ಜನಪದ ಕರಕುಶಲ ಕಲೆಗಳು

ಲಲಿತ ಕಲೆಗಳು ಪ್ರಬಂಧ

ಜನಪದ ಕರಕುಶಲ ಕಲೆಗಳು[೧][೨] ಇವನ್ನು ಪ್ರಯೋಜನ ಮೂಲ ಕಲೆಗಳು ಮತ್ತು ಆನಂದ ಮೂಲ ಕಲೆಗಳೆಂದೂ, ವಿಂಗಡಿಸಬಹುದಾಗಿದೆ. ಕರಕುಶಲ ಕಲೆಗಳು ಪ್ರಯೋಜನಮೂಲ ಕಲೆಯಾಗಿದ್ದು, ದುಡಿಮೆಗಾಗಿ ಈ ಕಲೆಗಳು ಬಳಕೆಯಾಗುತ್ತವೆ. ಇವು ಉಪಜೀವನಕ್ಕೆ ಆಧಾರ ಮೂಲವಾಗಿವೆ. ಆದರೆ, ಆನಂದ ಮೂಲ ಕಲೆಗಳು ದುಡಿಮೆಯ ನಂತರದಲ್ಲಿ ಹುಟ್ಟಿಕೊಳ್ಳುತ್ತವೆ. ಇವುಗಳ ಮೂಲ ಆಶಯ ಆನಂದವೇ ಆಗಿದೆ.

ಇತಿವೃತ್ತ ಬದಲಾಯಿಸಿ

  • ಮನುಕುಲದ ಉಗಮ - ವಿಕಾಸದ ಜಿಜ್ಞಾಸೆಯಂತೆಯೇ ಕಲೆಯ ಉಗಮ - ವಿಕಾಸ - ಕುರಿತು ಜಿಜ್ಞಾಸೆಗಳು ನಡೆದಿವೆ. ಹಾಗೆ ನೋಡಿದರೆ ಭೂಮಿಯ ವಯಸ್ಸಿನ ಮುಂದೆ ಮನುಷ್ಯನ ವಯಸ್ಸು ಅತ್ಯಲ್ಪವೆಂದೇ ಹೇಳಬೇಕು. ವೈಜ್ಞಾನಿಕ ವಿಶ್ಲೇಷಣೆ ಗಮನಿಸಿದಾಗ, ಸೂರ್ಯನಿಂದ ಸಿಡಿದ ಭೂಮಿ, ತಣ್ಣಗಾಗಲು ಲಕ್ಷಾವಧಿ ವರ್ಷಗಳೇ ಬೇಕಾದವು. ನಂತರ ಜೀವರಾಶಿಗಳು ಮತ್ತು ಮನುಷ್ಯ ಅನುಕ್ರಮವಾಗಿ ಜೀವಪಡೆದವು.
  • ಪ್ರಾಣಿಗಳಂತೆ ನಾಲ್ಕು ಕಾಲಿನಿಂದ ನಡೆಯುವ ಮನುಷ್ಯ ಕೈ ಬಳಕೆಯ ಅರಿವಿನಿಂದಾಗಿ ಕಾಲಮೇಲೆ ನಿಲ್ಲಲು ಕಲಿತದ್ದು, ಹಸಿ ಆಹಾರದ ಬದಲಾಗಿ ಬೆಂಕಿಯ ಉತ್ಪಾದನೆ ಮೂಲಕ ಬಿಸಿ ಆಹಾರ ಸ್ವೀಕರಿಸಿದ್ದು, ಮರದ ಪೊಟರೆಯ ವಾಸದ ಬದಲಾಗಿ ಮನೆಯಲ್ಲಿ ವಾಸಿಸುತ್ತಿರುವುದು ಮನುಷ್ಯ ಬದುಕಿನ ಬಹುದೊಡ್ಡ ಸಾಧನೆ ಎನಿಸಿಕೊಳ್ಳುತ್ತದೆ. ಹಾಗೆಯೇ ಅಭಿವ್ಯಕ್ತಿಗಾಗಿ ಭಾಷೆ ಬಳಸಿ, ಸಂವಹನ ಪ್ರಕ್ರಿಯೆ ನೆರವೇರಿಸಿಕೊಂಡಿದ್ದಾನೆ.
  • ಅದರಿಂದ ಅವನು ಸಮಾಜದ ಜೀವಿಯಾಗಲು ಸಾಧ್ಯವಾಯಿತು. ಒಂದು ಕಾಲದಲ್ಲಿ ಹೆಣ್ಣು - ಗಂಡುಗಳ ಮಧ್ಯ ಅಭೇದ ಹೊಂದಿದ್ದ ಮನುಷ್ಯ ಬರುತ್ತ ಬುದ್ಧಿ ಬೆಳೆದು ಉತ್ಪಾದನಾ ಶಕ್ತಿ ಬೆಳೆಸಿಕೊಂಡಂತೆ, ಖಾಸಗಿ ಆಸ್ತಿಯ ಕಲ್ಪನೆ ಬೆಳೆದು ಗುಂಪುಗಳಾಗಿ ನಾಯಕತ್ವ ಹಾಗೂ ರಾಜತ್ವ ಪಡೆದ. ರಾಜಾಧಿಕಾರ ಪಡೆದ ಮನುಷ್ಯ ಮುಂದೆ ಭೂಮಿಗೆ ಒಡೆಯನಾಗುತ್ತಾನೆ.
  • ಈ ಸಮಗ್ರ ಬೆಳವಣಿಗೆ ಗಮನಿಸಿದಾಗ ಇನ್ನೊಂದು ವರ್ಗ ಬೌದ್ಧಿಕ ಕಸರತ್ತಿನ ಮೂಲಕ ಶ್ರಮವಿಲ್ಲದೆಯೇ ಪ್ರಭುತ್ವವನ್ನು ಒಲಿಸಿಕೊಳ್ಳಲು ಮನೋರಂಜನೆ ಕೊಡಲು ಮುಂದಾಗಿ ವಿವಿಧ ಕಲೆಗಳನ್ನು ಹುಟ್ಟು ಹಾಕಿದ ಕೆಲವು ಉದಾರಣೆ ಸಿಗುತ್ತವೆ .ಆದರೆ ಮಾನವ ತನ್ನ ಅಭಿವ್ಯಕ್ತಿಯನ್ನು ಆದಿಮ ರೇಖಾ ಮೂಲದ ಬಂಡೆ ಚಿತ್ರ ಕಲೆಗಳಲು ಕಾಣಬಹುದಗಿದ್ದು ವೇದಗಳಿಗಿಂತ ಮೊದಲೇ ಮಾನವ ಹಲವು ಬಗೆಯ ಕರಕುಶಲ ಕಲೆ ಕಂಡುಕೊಂಡಿದ್ದಾನೆ ಎನ್ನುವುದಕ್ಕೆ ಹಲವು ಆಧಾರಗಳು ಸಿಗುತ್ತವೆ. ಮುಂದೆ ಅದೇ ಕಲಾ ಜ್ಞಾನ ವಿಕಾಸವಾಗುತ್ತಾ ಸಾಗಿದೆ .ಮುಂದೆ ಅವು ಸಾರ್ವತ್ರಿಕ ರೂಪ ಪಡೆದವು. ಸಾಂಸ್ಕೃತಿಕ ಬದುಕಿನ ಭಾಗಗಳಾಗಿ ಮಾರ್ಪಟ್ಟು ಕಲೆಗಳೆಂದು ಕರೆಸಿಕೊಂಡವು.

ಕಲೆಯ ಉಗಮ - ವಿಕಾಸ ಬದಲಾಯಿಸಿ

ಕಲೆಗಳ ಕುರಿತ ಪ್ರಸ್ತಾಪ ವೇದಗಳಲ್ಲಿ ಬರುತ್ತದೆ. ಅದರಲ್ಲಿ ಸಾಮವೇದ ಮುಖ್ಯವಾಗಿ ಕಲೆಗಳನ್ನು ಕುರಿತು ಅಧಿಕೃತ ಉಲ್ಲೇಖ ಹೊಂದಿದ್ದು, ಗಮನಾರ್ಹ ಮುಂದೆ ಅವು ನಿರಂತರ ಬೆಳೆದುಬಂದವು. ಕಲೆಗಳನ್ನು ಸ್ಥೂಲವಾಗಿ

  1. ಕರಕುಶಲ ಕಲೆಗಳು ಮತ್ತು
  2. ಲಲಿತ ಕಲೆಗಳೆಂದು ವರ್ಗಿಕರಿಸಲಾಗಿದ್ದು, ಎರಡನೆಯದು ಭಾವಪ್ರಧಾನವೆಂದು ಗುರುತಿಸಲಾಗಿದೆ. ವಸ್ತು ಪ್ರಧಾನ ಕಲೆಗಳಲ್ಲಿ ಪಾತ್ರೆ, ಮಡಕೆ, ಗೊಂಬೆ ಇನ್ನಿತರ ಕರಕುಶಲ ಕಲೆಗಳು ಬಂದರೆ, ಭಾವ ಪ್ರಧಾನ ಕಲೆಗಳಲ್ಲಿ ಪಂಚಕಲೆಗಳಾದ ಸಂಗೀತ, ನೃತ್ಯ, ಚಿತ್ರ ಶಿಲ್ಪ ಹಾಗೂ ಸಾಹಿತ್ಯ ಕಲೆಗಳು ಇದರಲ್ಲಿ ಸೇರುತ್ತವೆ.

ಜನಪದ ಕರಕುಶಲ ಕಲೆಗಳು ಬದಲಾಯಿಸಿ

  1. ಬಿದರಿ ಕಲೆ
  2. ಕನ್ನಡಿ ಕಲೆ
  3. ಹಚ್ಚೆ
  4. ರಂಗೋಲಿ
  5. ಕೌದಿ ಕಲೆ
  6. ರಥದ ಕೆತ್ತನೆ ಕಲೆ
  7. ಪಿಂಗಾಣಿ ಕಲೆ
  8. ಕಸೂತಿ ಕಲೆ
  9. ಕುಸುರಿ ಕೆತ್ತನೆ
  10. ಚಿತ್ರ ಕಲೆಗಳು
  11. ತೊಗಲು ಬೊಂಬೆ
  12. ಹಬ್ಬಗಳಲ್ಲಿ ಬಣ್ಣಗಾರಿಕೆ ಮತ್ತು ಚಿತ್ರಗಾರಿಕೆ
  13. ಜನಪದ ಶೈಲಿಯ ನೇಯ್ಗೆ
  14. ಲಂಬಾಣಿಗರ ಕರಕುಶಲ ಕಲೆ
  15. ಜನಪದರ ಕಾಷ್ಠ ಉತ್ಪನ್ನಗಳು
  16. ದೀವರ ಹಸೆ ಚಿತ್ತಾರ ಮತ್ತು ಬೂಮಣ್ಣಿ ಬುಟ್ಟಿ ಚಿತ್ತಾರ

ಬಿದರಿ ಕಲೆ ಬದಲಾಯಿಸಿ

ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.

ಲಂಬಾಣಿಗರ ಕರಕುಶಲ ಕಲೆ ಬದಲಾಯಿಸಿ

  • ಕೆಂಪು ಬಣ್ಣದ ಲಂಗ (ಪೇಟಯಾ) ಅದರ ಮೇಲೆ ಮತ್ತು ಅಂಚಿನಲ್ಲಿ ಸೊಗಸಾದ ಕಸೂತಿ ಕೆಲಸ, ಲಂಗದ ಒಡಲಿನಲ್ಲಿ ಸೇರಿಸಿ ಹೋಲಿದಿರುವ ಗಾಜಿನ ಬಿಲ್ಲೆಗಳು, ಬಟ್ಟೆಯ ತುಂಡುಗಳು ಕಲಾತ್ಮಕವಾಗಿ ಹೊಂದಿಸಿ ಕಸೂತಿ ಹಾಕಿದ ಕುಪ್ಪಸ (ಕಾಂಚೋಳಿ) ತಲೆಯ ಮೇಲಿಂದ ಮೇಲು ಸೆರಗಿನಂತೆ ಇಳಿಬಿಟ್ಟ (ರುಂಡ ಮತ್ತು ಮುಂಡದ ಹಿಂಭಾಗವನ್ನು ಆವರಿಸುವ) ರಂಗು ರಂಗಿನ ಮೇಲುವಸ್ತ್ರ (ಚಾಂಟ್ಯ).
  • ಈ ಮೇಲು ವಸ್ತ್ರಕ್ಕೂ ಗಾಜಿನ ಬಿಲ್ಲೆಗಳು ಹಾಗೂ ಕುಸುರಿ ಕೆಲಸದ ಅಲಂಕಾರದ ಜೊತೆಗೆ ಅದರ ಅಂಚಿನಲ್ಲಿ ಚಿಕ್ಕ ಬೆಳ್ಳಿ ಗೆಜ್ಜೆಗಳ ಸರ ಜೋಡಿಸಲ್ಪಟ್ಟರುತ್ತದೆ. ಸಾಮಾನ್ಯವಾಗಿ ಕೆಂಪು ಅಥವಾ ನೀಲಿ ಇವರ ಬಟ್ಟೆಯ ಬಣ್ಣ. ಇನ್ನು ಇವರ ಭೂಷಣಗಳೆಂದರೆ ಕೈಗಳಿಗೆ ಅಗಲ ಪಟ್ಟೆಯಂತಹ ಬಳೆಗಳು. ಇವಕ್ಕೆ ಧಾರವಾಡದ ಕಡೆ "ಭಲ್ಯ"' ಎಂದು ಕರೆದರೆ, ಕಲಬುರ್ಗಿಯವರು ಚೊಡಿ ಎನ್ನುತ್ತಾರೆ. ಕೆಲವು ಕಡೆ ಮಾಡ್ಯ ಎನ್ನುವ ಕಂಚಿನ ಬಳೆ ಧರಿಸಿರುತ್ತಾರೆ.
  • ಕೈಕಾಲು ಬೆರಳುಗಳಿಗೆ ಬೆಳ್ಳಿ ನಾಣ್ಯ ಬೆಸೆದು ಮಾಡಿದ ಉಂಗುರ, ಇವಕ್ಕೆ '"ವಿಂಟೇ"' ಚಾಲಾವಿಂಟೇ'" ಪೊಲಾ"' ಎಂಬ ಹೆಸರುಗಳಿವೆ. ಕೊರಳಲ್ಲಿ ಧರಿಸುವ ಲೋಹದ ಹಾರಗಳಲ್ಲಿ ರಪಿಯಾಹಾರ್ ಎಂಬ ಸರ ಬಹಳ ಮುಖ್ಯವಾದದ್ದು. ಇನ್ನೊಂದು ಎದೆಹಾರಕ್ಕೆ ಬಳಿಚಂದ್ರ, ಅಥವಾ ವಾಂಕ್ಯೆ ಎನ್ನುತ್ತಾರೆ. ಬೇಸರಿ ಅಥವಾ ಪುರಿ ಎಂದು ಕರೆಯಲಾಗುವ ಮೂಗುತಿ ಲಂಬಾಣಿ ಮಹಿಳೆಯರ ಮುಖದ ಸೊಗಸಿಗೆ ಮತ್ತಷ್ಟು ಬೆಡಗನು ಉಂಟುಮಾಡುತ್ತದೆ.
  • ಸಾಮಾನ್ಯವಾಗಿ ಈ ಮೂಗುತಿ ಹಿತ್ತಾಳೆ ಅಥವಾ ಬೆಳ್ಳಿಯದು. ಇದರ ಅಂಚಿಗೆ ಮುತ್ತು ಬಿಗಿದಿರಬಹುದು: ಇಲ್ಲವೆ ಅದೇ ಲೋಹವನ್ನು ಮುತ್ತಿನಾಕೃತಿಯಲ್ಲಿ ಬಿಡಿಸಿರಬಹುದು. ಎರಡು ಬದಿಯ ಕೆನ್ನೆಗಳ ಮೇಲೆ ಇಳಬಿಟ್ಟ ಕೊದಲಿನ ಕುಚ್ಚಿಗೆ ಹೆಣೆದು ಜೋಡಿಸಿರುವ ಕೆನ್ನೆಗೆಜ್ಜೆ (ಚೋಟ್ಲೇ) ಹಣೆಯ ಮೇಲೆ ಟೀಕಿ, ತಲೆಗೆ ಗುಗ್ಗರಿ, ಚಾಟಿಯ ಸಿಂಗಾರ.
  • ಕಾಲಿಗೆ ದೊಡ್ಡ ಆಕಾರದ ಬೆಳ್ಳಿಯ ಕಾಲುಕಡಗ ಈ ಕಾಲುಗಡಗಕ್ಕೆ ಧಾರವಾಡದ ಕಡೆ ಕೊಲ್ಟ ಎಂದು, ಬಳ್ಳಾರಿ ಕಡೆ ಗ್ಯಾಂಜೆ, ಎಂದೂ ಕಲಬುರ್ಗಿ ಕಡೆ ಕಲ್ಡ ಎಂದೂ ಕರೆಯುತ್ತಾರೆ. ಕಾಲುಗಡಗದ ಜೊತೆಗೆ ದಂತದ ಬಳೆಗಳು ಇರುತ್ತವೆ. ಕಾಲುಬೆರಳಿಗೆ ಬೆಳ್ಳಿಯ ಉಂಗುರ, ಸೊಂಟಕ್ಕೆ ಕಸೂತಿಯ ಕಡ್ಡಿವಸ್ತ್ರ (ವಾಡಾರ), ರಟ್ಟೆಗೆ ಕಸೋಲೆ ಎನ್ನುವ ಒಂದು ರೀತಿಯ ಬಳೆ, ಕಾಲಿಗೆ ಸಣ್ಣ ಗೆಜ್ಜೆಸರ, ಸೊಂಟದಲ್ಲಿ ಎಲೆ ಅಡಿಕೆ ಇಟ್ಟುಕೊಳ್ಳುವ ಚೀಲ (ಪೊತಾಡಿಯಾ) ಇಟ್ಟುಕೊಂಡಿರುತ್ತಾರೆ.

ಚಿತ್ರ ಕಲೆಗಳು ಬದಲಾಯಿಸಿ

  • ಜನಪದ ಚಿತ್ರಕಲೆ ಜಾನಪದ ಕಲಾಪ್ರಕಾರಗಳಲ್ಲೇ ಗಮನ ಸೆಳೆಯುವ ಕಲೆ. ಮಣ್ಣಿಗೆ ಹತ್ತಿರವಾಗಿ ಗ್ರಾಮ ಜೀವನ ನಡೆಸುವ ಜನಪದರು ಪ್ರಕೃತಿಗೆ ನಿಷ್ಠವಾಗಿ ಬದುಕುವುದಾಗಿ ಅವರ ಚಿತ್ರ ಕಲೆ ಸಹಜವಾಗಿ ಪ್ರಕೃತಿಯನ್ನು ಅವಲಂಬಿಸಿದೆ. ಜನಪದರು ತಮ್ಮ ಮನಗಳ ಮೋರಿ ಮೇಲೆ, ಕೃಷಿ ಉಪಕರಣಗಳ ಮೇಲೆ, ಪ್ರಾಣಿಯ ದೇಹದ ಮೇಲೆ, ಮನುಷ್ಯನ ದೇಹದ ಮೇಲೆ, ಮನೆಯ ಮುಂದಿನ ಅಂಗಳದಲ್ಲಿ ಮೇಲೆ ಚಿತ್ರಕಲೆಯನ್ನು ಬಿಡಿಸುತ್ತಾರೆ.
  • ಈ ಚಿತ್ರಕಲೆಯ ಹಿನ್ನೆಲೆಯಾಗಿ ಸಮೃದ್ಧವಾದ ನಂಬಿಕೆ-ಆಲೋಚನೆಗಳು ಇವೆ. ಗೋಡೆಗಳ ಮೇಲೆ ಬಿಡಿಸಲಾಗುವ ಅನೇಕ ರೀತಿಯ ಪ್ರಾಣಿ-ಪಕ್ಷಿಗಳ ಚಿತ್ರಗಳು, ನೆಲದ ಮೇಲೆ ಬಿಡಿಸುವ ರಂಗೋಲಿ, ತೊಡುವ ವಸ್ತುಗಳಲ್ಲಿ ಬಿಡಿಸುವ ಕಸೂತಿ, ಮನುಷ್ಯರ ದೇಹದ ಮೇಲೆ ಚುಚ್ಚುವ ಹಚ್ಚೆ, ಧಾರ್ಮಿಕ ಆಚರಣೆಗಳಲ್ಲಿ ನಡೆಯುವ ಕುಣಿತಗಳಲ್ಲಿ ಬಳಸುವ ಮುಖವಾಡಗಳ ಚಿತ್ತಾರಗಳು.
  • ಬಯಲಾಟ-ಯಕ್ಷಗಾನದ ಮುಖವರ್ಣನೆಗಳು, ಕೃಷಿ ಇನ್ನು ಮೊದಲಾದ ವೃತ್ತಿಗಳಲ್ಲಿ ಬಳಸುವ ಪರಿಕರಗಳ ಮೇಲೆ ಚಿತ್ರಿಸುವ ಚಿತ್ರಗಳು ಮೊದಲಾದವು ಜನಪದ ಚಿತ್ರ ಕಲೆಯ ಮಾದರಿಗಳಾಗಿವೆ. ಈ ಮಾದರಿಗಳಲ್ಲಿ ಕೇವಲ ಬಣ್ಣ ಬಳಿಯುವ ಕ್ರಿಯೆ ಮಾತ್ರ ಇಲ್ಲ ಬದಲಿಗೆ ಇವುಗಳ ಹಿಂದೆ ಅಪಾರವಾದ ಲೋಕಜ್ಞಾನವಿದೆ. ಇಂಥ ಲೋಕಜ್ಞಾನ ವಿರುವ ಜನಪದ ಚಿತ್ರಕಲೆಯನ್ನು ಆಧುನಿಕ ಚಿತ್ರ ಕಲೆ ಬಂದ ತಕ್ಷಣ ನಮ್ಮ ಸಮಾಜ ಮರೆತುಬಿಟ್ಟಿತು.
  • ಅಷ್ಟೇ ಅಲ್ಲ ಆಧುನಿಕ ಶಿಷ್ಟ ಶಾಖೆೆಯ ಚಿತ್ರಕಲೆಯನ್ನು ಹೊತ್ತು ಮೆರೆಸಿತು. ಇದೊಂದು ಅಪಾಯಕಾರಿ ಬೆಳವಣಿಗೆ ಜನಪದ ಚಿತ್ರಕಲೆಯನ್ನು ಮರೆತರೆ ತೊಂದರೆಯಿಲ್ಲ ಎಂದು ಹೇಳಬಹುದು ಆದರೆ ಆ ಕಲೆಯ ಹಿಂದಿನ ಜ್ಞಾನ ಮರೆಯಾಯಿತಲ್ಲ ಅದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಜನಪದ ಚಿತ್ರಕಲೆಗೆ ಮರು ಜೀವ ನೀಡಬೇಕಿದೆ.

ಕಲೆಗಳು ಮತ್ತು ಜಾಗತೀಕರಣ ಬದಲಾಯಿಸಿ

  • ಪರಂಪರಾಗತವಾಗಿ ನಮ್ಮನ್ನು ತಣಿಸಿದ ಕಲೆಗಳು ಇಂದು ಜೀವಂತವಾಗಿ ಉಳಿಯುತ್ತಿವೆಯಾ? ಎಂದು ನಾವೇ ಕೇಳಿಕೊಳ್ಳಬೇಕಾದ ಅನಿವಾರ್ಯತೆಗಳು ಅನುಮಾನಗಳು ಬರುತ್ತಿವೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು ಅವ್ಯಾಹತವಾಗಿ ಬೆಳೆಯುತ್ತಿರುವ ವೈಜ್ಞಾನಿಕತೆ ಮಾಹಿತಿ ಮತ್ತು ತಂತ್ರಜ್ಞಾನ ಅದರೊಂದಿಗೆ ತಳುಕು ಹಾಕಿಕೊಂಡು ಬೆಳೆಯುತ್ತಿರುವ ಆಧುನಿಕತೆ.
  • ಇನ್ನೊಂದು ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿರುವ ಜಾಗತಿಕರಣ ಇದರೊಂದಿಗೆ ಬೆಸೆದುಕೊಂಡಿರುವ ಖಾಸಗೀಕರಣ ಹಾಗೂ ಉದಾರೀಕರಣ ಇವೆಲ್ಲವುಗಳ ಮಧ್ಯ ಕಲೆಗಳು ಇಂದು ಮಾಯವಾಗುತ್ತಿರುವುದು ನಮ್ಮ ಸಾಂಸ್ಕೃತಿಕ ಅಳಿವಿನ ಸಂಕೇತವೇ ಆಗಿವೆ. ಜಾಗತೀಕರಣವೆಂದರೆ ಇಲ್ಲಿ ಜಗತ್ತೇ ಒಂದು ಹಳ್ಳಿ, ಇಡೀ ಜಗತ್ತಿಗೆ ಒಂದೇ ಭಾಷೆ. ಒಂದೇ ಸಂಸ್ಕೃತಿ ಎಂಬಂತೆ ಬಿಂಬಿತವಾಗುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ಕಲೆಗಳೇನಾಗಬೇಕು.
  • ವಾಸ್ತವಿಕವಾಗಿ ಭಾರತವೆಂದರೆ, ಬಹು ಸಂಸ್ಕೃತಿಯ ಬಹುಭಾಷೆಯ ನೆಲೆಯಾಗಿದೆ. ಇಲ್ಲಿನ ಕಲೆಗಳ ಮುಖ್ಯ ಲಕ್ಷಣವೇ ವೈವಿಧ್ಯತೆ. ಜಾಗತೀಕರಣವೆಂದರೆ, ಅದೊಂದು ಶುದ್ಧ ವ್ಯವಹಾರಿಕ ಮನಸ್ಸಿನ ಅಚ್ಚಾಗಿದೆ. ಅಲ್ಲಿರುವುದು ಒಂದೇ ಸಂಸ್ಕೃತಿ, ಅದೇ ಕೊಳ್ಳುಬಾಕ ಸಂಸ್ಕೃತಿ. ಇಂದು ಇಡೀ ದೇಶದ ಹಳ್ಳಿ-ಹಳ್ಳಿಗಳಲ್ಲಿ ಹಾಲು-ಸಿಗಲಾರದು ಆದರೆ ಕೋಕಾಕೋಲಾ ದೊರೆಯುತ್ತದೆ. ಹಾಲಿನ ಎರಡು ಪಟ್ಟು ಹಣಕೊಟ್ಟು ತಿಂಗಳ ನೀರು ಖರಿದಿಸುತ್ತೇವೆ.
  • ಕೆಬಲ್ ಮೂಲಕ ಪಾಪ್ ಸಂಗೀತ ಮನೆ-ಮನೆಯಲ್ಲಿ ರಿಂಗಣಿಸುತ್ತಿರುವಾಗ, ದೇಶಿ ವಸ್ತುಗಳಾಗಲಿ ಕಲೆಗಳಾಗಲಿ, ಮೂಲೆ ಗುಂಪಾಗಿರುವುದು ಜಾಗತೀಕರಣದ ಪ್ರಭಾವವನ್ನು ಸೂಚಿಸುತ್ತದೆ. ಇಂದಿನ ಸಂದರ್ಭದಲ್ಲಿ ಕ್ರಿಕೇಟ್ ಇಡೀ ಜಗತ್ತನ್ನು ಆಳುತ್ತಿದೆ. ಮಾರುಕಟ್ಟೆಯನ್ನುವುದು ಇಂದು ಪ್ರಭುವಿನ ರೂಪದಲ್ಲಿ ಕೆಲಸಕ್ಕಿಳಿದಿದೆ. ಹಿಂದೆ ಕಲೆಗಳು ಪ್ರಭುವಿನ ಸೊತ್ತಾಗಿರುತ್ತಿದ್ದವು. ಇಂದು ಮಾರುಕಟ್ಟೆಯ ಸ್ವತ್ತಾಗಿವೆ.
  • ಇಲ್ಲಿ ಬೇಕಾದವು ಮಾತ್ರ ಪ್ರಚಾರವಾಗುತ್ತವೆ. ಹೀಗೆ ಜಾಗತಿಕ ಕಲೆ ಸಂಸ್ಕೃತಿ ರೂಪುಗೊಳ್ಳುತ್ತಿರುವ ಸಂದರ್ಭದಲ್ಲಿ ಭಾರತೀಯ ಕಲೆ ಸಂಸ್ಕೃತಿ ಹಿಮದಂತೆ ಕರಗಿ ಮೃತ್ತಿಕೆ ಮುಟ್ಟುತ್ತಿದೆ. ಇಡೀ ಜಗತ್ತಿಗೆ ಒಂದೇ ರೀತಿಯ ಕಲೆಗಳು, ಜೀವನ ವಿಧಾನ ರೂಪುಗೊಳ್ಳುತ್ತಲೆ ನೆಲಮೂಲ ಸಂಸ್ಕೃತಿಯ ವಿಧಾನ ಮತ್ತು ಅದರೊಂದಿಗೆ ಹಾಸುಹೊಕ್ಕಾಗಿದ್ದ ಕಲೆಗಳು ಇಲ್ಲವಾಗುತ್ತಿವೆ.
  • ವಾಸ್ತವವಾಗಿ ಮಾಹಿತಿ ತಂತ್ರಜ್ಞಾನ ಬೆಳೆದಿದೆ. ಆದರೆ ಈ ಬೆಳವಣಿಗೆ ಕಲೆಗಳಿಗೆ ಮಾರಕವೂ ಹೌದು. ವೈಜ್ಞಾನಿಕ ಬೆಳವಣಿಗೆಯಿಂದ ಎಲ್ಲವನ್ನು ಭರಿಸಿಕೊಳ್ಳುತ್ತೇವೆಂಬ ಅಹಂ ಭೌತಿಕವಾಗಿ ನಮ್ಮ ಏಳಿಗೆಯನ್ನು ಸೂಚಿಸುತ್ತದೆ ನಿಜ. ಆದರೂ ಆನೆ ನಡಿಗೆಯಲ್ಲಿ ಇರುವೆ ಸಹ ಸಾಯಬಾರದು ಏಕೆಂದರೆ ಇರುವೆಗೂ ಬದುಕುವ ಹಕ್ಕಿದೆ. ಅದೂ ನಮ್ಮ ಬದುಕಿನ ಭಾಗವೇ ಆಗಿದೆ. ಸಾಂಘಿಕ ಜೀವನಕ್ಕೆ ಶ್ರಮಜೀವನಕ್ಕೆ ಮಾದರಿಯೂ ಹೌದು.
  • ಕಂಪ್ಯೂಟರ್ ಡಿಜಿಟಲ್ ಮೂಲಕ ಸುಂದರ ಹೂವನ್ನು ಹೆಣ್ಣನ್ನು, ಸೃಷ್ಟಿಯ ಚಿತ್ರವನ್ನು ರೂಪಿಸಬಹುದು. ಅದರ ಕಂಪನ್ನಾಗಲಿ, ಪ್ರೀತಿಯನ್ನಾಗಲಿ, ಚಲನೆಯನ್ನಾಗಲಿ, ಸೃಷ್ಠಿಸಲಾಗದು, ಕಂಪ್ಯೂಟರನಲ್ಲಿ ಕುವೆಂಪು ಅವರ ಕಾವ್ಯವನ್ನು ಸೆರೆ ಹಿಡಿಯಬಹುದೇ ವಿನಃ ರಾಮಾಯಣಂ ದರ್ಶನಂತಹ ಕಾವ್ಯ ಮಹಾ ಕಾದಂಬರಿಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ.
  • ಕಂಪ್ಯೂಟರನಲ್ಲಿ ಶಹನಾಯಿಯನಾದ ಶೇಖರಿಸಿ ನುಡಿಸಬಹುದೇ ಹೊರತಾಗಿ ಬಿಸಮಿಲ್ಲಾಖಾನನನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅದಕ್ಕಾಗಿ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನವೇ ನಮ್ಮ ಎಲ್ಲ ಆಶೆಗಳನ್ನು, ಕೊರತೆಗಳನ್ನು ಪೂರೈಸುತ್ತದೆನ್ನಲಾಗದು. ಲಲಿತ ಕಲೆಗಳು ಮಾತ್ರ ನಮ್ಮ ಬಹುತೇಕ ಆಶಾವಾದ ಪೂರೈಕೆಯ ಸಾಧನವೆಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕಾಗಿದೆ.

 ಹಸುಳೆ ಕಲ್ಮರ ಪಾಪು ಪಶು ಮೃಗಗಳುಗಾನ
 ರಸಕೆ ಸೋಲುವವೆಂದರಿನ್ನೂ
 ರಸಿಕರು ಸೋಲರೆ ಸಭೆಯಲ್ಲ ಕೇಳ್ದು ಮೈ
 ಮಸದ ವಿದರರ್‍ದು ಬೆರಗಾಗಿ
 ಕೊಳಲಿಗೆ ಪಶು, ಮಿಗ ಘಂಟೆಗೆ, ಹಸುಳೆ ಜೋ
 ಗುಳಿಗೆ ಸರ್ವಸುನಾಗ ಸರಕ್ಕೆ
 ಎಳೆವೆಣ್ಣ ದನಿಗೊಂದು ವೃಕ್ಷ ಗೂಡಾಕ್ಷಿಗೆ
 ಶಿಲೆ ಪೊಸರುವುದು ಘನವೇ

- (ಭರತೇಶ ವೈಭವ 1/87/88)

  • ಹೀಗೆ ಸಂಗೀತದಿಂದ ಚರಾಚರಾ ವಸ್ತುಗಳಲ್ಲಿ ಚಯತನ್ಯ ಪಡೆಯುವುದಾದರೆ, ಮನುಷ್ಯನ ಮನಸ್ಸು ಹೇಗಾಗಬಹುದು? ಯಾಂತ್ರಿಕ ಜೀವನ ನಡೆಸುತ್ತಿರುವ ಇಂದಿನ ಸಂದರ್ಭದಲ್ಲಿ ಕಲೆಗಳು ಹೆಚ್ಚು ಉಪಯುಕ್ತವಾಗಿವೆ. ಮನಸ್ಸನ್ನು ಆದ್ರ್ರಗೊಳಿಸುವ ಶಕ್ತಿ ಕಲೆಗಳಲ್ಲಿದೆ. ಕೆಲ ಕಲೆಗಳನ್ನು ನೋಡಿ ಮೂಗು ಮುರಿಯುವವರು ಇದ್ದಾರೆ. ಅದಕ್ಕೆ ಅಶ್ಲೀಲತೆಯ ಪಟ್ಟಕಟ್ಟುವವರೂ ಇದ್ದಾರೆ. ಆದರೆ ಅಂಥವರು ಎಂದೂ ಕಲೆಗಳನ್ನು ತೆರೆದ ಕಣ್ಣಿನಿಂದ ನೋಡಿಲ್ಲವೆಂದೇ ಹೇಳಬೇಕು.
  • ಒಂದೊಂದು ಕಲಾ ಕೃತಿಗಳು ಮಹೋನ್ನತಿ ತತ್ವಕ್ಕೆ ವ್ಯಾಖ್ಯಾನ ಬರೆದಂತಿವೆ. ಅಂಥ ಭವ್ಯ ಕಲಾ ಕೃತಿಗಳೆಂದರೆ, ಚಾವುಂಡರಾಯನು ನಿರ್ಮಿಸಿದ ಗೊಮ್ಮಟೇಶ್ವರನ ವಿಗ್ರಹ, ಹೊಯ್ಸಳರ ಶಿಲಾ ಬಾಲಿಕೆ, ಖುಜುರಾಹೊ ನಗ್ನ ಶಿಲ್ಪಗಳು ಇವೆಲ್ಲ ಕಂಡಾಂಗ ಕಾಮ ಭಾವ ಬರದು, ಬದಲಿಗೆ ನಾವು ಹೊಂದಬೇಕಾದ ಸಮರ್ಪಣಾಭಾವವನ್ನು ಬಿತರಿಸುತ್ತವೆ. ಅಲ್ಲೆಲ್ಲ ಸೌಂದರ್ಯ ಪ್ರಜ್ಞೆ ಎದ್ದುಕಾಣುತ್ತದೆ. ಮುಚ್ಚು ಮರೆಯಿಲ್ಲದ ತೆರೆದ ಮನ, ಅದರ ಪ್ರತೀಕವಾಗಿ ನಗ್ನ ವಿಗ್ರಹಗಳಿರುತ್ತವೆ.
  • ಹೊರತು ವಿಷಯ ಲೋಲುಪತೆಗಲ್ಲ ಏಕೆಂದರೆ ವ್ಯಕ್ತಿ ಹಾಗೂ ಸಾಮಾಜಿಕ ಸಂಬಂಧದಲ್ಲಿ ಕಲೆಗಳು ವಹಿಸುವ ಪಾತ್ರ ಅಪಾರವಾದದ್ದು, ಕಲೆಗಳು ಯುಗಮನಸ್ಸಿನ ಪ್ರತಿನಿಧಿಗಳಾಗಿರುತ್ತವೆ. ಸಮಕಾಲಿನತೆಯ ಕನ್ನಡಿಯಾಗಿರುತ್ತವೆ. ವ್ಯಕ್ತಿ ಸಮೂಹದ ಪ್ರತಿಬಿಂಬಗಳಾಗಿರುತ್ತವೆ. ಯಾವತ್ತೂ ಕಲಾ ಪ್ರೇಮಿಯಾದವನು ಕ್ರೂರಿಯಾಗಿರಲಾರ ವ್ಯಕ್ತಿ ಮತ್ತು ಕಲೆಯ ಸಂಬಂಧವೆಂದರೆ ತಾಯಿ ಮಗುವಿನ ಸಂಬಂಧದಂತೆ, ಬೀಜ ವೃಕ್ಷದ ಸಂಬಂಧದಂತೆ.
  • ಉತ್ತಮ ಕಲಾ ಪ್ರಪಂಚದಲ್ಲಿ ಉತ್ತಮ ಸಮಾಜ ಅರಳಲು ಸಾಧ್ಯ. ವಿಜಯನಗರ ಸಾಮ್ರಜ್ಯದ ಆಳ್ವಿಕೆಯ ಕಾಲದಲ್ಲಿ ಮನೆಗಳಿಗೆ ಬಾಗಿಲಿರುತ್ತಿರಲಿಲ್ಲ ಎಂಬುದು ಇತಿಹಾಸದ ಮಾತಾಗಿದೆ. ಕಾರಣವಿಷ್ಠೆ ಕಲೆ ಸಂಸ್ಕೃತಿ ಆ ಕಾಲಕ್ಕೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಕೊಲೆ, ಹಿಂಸೆ, ಕಳ್ಳತನದಂತಹ ವಿಚಾರಗಳು ಆ ಸಂದರ್ಭದ ಜನಮಾನಸದಲ್ಲಿಯೂ ಸುಳಿಯುತ್ತಿರಲಿಲ್ಲ. ಆದರೆ ಇಂದು ಕಲೆಗಳಿಲ್ಲ ಬದಲಾಗಿ ಭಯೋತ್ಪಾದನೆಯಿದೆ.
  • ರಾಷ್ಟ್ರಕೂಟರ ದೊರೆ ನೃಪತುಂಗ ಸಾಮ್ರಾಜ್ಯದ ಒಳಿತಿಗಾಗಿ ಆತ್ಮಾರ್ಪಣಕ್ಕೆ ಸಿದ್ಧನಾಗಿದ್ದ, ಇಂದು ರಾಷ್ಟ್ರವನ್ನೇ ನುಂಗಲು ಹವಣಿಸುತ್ತಿದ್ದೇವೆ. ಅಂತೆಯೇ ಮೇವು ಹಗರಣ, ಗೊಬ್ಬರ ಹಗರಣಗಳು ನಿರಂತರವಾಗಿವೆ. ಓಸಾಮಬಿನ್ ಲಾಡೆನ್ ನಂತವರು ಬಲಿಷ್ಠರಾಗಿದ್ದಾರೆ. ಇಂದು ಸಹ ನಾವು ಪ್ರೀತಿ, ಶಾಂತಿ ನೆಮ್ಮದಿಯನ್ನು ಅಪೇಕ್ಷಿಸುವುದಾದರೆ ಲಲಿತ ಕಲೆಗಳನ್ನು ಅಪೇಕ್ಷಿಸಿದರೆ ಸಾಕು.

ಉಲ್ಲೇಖ ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2017-06-27. Retrieved 2017-05-21.
  2. http://suddinews.com/sullia/2013/08/26/59021/[ಶಾಶ್ವತವಾಗಿ ಮಡಿದ ಕೊಂಡಿ]

ದೀವರ ಹಸೆ ಚಿತ್ತಾರ ಮತ್ತು ಬೂಮಣ್ಣಿ ಬುಟ್ಟಿ ಚಿತ್ತಾರ