ಚುಜ್ಜಲು ಲೆಗ್ಯೂಮಿನೋಸೀ ಕುಟುಂಬದ ಮೈಮೋಸೀ ಉಪಕುಟುಂಬಕ್ಕೆ ಸೇರಿದ ಒಂದು ಪರ್ಣಪಾತಿ ಮರ. ಆಲ್‍ಬಿಜಿಯ ಅಮರ ಇದರ ವೈಜ್ಞಾನಿಕ ಹೆಸರು. ಇದು ದಕ್ಷಿಣ ಭಾರತದ ಒಣಹವೆಯ ಪ್ರದೇಶದಲ್ಲಿ ಬೆಳೆಯುತ್ತದೆ. ಇದು 8'-10' ಎತ್ತರಕ್ಕೆ ಬೆಳೆಯುವ ಸಣ್ಣಗಾತ್ರದ ಮರ. ಕಾಂಡ ಎಳೆಯದಾಗಿರುವಾಗ ಹಳದಿ ಬೂದು ಬಣ್ಣದ ತುಪ್ಪುಳಿನಿಂದ ಆವೃತವಾಗಿರುತ್ತದೆ. ಎಲೆಗಳು ಗರಿರೂಪದ ಸಂಯುಕ್ತ ಮಾದರಿಯವು. ಪರ್ಯಾಯ ಮಾದರಿಯಲ್ಲಿ ಜೋಡಣೆ ಗೊಂಡಿವೆ. ಪ್ರತಿಯೊಂದು ಎಲೆಯ ಬುಡದಲ್ಲಿ ವೃಂತಪರ್ಣ ಉಂಟು. ಹೂಗೊಂಚಲು ಕದಿರು ಬಗೆಯದು ; ಒಂದೊಂದರಲ್ಲೂ 19-20 ಹೂಗಳಿವೆ. ತೊಟ್ಟಿಲ್ಲ. ಬ್ರ್ಯಾಕ್ಟುಗಳಿವೆ. ಹೂಗಳು ದ್ವಿಲಿಂಗಿಗಳು ಮತ್ತು ಸುವಾಸನಾಯುಕ್ತ. ಪ್ರತಿಹುವಿನಲ್ಲಿ 5 ಪುಷ್ಪಪತ್ರಗಳು. 5 ದಲಗಳು, 5 ಕೇಸರುಗಳು ಮತ್ತು ಉಚ್ಚಸ್ಥಾನದ ಒಂದು ಅಂಡಾಶಯ ಇವೆ. ಫಲ ಪಾಡ್ ಮಾದರಿಯದು ; 6-8 ಬೀಜಗಳನ್ನೊಳಗೊಂಡಿದೆ. ಚುಜ್ಜಲು ಮರ ಬಹಳ ಗಟ್ಟಿಯಾಗಿರುವುದರಿಂದ ವ್ಯವಸಾಯದ ಸಲಕರಣೆಗಳು ಮತ್ತು ಇತರ ಮರದ ಸಲಕರಣೆಗಳಾದ ಕೊಡತಿದಾಂಡು, ನಾರು ಹಣಿಗೆ ಮುಂತಾದವುಗಳ ತಯಾರಿಕೆಗೆ ಉಪಯುಕ್ತವೆನಿಸಿದೆ. ಕೇರಳದಲ್ಲಿ ಇದನ್ನು ಹಸಿರು ಗೊಬ್ಬರಕ್ಕಾಗಿ ಬೆಳೆಸುವುದುಂಟು. ಕೆಲವು ಕಡೆ ಇದನ್ನು ಸಾಲುಮರವಾಗಿ ನೆಡುತ್ತಾರೆ. ಇದರ ಎಲೆಯನ್ನು ಒಣಗಿಸಿ ಪುಡಿಮಾಡಿ ಸೀಗೆಪುಡಿಯೊಂದಿಗೆ ಬೆರೆಸಿ ಸ್ನಾನಮಾಡುವಾಗ ಬಳಸುವುದಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚುಜ್ಜಲು&oldid=894567" ಇಂದ ಪಡೆಯಲ್ಪಟ್ಟಿದೆ