರ್ಮನ್ ರೊಮ್ಯಾಂಟಿಕ್ ಯುಗ ಪ್ರಾರಂಭವಾಯಿತು. ರೊಮ್ಯಾಂಟಿಕ್ ಸಾಹಿತಿಗಳು, ಜೀವನದಲ್ಲಿ ಮತ್ತು ಸಾಹಿತ್ಯದಲ್ಲಿ ತರ್ಕಾತೀತವಾದ ಅಂಶಗಳೂ ಇವೆಯೆಂಬ ಮಾತನ್ನು ಒತ್ತಿ ಹೇಳಿ, ಕಲೆ ಎನ್ನುವುದು ಒಂದು ತೆರನಾದ ದಾರ್ಶನಿಕ ಅನುಭೂತಿ ಎಂದು ಭಾವಿಸಿದರು. ವಿಭಿನ್ನ ಕಲಾಪ್ರಕಾರಗಳ ನಡುವೆ ಸಮನ್ವಯ ಸಾಧಿಸಬಹುದೆಂಬ ವಿಚಾರದಿಂದ ಪ್ರೇರಿತರಾದ ಅವರು ವಿವಿಧ ಕಾವ್ಯ ಪ್ರಕಾರಗಳಲ್ಲಿ ಹಾಗೂ ಛಂದೋರೂಪಗಳಲ್ಲಿ ಪ್ರತಿಮೆ ಸಂಕೇತಗಳನ್ನು ಬಳಸುವುದರಲ್ಲಿ ಪ್ರಯೋಗಗಳನ್ನು ನಡೆಸಿದರು. ಉದಾಹರಣೆಗೆ ಹೈನ್ರಿಕ್ ಫಾನ್ ಓಫ್ಟರ್ ಡಿಂಗನ್ (1802) ಕೃತಿಯಲ್ಲಿ ಕವಿ ನೋವಾಲಿಸ್ ಸ್ವಪ್ನಸಂಕೇತಗಳನ್ನೂ ನೀಲಿ ಹೂ ಮುಂತಾದ ಪ್ರತೀಕಗಳನ್ನೂ ಬಳಸಿದ. ಒಂದು ವಿಶೇಷ ಸಂಗತಿಯೆಂದರೆ ಆ ಯುಗದ ಸಾಹಿತಿಗಳ ಹಲವು ಕೃತಿಗಳು ಅಪೂರ್ಣವಾಗಿಯೇ ಉಳಿದವು. ಕಾದಂಬರಿ, ನಾಟಕ ಮುಂತಾದ ಪ್ರಕಾರಗಳಿಗಿಂತ ಹೆಚ್ಚಾಗಿ, (ನೋವೆಲ್ಲೆ) ಸಣ್ಣ ಕಥೆಯ ರೂಪವೇ ಅವರಿಗೆ ಹೆಚ್ಚಾಗಿ ಒಗ್ಗಿತು-ಅದರಲ್ಲೂ ಅವರು ರಚಿಸಿದ ಕಿನ್ನರಕಥೆಯ (ಮೆರ್ಖನ್) ಪ್ರಭೇದ ಜರ್ಮನ್ ಸಾಹಿತ್ಯಕ್ಕೊಂದು ವಿಶೇಷಕಾಣಿಕೆ. ಟೀಕ್, ನೋವಾಲಿಸ್ ಬ್ರೆಂಟಾನೋ, ಐಷನ್‍ಡೋರ್ಫ್, ಫೌಕೆ, ಇ.ಟಿ.ಎ. ಹಾಫ್‍ಮನ್ ಎಲ್ಲರೂ ಕಿನ್ನರ ಕಥೆಗಳನ್ನು ಬರೆದರು. ಭಾವಗೀತೆಯ ಪ್ರಕಾರವನ್ನು ವಿಶೇಷವಾಗಿ ಬಳಸಲಾಯಿತು. ಪ್ರಕೃತಿಯನ್ನು ಕುರಿತು ಬರೆದ ಭಾವಗೀತೆಗಳು ರೊಮ್ಯಾಂಟಿಕ್ ಕಾವ್ಯದ ಅತ್ಯಂತ ಮುಖ್ಯ ಸಾಧನೆಯಾದುವು. ಬ್ರೆಂಟಾನೋ, ಕ್ಯಾಮಿಸೋ, ಐಷನ್‍ಡೋರ್ಫ್ ಮತ್ತು ಇತರ ಹಲವು ಕವಿಗಳು ಪ್ರಕೃತಿ ಗೀತೆಗಳನ್ನು ರಚಿಸಿದರು. ಜರ್ಮನಿಯ ಉತ್ತರದಲ್ಲಿ ಹೈನ್ರಿಕ್ ಫಾನ್ ಕ್ಲೈಸ್ಟ್ (1771-1811) ಅತ್ಯಂತ ಉನ್ನತ ಕಾವ್ಯಾಂಶವುಳ್ಳ ರೊಮ್ಯಾಂಟಿಕ್ ನಾಟಕಗಳನ್ನೂ ಸಣ್ಣಕತೆಗಳನ್ನು ಬರೆದ. ನೆಪೋಲಿಯನ್ನನ ವಿರುದ್ಧ ನಡೆದ ರಾಷ್ಟ್ರೀಯ ಚಳವಳಿಯಲ್ಲಿ ಮುಖ್ಯ ಭಾಗವಹಿಸಿದ ಸಾಹಿತಿ ಆತ. ಅವನ ಆಂಫಿಟ್ರಿಯಾನ್ (1807), ಪೆಂಥೆಸೀಲಿಯ (1808), ಡೆರ್ ಫ್ರಿನ್ಸ್ ಫಾನ್ ಹೋಂಬರ್ಗ್ (1811) ಮುಂತಾದ ನಾಟಕಗಳಲ್ಲಿ, ಮನುಷ್ಯನ ನೈಸರ್ಗಿಕ ಭಾವನೆಗಳು ಮತ್ತು ಸಹಜಪ್ರವೃತ್ತಿಗಳೇ ಬದುಕಿಗೆ ಸುಭದ್ರತೆಯನ್ನು ಒದಗಿಸುವ ಸಾಧನಗಳು ಎಂಬ ನಂಬಿಕೆ ಇದೆ. ವಿಚಿತ್ರ, ಅದ್ಭುತ, ರಮ್ಯ ಕಾದಂಬರಿಗಳನ್ನು ಬರೆಯುವುದರಲ್ಲಿ ನಿಷ್ಣಾತವೆನಿಸಿಕೊಂಡ ಇ.ಟಿ.ಎ. ಹಾಫ್‍ಮನ್ ಅನೇಕ ಐರೋಪ್ಯ ಸಾಹಿತಿಗಳ ಮೇಲೆ ತನ್ನ ವರ್ಚಸ್ಸು ಬೀರಿದ.
ಹತ್ತೊಂಬತ್ತನೆಯ ಶತಮಾನ
ಬದಲಾಯಿಸಿ19ನೆಯ ಶತಮಾನದಲ್ಲಿ ಜರ್ಮನ್ ಅಭಿಜಾತ ಚಳವಳಿಯ ಸಾಂಸ್ಕೃತಿಕ ಹಾಗೂ ರಾಜಕೀಯ ಆದರ್ಶಗಳು ಕೈಗೂಡಲಿಲ್ಲ. ಆಸ್ಟ್ರಿಯದ ಮೆಟರ್‍ನಿಕ್ಕನ ನಾಯಕತ್ವದ ಸಂಪ್ರದಾಯ ಶೀಲ ಸರ್ಕಾರಗಳು ವಿಚಾರ ಸ್ವಾತಂತ್ರ್ಯವನ್ನು ಹತ್ತಿಕ್ಕಿದ್ದರ ಫಲವಾಗಿ ಜರ್ಮನ್ ಬುದ್ಧಿಜೀವಿಗಳ ಕ್ಷೇತ್ರದಲ್ಲಿ ಕಡುತರವಾದ ಆಶಾಭಂಗವುಂಟಾಯಿತು. ಒಂದು ಕಾಲದಲ್ಲಿ ಹರ್ಷೋತ್ಕರ್ಷದಿಂದ ಕೂಡಿದ್ದು ಕ್ರಿಯಾಶೀಲಪ್ರವೃತ್ತಿಯಿಂದ ತುಂಬಿದ್ದ ಸಾಹಿತಿಗಳ ಮನೋಧರ್ಮದಲ್ಲಿ ತೀವ್ರ ಬದಲಾವಣೆಗಳುಂಟಾದವು. ಔದ್ಯೋಗಿಕ ಕ್ರಾಂತಿಯ ಪ್ರಾರಂಭ ಕಾಲದಲ್ಲಿ ಉಂಟಾದ ಸಾಮಾಜಿಕ ಹಾಗೂ ರಾಜಕೀಯ ಅಶಾಂತಿಯಿಂದಾಗಿ ಸಾಹಿತ್ಯದಲ್ಲಿ ನಿರಾಶೆಯ ಧ್ವನಿ ಕೇಳಿಸಿತು. ಪ್ರಮುಖವಾಗಿ ಅದು ನಾಟಕಕಾರರ ಯುಗವಾಗಿದ್ದು ಅಂದಿನ ಕೃತಿಗಳಲ್ಲಿ ಕಾಲ ಸಹಜವಾದ ಭ್ರಮನಿರಸನ ಸ್ಪಷ್ಟವಾಗಿ ಒಡೆದು ಮೂಡಿರುವುದನ್ನು ಕಾಣಬಹುದು. ಫ್ರಾನ್ಸ್ ಗ್ರಿಲ್‍ಪಾರ್ಸರ್‍ನ (1791-1872) ನಾಟಕಗಳಲ್ಲಿಯ ನಾಯಕರು ಆ ಯುಗದ ನಿರಾಶೆ ದುಗುಡಗಳನ್ನು ಪ್ರತಿಪಾದಿಸುವಂತಿದ್ದಾರೆ. ಪ್ರತಿಕೂಲ ಸನ್ನಿವೇಶದ ಒತ್ತಡಕ್ಕೆ ಸಿಕ್ಕಾಗ, ವ್ಯಕ್ತಿಯ ಶಕ್ತಿ ಸಾಹಸಗಳೆಲ್ಲವೂ ಹೇಗೆ ನಿಷ್ಫಲಗೊಳ್ಳುತ್ತವೆಂದು ಗ್ರಿಲ್‍ಪಾರ್ಸರ್ ತೋರಿಸಿದ್ದಾನೆ. ವ್ಯಕ್ತಿಯ ಬಾಳಿನಲ್ಲಿ ತೃಪ್ತಿಯೆಂಬುದು ತೀರಾ ದುರ್ಲಭವಾದುದರಿಂದ ಅವನು ತನ್ನ ಅಂತಃಶಕ್ತಿಗಳನ್ನು ಸಾರ್ಥಕವಾಗಿ ದುಡಿಸಿಕೊಂಡು ಆತ್ಮಪರಿತ್ಯಾಗದ ಮೂಲಕವೇ ಅಂತರಂಗದ ಚಿರಶಾಂತಿ ಸಾಧಿಸಬೇಕೆನ್ನುವುದು ಗ್ರಿಲ್‍ಪಾರ್ಸರನ ಅಭಿಮತ. ಅದನ್ನು ಅವನ ಡಾಸ್ ಗೋಲ್ಡನೆ ಫ್ಲೀಸ್-(ಚಿನ್ನದ ತುಪ್ಪಟ 1822) ಎನ್ನವ ತ್ರಿನಾಟಕ ಚಕ್ರ, ಡೆರ್ ಟ್ರೌಮ್ ಐನ್ ಲೀಬೆನ್ (ಕನಸು-ಜೀವನ-1834), ಡೆಸ್ ಮಿಯರೆಸ್ ಉಂಟ್ ಡೆರ್ ಲೀಬೆವೆಲನ್ (ಪ್ರೀತಿಯ ಸಾಗರದ ಸಲೆಗಳು-1819) ನಾಟಕಗಳು ಸ್ಪಷ್ಟವಾಗಿ ರೂಪಿಸುತ್ತವೆ. ಆ ಕಾಲದ ಇನ್ನೊಬ್ಬ ನಾಟಕಕಾರನಾದ ಫ್ರೀಡ್ರಿಕ್ ಹೆಬೆಲ್ (1813-1863) ಇತಿಹಾಸದ ನಿರ್ಧಾರಕ ಶಕ್ತಿಗಳೆದುರಿಗೆ ವ್ಯಕ್ತಿಯ ಹೋರಾಟ ನಿರರ್ಥಕ, ಅದರಿಂದ ಅವನ ಬದುಕು ದುರಂತ ಎಂದು ತೋರಿಸುತ್ತಾನೆ. 1840ರಿಂದ ಹಿಡಿದು 1856ರ ಅವಧಿಯಲ್ಲಿ ಬರೆಯಲಾದ ಅವನ ಜ್ಯೂಡಿತ್ ಹೆರಾಡಿಸ್ ಉಂಟ್ ವೇರಿಯಾನೆ, ಗೈಗಸ್ ಉಂಟ್ ಸೈನ್ ರಿಂಗ್ (ಗೈಗಸ್ ಮತ್ತು ಅವನ ಉಂಗುರ) ಮುಂತಾದ ನಾಟಕಗಳಲ್ಲಿ ಬರುವ ನಾಯಕರು ತಮ್ಮ ವ್ಯಕ್ತಿತ್ವ ಕಳಂಕಕ್ಕೆ ಗುರಿಯಾದಾಗ ಯಾವ ಸಮನ್ವಯಕ್ಕೂ ಮಣಿಯದೆ ಹೋರಾಡುವುದರಿಂದ ದುರಂತಕ್ಕೆ ಪಕ್ಕಾಗುತ್ತಾರೆ. ಸಿ.ಡಿ.ಗ್ರಾಬೆಯ (1801-1836) ನಾಟಕಗಳಲ್ಲಿನ ದುರಂತ ನಾಯಕರು ಇತಿಹಾಸದ ಪ್ರೇರಕ ಶಕ್ತಿಗಳನ್ನು ತಾವು ನಿಯಂತ್ರಿಸಬಲ್ಲೆವೆಂಬ ಭ್ರಮೆಗೆ ಸಿಕ್ಕಿ ಸೋಲನ್ನು ಅನುಭವಿಸುತ್ತಾರೆ. ಸಮುದಾಯದ ಶಕ್ತಿಗಳು ಎಷ್ಟೇ ಜಡವಾಗಿರುವಂತೆ ಕಂಡರೂ ಅವುಗಳೆದುರಿಗೆ ಹ್ಯಾನಿಬಲ್, ಮೇರಿಯಸ್, ಹೋಯನ್ ಸ್ಟೌಫೆನ್ ಚಕ್ರವರ್ತಿಗಳೂ, ನೆಪೋಲಿಯನ್ ಮುಂತಾದ ಮಹಾವ್ಯಕ್ತಿಗಳೂ ನಿರ್ವೀರ್ಯರಾಗುತ್ತಾರೆಂಬ ತತ್ತ್ವವನ್ನು ಗ್ರಾಬೆ ತನ್ನ ಡಾನ್ ಜುವಾನ್ ಉಂಟ್ ಫೌಸ್ಟ್-(1820) ನೆಪೋಲಿಯನ್-(1831) ಮುಂತಾದ ನಾಟಕಗಳಲ್ಲಿ ಚಿತ್ರಿಸಿದ್ದಾನೆ. ಈ ನಾಟಕಕಾರರಲ್ಲಿ ಅತ್ಯಂತ ಆಧುನಿಕನೆನ್ನಬಹುದಾದವನೆಂದರೆ ಜಾರ್ಜ್ ಬ್ಯೂಹ್ನರ್ (1813-1837). ಅವನ ನಾಟಕಗಳಲ್ಲಿ ಬರುವ ಚಿಟಿಕೆ ಛಾಯಾ ಚಿತ್ರದಂಥ ತುಣುಕು ದೃಶ್ಯಾವಳಿಗಳು ಆಧುನಿಕ ನಾಟಕಗಳ ಪೂರ್ವ ಸೂಚಿಯಂತಿವೆ. ಡ್ಯಾಂಟನ್ಸ್ ಟೋಟ್ (ಡ್ಯಾಂಟನ್ನನ ಮರಣ), ಲಯೋನ್ಸೆ ಉಂಟ್ ಲೀನಾ, ವಾಯಿಟ್eóÉಕ್ ಮುಂತಾದ (ಕೇವಲ 23 ವರ್ಷವಾಗಿದ್ದಾಗಲೇ ತೀರಿಹೋದ ಬ್ಯೂಹ್ನರನ ನಾಟಕಗಳು ಪ್ರದರ್ಶಿತವಾದ್ದು ಅವನ ಮರಣಾನಂತರವೇ-) ಅವನ ನಾಟಕಗಳಲ್ಲಿ ವ್ಯಕ್ತಿಯೊಬ್ಬ ವಿರೋಧಿ ಸಾಮಾಜಿಕ ಶಕ್ತಿಗಳ ಜಾಲದಲ್ಲಿ ಸಿಕ್ಕಿ ನಾಶವಾಗುವ ಚಿತ್ರವಿದೆ. ಆ ಕಾಲದ ನಿರರ್ಥಕ ಪೊಳ್ಳು ಆದರ್ಶಗಳನ್ನು ಕುರಿತ ಗಂಭೀರ ಚಿಂತನೆಯೂ ಅಲ್ಲಿದೆ. ಗ್ರಿಲ್‍ಪಾರ್ಸರ್ ಮತ್ತು ಹೆಬೆಲ್ ಜರ್ಮನ್ ಕ್ಲಾಸಿಕಲ್ ನಾಟಕದ ಪರಂಪರೆಯನ್ನು ಅನುಸರಿಸಿ ಬರೆದರೆ, ಗ್ರಾಬೆ ಮತ್ತು ಬ್ಯೂಹ್ನರ್ ಅಭಿವ್ಯಕ್ತಿಯ ರಚನೆಯ ಬಾಹ್ಯಾಲಂಕರಣಕ್ಕೆ ಹೆಚ್ಚು ಗಮನ ಕೊಡದೆ ಬದುಕಿನ ವಿಚ್ಛಿದ್ರತೆಯನ್ನೂ ಅರ್ಥಶೂನ್ಯತೆಯನ್ನೂ ಎತ್ತಿ ತೋರಿಸುವುದರಲ್ಲೇ ಹೆಚ್ಚು ಆಸಕ್ತರಾದರು. ಬದುಕನ್ನು ಹೆಚ್ಚು ಯಥಾರ್ಥವಾಗಿ ಚಿತ್ರಿಸಬೇಕೆಂಬ ಮನೋವೃತ್ತಿ 19ನೆಯ ಶತಮಾನದ ಕೊನೆಯಲ್ಲಿ ನ್ಯಾಚುರಲಿಸಂ (ವಾಸ್ತವತಾವಾದ) ಪಂಥಕ್ಕೆ ಎಡೆಮಾಡಿತು. ಅದರಿಂದಾಗಿ ಬದುಕಿನ ಅತ್ಯಲ್ಪ ಸಂಗತಿಗಳೂ ಕ್ಷುದ್ರ ವಿವರಗಳೂ ಹೆಚ್ಚು ಮಹತ್ತ್ವ ಪಡೆಯುವಂತಾದುವು. ರೋಗ ಲಕ್ಷಣಗಳಾದ ಮನೋ ವಿಕಾರ, ವೈಕಲ್ಯಗಳ ನಿರೂಪಣೆಗೆ ಸಾಹಿತ್ಯದಲ್ಲಿ ಎಂದೂ ಇಲ್ಲದ ಪ್ರಾಮುಖ್ಯ ಸಿಕ್ಕಂತಾಯಿತು. ನ್ಯಾಚುರಲಿಸಂ ತತ್ತ್ವದ ಪೂರ್ಣ ಫಲಗಳೆಂದರೆ ಗೆರ್‍ಹಾರ್ಟ್ ಹಾಫ್ಟ್‍ಮನ್ನನ (1862-1946) ನಾಟಕಗಳು. ಅವನ ಮೊಟ್ಟಮೊದಲನೆಯ ಕೃತಿ ಫೋರ್ ಸೋನೆನ್ ಔಫ್‍ಗಾಂಗ್ (ಬೆಳಗಾಗುವ ಮುನ್ನ-1889) ನಾಟಕದಲ್ಲಿ ನಾಯಕನೆಂದು ಹೇಳಬಹುದಾದ ಪಾತ್ರವೇ ಇಲ್ಲ ; ಸಮಂಜಸವಾದ ವಸ್ತವೂ ಇಲ್ಲ. ಡೀ ವೀಬರ್ (ನೇಯ್ಗೆಯವರು-1892) ಮುಂತಾದ ಅವನ ನಾಟಕದಲ್ಲಿ ಬೇಕಾದಷ್ಟು ಕಟುವಾದ ಸಾಮಾಜಿಕ ಟೀಕೆ ಇದೆ. ನೇಯ್ಗೆಯವರ ದಾರುಣವಾದ ಬಾಳನ್ನು ಚಿತ್ರಿಸುವ ಈ ನಾಟಕದಲ್ಲಿ ವಾಸ್ತವತಾ ತತ್ತ್ವದ ಪರಾಕಾಷ್ಠೆಯನ್ನು ಕಾಣಬಹುದು. ಹತ್ತೊಂಬತ್ತನೆಯ ಶತಮಾನದಲ್ಲಿ ಅತ್ಯಂತ ಹೆಚ್ಚು ಪ್ರಭಾವ ಬೀರಿದ್ದೂ ಹಲವೊಮ್ಮೆ ಪ್ರಾದೇಶಿಕವಾದ ಪ್ರೇರಣೆಗಳಿಂದ ಆವಿಷ್ಟಗೊಂಡ, ವಾಸ್ತವತಾತತ್ತ್ವ ಕಾದಂಬರಿ ಪ್ರಕಾರವನ್ನು ಚೆನ್ನಾಗಿ ದುಡಿಸಿಕೊಂಡಿತು. ಬದುಕಿನಲ್ಲಿ ಆಧ್ಯಾತ್ಮಿಕತೆಯ ಸಂಕರವಿಲ್ಲದ, ಸಾರ್ಥಕ ಮೌಲ್ಯಗಳ ಅನ್ವೇಷಣೆಯಲ್ಲಿ ತೊಡಗಬೇಕು-ಎನ್ನುವುದು ವಾಸ್ತವತಾ ಸಾಹಿತಿಯ ಮುಖ್ಯ ಕಾಳಜಿಯಾಗಿತ್ತು. ಕ್ಷುದ್ರ ವಿಚಾರ ವೈಕಲ್ಯಗಳ ಯಥಾರ್ಥ ಚಿತ್ರಣವೇ ಸಾಹಿತ್ಯಯೋಗ್ಯವಾದ ಯಥೋಚಿತವಸ್ತು ಎಂದು ವಾದಿಸಿದ ನ್ಯಾಚುರಲಿಸಂ ತತ್ತ್ವವನ್ನು ಅವರು ವಿರೋಧಿಸಿದರು. ಹಲವರು ತಮ್ಮ ಜೀವನಕ್ಕೆ ತೀರ ಹತ್ತಿರವಾದ ಗ್ರಾಮೀಣ ಜೀವನವನ್ನು ಚಿತ್ರಿಸುವುದರಲ್ಲಿ ಯಶಸ್ವಿಯಾದರು. ಗಾಟ್‍ಫ್ರೀಡ್ ಕೆಲರ್ (1819-1890) ತನ್ನ ಡೆರ್ ಗ್ರ್ಯೂನೆ ಹೈನ್ರಿಕ್ (ಗ್ರೀನ್ ಹೆನ್ರಿ 1854-74) ಎನ್ನುವ ಕೃತಿಯಲ್ಲಿ ಸ್ವಿಸ್ ಚಿತ್ರಕಾರನೊಬ್ಬ ಚೈತನ್ಯಪೂರ್ಣ ಬದುಕನ್ನೂ ವ್ಯಕ್ತಿ ವಿಕಸನವನ್ನೂ ಮೂಡಿಸಿದ್ದಾನೆ. ಈ ಕೃತಿ ಭಾಗಶಃ ಆತ್ಮಕಥೆಯಾಗಿದೆಯೆನ್ನಲಾಗಿದೆ. ಕಲಾವಿದನ ಬದುಕಿನ ಕಾಣ್ಕೆ ಯಾವರೀತಿ ಪ್ರತಿದಿನದ ಬಾಳಿನ ಅವಶ್ಯಕತೆಗಳಿಗನುಸಾರವಾಗಿ ಮಾರ್ಪಾಡಾಗಬೇಕೆಂಬುದನ್ನು ಇಲ್ಲಿ ಕೆಲರ್ ಚಿತ್ರಿಸಿದ್ದಾನೆ. ಸಿ.ಎಫ್. ಮೇಯರ್ ಎಂಬ ಇನ್ನೊಬ್ಬ ಸ್ವಿಸ್ ಸಾಹಿತಿ ತನ್ನ ನಾವೆಲೆನ್‍ಗಳಲ್ಲಿ (ಗದ್ಯಕಥಾನಕ) ಅಧಿಕಾರದ ದುರ್ಮೋಹಕ್ಕೆ ಸಿಕ್ಕಿ ಪತನಕ್ಕೆ ಗುರಿಯಾಗುವ ಮಹಾಪುರುಷರನ್ನು ಚಿತ್ರಿಸಿದ್ದಾನೆ. ಆಸ್ಟ್ರಿಯದವನಾದ ಎ. ಸ್ಟಿಫ್ಟರ್ ತನ್ನ ನೀತಿಬೋಧಾತ್ಮಕ ಕಾದಂಬರಿ ನಾಕ್ ಸೋಮರ್ (ಲೇಟ್ ಸಮರ್-1857) ಎಂಬ ಗ್ರಂಥದಲ್ಲಿ ಮನುಷ್ಯ ನಿಸರ್ಗಕ್ಕನುಸಾರವಾಗಿ ಹೇಗೆ ಮಾದರಿ ಜೀವನವನ್ನು ಬಾಳಬಹುದೆಂಬುದನ್ನು ಚಿತ್ರಿಸಿದ್ದಾನೆ. ಇನ್ನೊಬ್ಬ ಪ್ರಮುಖ ವಾಸ್ತವತಾವಾದಿಯೆಂದರೆ ತಿಯೋಡೋರ್ ಸ್ಟಾರ್ಮ್ (1817-88). ಇವನ ಸಣ್ಣ ಕಥೆಗಳ ಮೇಲೆ ಉತ್ತರ ಜರ್ಮನಿಯ ಇವನ ಹುಟ್ಟೂರಾದ ಪ್ಲೆಸ್‍ವಿಗ್ ಕರಾವಳಿಯ ಪ್ರಾದೇಶಿಕತೆ ತನ್ನ ಪ್ರಭಾವವನ್ನು ಅಚ್ಚೊತ್ತಿದೆ. ಹಾಸ್ಯಪ್ರಧಾನವಾದ ಅನೇಕ ಕಥೆ ಕಾದಂಬರಿಗಳನ್ನೂ ಬರೆದ ವಿಲ್‍ಹೆಲ್ಮ್ ರಾಬೆಯ (1831-1910) ಡೆರ್ ಹಂಗರ್ ಪ್ಯಾಸ್ಟರ್ (ಹೊಟ್ಟೆಗಿಲ್ಲದ ಪಾದ್ರಿ-1864), ಸ್ಟಾಪ್ಫ್ ಕೂಷನ್ (1891) ಮುಂತಾದ ಕೃತಿಗಳು ಹೆಚ್ಚು ಸಂಕೀರ್ಣವಾಗಿರುವಂತೆ ತೋರುತ್ತವೆ. ಕಥೆಯ ಕಡೆ ಓದುಗರ ಗಮನ ಸೆಳೆಯುವುದರ ಜೊತೆಗೆ ನಿರೂಪಣೆಯ ತಂತ್ರದ ಬಗ್ಗೆ ವಿಶೇಷ ಆಸಕ್ತಿ ವಹಿಸುವ ಈತ 20ನೆಯ ಶತಮಾನದ ಆಧುನಿಕ ಸಂಪ್ರದಾಯದ ಪೂರ್ವಸೂಚಿಯಾಗಿದ್ದಾನೆ. ತಿಯೋಡೋರ್ ಫಾಂಟೇನ್ (1819-1898) ತನ್ನ ಇರುಂಗನ್ (ತಪ್ಪುಗಳು, ತೊಂದರೆಗಳು 1888) ಮತ್ತು ಎಫಿ ಬ್ರೀಸ್ಟ್ (1895) ಮುಂತಾದ ಕಾದಂಬರಿಗಳಲ್ಲಿ ಜರ್ಮನ್ ಆಳರಸರ ದೌರ್ಬಲ್ಯಗಳನ್ನು ವಸ್ತುನಿಷ್ಟ ವ್ಯಂಗ್ಯಶೈಲಿಯಲ್ಲಿ ಬಹು ಸೂಕ್ಷ್ಮವಾಗಿ ಚಿತ್ರಿಸಿದ್ದಾನೆ. ಭಾವಗೀತೆಗಳ ವಿಷಯ ಹೇಳುವುದಾದರೆ, ಕ್ಲಾಸಿಕಲ್ ಹಾಗೂ ರೊಮ್ಯಾಂಟಿಕ್ ತತ್ತ್ವಗಳಿಗನುಸಾರವಾಗಿ ಬರೆದ ಕೃತಿಗಳು 19ನೆಯ ಶತಮಾನದ ಕವಿಗಳ ಮೇಲೆ ಪ್ರಬಲ ಪ್ರಭಾವ ಬೀರಿದವು. ಇಂಥ ಕವಿಗಳಲ್ಲಿ ಅಗ್ರಗಣ್ಯರಾದ ರ್ಯೂಕರ್ಟ್ (1788-1866) ಮತ್ತು ಪ್ಲಾಟೆನ್ (1796-1835) ಅಸದೃಶ ಪರಿಪೂರ್ಣ ಅಭಿವ್ಯಕ್ತಿಯನ್ನು ಸಾಧಿಸಿದರೂ ಇವರ ಕಾವ್ಯದಲ್ಲಿ ಸ್ವೋಪಜ್ಞತೆಯ ಮಿಡಿತ ಕೇಳಿಬರುವುದಿಲ್ಲ. ಇ. ಮ್ಯೋರಿಕೆ, (1804-1875) ಮತ್ತು ಎ. ಫನ್ ಡೆರಾಸ್ಟೆ-ಹ್ಯೂಲ್‍ಷೋಫ್ (1797-1848) ಈ ಇಬ್ಬರ ಕಾವ್ಯಕ್ಕೆ ಮುಖ್ಯವಾಗಿ ನಿಸರ್ಗವೇ ಪ್ರೇರಣೆ. ಮ್ಯೋರಿಕೆ, ಪ್ರಾಚೀನ ಜನಪದ ಕಾವ್ಯರೀತಿಯಲ್ಲಿ ಸರಳ ಭಾವಗೀತೆಗಳನ್ನು ರಚಿಸುವುದರಲ್ಲಿ ಅಗ್ರಮಾನ್ಯತೆ ಪಡೆದ. ಆ ಕಾಲದ ಹೆಸರಾಂತ ಶ್ರೇಷ್ಠಕವಿ ಹೈನ್ರಿಕ್ ಹೈನೆ (1799-1856) ರೊಮ್ಯಾಂಟಿಕ್ ಪ್ರಭಾವದಿಂದ ಪ್ರೇರಿತನಾಗಿದ್ದರೂ ರೊಮ್ಯಾಂಟಿಕ್ ತತ್ತ್ವವನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದ. ಅವನ ಬುಕ್ ಡೆರ್ ಲೀಡೆರ್ (ಗೀತೆಗಳ ಪುಸ್ತಕ 1827) ಪ್ರೇಮ ಕವನಗಳನ್ನೊಳಗೊಂಡ ಪ್ರಖ್ಯಾತ ಗೀತಸಂಗ್ರಹಗಳಲ್ಲೊಂದಾಗಿದೆ. ಇಂಪಾದ ಕಾವ್ಯ ರಚಿಸುವುದರಲ್ಲಿ, ನಾಟಕೀಯವಾದ ಪರಿಣಾಮ ಸಾಧಿಸುವುದರಲ್ಲಿ, ಪ್ರಭುತ್ವ ಗಳಿಸಿದ್ದ ಈತ ವ್ಯಂಗದಿಂದ ತುಂಬಿದ ಗದ್ಯ ರಚನೆಗಳನ್ನೂ ಪರಿಣಾಮಕಾರಿಯಾದ ರಾಜಕೀಯ ವಿಡಂಬನೆಗಳನ್ನೂ ಬರೆದ. ಡಾಯಿಟ್ಷ್‍ಲಾಂಡ್ ಐನ್ ವಿಂಟರ್ ಮೆರ್ಖನ್ (ಜರ್ಮನಿ-ಒಂದು ಹಿಮಗಾಲದ ಕಥೆ-1814) ಎನ್ನುವ ವಿಸ್ತಾರವಾದ ವಿಡಂಬನ ಕಾವ್ಯದಲ್ಲಿ ಆತ ತನ್ನ ವೈಯಕ್ತಿಕ ಜೀವನದಲ್ಲಿನ ಶತ್ರುಗಳನ್ನೂ ಜರ್ಮನಿಯ ರಾಜಕೀಯ ಸ್ಥಿತಿಗಳನ್ನೂ ತುಂಬ ಉಗ್ರವಾಗಿ ಟೀಕಿಸಿದ್ದಾನೆ. ವ್ಯಾಗ್ನರ್ ಮತ್ತು ನೀಟ್ಯೆ 19ನೆಯ ಶತಮಾನದ ಉತ್ತರಾರ್ಧದ ಪ್ರಮುಖ ಸಾಹಿತಿಗಳು ; ಅವರು ಮುಂದಿನ ಪೀಳಿಗೆಯ ಮೇಲೆ ಗಾಢವಾಗಿ ಪ್ರಭಾವಬೀರಿದವರು. ರಿಚರ್ಡ್ ವ್ಯಾಗ್ನರ್ (1813-1883) ತನ್ನ ಆಪೆರಗಳಿಗೆ ತಾನೇ ಸಾಹಿತ್ಯ ಪಾಠವನ್ನು ರಚಿಸಿ ಜರ್ಮನಿಯ ಪುರಾಣಕಥೆಗಳನ್ನು ಅಖ್ಯಾಯಿಕೆಗಳನ್ನು ಜನಪ್ರಿಯಗೊಳಿಸಿದ. ಪ್ರಾರಂಭದಲ್ಲಿ ನಿರಾಶವಾದಿಯಾಗಿದ್ದ ಆತ ಕ್ರಮೇಣ ಪಾರಮಾರ್ಥಿಕ ಶಕ್ತಿಗಳ ವಿಷಯವಾಗಿ ಸ್ಪಷ್ಟ ನಂಬಿಕೆ ತಳೆದ. ನೀಟ್ಯೆ (1844-1900) ಮೊಟ್ಟ ಮೊದಲು ವ್ಯಾಗ್ನರ್‍ನ ನಿಕಟ ಗೆಳೆಯನಾಗಿದ್ದವನು ಸ್ವಲ್ಪಕಾಲದ ನಂತರ ಅವನ ವಿರೋಧಿಯಾಗಿ ಕ್ರಿಶ್ಚನ್ ನೀತಿತತ್ತ್ವಗಳ ಸಂಕೋಲೆಯಿಲ್ಲದ ಉಗ್ರವ್ಯಕ್ತಿವಾದವನ್ನು ಪ್ರಬಲವಾಗಿ ಸಮರ್ಥಿಸಿದ. ಆತ ಆಲ್ಸೋಷ್ಪ್ರಾಖ್ ಜûರತುಷ್ಟ್ರ (ದಸ್ ಸ್ಪೋಕ್ ಜûರತುಷ್ಟ್ರ 1883-91) ಗ್ರಂಥದಲ್ಲಿ ವಿಭೂತಿ ಪುರುಷನ ಅವತಾರ ಎನ್ನುವ ಒಂದು ವಿನೂತನ ವೈಚಾರಿಕ ಕಲ್ಪನೆಯನ್ನು ಪ್ರತಿಪಾದಿಸಿದ.
ಇಪ್ಪತ್ತನೆಯ ಶತಮಾನ
ಬದಲಾಯಿಸಿನ್ಯಾಚುರಲಿಸಂ ಪಂಥ ಹತ್ತೊಂಬತ್ತನೆಯ ಶತಮಾನದ ತಿರುವಿನಲ್ಲಿ ಇಂಪ್ರೆನಿಷನಿಸಂ (ಸಮಷ್ಟಿ ಪರಿಣಾಮ ಪದ್ಧತಿ) ಎನ್ನುವ ಹೊಸ ಪ್ರವೃತ್ತಿಗೆ ಎಡೆಮಾಡಿಕೊಟ್ಟಿತು. ಅದನ್ನು ವಿರೋಧಿಸಿದವರೂ ಇದ್ದರು. ಅವರಲ್ಲಿ ಸ್ಟೀಫನ್ ಜಾರ್ಜ್‍ನ (1868-1933) ಗುಂಪಿಗೆ ಸೇರಿದ ಕವಿಗಳು ಉಕ್ತಿಯ ಚೆಲುವನ್ನೂ ಕೇವಲ ಭಾಷೆಯ ಕಲಾತ್ಮಕತೆಯನ್ನೂ ಸಾಧಿಸಲು ಪ್ರಯತ್ನಿಸಿದರು. ಜಾರ್ಜ್ ಕಾವ್ಯವನ್ನು ಒಂದು ಪವಿತ್ರ ಮುಡಿಪೆಂದು ಭಾವಿಸುವ ಪ್ರವಾದಿಯಂತೆ ಕಾಣಿಸಿಕೊಂಡ. ಫ್ರೆಂಚ್ ಸಾಂಕೇತಿಕ ಚಳವಳಿಯ (ಸಿಂಬಾಲಿಸಂ) ನೇರ ಪ್ರಭಾವಕ್ಕೆ ಸಿಕ್ಕಿದ ಆತ ಅಚ್ಚುಕಟ್ಟಾದ ಅಭಿವ್ಯಕ್ತಿ ಹಾಗೂ ರೂಪರಚನೆಗೆ ಹೆಚ್ಚು ಗಮನವಿತ್ತು ಭವ್ಯವಾದ ಕವನಗಳನ್ನು ಬರೆದ. ಆರ್. ಡೇಮಡಲ್‍ನ (1863-1920) ಕಾವ್ಯಶೈಲಿ ಇಂಪ್ರೆಷನಿಸ್ಟಿಕ್ ಮಾದರಿಯದು. ಶಬ್ದವಿನ್ಯಾಸದ ಮೂಲಕವೇ ಮನಸ್ಸಿನ ಹಲವು ವಿನ್ಯಾಸಗಳನ್ನು ಧ್ವನಿಸುವುದು, ಮುಚ್ಚುಮರೆಯಿಲ್ಲದ ಲೈಂಗಿಕ ಜೀವನದ ಚಿತ್ರಣ, ಆಧುನಿಕ ನಾಗರಿಕ ಜೀವನದ ಸಾಮಾಜಿಕ ಕ್ಲೇಶಗಳ ವರ್ಣನೆ-ಮುಂತಾದ ನ್ಯಾಚುರಲಿಸ್ಟ್ ಪಂಥದ ವಸ್ತುಗಳನ್ನೇ ಆತ ಆರಿಸಿಕೊಳ್ಳುತ್ತಾನೆ. ಜಾರ್ಜ್‍ನ ಗುಂಪಿಗೆ ಸೇರಲು ನಿರಾಕರಿಸಿದ ಹ್ಯೂಗೋ ಫಾನ್ ಹಾಫ್‍ಮನ್‍ಸ್ಟಾಲ್ (1874-1929) ರೊಮ್ಯಾಂಟಿಕ್ ಪಂಥವನ್ನು ಅನುಸರಿಸಿ ಅತ್ಯಂತ ಮಾಧುರ್ಯ ಪೂರ್ಣವಾದ ಕಾವ್ಯಶೈಲಿಯನ್ನು ರೂಪಿಸಿದ. ಮನುಷ್ಯನ ಭಾವನೆಗಳನ್ನು ಸೂಕ್ಷ್ಮವಾಗಿ ವಿವೇಚಿಸಿದ. ಆದರೆ ಭಾವನೆಗಳನ್ನು ಸೂಕ್ಷ್ಮವಾಗಿ ಬಳಸುವುದು ಭಾಷೆಯಿಂದ ಸಾಧ್ಯವಾಗದ ಕೆಲಸ ಎಂಬ ಚಿಂತೆ ಅವನನ್ನು ಸದಾಕಾಲವೂ ಕಾಡಿತು. ಆತ ಬರೆದ ಗ್ರಂಥಗಳು ಇವು : ಪ್ರಬಂಧಗಳು : ಐನ್ ಬ್ರೀಫ್ ಫಾನ್ ಲಾರ್ಡ್ ಚಾಂಡೋಸ್ (ಲಾರ್ಡ್ ಚಾಂಡೋಸನ ಪತ್ರ-1901). ಈತನ ಮೊಟ್ಟಮೊದಲಿನ ನಾಟಕಗಳೆಂದರೆ (1800ರ ಸುಮಾರಿನಲ್ಲಿ ಬರೆದವು)-ಗೆಸ್ಟರ್ನ್ (ನೆನ್ನೆ ದಿನ), ಡೆರ್ ಟೋರ್ ಉಂಟ್ ಡೆರ್ ಟೋಟ್ (ಮೂಢ ಮತ್ತು ಮರಣ), ಡೆರ್ ಟೋಟ್ ಡೆಸ್ ಟಿಟ್ಸಿಯನ್ (ಟಿಟ್ಸಿಯನ್ನನ ಮರಣ). ಸೌಂದರ್ಯಾನ್ವೇಷಿಯೊಬ್ಬ ಬದುಕಿನ ಜಟಿಲತೆಯನ್ನು ಗ್ರಹಿಸುವುದು ತನ್ನಿಂದ ಸಾಧ್ಯವಿಲ್ಲವೆಂದು ಮನಗಾಣುವ ಸಮಸ್ಯೆಯನ್ನು ಈ ನಾಟಕಗಳಲ್ಲಿ ಚಿತ್ರಿಸಲಾಗಿದೆ. ಆ ಮೇಲಿನ ನಾಟಕಗಳಲ್ಲಿ ನೈತಿಕ ಸಮಸ್ಯೆಗಳ ಅರಿವು ನಿಚ್ಚಳವಾಗಿ ಕಾಣಿಸಿಕೊಂಡಿದೆ. ಅತ್ಯಂತ ನವಿರಾದ ಪಾತ್ರ ವಿಶ್ಲೇಷಣೆಯ ಮೂಲ ಅವು ಮನಮುಟ್ಟುವಂತಿವೆ. ಅವುಗಳಲ್ಲಿ ನಾವು ಮುಖ್ಯವಾಗಿ ಏಡರ್‍ಮನ್ (1911), ಮತ್ತು ಡೆರ್ ಷ್ವಿರಿಗೆ (1921) ನಾಟಕಗಳನ್ನು ಹೆಸರಿಸಬಹುದು. ಈತ ರಿಚರ್ಡ್‍ಸ್ಟ್ರೌಸ್‍ನ ಆಪೆರಗಳಿಗಾಗಿ ಹಲವಾರು ಸಾಹಿತ್ಯ ಪಾಠಗಳನ್ನು ಬರೆದಿದ್ದಾನೆ. ಈ ಶತಮಾನದ ಜರ್ಮನ್ ಸಾಹಿತ್ಯದ ಪೂರ್ವಾರ್ಧದ ಚರಿತ್ರೆಯಲ್ಲಿ ಅತ್ಯಂತ ವ್ಯಾಪಕ ಪ್ರಭಾವ ಬೀರಿದ ಚಳವಳಿಯೆಂದರೆ ಎಕ್ಸ್‍ಪ್ರೆಷನಿಸಂ (ಅಭಿವ್ಯಕ್ತಿವಾದ). ಇದರಲ್ಲಿ ಬಾಹ್ಯ ಲೋಕದ ಚಿತ್ರಣಕ್ಕಿಂತ ಹೆಚ್ಚಾಗಿ ಬದುಕಿನ ಅಂತರಂಗದ ಚಿತ್ರಣದ ಮೇಲೆ ಒತ್ತುಹಾಕಲಾಯಿತು. ವಾಸ್ತವಲೋಕದಲ್ಲಿರುವುದನ್ನು ಇದ್ದಹಾಗೆ ಚಿತ್ರಿಸುವುದರ ಬದಲು ಮನಸ್ಸಿನ ಗತಿಸ್ಥಿತಿಗಳನ್ನು ಭಾವೋದ್ರೇಕವನ್ನುಂಟು ಮಾಡುವಂಥ ಧ್ವನಿಪೂರ್ಣ ಭಾಷೆಯಲ್ಲಿ ರೂಪಿಸಬೇಕು. ಯಾವೊಬ್ಬ ವ್ಯಕ್ತಿಯ ಮನೋವಿಶ್ಲೇಷಣೆಗಿಂತ ಹೆಚ್ಚಾಗಿ ಸಾಂಕೇತಿಕ ಪ್ರಾತಿನಿಧಿಕ ಮಾದರಿಗಳಂತಿರುವ ವ್ಯಕ್ತಿವಿಶೇಷಗಳ ಸಂದರ್ಭವನ್ನು ತಳಸ್ಪರ್ಶಿಯಾಗಿ ಅನ್ವೇಷಿಸಬೇಕು. ಇದು ಎಕ್ಸ್‍ಪ್ರೆಷನಿಸಂ ಉದ್ದೇಶಿಸಿದ ಅಂಶಗಳು. ಎಕ್ಸ್‍ಪ್ರಷನಿಸ್ಟ್ ಕಾವ್ಯದ ಅಗ್ರಪ್ರವರ್ತಕರಾದ ಹೈಮ್ (1887-1912), ಟ್ರಾಕ್ಲ್ (1887-1914) ಮತ್ತು ಸ್ಟ್ಯಾಡ್ಲರ್ (1883-1914) ಚಿಕ್ಕ ವಯಸ್ಸಿನಲ್ಲೇ ಕಣ್ಮರೆಯಾದರೂ ಎಕ್ಸ್‍ಪ್ರೆಷನಿಸ್ಟ್ ತತ್ತ್ವಗಳು ಇಪ್ಪತ್ತನೆಯ ಶತಮಾನದ ಅನೇಕ ಜರ್ಮನ್ ಸಾಹಿತಿಗಳ ಮೇಲೆ ಗಣನೀಯ ಪ್ರಭಾವ ಬೀರಿದವು. ಅವರಲ್ಲಿ ಮುಖ್ಯರೆಂದರೆ ಬ್ರೆಕ್ಟ್, ಕಾಫ್ಕ, ಬೆನ್, ಕೈಸರ್, ವೆರ್ಫೆಲ್, ಬೆರ್‍ಟೋಲ್ಟ್ ಬ್ರೆಕ್ಟ್ (1898-1956) ಕಲೆ ಮತ್ತು ವಾಸ್ತವತೆಗಳೆರಡನ್ನೂ ಪರಸ್ಪರ ದೂರವಿಟ್ಟಿರಬೇಕೆಂದು ವಾದಿಸಿದ. ಅತ್ಯಂತ ಭಾವೋದ್ರಿಕ್ತ ರೀತಿಯ ಬರೆವಣಿಗೆ ಅವನದು. ಆ ಮಟ್ಟಿಗೆ ಅವನದೂ ಎಕ್ಸ್‍ಪ್ರೆಷನಿಸ್ಟರ ರೀತಿಯೇ, ಆದರೆ ಮಾಕ್ರ್ಸ್‍ವಾದದಿಂದ ಹೊಮ್ಮುವ ಹರಿತವಾದ ಅವನ ಸಾಮಾಜಿಕ ವಿಮರ್ಶೆಯಿಂದಾಗಿ ಅವನ ಕೃತಿಗಳು ವಿಶಿಷ್ಟ ಗುಣಗಳನ್ನು ಪಡೆದಿವೆ. ಮುಟ್ಟರ್ ಕರೇಜ್ ಉಂಟ್ ಈಯರೆ ಕಿಂಡರ್ (ಮದರ್ ಕರೇಜ್ ಮತ್ತು ಅವಳಿಮಕ್ಕಳು-1941), ಡೆರ್ ಗೂಟೆ ಮೆನ್ಷ್ ಫಾನ್ ಸೆûಟ್ಸುವಾನ್ (1943), ಡೆರ್ ಕಾಕಸಿಷೆ ಕ್ರೈಡೆಕ್ರೈಸ್ (ಕರೇಷಿಯದಲ್ಲಿನ ಸೀಮೆಸುಣ್ಣದ ವೃತ್ತ-1947) ಮುಂತಾದ ಅವನ ನಾಟಕಗಳು, ಮನುಷ್ಯನ ಭ್ರಷ್ಟಚಾರವನ್ನು ಚಿತ್ರಿಸಿ ಬದುಕು ಉತ್ತಮವಾಗಿ ವ್ಯವಸ್ಥೆಗೊಳ್ಳಬೇಕೆಂಬ ಆದರ್ಶದ ಹಂಬಲವನ್ನು ವ್ಯಕ್ತಪಡಿಸುವ ದೃಷ್ಟಾಂತಕಥೆಗಳಂತಿವೆ. ಫ್ರಾನ್ಸ್ ಕಾಫ್ಕ (1883-1924) ವಿಖ್ಯಾತನಾದದ್ದು ಅವನ ಮರಣಾನಂತರವೇ. ಅವನ ಕೃತಿಗಳಲ್ಲಿ, ವ್ಯಗ್ರವ್ಯಾಕುಲಗಳಿಂದ ತಲ್ಲಣಿಸುವ ವೈಯಕ್ತಿಕ ಪ್ರಪಂಚದ ಚಿತ್ರಣವಿದೆ. ಅದರಲ್ಲಿ ವ್ಯಕ್ತಿ ಅಗಾಧಶಕ್ತಿಗಳ ಕ್ವೈಗೆ ಸಿಕ್ಕಿ ನುಚ್ಚು ನೂರಾಗುವಂತೆ ಕಾಣುತ್ತದೆ. ಅವನ ಡೆರ್ ಪ್ರೊಟ್ಸೆಸ್ (ದಿ ಟ್ರಯಲ್ 1925) ಮತ್ತು ಡಾಸ್ ಷ್ಲೋಸ್ (ದಿ ಕ್ಯಾಸಲ್ 1926)-ಈ ಎರಡು ಮಹತ್ತ್ವಪೂರ್ಣ ಕಾದಂಬರಿಗಳಲ್ಲಿನ ಹಾಗೂ ಅವನ ಕಥೆಗಳಲ್ಲಿನ ಕಥಾನಾಯಕರು ನ್ಯಾಯ ನೆಮ್ಮದಿಗಳಿಗಾಗಿ ನಿರಂತರವಾಗಿ ಶೋಧಿಸುತ್ತ ತಡಕಾಡುತ್ತಾರೆ; ಕೊನೆಗೂ ಅವು ಅವರ ಕೈಗೆ ಎಟುಕದೆ ನುಸುಳಿ ಹೋಗುತ್ತವೆ. ಗಾಟ್‍ಫ್ರೀಡ್ ಬೆನ್‍ನ (1886-1956) ಕಾವ್ಯದಲ್ಲಿ ಬರುವ ಒರಟು ಒರಟಾದ ವಾಸ್ತವಿಕ ವರ್ಣನೆಗಳು ಕಾವ್ಯತ್ಮಕತೆಯಿಂದ ತುಂಬಿವೆ, ಅನಂತರ ಬರೆದ ಅವನ ಕವನಗಳಲ್ಲಿ (ನಿಹಿಲಿಸಮ್) ಶೂನ್ಯತತ್ತ್ವಗಳು ಅಸ್ಪಷ್ಟವಾದ ಅಭಿವ್ಯಕ್ತಿ ಪಡೆದಿವೆ. ಜಾರ್ಜ್‍ಕೈಸರ್ (1878-1945) ಸ್ವಲ್ಪಕಾಲದವರೆಗೆ ಎಕ್ಸ್‍ಪ್ರೆಷನಿಸ್ಟ್ ಚಳವಳಿಯ ಪ್ರಮುಖ ನಾಟಕಕಾರನಾಗಿದ್ದ. ಒಂದನೆಯ ಮಹಾಯುದ್ಧದ ಕಾಲದಲ್ಲಿ ಹಾಗೂ ಯುದ್ಧಾನಂತರ ಬರೆದ ಅವನ ನಾಟಕಗಳಲ್ಲಿ ಸಮಕಾಲೀನ ಸಾಮಾಜಿಕ ವ್ಯವಸ್ಥೆಯನ್ನು ಕುರಿತ ಉಗ್ರಖಂಡನೆ ಇದೆ. ಕವಿ ಫ್ರಾನ್ಸ್ ವೆರ್ಫೆಲ್ (1890-1945) ಮೊಟ್ಟಮೊದಲು ಎಕ್ಸ್‍ಪ್ರೆಷನಿಸ್ಟ್ ತತ್ತ್ವಗಳನ್ನು ಅಳವಡಿಸಿಕೊಂಡು ಆಮೇಲಿನ ಕವನಗಳಲ್ಲಿ ಗಾಢವಾದ ತನ್ನ ಧಾರ್ಮಿಕ ನಂಬಿಕೆಗಳನ್ನು ವ್ಯಕ್ತಪಡಿಸಿದ್ದಾನೆ. ಆಸ್ಟ್ರಿಯದ ಎರಡು ಮುಖ್ಯ ಸಾಂಸ್ಕೃತಿಕ ಕೇಂದ್ರಗಳಾದ ವಿಯನ್ನ ಹಾಗೂ ಪ್ರಾಗ್ ಇಪ್ಪತ್ತನೆಯ ಶತಮಾನದ ಮೊದಲಿನ ಎರಡು ದಶಕಗಳ ಅವಧಿಯಲ್ಲಿ, ಸಾಹಿತ್ಯಕ ಚಟುವಟಿಕೆಗಳಿಗೂ ತವರಾದುವು. ಕಾಫ್ಕ, ವೆರ್ಫೆಲ್, ಹಾಗೂ 20ನೆಯ ಶತಮಾನದ ಅತ್ಯಂತ ಮಹತ್ತ್ವಪೂರ್ಣ ಕವಿಯಾದ ರೈನರ್ ಮರೀಯಾ ರಿಲ್ಕೆ (1875-1926) ಈ ಮೂವರು ಪ್ರಾಗ್‍ನಿಂದ ಬಂದವರು. ರಿಲ್ಕೆ ತನ್ನ ಡಾಸ್ ಸ್ಟುಂಡೆನ್‍ಬುಕ್ (ದಿ ಬುಕ್ ಆಫ್ ಅವರ್ಸ್-1905) ಎಂಬ ಭಾವಗೀತೆಗಳ ಸಂಗ್ರಹದಲ್ಲಿ ಆಧ್ಯಾತ್ಮಿಕವಾದ ಬದುಕನ್ನು ಕಾಣಲು ತಾನು ನಡೆಸಿದ ಅನ್ವೇಷಣೆಯನ್ನು ಚಿತ್ರಿಸಿದ್ದಾನೆ. ನೋಯೆ ಗೆಡಿಕ್ಟೆಯಲ್ಲಿ (1907-08 ಹೊಸ ಕವನಗಳು) ವಸ್ತುಪ್ರಧಾನವಾದ ಬಾಹ್ಯಪ್ರಂಪಚದ ಅಂತರಾರ್ಥವನ್ನು ಶೋಧಿಸುತ್ತಾನೆ. ಸತ್ತ್ವಪೂರ್ಣವಾದ ಪ್ರತೀಕಗಳ ಮೂಲಕ ಕವಿ ಡೂಯಿನೆಸರ್ ಎಲಿಗಿಯೆನ್ (1923), ಜೊನೆಟೆ ಅನ್ ಆರ್ಫಿಯಸ್ (1923)-ಎಂದು ಮುಂತಾದ ತನ್ನ ಕವಿತೆಗಳಲ್ಲಿ ತನ್ನ ಏಕಾಕಿತನದ ಯಾತನೆಯನ್ನು ಕಾವ್ಯರಚನೆಯಿಂದ ಲಭಿಸುವ ಸಂತೃಪ್ತಿಯನ್ನು ನಿವೇದಿಸುತ್ತಾನೆ. ಆರ್ಥರ್ ಪ್ನಿಟ್ಸ್‍ಲರ್‍ನ (1862-1931) ಕಥೆಗಳಲ್ಲಿ ವಿಯನ್ನ ಹಾಗೂ ಆಸ್ಟ್ರಿಯದ ಸಂಸ್ಕೃತಿಯ ವಿಶ್ಲೇಷಣೆ ಇದೆ. ಇವನ ಲ್ಯೂಟ್‍ನಂಟ್ ಗುಷ್ಟ್‍ಲ್ ಎಂಬ ಕಥೆಯ ರಚನೆ ಜೇಮ್ಸ್ ಜಾಯ್ಸ್‍ನ ಪ್ರಜ್ಞಾವಾಹಿ ತಂತ್ರದ ಪೂರ್ವಸೂಚಿಯಾಗಿದೆ. ಕಾದಂಬರಿಕಾರ ರಾಬರ್ಟ್ ಮ್ಯುಸಿಲ್ (1880-1952) ತನ್ನ ಚಿರಂತನ ಕೃತಿಯಾದ ಡೆರ್ ಮನ್ ಓನೆ ಐಗೆನ್ ಷ್ಯಾಫ್ಟನ್ (ದಿ ಮ್ಯಾನ್ ವಿದೌಟ್ ಕ್ವಾಲಿಟೀಸ್(1930-32) ಎಂಬ ಕಾದಂಬರಿಯಲ್ಲಿ ಆಧುನಿಕ ಯುಗದ ಮಾನಸಿಕ ಅನಿಶ್ಚತೆಯನ್ನು ವಿವೇಚಿಸುತ್ತಾನೆ. ಹುಸಿಮೌಲ್ಯಗಳನ್ನು ವ್ಯಂಗ್ಯವಾಗಿ ಗೇಲಿ ಮಾಡುತ್ತಾನೆ. ನೊಬೆಲ್ ಪ್ರಶಸ್ತಿ ವಿಜೇತ ತಾಮಸ್ ಮನ್ (1875-1955) ಈ ಯುಗದ ಸರ್ವಶ್ರೇಷ್ಠ ಕಾದಂಬರಿಕಾರ. ಸಮಾಜದಲ್ಲಿ ಕಲಾವಿದನ ಸ್ಥಾನಮಾನಗಳೇನು ಎಂಬ ಪ್ರಶ್ನೆ ಅವನನ್ನು ನಿರಂತರವಾಗಿ ಕಾಡುತ್ತಿದೆಯೆಂದು ಅವನ ಕೃತಿಗಳುದ್ದಕ್ಕೂ ಕಾಣಬಹುದು. ಅವನ ಮೊಟ್ಟಮೊದಲಿನ ಕೃತಿಗಳಲ್ಲಿ ಅತಿಪರಿಷ್ಕಾರದ ಫಲವಾಗಿ ಸೃಷ್ಟಿಯಾಗುವ ಕಲೆ ಇಳಿಗತಿಯ ಪ್ರತೀಕವೆಂದು ಅವನು ಭಾವಿಸಿದ್ದನೆಂಬುದು ವ್ಯಕ್ತವಾಗುತ್ತದೆ. ಅವನು ಅತಿ ಪರಿಷ್ಕಾರ ರೋಗಚಿಹ್ನೆ ಎನ್ನುತ್ತಾನೆ. ಆದರೆ ಡೆರ್ ಟ್ಸೌಬರ್‍ಬರ್ಗ್ (ದಿ ಮ್ಯಾಜಿಕ್ ಮೌಂಟನ್-1924) ಮತ್ತು ಆ ಮೇಲಿನ ಕೃತಿಗಳಲ್ಲಿಯೂ ಅವನು ಕಲೆಯ ಕ್ರಿಯಾತ್ಮಕ ಶಕ್ತಿ ಹಾಗೂ ಮಾನವತಾ ವಾದಗಳ ಮೇಲೆ ಒತ್ತು ಹಾಕುತ್ತಾನೆ. ಅವನ ಪ್ರಪ್ರಥಮ ಕೃತಿ ಬಂಡೆನ್ ಬ್ರೂಕ್ಸ್ (1901) ಕಾದಂಬರಿಯಲ್ಲಿ ಹತ್ತೊಂಬತ್ತನೆಯ ಶತಮಾನದ ಬೂಜ್ರ್ವಾ ಸಮಾಜದ ಚಿತ್ರಣವಿದೆ. ಜೋಸೆಫ್ ಉಂಟ್ ಸೈನೆ ಬ್ರ್ಯೂಡರ್ (ಜೋಸೆಫ್ ಅಂಡ್ ಹಿಸ್ ಬ್ರದರ್ಸ್ 1933-45) ಎಂಬ ನಾಲ್ಕು ಭಾಗದ ಕಾದಂಬರಿಯಲ್ಲಿ ಸಾಹಿತ್ಯಕ್ಕೆ ಪುರಾಣ ಪರಂಪರೆಯ ಬುನಾದಿ ಒದಗಿಸುವ ಪ್ರಯತ್ನ ಮಾಡಿದ್ದಾನೆ. ಡಾ. ಫೌಸ್ಟಸ್ (1947) ಕಾದಂಬರಿಯಲ್ಲಿ ಜರ್ಮನರ ಸ್ವಭಾವವನ್ನೂ ಮನೋಧರ್ಮವನ್ನೂ ಕುರಿತ ವಿಶ್ಲೇಷಣೆ ಇದೆ. ನಾಟ್ಸಿ ತತ್ತ್ವದ ಉತ್ಕರ್ಷೆ, ಪ್ರತಿಭೆ ಹಾಗೂ ಮನೋವಿಕಾರಗಳಿಗಿರುವ ಸಂಬಂಧ-ಇವುಗಳ ಪ್ರಸ್ತಾಪ ಕಾದಂಬರಿಯಲ್ಲಿ ಬರುತ್ತದೆ. ಬೆಕೆನ್ಟ್‍ನಿಸೆ ಡೆಸ್ ಹೋಕ್‍ಸ್ಟಾಪ್ಲರ್ಸ್ ಫೆಲಿಕ್ಸ್ ಕ್ರುಲ್ (ಕನ್‍ಫೆಷನ್ಸ್ ಆಫ್ ಕ್ರುಲ್-ದಿ ಕಾನ್‍ಫಿಡೆನ್ಸ್ ಮ್ಯಾನ್ 1922-54) ಎಂಬುದು ಅರ್ಧ ಕಲಾವಿದನೂ ಅರ್ಧ ದುರುಳನೂ ಆದ ಅಲೆಮಾರಿ ಕಥಾನಾಯಕನೊಬ್ಬನಿಗೆ ಸಂಬಂಧಿಸಿದ ಸಾಹಸದ ಕಥೆ, ತಾಮಸ್ ಮನ್ನನ ಸೋದರ ಹೈನ್ರಿಕ್ (1871-1950) ಉಗ್ರತರ ರಾಜಕೀಯ ತತ್ತ್ವಗಳಲ್ಲಿ ನಂಬಿಕೆಯಿಟ್ಟವ ಅವನ ಕಾದಂಬರಿಗಳಲ್ಲಿ ಒಂದನೆಯ ಮಹಾಯುದ್ಧ ಪೂರ್ವದ ಜರ್ಮನಿಯ ರಾಜಕೀಯ, ಸಾಮಾಜಿಕ ವ್ಯವಸ್ಥೆಗಳನ್ನು ಕುರಿತ ಕಟುವಾದ ಖಂಡನೆ ಇದೆ. ಅವುಗಳಲ್ಲಿ ಮುಖ್ಯವಾಗಿ ಪ್ರೊಫೆಸರ್ ಉನ್‍ರಾಟ್ (1905), ಡೆರ್ ಉಂಟರ್ ಟಾನ್ (ದಿ ಸಬ್ಜೆಕ್ಟ್ 1918) ಇವನ್ನು ಹೆಸರಿಸಬಹುದು. ನೊಬೆಲ್ ಪ್ರಶಸ್ತಿ ವಿಜೇತನಾದ ಇನ್ನೊಬ್ಬ ಹೆಸರಾಂತ ಕಾದಂಬರಿಕಾರ ಹರ್ಮನ್ ಹೆಸ್‍ನ (1877-1962) ವೈಶಿಷ್ಟ್ಯವೆಂದರೆ ಆತ ಕೊಡುವ ಅಂತರಂಗ ಚಿತ್ರಣ. ಮನಸ್ಸಿನ ಒಳಪದರಗಳಲ್ಲಿನ ಆಗುಹೋಗುಗಳನ್ನು ಕುರಿತು ಬರೆಯುವುದರಲ್ಲಿ ಆತ ಹೆಚ್ಚು ಆಸಕ್ತಿ ತೋರಿಸುತ್ತಾನೆ. ಅತಿ ಸೂಕ್ಷ್ಮ ಹೃದಯಿಗಳಾದ ಅವನ ಕಥಾನಾಯಕರು, ತಾವು ಎದುರಿಸಬೇಕಾದ ನಿಷ್ಕರುಣ ಪರಿಸರದಲ್ಲಿ ದಾರಿ ಕಾಣದೆ ತೊಳಲುತ್ತ ಹೋರಾಡುತ್ತಾರೆ. ಡೆರ್ ಸ್ಟೆಪೆನ್ ವುಲ್ಫ್ (1927), ಡಾಸ್ ಗ್ಲಾಸ್ಪರ್‍ಲೆನ್‍ಷ್ಪೀಲ್ (ದಿಗೇಮ್ ಆಫ್ ಗ್ಲಾಸ್‍ಪೆರ್ಲ್ಸ್ 1943) ಅವನ ಮುಖ್ಯ ಕೃತಿಗಳು. ಜರ್ಮನಿಯ ಮೂರನೆಯ ರೈಕ್ ಆಡಳಿತ ಕಾಲದಲ್ಲಿ ಹಲವಾರು ಪ್ರಖ್ಯಾತ ಸಾಹಿತಿಗಳು ದೇಶಬಿಟ್ಟು ಹೋಗಬೇಕಾಯಿತು. ಹಾಗೆ ಮಾಡದೆ ದೇಶದಲ್ಲೇ ಉಳಿದುಕೊಂಡವರ ಕೃತಿಗಳ ಪ್ರಕಟಣೆ ಕಷ್ಟ ಸಾಧ್ಯವಾಯಿತು. ಅವರಲ್ಲಿ ಕೆಲವರು ತಮ್ಮ ಪ್ರಾಣವನ್ನೇ ತರಬೇಕಾಯಿತು. ಎರಡನೆಯ ಮಹಾಯುದ್ಧಾನಂತರ ನಾಟ್ಸಿ ಆಳ್ವಿಕೆಯ ಕಾಲದಲ್ಲಿ ಪ್ರತಿಬಂಧಕಾಜ್ಞೆಗೆ ಗುರಿಯಾಗಿದ್ದ ಹಲವು ಸಾಹಿತ್ಯಕೃತಿಗಳು ಲೇಖಕರ ಮರಣಾಣಂತರ ಪ್ರಕಟವಾದವು. ಕೊರೆಬಿದ್ದು ಹೋಗಿದ್ದ ಜರ್ಮನ್ ಸಾಹಿತ್ಯವನ್ನು ಅವು ಶ್ರೀಮಂತಗೊಳಿಸಿದವು. ಸುಮಾರು 20 ವರ್ಷದಿಂದೀಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ಹಲವು ಹೊಸ ಹೆಸರುಗಳು ಕಣ್ಣು ಸೆಳೆದಿವೆ. ಇನ್ನಷ್ಟು ಕಾಲದ ಮೇಲೆ, ಹೆಚ್ಚು ವಸ್ತುನಿಷ್ಠವಾಗಿ ನೋಡಲು ಸಾಧ್ಯವಾದಾಗ ಮಾತ್ರ ಈ ಸಾಹಿತಿಗಳನ್ನು ಕುರಿತ ನ್ಯಾಯವಾದ ವಿಮರ್ಶೆ ಸಾಧ್ಯವಾದೀತು. ಇಲ್ಲಿ ಹೊಸಕಾಲದ ಕೆಲವು ಪ್ರವೃತ್ತಿಗಳನ್ನು ಮಾತ್ರ ಸೂಚಿಸಬಹುದು. 1947ರಲ್ಲಿ ಅಸ್ಥಿತ್ವಕ್ಕೆ ಬಂದ 'ನಲ್ವತ್ತೇಳರ ಗುಂಪು ಯುದ್ಧಾನಂತರದ ಜರ್ಮನಿಯ ಸಾಹಿತ್ಯವನ್ನು ಪ್ರತಿನಿಧಿಸುವ ವಿಶಿಷ್ಟ ಸಮುದಾಯವಾಯಿತು. ಇವರಲ್ಲಿ ಬ್ಯೋಲ್, ಪಿ. ಸಿಲಾನ್, ಐ. ಬಕ್‍ಮನ್, ಜಿ, ಗ್ರಾಸ್, ಲೆಂಟ್ಸ್, ಡಬ್ಲ್ಯು, ವಾಲ್ಸರ್ ಮುಂತಾದವರು ಸೇರಿದ್ದಾರೆ. ಈ ಸಾಹಿತಿಗಳು ಏನೊಂದೂ ಸಂಕೋಚವಿಲ್ಲದೆ ಯುದ್ಧ, ಹಿಂಸೆ, ಮುಂತಾದ ಅನಿಷ್ಟಗಳನ್ನು ಖಂಡಿಸುತ್ತಾರೆ. ಅವರಿಗೆ ಬದುಕಿನ ಅತ್ಯಂತ ತುರ್ತಿನ ಸಾಮಾಜಿಕ, ತಾತ್ವಿಕ ಸಮಸ್ಯೆಗಳನ್ನು ಕುರಿತು ವಿಶೇಷ ಕಾಳಜಿ ಇದೆ. ಈ ಗುಂಪಿನ ಶ್ರೇಷ್ಠ ಸಾಧನೆಯೆಂದರೆ ಗ್ಯುಂತರ್ ಗ್ರಾಸ್ ರಚಿಸಿದ ಡೀ ಬ್ಲೆಕ್ಟ್ ರೋಮೆಲ್ (ದಿ ಟಿನ್ ಡ್ರಮ್-1959). ಇದು ಅಲೆಮಾರಿ ಕಥಾನಾಯಕನ ಸುತ್ತ ತಿರುಗುವ (ಪಿಕಾರೆಸ್ಕ್ ಮಾದರಿಯ) ಕಾದಂಬರಿ. ಪ್ರಬಲ ವಿಡಂಬನೆಯಿಂದ ಕೂಡಿದ್ದು ಮನಸ್ಸನ್ನು ಚುಚ್ಚಿ ಕೆರಳಿಸುವ ಈ ಕೃತಿ ಒಂದು ಅಪೂರ್ವ ವಿಲಕ್ಷಣ ಗ್ರಂಥ ಪೂರ್ವ ಜರ್ಮನಿಯಲ್ಲಿ ಸಾಹಿತ್ಯ ಈಗಲೂ ಸಾಂಪ್ರದಾಯಿಕ ಮಾರ್ಗದಲ್ಲೇ ಬೆಳೆಯುತ್ತಿದ್ದು ತನ್ನ ಪ್ರತ್ಯೇಕತೆಯನ್ನು ಇನ್ನೂ ಕಾಪಾಡಿಕೊಂಡಿದೆ. ನಿರಂಕುಶ ಪ್ರಭುತ್ವದ ಆಳ್ವಿಕೆಗೆ ತಕ್ಕಂತೆ ಸಾಹಿತ್ಯ ಸರ್ಕಾರದ ಪ್ರಚಾರಸಾಧನವಾಗಿದೆ. ಹೊಸ ಕಾರ್ಖಾನೆಗಳ ರಸ್ತೆಗಳ ಉದ್ಘಾಟನೆ, ಉತ್ಪತ್ತಿ ಹೆಚ್ಚಿಸುವ ಹೊಸ ಯೋಜನೆಗಳು-ಇವನ್ನು ಕುರಿತು ಕವನಗಳ ರಚನೆಯಾಗುತ್ತಿವೆ. ಗದ್ಯಸಾಹಿತ್ಯ ಸಮಾಜವಾದಕ್ಕನುಗುಣವಾದ ವಾಸ್ತವಿಕ ಚಿತ್ರಣಗಳನ್ನು ನೀಡುತ್ತಿದೆ. ಯುದ್ಧಾನಂತರದ ನಾಟಕಕ್ಷೇತ್ರಕ್ಕೆ ವಿಶೇಷ ಕೊಡುಗೆ ಸ್ವಿಟ್‍ಜûರ್‍ಲೆಂಡಿನಿಂದ ಬಂತು. ಮ್ಯಾಕ್ಸ್ ಫ್ರಿಷ್ (1911) ಹಾಗೂ ಫೀಡ್ರಿಕ್ ಡ್ಯೂರೆನ್‍ಮ್ಯಾಟ್ (1921)-ಆಧುನಿಕ ನೀತಿನಾಟಕಗಳನ್ನು (ಮೋರಾಲಿಟಿ ಪ್ಲೇಸ್) ಬರೆದು, ಸಮಕಾಲೀನ ಜೀವನದ ಭಾವ ದಾರಿದ್ರ್ಯವನ್ನು ಟೀಕಿಸಿದ್ದಾರೆ.