ಜಮ್ನಾಲಾಲ್ ಬಜಾಜ್ (ನವೆಂಬರ್ ೪, ೧೮೮೪ - ಫೆಬ್ರುವರಿ ೧೧, ೧೯೪೨) ಅವರ ಹೆಸರು ಭಾರತೀಯ ಚರಿತ್ರೆಯಲ್ಲಿ ಹಲವು ರೀತಿಯಲ್ಲಿ ಎದ್ದು ಕಾಣುವಂತದ್ದು.

ಜಮ್ನಾಲಾಲ್ ಬಜಾಜ್
Bornನವೆಂಬರ್ ೪, ೧೮೮೪
ರಾಜಾಸ್ಥಾನದ ಸಿಕಾರ ಜಿಲ್ಲೆಯ ಜಯಪುರ
Diedಫೆಬ್ರುವರಿ ೧೧, ೧೯೪೨
ವಾರ್ಧಾ
Occupation(s)ಸಮಾಜ ಸೇವಕರು, ರಾಜಕೀಯ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು, ಉದ್ಯಮಿ, ಬಜಾಜ್ ಸಮೂಹದ ಸಂಸ್ಥಾಪಕರು
Spouseಜಾನಕಿ ದೇವಿ ಬಜಾಜ್
Childrenಕಮಲಾಬಾಯಿ, ಕಮಲನಯನ, ಉಮಾ, ರಾಮಕೃಷ್ಣ, ಮದಾಲಸಾ
Parentಕನಿರಾಮ್ ಮತ್ತು ಬಿರ್ದಿಬಾಯಿ

ಬಜಾಜ್ ಸಂಸ್ಥೆಯ ಹೆಸರನ್ನು ಕೇಳರಿಯದವರು ಭಾರತದಲ್ಲಿ ಇಲ್ಲ. ಹಲವು ದಶಕಗಳಿಂದ ಬಜಾಜ್ ಸಂಸ್ಥೆ ಭಾರತದ ಜನಮನದಲ್ಲಿ ಚಿರವಿರಾಜಿತ. ಒಂದು ವ್ಯಾಪಾರೀ ಸಂಸ್ಥೆ ತನ್ನ ಉತ್ಪನ್ನಗಳಿಂದ ತನ್ನ ಲಾಭ ಗಳಿಕೆಯಿಂದ ಹೆಸರುವಾಸಿಯಾಗುವುದು ಸಹಜವೇ. ಆದರೆ ಈ ಸಂಸ್ಥೆಗೆ ಮೂಲಭೂತ ಅಡಿಪಾಯ ಹಾಕಿದ ವ್ಯಕ್ತಿ ಒಬ್ಬ ಮಹಾನ್ ತ್ಯಾಗಿ ಮತ್ತು ಅಪ್ರತಿಮ ರಾಷ್ಟ್ರಭಕ್ತನಾಗಿ ತನ್ನೆಲ್ಲವನ್ನೂ ರಾಷ್ಟ್ರಸೇವೆಗೆ ಎರೆದು ಸಂತನಾಗಿ ಜೀವನ ನಡೆಸಿದವ ಎಂಬುದು ಭಾರತೀಯ ಚರಿತ್ರೆಯ ಪುಟಗಳಲ್ಲಿ ಮಹತ್ವಪೂರ್ಣವೆನಿಸುವಂತೆ ದಾಖಲಾಗಿದೆ. ಇವರೇ ಜಮ್ನಾಲಾಲ್ ಬಜಾಜ್.

ಜೀವನ ಬದಲಾಯಿಸಿ

ಜಮ್ನಾಲಾಲ್ ಬಜಾಜ್ ಅವರು ಹುಟ್ಟಿದ ದಿನ ನವೆಂಬರ್ ೪, ೧೮೮೪. ಅವರ ಊರು ರಾಜಾಸ್ಥಾನದ ಸಿಕಾರ ಜಿಲ್ಲೆಯ ಜಯಪುರ. ತಂದೆ ಕನೀರಾಮ್ ಮತ್ತು ತಾಯಿ ಬಿರ್ದೀಬಾಯಿ. ಈ ಹೃದಯ ಬಡ ಸಂಪನ್ನ ದಂಪತಿಗಳು, ಮಕ್ಕಳಿಲ್ಲದೆ ಕೊರಗುತ್ತಿದ್ದ ವಾರ್ಧಾದ ವಾಪಾರಿಯಾದ ಸೇಠ್ ಬಚ್ಚಾರಾಜ್ ಮತ್ತು ಸಿದೀಬಾಯಿ ದಂಪತಿಗಳು ದತ್ತು ಕೊಡಿ ಎಂದು ಗೋಗರೆದಾಗ ಇಲ್ಲವೆನ್ನಲಾಗದೆ ಒಪ್ಪಿಕೊಂಡರು. ಅದಕ್ಕೆ ಅವರು ಹಣ ನೀಡಲು ಮುಂದೆ ಬಂದರೆ ಒಪ್ಪಿಕೊಳ್ಳದ ಅವರು, ಹೆಚ್ಚು ಒತ್ತಾಯಪಡಿಸಿದಾಗ ‘ಹಾಗೆ ಕೊಡಲೇಬೇಕೆಂಬುದು ನಿಮ್ಮ ಹಠವಾದರೆ ಬಾವಿ ತೋಡಿಸಿ. ಈ ಹಳ್ಳಿಯ ನೀರಿನ ತೀವ್ರ ಅಭಾವ ಸ್ವಲ್ಪ ಮಟ್ಟಿಗಾದರೂ ನೀಗಲಿ’ ಎಂದರು.

ಆರು ವರ್ಷ ವಯಸ್ಸಿನ ಜಮ್ನಾಲಾಲ್ ವಾರ್ಧಾದ ಮರಾಠಿ ಶಾಲೆಗೆ ಸೇರಿದ. ನಾಲ್ಕು ವರ್ಷ ಆಗುವಷ್ಟರಲ್ಲಿ ‘ಓದು ಸಾಕು. ವ್ಯಾಪಾರ ಕಲಿಯಲಿ’ ಎಂದು ಯೋಚಿಸಿದರು ಬಚ್ಚಾರಾಜರು. ಅಲ್ಲಿಗೆ ಹುಡುಗನ ಓದು ಮುಗಿಯಿತು, ವ್ಯಾಪಾರದ ಅನುಭವ ಪ್ರಾರಂಭ ವಾಯಿತು. ನಿಜವಾಗಿ ಜಮ್ನಾಲಾಲರನ್ನು ಸುಸಂಸ್ಕೃತರ ನ್ನಾಗಿ ಮಾಡಿದ್ದು ಪುಸ್ತಕದ ಓದಲ್ಲ, ಸಾಧನೆ, ಲೋಕಾನುಭವ ಮತ್ತು ತೀವ್ರ ಬುದ್ಧಿಶಕ್ತಿ.

ಬಾಲ್ಯದಲ್ಲೇ ಹೃದಯವಂತಿಕೆ ಬದಲಾಯಿಸಿ

ವ್ಯಾಪಾರವನ್ನು ಹುಡುಗ ಆಸಕ್ತಿಯಿಂದ ಕಲಿಯಲು ಉತ್ತೇಜನ ಕೊಡಬೇಕು ಎಂದು ಬಚ್ಚಾರಾಜರಿಗೆ ಅನ್ನಿಸಿತು. ಅದಕ್ಕಾಗಿ ಹುಡುಗನಿಗೆ ಪ್ರತಿದಿನ ಒಂದು ರೂಪಾಯಿ ಕೊಡುವ ಏರ್ಪಾಟು ಮಾಡಿದರು. ಹುಡುಗ ಹಣವನ್ನು ಹಾಳುಮಾಡದೆ ಜೋಪಾನವಾಗಿ ಕೂಡಿಡುತ್ತಿದ್ದ. ಅದನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಉಪಯೋಗಿಸಬೇಕೆಂದು ನಿರ್ಧರಿಸಿದ. ಈ ಕಾಲದಲ್ಲಿ (1906) ನಾಗಪುರದಿಂದ ಮರಾಠಿ ಪತ್ರಿಕೆ ’ಕೇಸರಿ’ ಯ ಹಿಂದಿ ಅವತರಣಿಕೆ ಪ್ರಕಟವಾಗಲು ಪ್ರಾರಂಭವಾಯಿತು. ಇದರ ಸಂಪಾದಕರು ಲೋಕಮಾನ್ಯ ಬಾಲಗಂಗಾಧರ ತಿಲಕರು. ಜಮ್ನಾಲಾಲನಿಗೆ ತಿಲಕರ ಈ ಪ್ರಯತ್ನ ಹಿಡಿಸಿತು. ಕೂಡಿಹಾಕಿದ್ದ ಹಣದಿಂದ ನೂರು ರೂಪಾಯಿ ಸಹಾಯ ಧನವನ್ನು ತಿಲಕರ ಯೋಜನೆಗೆ ಕಳುಹಿಸಿದ.

ಸಂಪತ್ತು ಮತ್ತು ಒಳ್ಳೆಯ ಹೆಸರು ಬದಲಾಯಿಸಿ

ಜಮ್ನಾಲಾಲರು ತಮ್ಮ ಕುಟುಂಬದಲ್ಲಿ ಕಂಡ ಹಲವಾರು ಸಾವುಗಳಿಂದ ಆದ ಅರಿವಿನಿಂದ ‘ಸಾವು ನಿಶ್ಚಿತ. ಅನ್ಯಾಯದಿಂದ ದೂರವಿರು’ ಎಂದು ಬರೆದು ಗೋಡೆಯ ಮೇಲೆ ತೂಗು ಹಾಕಿ ಅದರಂತೆ ಬಾಳಿದರು. ವಂಶಪಾರಂಪರ್ಯದಿಂದ ಬಂದ ಸಂಪತ್ತು ತಮ್ಮದಲ್ಲ ಪರೋಪಕಾರಕ್ಕಾಗಿರುವ ಹಣ ಎಂದು ಭಾವಿಸಿದ ಅವರು ಬಚ್ಚಾರಾಜರಿಂದ ಮೂಲತಃ ಎಷ್ಟು ಪಡೆದರೋ ಅದರ ಐದರಷ್ಟು ಹಣವನ್ನು ಧರ್ಮ ಕಾರ್ಯಗಳಿಗೆ ಉಪಯೋಗಿಸಿದರು. ನ್ಯಾಯವಾಗಿ ವ್ಯಾಪಾರವನ್ನು ಮಾಡಿ ವ್ಯಾಪಾರದಲ್ಲಿ ಒಳ್ಳೆಯ ಹೆಸರು ಸಂಪತ್ತು ಎರಡನ್ನೂ ಸಂಪಾದಿಸಿದರು.

ಬ್ರಿಟಿಷ್ ಸರ್ಕಾರದ ಗೌರವ ಬದಲಾಯಿಸಿ

೧೯೦೮ರಲ್ಲಿ ಇನ್ನೂ ಹದಿನೆಂಟು ವಯಸ್ಸಿನ ಜಮ್ನಾಲಾಲರನ್ನು ಗೌರವ ಮ್ಯಾಜಿಸ್ಟ್ರೇಟರನ್ನಾಗಿ ಮಾಡಲಾಯಿತು. ೧೯೧೮ ರಲ್ಲಿ ಬ್ರಿಟಿಷ್ ಸರ್ಕಾರವ ಜಮ್ನಾಲಾಲರಿಗೆ ‘ರಾವ್ ಬಹದ್ದೂರ್’ ಎಂಬ ಬಿರುದನ್ನು ದಯಪಾಲಿಸಿತು.

ಸ್ವಾತಂತ್ರ್ಯ ಚಳುವಳಿಯಲ್ಲಿ ಬದಲಾಯಿಸಿ

ಸರಕಾರ ಕೊಟ್ಟ ಬಿರುದು ಜಮ್ನಾಲಾಲ್ ಬಜಾಜರ ಗಾಂಧೀಜಿ ಮತ್ತು ಇತರ ನಾಯಕರೊಡನೆ ಇದ್ದ ವ್ಯವಹಾರಗಳಿಗೆ ಅಡ್ಡಬರಲಿಲ್ಲ. ಬಹಿರಂಗವಾಗಿಯೇ ‘ಹೋಂರೂಲ್’ ಚಳುವಳಿಯಲ್ಲಿ ಧುಮುಕಿದರು. ೧೯೨೦ರ ವರ್ಷದಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಜಮ್ನಾಲಾಲರು ಬಿರುದನ್ನು ಹಿಂದಿರುಗಿಸಿ ಪೂರ್ತಿಯಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪದಾರ್ಪಣ ಮಾಡಿದರು. ವಿದೇಶಿ ವಸ್ತ್ರಗಳನ್ನು ತೊಡಬಾರದು ಎಂದು ನಿರ್ಧರಿಸಿದಾಗ ತಮ್ಮ ಮನೆಯಲ್ಲಿದ್ದ ಸಾವಿರಾರು ರೂಪಾಯಿ ಬೆಲೆ ಬಾಳುವ ವಿದೇಶಿ ಬಟ್ಟೆಗಳನ್ನು ನಿರ್ವಿಕಾರವಾಗಿ ಬೆಂಕಿಗೆ ಆಹುತಿಯಿತ್ತು. ಖಾದಿ ತೊಡಲು ಪ್ರಾರಂಭಿಸಿದರು. ಶ್ರೀಮಂತರಾಗಿದ್ದರೂ ತಮ್ಮ ಮಗಳ ಮದುವೆಯನ್ನು ಸರಳವಾಗಿ ಆಶ್ರಮದಲ್ಲಿ ಒಂದೇ ಗಂಟೆಯಲ್ಲಿ ಮುಗಿಸಿದರು. ಗಾಂಧೀಜಿ ಅಸ್ಪೃಶ್ಯರ ಉದ್ಧಾರಕ್ಕೆ ಕರೆಕೊಟ್ಟಾಗ ತಕ್ಷಣ ಜಮ್ನಾಲಾಲ್ ಓಗೊಟ್ಟರು. ಆರೋಗ್ಯವನ್ನೂ ಲೆಕ್ಕಿಸದೆ ಹಲವಾರು ಬಾರಿ ಬಂಧನಕ್ಕೊಳಗಾಗಿ ಕಷ್ಟಗಳನ್ನು ಎದುರು ಹಾಕಿಕೊಂಡರು.

ಸಂತನಂತೆ ಬದುಕಿದ ಶ್ರೀಮಂತ ಉದ್ಯಮಿ ಬದಲಾಯಿಸಿ

ಮುಂದೆ ಜಮ್ನಾಲಾಲ್ ಕಡಿಮೆ ಖರ್ಚಿನಲ್ಲಿ ಒಂದು ಗುಡಿಸಲು ಕಟ್ಟಿಕೊಂಡು ಯಾವಾಗಲೂ ಗೋವುಗಳನ್ನು ನೋಡಿಕೊಂಡು ಗೋಶಾಲೆಯಲ್ಲೇ ಇರುತ್ತಿದ್ದರು. ಗೋಸೇವೆಯೆ ಜಮ್ನಾಲಾಲರ ಜೀವನದ ಅಂತಿಮ ಚಟುವಟಿಕೆಯಾಗಿತ್ತು.

ವಿದಾಯ ಬದಲಾಯಿಸಿ

ಅವರು ೧೯೪೨ರ ಫೆಬ್ರವರಿ ೧೧ರಂದು ಈ ಲೋಕವನ್ನಗಲಿದರು. ಇಂದು ಬಜಾಜ್ ಸಂಸ್ಥೆ ಭಾರತದ ಪ್ರಸಿದ್ಧ ಸಂಸ್ಥೆಗಳಲ್ಲಿ ಒಂದು. ಆ ಪ್ರಸಿದ್ಧಿಗೆ ಮೀರಿದ್ದು, ದೇಶಕ್ಕಾಗಿ ಮಿಡಿದ ಜಮ್ನಾಲಾಲರ ಹೃದಯ.

ಉಲ್ಲೇಖಗಳು ಬದಲಾಯಿಸಿ

  1. ವಿಕಿಪೀಡಿಯಾ ಇಂಗ್ಲಿಷ್ ಲೇಖನ
  2. ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಣಾ ಮಾಲಿಕೆಯಲ್ಲಿ ಶ್ರೀ. ಕ. ರಾ. ಮೋಹನ್ ಅವರಿಂದ ರಚಿತವಾದ ಕಿರು ಪುಸ್ತಕ