ಚೀನೀ ಜಾನಪದ ಚೀನಾ ದೇಶದಲ್ಲಿ ಜಾನಪದ ಒಂದು ಶಕ್ತಿಯುತವಾದ ಹಾಗೂ ಜೀವಂತವಾದ ಸಾಮಾಜಿಕ ಬಲವಾಗಿದೆ. ಜಾನಪದ ಸಂಶೋಧಕನಿಗೆ ಚೀನಾದಲ್ಲಿ ಪರಂಪರಾನುಗತ, ಪದ್ಧತಿ, ನಂಬಿಕೆ ಹಾಗೂ ಆಚರಣೆಗಳ ಬಗ್ಗೆ ಪ್ರಾಚೀನ ಕಾಲದಿಂದಲೂ ಉಳಿದು ಬಂದಿರುವ ಬಹಳಷ್ಟು ಸಾಮಾಗ್ರಿ ಭೌಗೋಳಿಕ ವ್ಯತ್ಯಯಗಳೊಡನೆ ಲಿಖಿತ ದಾಖಲೆಗಳಲ್ಲೂ ಹೇರಳವಾಗಿ ಸಿಗುತ್ತದೆ.

ಕ್ರಿಸ್ತ ಪೂರ್ವ ಕಾಲ

ಬದಲಾಯಿಸಿ

ಕ್ರಿ.ಪೂ. 5ನೆಯ ಶತಮಾನಕ್ಕೆ ಹಿಂದೆ ಚೀನೀ ಜಾನಪದ ಶ್ರೀಮಂತರ ಜ್ಞಾನ ಮತ್ತು ಜನಸಾಮಾನ್ಯರ ಜ್ಞಾನ ಎಂಬುದಾಗಿ ವರ್ಗೀಕೃತವಾಗಿತ್ತು. ದಾರ್ಶನಿಕ ಪಂಥಗಳ ಉಗಮ, ವಿವಿಧ ಧಾರ್ಮಿಕ ಪದ್ಧತಿಗಳ ಆಚರಣೆ ಹಾಗೂ ರಾಜಕೀಯ ಪರಿಸ್ಥಿತಿ —ಇವೆಲ್ಲವುಗಳಿಂದ ಚೀನೀ ಜಾನಪದ ಅಲ್ಲಿಂದೀಚೆಗೆ ಬಹುಮಟ್ಟಿಗೆ ಮಾರ್ಪಟ್ಟಿದೆ. ಆದರೆ ಅದರ ಮುಖ್ಯ ರೂಪರೇಖೆಗಳೆಲ್ಲ ಪ್ರಾಚ್ಯ ಏಷ್ಯದ ನಂಬಿಕೆಗಳ ಮತ್ತು ಆಚರಣೆಗಳ ಆಧಾರವನ್ನೇ ಹೊಂದಿದೆ. ಈ ಲಕ್ಷಣವನ್ನು ಚೀನಾ ಈವರೆಗೂ ರಕ್ಷಿಸಿಕೊಂಡು ಬಂದಿದೆ. ಚೀನಾ ವಿವಿಧ ಸಂಸ್ಕøತಿಗಳಿಂದ ಮತ್ತು ಅನೇಕ ಜನಾಂಗಗಳಿಂದ ಕೂಡಿದ ರಾಷ್ಟ್ರ; ಚೀನದ ಇಂದಿನ ಜನರ ಮೂಲಪುರುಷರು ಯಾರೆಂಬುದನ್ನು ನಿರ್ದಿಷ್ಟವಾಗಿ ಹೇಳುವಂತಿಲ್ಲ. ಅವರ ದಾಖಲೆಗಳು ಅವಿಚ್ಛಿನ್ನವಾಗಿ ಬಂದಿರುವುದರಿಂದ ಅವರ ಸಾಮಾಜಿಕ ಆಚರಣೆಗಳು ಹಾಗೂ ನಂಬಿಕೆಗಳು ಪಾಶ್ಚಾತ್ಯರ ಆಚರಣೆ ಹಾಗೂ ನಂಬಿಕೆಗಳನ್ನು ಹೋಲುತ್ತವೆ ಎಂಬ ಶಂಕೆಗೆ ಅವಕಾಶವಿದೆ. []ವಿವಿಧ ಜಾನಪದಗಳು ಪರಸ್ಪರ ಹೋಲುವುದಕ್ಕೆ ಅವು ಎಲ್ಲೆಡೆ ವ್ಯಾಪಿಸಿಕೊಂಡಿರುವುದೇ ಕಾರಣವೆಂಬ ವ್ಯಾಪ್ತಿವಾದ ಮತ್ತು ಕಲ್ಪನೆಗಳು ಕ್ರೋಡೀಕರಿಸುವ ವಿಧಾನಗಳನ್ನು ಪರಿಶೋಧಿಸುವ ಪಾಶ್ಚಾತ್ಯರು ಚೀನಿಯರ ನಂಬಿಕೆಗಳನ್ನು ಮಾದರಿಗಳನ್ನಾಗಿಟ್ಟುಕೊಳ್ಳಲು ಪ್ರಯತ್ನಿಸಿದ್ದಾರೆ.


ಚೀನೀ ಜಾನಪದದ ವ್ಯಾಪ್ತಿ, ಅದು ವ್ಯಾಪಿಸಿರುವ ಪ್ರದೇಶ ಯಾವುದು, ಅದರ ಗಾತ್ರವೇನು ಎಂಬ ಬಗ್ಗೆ ಇರುವ ಅನಿರ್ದಿಷ್ಟತೆ, ಚೀನದಲ್ಲಿ ಆಗಿರುವ ವಿವಿಧ ಸಂಸ್ಕøತಿಗಳ ಸೇರ್ಪಡೆ, ವಿವಿಧ ಜನಾಂಗಗಳು ಯಾವ ಅಡ್ಡಿ ಆತಂಕವೂ ಇಲ್ಲದೆ ಆಚರಣೆ ಮತ್ತು ನಂಬಿಕೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿರುವುದು, ಅಧಿಕಾರ ಮತ್ತು ಗೌರವಸ್ಥಾನ ಪಡೆದ ಪಂಡಿತವರ್ಗದ ಪ್ರಾಬಲ್ಯ, ಜಾನಪದ ಸಾಮಾಗ್ರಿಗಳನ್ನು ವ್ಯವಸ್ಥೆಗೊಳಿಸಿರುವ ಪುರೋಹಿತವರ್ಗದ ಸಾಂಪ್ರದಾಯಿಕ ನಿಲುವು-ಮುಂತಾದವು ಚೀನೀ ಜಾನಪದದ ಅಧ್ಯಯನಕ್ಕಿರುವ ಅಡಚಣೆಗಳಾಗಿವೆ. ಚೀನೀಯರ ಲಿಖಿತ ಭಾಷೆಯ ಒಡೆತನ ಪಂಡಿತ ವರ್ಗದವರದ್ದಾದ್ದರಿಂದ ಅವರು ಶುದ್ಧ ಜಾನಪದವನ್ನು ಶಿಷ್ಟಗೊಳಿಸುವ ಸಾಧ್ಯತೆಯೇ ವಿಶೇಷವಾಗಿದೆ. ಇತರರ ಮೂಢನಂಬಿಕೆಗಳನ್ನು ಎತ್ತಿ ತೋರಲು ಮತಪ್ರಚಾರಕರು ಸಂಗ್ರಹಿಸಿದ ವಸ್ತು ಉಪಯುಕ್ತವಾಗಿ ಕಂಡರೂ ಚೀನದ ವಿವಿಧ ಭಾಗಗಳಲ್ಲಿನ ಪದ್ಧತಿ ಮತ್ತು ನಂಬಿಕೆಗಳಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಅದು ತೋರಿಸುವಂತಿಲ್ಲ.[]

ಅರಸರುಗಳ ಪೋಷಣೆ

ಬದಲಾಯಿಸಿ

ಚೀನಿ ಜಾನಪದದ ಪ್ರಾರಂಭ ಕಾಲದ ವಿವರಗಳ ಬಗ್ಗೆ ಸಂಗ್ರಹವಾಗಿರುವ ಮಾಹಿತಿಗಳು ತೃಪ್ತಿಕರವಾಗಿಲ್ಲ. ಕ್ರಿ. ಪೂ. ಸು. 1100-221 ರ ಅವಧಿಯ ಮೊದಲು ಚೀನೀ ಚರಿತ್ರೆ ಚೌ ಸಂತತಿಯ ಕಾಲದಲ್ಲಿ ರಚಿತವಾಗಿದ್ದು ಕ್ರಿ.ಪೂ. 206-ಕ್ರಿ.ಶ. 221 ರ ಚಿನ್ ಸಂತತಿಯ ಕಾಲದಲ್ಲಿ ನಾಶವಾಯಿತು. ಆದ್ದರಿಂದ ಪ್ರಾಚೀನ ಇತಿಹಾಸ ಹಾಗೂ ಜನ ಜೀವನದ ಬಗ್ಗೆ ಊಹಾಪೋಹಗಳು ಹೆಚ್ಚಾಗಿವೆ ; ಪುರಾತತ್ವ ಶೋಧನೆಗಳಿಂದ ದೊರೆಯುವ ಮಾಹಿತಿಗಳು ಅವನ್ನು ಸಮರ್ಥಿಸಬೇಕಾಗಿವೆ. ಹಾನ್ ಸಂತತಿಯ ಚರಿತ್ರಕಾರ ಸುಮಚೈಯೆನ್ ಪ್ರಾರಂಭದ ಕಾಲದ ಇತಿಹಾಸದ ಬಗ್ಗೆ ವಿವರಗಳನ್ನು ನೀಡಿದ್ದಾನೆ. ಅವನ ಪ್ರಕಾರ ದೇವಲೋಕದ 12 ಜನ ಸಾಮ್ರಾಟರು ವಿಶ್ವದ ಮೊದಲ ಅರಸರು. ಅವರು ತಲಾ 18,000 ವರ್ಷಗಳಂತೆ ಒಟ್ಟು 1,98,000 ವರ್ಷಗಳ ಕಾಲ ಆಳಿದರು. ಭೂಲೋಕದ ಒಂಭತ್ತು ಮಂದಿ ಸಾಮ್ರಾಟರು 45,000 ವರ್ಷಗಳ ಕಾಲ ಮಾನವಕುಲವನ್ನು ಆಳಿದರು. ಸುಮಚೈಯನ್ ತಿಳಿಸುವ ಉಳಿದ 16 ಮಂದಿ ಸಾಮ್ರಾಟರ ಬಗ್ಗೆ ಮಾಹಿತಿಗಳು ದೊರತಿಲ್ಲ. ಇವರ ತರುವಾಯ ಸಾಹಸ ವೀರರೂ ಲಲಿತಕಲೆಗಳನ್ನು ಮತ್ತು ಕುಶಲಕಲೆಗಳನ್ನು ಫೂಷಿ ಮತ್ತು ಷೆನ್ ನುಂಗ್ ಎಂಬಿಬ್ಬರು ಬರುತ್ತಾರೆ. ಅವರಿಬ್ಬರಿಗೂ ಸರ್ಪಶರೀರ ಹಾಗೂ ಮಾನವ ಶಿರಗಳಿದ್ದವು. ಭೂಮಿಯನ್ನು ಮೊದಲು ಉತ್ತವ ಷೆನ್‍ನುಂಗ್. ಹ್ಯಾಂಗ್‍ಡೀ ಎಂಬಾತ ಮಾನವ; ಇವನು ಅನಾಗರಿಕ ಜನರಿಗೆ ರಾಜ್ಯಾಡಳಿತ, ಕುಶಲಕಲೆ, ನಡೆನುಡಿ, ದೇವತೆ, ಪರ್ವತ, ನದಿ ಮುಂತಾದವುಗಳಿಗೆ ಯಜ್ಞಯಾಗಾದಿಗಳನ್ನು ಮಾಡುವ ಹಾಗೂ ಬಲಿ ನೀಡುವ ವಿಧಾನಗಳನ್ನು ಕಲಿಸಿಕೊಟ್ಟ.; ಯು ಎಂಬಾತ ಸ್ಥಾಪಿಸಿದ ಷೈಯಾ ಸಂತತಿ (ಕ್ರಿ.ಪೂ. ಸು. 2205-1557) ಬಹುಶಃ ಪೂರ್ವ ಚೀನೀ ಸಂತತಿಯಾಗಿರಬಹುದು. ಯು 13 ವರ್ಷಗಳ ಕಾಲ ನದಿಗಳ ಪ್ರವಾಹವನ್ನು ತಡೆಗಟ್ಟಲು ಕಾರ್ಯನಿರತನಾದ. ಆಗ ಅವನು ತನ್ನ ಸಂಸಾರದ ಯೋಗಕ್ಷೇಮದ ಕಡೆಗೂ ಗಮನ ಕೊಡಲಿಲ್ಲವೆಂದು ಪ್ರತೀತಿ ಇದೆ. ಅವನೊಬ್ಬ ನಿಷ್ಠ ಅರಸ.

ನಂಬಿಕೆ

ಬದಲಾಯಿಸಿ

ಚೀನದಲ್ಲಿ ಜಾನಪದವನ್ನು ರಕ್ಷಿಸಿಕೊಂಡು ಬರುವ ಪ್ರವೃತ್ತಿ ಕಂಡುಬರುತ್ತದೆ. ಈ ಕಾರಣದಿಂದ ಚೀನೀಯರು ಪ್ರಾಚೀನ ನಂಬಿಕೆಗಳನ್ನು ಆಧುನಿಕ ಕಾಲದವರೆಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಹೀಗೆ ಅವನ ಯಿನ್-ಯಾಂಗ್ ಭವಿಷ್ಯ ಜ್ಞಾನ 'ವೂ ಪಂಥಗಳು, ಪುರೋಹಿತ ದೊರೆಗಳು ಮತ್ತು ಅವರ ದೇವಲೋಕ, ಭೂಲೋಕ, ಭೂಮಿ ಮತ್ತು ಧಾನ್ಯಗಳು ಹಾಗೂ ಪಿತೃಪೂಜೆ ಇವುಗಳೆಲ್ಲ ಪ್ರಾರಂಭ ಕಾಲದಿಂದಲೂ ಬಂದವು. ಯಿನ್-ಯಾಂಗ್ ಭವಿಷ್ಯಜ್ಞಾನ ತರುವಾಯದ ಕಾಲದಲ್ಲಿ ತಾಓ ಪಂಥದವರಿಂದ ವಿಸ್ತಾರಗೊಂಡಿತು ; ಸಮತೋಲನ ಜೀವಿತದ ಧರ್ಮವೆಂಬ ಚೀನಿ ಸಂಸ್ಕøತಿಯ ಕಲ್ಪನೆಯಿಂದ ಅದು ಬಂದದ್ದು; ಈ ನಂಬಿಕೆ ಸೈನ್ (ಜ್ಯಾ) ವಕ್ರರೇಖೆಯಿಂದ ದ್ವಿಭಾಗಿಸಲ್ಪಟ್ಟ ವೃತ್ತ. ಅದು ವಿಶ್ವದ ವಾಸ್ತವ ಮತ್ತು ಅವಾಸ್ತವ ಬಲಗಳ ನಡುವಣ ಸಮತೋಲನ ; ಸ್ತ್ರೀ ಮತ್ತು ಪುರುಷರನ್ನು ಪ್ರತಿನಿಧಿಸುವ ಸಂಕೇತ ಭೂಮ್ಯಾಕಾಶ; ಹೀಗೆ ಸಂಕೇತಗೊಂಡ ತತ್ತ್ವ ಲಾಮಾವಾದದಲ್ಲಿ ಮುಖ್ಯಸ್ಥಾನ ಹೊಂದಿದೆ. ಅಲ್ಲಿ ಸಂಭೋಗ ಅತ್ಯಂತ ಗರಿಷ್ಠ ಸಾಮರಸ್ಯ ಹಾಗೂ ಸಮತೋಲನ. ತಾಓ ಪಂಥದಲ್ಲಿಯೂ ಇದೇ ಕಲ್ಪನೆ ಇದೆ. ಸ್ತ್ರೀ ಮತ್ತು ಪುರುಷರಿಗೆ ಸಂಬಂಧಪಟ್ಟಂತೆ ಶುಭ ಮತ್ತು ಆಶುಭ ಕಾರ್ಯಗಳನ್ನು ಯಾವ ದಿನಗಳಲ್ಲಿ ಆಚರಿಸಬಹುದೆಂಬ ಪದ್ಧತಿ ಸಹ ಈ ಸಮತೋಲನ ವ್ಯವಸ್ಥೆಗೆ ಸಂಬಂಧಪಟ್ಟದ್ದು.[]

ಸಂಸ್ಕಾರಗಳು

ಬದಲಾಯಿಸಿ

ಪಿತೃಪೂಜೆ ಆಧುನಿಕ ಚೀನದಲ್ಲಿ ಸಹ ಮುಖ್ಯವೆನಿಸಿರುವ ಸಂಸ್ಕಾರ. ಚೀನೀಯರು ಮಾನವನಿಗೆ ಎರಡು ಆತ್ಮಗಳಿವೆ ಎಂದು ನಂಬಿದ್ದರು. ಮೊದಲನೆಯದು ಪೊ ಆತ್ಮ (ಪ್ರಾಣಿ ಆತ್ಮ) ; ಗರ್ಭಧಾರಣೆಯ ಕಾಲದಲ್ಲಿ ಗರ್ಭವನ್ನು ಸೇರುತ್ತದೆ. ಎರಡನೆಯ ಹನ್ ಆತ್ಮ ; ಶಿಶು ಹುಟ್ಟಿದ ಕೂಡಲೇ ಅದರ ದೇಹವನ್ನು ಸೇರಿಕೊಳ್ಳುತ್ತದೆ. ಇದು ಅವರ ಕಲ್ಪನೆ. ಭೌತಿಕ ಆತ್ಮವಾದ ಪೊ ವ್ಯಕ್ತಿ ಮರಣ ಹೊಂದಿದ ಮೇಲೆ ಅವನ ದೇಹವನ್ನು ಅನುಸರಿಸುತ್ತದೆ. ಸತ್ತವನ ವಂಶಜರ ಪೂಜೆ ಪುರಸ್ಕಾರಗಳಿಂದ ಅದು ಸಂತೃಪ್ತವಾಗುತ್ತದೆ. ದೇಹ ಸಮಾಧಿಯಲ್ಲಿ ನಶಿಸಿದಂತೆಲ್ಲ ಈ ಆತ್ಮವೂ ನಶಿಸುತ್ತ ಬರುತ್ತದೆ. ವಂಶಜನ ಪೂಜೆ ಮತ್ತು ಬಲಿಗಳಿಲ್ಲದೆ ಹೋದರೆ ಈ ಆತ್ಮ ಪ್ರೇತವಾಗಿ ವಂಶಕ್ಕೆ ಅಪಾಯವೆಸಗಬಹುದು. ಆಧ್ಯಾತ್ಮಿಕ ಆತ್ಮವಾದ ಹನ್ ಸ್ವರ್ಗವನ್ನು ಮುಟ್ಟಿ ತನ್ನ ವಂಶಜರ ಹಿತಾಸಕ್ತಿಗಳನ್ನು ಕಾಪಾಡುತ್ತದೆ. ಒಂದು ವಂಶವೇ ನಾಶವಾದ ಪಕ್ಷದಲ್ಲಿ ಆ ವಂಶದ ಸತ್ತವರ ಆತ್ಮಗಳು ಪೂಜೆಗಳಿಲ್ಲದೆ ದೆಸೆಗೆಟ್ಟು ಅಲೆದಾಡಬಹುದು.[]

ಚೀನಿಯರು ಬಲಿ ನೀಡುವ ಪದ್ಧತಿ ಇತರ ಸಂಸ್ಕøತಿಗಳಲ್ಲಿನ ಬಲಿ ವಿಧಾನಗಳನ್ನೇ ಹೋಲುತ್ತದೆ. ಪ್ರಾಚೀನ ಕಾಲದಲ್ಲಿ ಸತ್ತ ಶ್ರೀಮಂತನ ಹಿಂದೆ ಅವನ ಪರವಾಗಿ ಬಲಿಕೊಟ್ಟ ಅವನ ಮಡದಿಯರ ಮತ್ತು ಪರಿವಾರದವರ ಆತ್ಮಗಳೂ ಅವನ ಸೇವೆಗಾಗಿ ಹೋಗುತ್ತಿದ್ದವು. ಆಧುನಿಕ ಚೀನದಲ್ಲಿ ನರಬಲಿಗೆ ಬದಲಾಗಿ ಸತ್ತವನ ಹೆಂಡಿರನ್ನು ಮತ್ತು ಪರಿವಾರದವರನ್ನು ಪ್ರತಿನಿಧಿಸುವ ಕಾಗದಗಳನ್ನು ಸುಡುವ ಪದ್ಧತಿ ಇದೆ. ಪ್ರಾಚೀನ ಚೀನದಲ್ಲಿ ನದಿಗೆ ಪ್ರತಿವರ್ಷವೂ ಸುಂದರ ಕನ್ನಿಕೆಯನ್ನು ವಿವಾಹ ಮಾಡಿಕೊಡುವ ಪದ್ಧತಿ ಇತ್ತು. ಆಕೆಯನ್ನು ಮದುವಣಗಿತ್ತಿಯಂತೆ ಶೃಂಗರಿಸಿ ನಿಷೇಕ ಶಯ್ಯೆಯೊಡನೆ ಹಡಗಿನಲ್ಲಿ ತೇಲಿ ಬಿಡುತ್ತಿದ್ದರು.[] ನದಿಗೆ ಆಹುತಿಯಾಗಬೇಕಾದವರನ್ನು ಉಳಿಸುವುದು ಯುಕ್ತವಲ್ಲವೆಂಬ ನಂಬಿಕಯೇ ನದಿಯಲ್ಲಿ ಮುಳುಗುವವರನ್ನು ರಕ್ಷಿಸಲು ಈಗಲೂ ಚೀನಿಯರು ಅಂಜುವುದಕ್ಕೆ ಕಾರಣವಾಗಿದೆ. ವನದೇವತೆಗಳಿಗೆ ಮತ್ತು ಪರ್ವತಗಳಿಗೆ ಪೂಜೆ ಸಲ್ಲಿಸುವ ಪದ್ಧತಿಯೂ ಚೀನದಲ್ಲಿತ್ತು.

ವಿಚಾರವಾದಿಗಳು ಹಳೆಯ ಪದ್ಧತಿಗಳನ್ನು ನಾಶಮಾಡದೆ ರಕ್ಷಿಸಿಕೊಂಡು ಬರುವ ಪ್ರಯತ್ನ ಮಾಡಿದ್ದಾರೆ. []ದಾರ್ಶನಿಕರು, ಇತಿಹಾಸಕಾರರು ಹಾಗೂ ಧರ್ಮಶಾಸ್ತ್ರಜ್ಞರು ಈ ವಿಷಯದಲ್ಲಿ ಆಸಕ್ತಿ ವಹಿಸಿದ್ದಾರೆ. ಚೌ ಸಂತತಿಯ ಸಮ್ರಾಟರ ಕಾಲದಲ್ಲಿ ಪ್ರಾಚೀನ ವೃತ್ತಿನಿರತ ಪುರೋಹಿತರ ಪಾಂಡಿತ್ಯವನ್ನು ಸಂಪಾದಿಸಿಕೊಂಡ ವಿದ್ವಾಂಸರು ಪ್ರಬಲರಾಗಿದ್ದರು. ಸಾಮ್ರಾಜ್ಯದ ವಿಘಟನೆಯಿಂದ ನಡೆನುಡಿ ಮತ್ತು ನೈತಿಕ ಮಟ್ಟಗಳು ಶಿಥಿಲವಾಗಿ ನೂರಾರು ಪಂಥಗಳು ಹುಟ್ಟಿಕೊಳ್ಳುವುದಕ್ಕೆ ಅವಕಾಶವಾಯಿತು. ವ್ಯತಿರಿಕ್ತವಾದ ಕಲ್ಪನೆಗಳು ಮೂಡಿದವು, ಕನ್ಫ್ಯೂಷಿಯಸ್[] ಮತ್ತು ತಾಓ ಧರ್ಮಪಂಥಗಳು ಚೀನದಲ್ಲಿ ಹೊಸ ಭಾವನೆಗಳನ್ನು ಮೂಡಿಸಿದವು.[]


ಉಲ್ಲೇಖಗಳು

ಬದಲಾಯಿಸಿ
  1. https://web.archive.org/web/20090226215809/http://nanpin.china.com.cn/english/culture/137102.htm
  2. https://archive.org/details/chinesemythology0000birr
  3. https://web.archive.org/web/20090224073548/http://www.pitt.edu/~dash/china.html
  4. https://www.scribd.com/doc/270981438/Encyclopedia-of-Chinese-Pantheon
  5. https://web.archive.org/web/20010715130504/http://www.cdot.org/history/chinese_myths.htm
  6. https://books.google.com/books?id=cuddgTWyx50C&dq=hare+and+toad+on+the+moon&source=gbs_navlinks_s
  7. "ಆರ್ಕೈವ್ ನಕಲು". Archived from the original on 1998-01-15. Retrieved 2020-01-11.
  8. https://books.google.co.in/books?id=1R9MAQAAQBAJ&pg=PA4&lpg=PA4&dq=confucius+age+19+marry+qiguan&source=bl&ots=xlKmoo6xBZ&sig=iIVdL5M3fvp42ZqQUaXb4XwpMFE&hl=en&sa=X&redir_esc=y#v=onepage&q=confucius%20age%2019%20marry%20qiguan&f=false