ಜಯಂತಿ ಎಂದರೆ ದೇವರ ಅವತಾರದಿನ. ಇತ್ತೀಚೆಗೆ ಮಹಾತ್ಮರ ಜನ್ಮ ದಿನಕ್ಕೂ ಈ ಹೆಸರು ಪ್ರಚಲಿತವಾಗಿದೆ. ಜಯಂ ಪುಣ್ಯಂ ಚ ಕುರತೇ ಜಯಂತೀ ಮಿತಿ ತಾಂ ವಿದುಃ- ಎಂದು ಸ್ಕಂದ ಪುರಾಣದಲ್ಲಿ ತಿಳಿಸಿರುವಂತೆ ದೇವರ ಜನ್ಮ ದಿವಸ ಜಯ ಮತ್ತು ಪುಣ್ಯಫಲಪ್ರದವಾದುದರಿಂದ ಇದಕ್ಕೆ ಜಯಂತಿ ಎಂಬ ಹೆಸರು ಅನ್ವರ್ಥವಾಗಿದೆ. ಎಂಟು ವಿಧ ದ್ವಾದಶಿಗಳಲ್ಲಿ ಜಯಂತಿ ಎನ್ನುವುದೂ ಒಂದು.

ಆಯಾ ದೇವತೆಗಳಿಗೆ ಗೊತ್ತಾದ ವೇಳೆಗಳಲ್ಲಿ ನಡೆಸುವ ಪೂಜೆಯೇ ಜಯಂತಿಯ ದಿನದ ಮುಖ್ಯ ಕಾರ್ಯ. ಇದಲ್ಲದೆ ಆಯಾ ಮೂರ್ತಿಯ ಉತ್ಸವವೂ ಅಂದು ವೈಭವದಿಂದ ನಡೆಯುತ್ತದೆ. ಶ್ರೀಕೃಷ್ಣನ ಜನ್ಮದಿವಸಕ್ಕೂ ಜಯಂತಿ ಎನ್ನುವುದು ರೂಢನಾಮವಾಗಿದೆ.

ಜನ್ಮದಿನಾಚರಣೆಯನ್ನು ಅವರವರು ಜನಿಸಿದ ತಿಂಗಳು, ತಿಥಿ ನಕ್ಷತ್ರ ಮತ್ತು ಜನನ ವೇಳೆಯನ್ನು ಗಮನಿಸಿ ಗೊತ್ತುಮಾಡಬೇಕೆಂದು ನಿಬಂಧಗ್ರಂಥಗಳಲ್ಲಿ ಉಕ್ತವಾಗಿದೆ. ಕೆಲವು ಜಯಂತಿಗಳಿಗೆ ನಕ್ಷತ್ರವನ್ನು ಮತ್ತೆ ಕೆಲವಕ್ಕೆ ತಿಥಿಯನ್ನು ಪ್ರಧಾನವಾಗಿ ಗಣನೆಗೆ ತೆಗೆದುಕೊಳ್ಳಬೇಕು. ಶ್ರೀಕೃಷ್ಣಜಯಂತಿಯಲ್ಲಿ ತಿಥಿ, ವಾರ, ನಕ್ಷತ್ರ-ಈ ಮೂರನ್ನೂ ಗಣನೆಗೆ ತೆಗೆದು ಕೊಳ್ಳುವುದುಂಟು.

ಇತ್ತೀಚೆಗೆ ನಡೆಸುತ್ತಿರುವ ಕೆಲವು ಮಹಾತ್ಮರ ಜಯಂತಿಗಳಿಗೆ ಆಂಗ್ಲೇಯ ಮಾಸ ಮತ್ತು ತಾರೀಖನ್ನು ಪರಿಗಣಿಸುತ್ತಾರೆ.

ಶ್ರೀವೈಷ್ಣವ ಸಂಪ್ರದಾಯದ ರೀತ್ಯ ಆಳ್ವಾರುಗಳು ಮತ್ತು ಕೆಲವು ಮಠಾಧಿಪತಿಗಳ ಜನ್ಮದಿನ ಸಮಾರಂಭವನ್ನು ತಿರುನಕ್ಷತ್ರ ಎಂಬ ಹೆಸರಿನಿಂದ ಆಚರಿಸುತ್ತಾರೆ.

ಮುಖ್ಯವಾದ ಕೆಲವು ಜಯಂತಿಗಳು ಬರುವ ದಿವಸಗಳ ವಿವರಗಳನ್ನೊಳಗೊಂಡ ಪಟ್ಟಿಯೊಂದನ್ನು ಮುಂದೆ ಕೊಟ್ಟಿದೆ.

	ಶ್ರೀರಾಮನವಮಿ:			ಚೈತ್ರಮಾಸದ ಶುಕ್ಲಪಕ್ಷದಲ್ಲಿ ನವಮೀ ತಿಥಿ ಮಧ್ಯಾಹ್ನ 	
         	 			ಕಾಲದಲ್ಲಿ ಇರುವ ದಿವಸ.
	ಮತ್ಸ್ಯಜಯಂತಿ: 	 		ಚೈತ್ರಮಾಸ ಕೃಷ್ಣಪಕ್ಷದ ಪಂಚಮಿ ಸೂರ್ಯೋದಯ   
         	 			ಕಾಲದಿಂದ ಆರು ಘಳಿಗೆಗಳ ಕಾಲ ಇರುವ ದಿವಸ.
	ಹಯಗ್ರೀವ ಜಯಂತಿ: 		ಶ್ರಾವಣ ಮಾಸದ ಶ್ರವಣ ನಕ್ಷತ್ರ-ಸೂರ್ಯೋದಯವಾದ
        				ಮೇಲೆ 10 ಘಳಿಗೆ ವ್ಯಾಪ್ತಿ ಇರುವ ದಿವಸ.
	ವಿಖನಚಾರ್ಯರ ಜಯಂತಿ: 	        ಹಯಗ್ರೀವ ಜಯಂತಿ ದಿವಸ.
        ಕಲ್ಕಿ ಜಯಂತಿ:			ಭಾದ್ರಪದ ಮಾಸ ಶುಕ್ಲಪಕ್ಷದ ದ್ವಿತೀಯ ಉದಯಕಾಲದಲ್ಲಿ
        				ಇರುವ ದಿವಸ.
  	ಪರಶುರಾಮ ಜಯಂತಿ:		ವೈಶಾಖಮಾಸ ಶುಕ್ಲಪಕ್ಷದ ತೃತೀಯೆ ರಾತ್ರಿ ಮೊದಲ 
        				ಯಾಮದಲ್ಲಿ ಇರುವ ದಿವಸ.
	ನೃಸಿಂಹ ಜಯಂತಿ:			ವೈಶಾಖಮಾಸ ಶುಕ್ಲಪಕ್ಷದ ಚತುರ್ದಶಿ ಅಸ್ತಮಯ ಕಾಲದಲ್ಲಿ
        				ಇರುವ ದಿವಸ.
	ವಾಮನ ಜಯಂತಿ:		ಭಾದ್ರಪದ ಮಾಸ ಶುಕ್ಲಪಕ್ಷದ ದ್ವಾದಶಿಯ ಮಧ್ಯಾಹ್ನ ಕಾಲದಲ್ಲಿ 
        				ಇರುವ ದಿವಸ.
	ವಾಲ್ಮೀಕಿ ಜಯಂತಿ:		ಆಶ್ವಯುಜ ಮಾಸದ ಹುಣ್ಣಿಮೆ ದಿವಸ.
	ಧನ್ವಂತರಿ ಜಯಂತಿ:		ಆಶ್ವಯುಜ ಮಾಸ ಕೃಷ್ಣ ಪಕ್ಷದ ತ್ರಯೋದಶಿಯ ರಾತ್ರಿ 
        				ಯಾಮದಲ್ಲಿರುವ ದಿವಸ. ಇದನ್ನು ಕಾರ್ತಿಕಮಾಸದಲ್ಲಿ 
        				ಕೆಲವರು ಆಚರಿಸುತ್ತಾರೆ.
	ಗೀತಾ ಜಯಂತಿ:			ಮಾರ್ಗಶಿರ ಮಾಸದ ಶುಕ್ಲ ಏಕಾದಶಿಯ ದಿವಸ.
        ಹನುಮ ಜಯಂತಿ:		ಮಾರ್ಗಶಿರ ಮಾಸದ ಶುಕ್ಲ ತ್ರಯೋದಶಿಯ ಮಧ್ಯಾಹ್ನ ಕಾಲದಲ್ಲಿರುವ 
        				ದಿವಸ.
	ದತ್ತಾತ್ರೇಯ ಜಯಂತಿ:		ಮಾರ್ಗಶಿರ ಮಾಸದ ಹುಣ್ಣಿಮೆ ಪ್ರದೋಷ ಕಾಲದಲ್ಲಿರುವ ದಿವಸ.
	ಗರುಡ ಜಯಂತಿ:			ಪುಷ್ಯಮಾಸದ ಅಮಾವಾಸ್ಯೆ ಉದಯಾದಿಹತ್ತನೆಯ ಘಳಿಗೆ
        				ವೇಳೆಯಲ್ಲಿರುವ ದಿವಸ.
	ವರಾಹ ಜಯಂತಿ:			ಮೇಷ ಮಾಸದ ರೇವತಿ ನಕ್ಷತ್ರ ಉದಯಾದಿ ಹತ್ತನೆಯ ಘಳಿಗೆ 
        				ವೇಳೆಯಲ್ಲಿರುವ ದಿವಸ.
	ವರದರಾಜ ಜಯಂತಿ:		ವೃಷಭಮಾಸದ ಹಸ್ತ ನಕ್ಷತ್ರ ಉದಯಾದಿ ಹತ್ತನೆಯ ಘಳಿಗೆ 
        				ವೇಳೆಯಲ್ಲಿರುವ ದಿವಸ.
	ವೆಂಕಟೇಶ ಜಯಂತಿ:		ಕನ್ಯಾಮಾಸದ ಶ್ರವಣ ನಕ್ಷತ್ರದ ದಿವಸ.
	ನಾರಾಯಣಸ್ವಾಮಿ ಜಯಂತಿ:	ಮೀನಮಾಸದ ಹಸ್ತ ನಕ್ಷತ್ರ ಉದಯಾದಿ ಹತ್ತನೆಯ ಘಳಿಗೆ 
        				ವೇಳೆಯಲ್ಲಿರುವ ದಿವಸ.
	ಶ್ರೀಕೃಷ್ಣ ಜಯಂತಿ:			ಸಿಂಹಮಾಸದ ಕೃಷ್ಣಪಕ್ಷದಲ್ಲಿ ಸಪ್ತಮೀ ಮತ್ತು ಕೃತ್ತಿಕ ನಕ್ಷತ್ರ 
        				ವೇಧೆ ಇಲ್ಲದ ರೋಹಿಣೀ ನಕ್ಷತ್ರದ ದಿವಸ.
	ದೇವಲದಾಸಯ್ಯ ಜಯಂತಿ:		ಚೈತ್ರಮಾಸದ ಶುಕ್ಲ ಪಕ್ಷ ಪಂಚಮಿ ಉದಯ ಕಾಲದಲ್ಲಿ 
       				ಇರುವ ದಿವಸ.
 	ಮಹಾವೀರ ಜಯಂತಿ:		ಚೈತ್ರಮಾಸದ ಶುಕ್ಲತ್ರಯೋದಶಿ ದಿವಸ.
        ಶಿವಾಜಿ ಜಯಂತಿ:			ವೈಶಾಖ ಶುಕ್ಲ ದ್ವಿತೀಯ ದಿವಸ.
        ಶಂಕರ ಜಯಂತಿ:			ವೈಶಾಖ ಶುಕ್ಲ ಪಂಚಮಿ ಉದಯ ಕಾಲದಲ್ಲಿ ಇರುವ 
        				ದಿವಸ.
	ವಾಸವೀ ಜಯಂತಿ:		ವೈಶಾಖ ಶುಕ್ಲ ದಶಮೀ ದಿವಸ.
        ಬಸವ ಜಯಂತಿ:			ವೈಶಾಖ ಶುಕ್ಲ ಪಕ್ಷದ ರೋಹಿಣಿ ಉದಯ ಕಾಲದಲ್ಲಿ ಇರುವ
        				ದಿವಸ.
	ಕನಕದಾಸ ಜಯಂತಿ:		ಕಾರ್ತಿಕ ಕೃಷ್ಣಪಕ್ಷದ ತೃತೀಯ ದಿವಸ.
        ರೇಣುಕಾರಾಧ್ಯರ ಜಯಂತಿ:		ಫಾಲ್ಗುಣ ಶುಕ್ಲಪಕ್ಷದ ತ್ರಯೋದಶೀ ದಿವಸ.
        ರಾಮನುಜಾಚಾರ್ಯರ ತಿರುನಕ್ಷತ್ರ:	ಮೇಷಮಾಸದ ಆದ್ರ್ರಾ ನಕ್ಷತ್ರ ಉದಯಾದಿ 10ನೆಯ ಘಳಿಗೆ 
        				ವೇಳೆಯಲ್ಲಿರುವ ದಿವಸ.
	ಗಾಂಧೀ ಜಯಂತಿ:			ಅಕ್ಟೋಬರ್ ತಿಂಗಳಿನ ಎರಡನೆಯ ತಾರೀಕು.
        ನೆಹರು ಜಯಂತಿ:			ನವೆಂಬರ್ ತಿಂಗಳಿನ 14ನೆಯ ತಾರೀಕು.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: