ಚಿತ್ರಗೀತೆಗಳ ಹಕ್ಕು(copyrights of songs)

ಚಿತ್ರಗೀತೆಗಳು ಹಕ್ಕು ಯಾರದು? ಎಂಬ ಹಳೆಯ ಪ್ರಶ್ನೆಗೀಗ ಮತ್ತೆ ಚಾಲನೆ ದೊರಕಿದೆ. ಮಾತ್ರವಲ್ಲ ಇದು ಕೇವಲ ಚರ್ಚೆಯ ಮಟ್ಟದಲ್ಲಿರದೆ ನ್ಯಾಯಾಲಯದ ಮೆಟ್ಟಿಲನ್ನು ಏರಿದೆ. ಬಹು ಚರ್ಚೆಯ ನಂತರವೇ ಇಂಡಿಯನ್ ಪರ್‌ಫಾರ್ಮಿಂಗ್ ರೈಟ್ಸ್ ಸೊಸೈಟಿ (ಐ ಪಿ.ಆರ್.ಎಸ್) ಚಿತ್ರಗೀತೆಗಳ ಹಕ್ಕುಗಳನ್ನು ಹೊಂದಿದ ರಾಷ್ಟ್ರೀಯ ಸಂಸ್ಥೆ ಎಂಬ ಮನ್ನಣೆ ಪಡೆದಿತ್ತು. 1996ರ ಮಾರ್ಚ್ 27 ರಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ 1957ರ ಕೃತಿಸ್ವಾಮ್ಯ ಕಾಯಿದೆ ಸೆಕ್ಷನ್ 33(3)ರಂತೆ ಅಧಿಕೃತ ಮನ್ನಣೆ ಒದಗಿಸಿತ್ತು. ಅಲ್ಲಿಂದ ಮುಂದೆ ಕೆಲವು ಮಹತ್ತರ ಬೆಳವಣಿಗೆಗಳಾದವು. ಜಾಗತೀಕರಣದ ಹಿನ್ನೆಲೆಯಲ್ಲಿ ಬಹುಮಾಧ್ಯಮಗಳ ಕಾಲ ಬಂದಿತು.

ಚಿತ್ರಗೀತೆಗಳ ವಾಣಿಜ್ಯಿಕ ಬಳಕೆ ನಿರೀಕ್ಷೆಗಿಂತಲೂ ಹೆಚ್ಚಾಯಿತು. ರಸಮಂಜರಿಗಳು ಹೆಚ್ಚಾದವು. ಮೊಬೈಲ್‌ಗಳ ರಿಂಗ್ ಟೋನ್‌ಗಳಾಗಿ ಚಿತ್ರಗೀತೆಗಳು ಬಳಕೆಯಾದವು. ಎಲ್ಲಾ ಟಿ.ವಿ ವಾಹಿನಿಗಳಲ್ಲೂ ರಿಯಾಲಿಟಿ ಶೋಗಳು ಆರಂಭವಾದವು. ಎಫ್.ಎಂಗಳು ಖಾಸಗಿಯವರಿಗೆ ತೆರೆದು ಕೊಂಡಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಹೆಚ್ಚಾದವು. ಇವುಗಳಲ್ಲಿ ಹೆಚ್ಚಿನವು ಚಿತ್ರಗೀತೆಗಳನ್ನೇ ಅವಲಂಬಿಸಿದ್ದವು. ಇಲ್ಲೆಲ್ಲ ಬಳಕೆಯಾಗುವ ಚಿತ್ರಗೀತೆಗಳಿಗೆ ಐಪಿಆರ್‌ಎಸ್ ತನ್ನ ನಿಯಮದಂತೆ ಹಣ ವಸೂಲಿ ಆರಂಭಿಸಿತು. 1973 ರಲ್ಲಿ ಕೇವಲ 900 ರೂ. ಹಂಚಿಕೆಯಿಂದ ಆರಂಭವಾಗಿದ್ದ ಐಪಿಆರ್‌ಎಸ್ 2007-08 ನೇ ಸಾಲಿಗೆ 17 ಕೋಟಿ 7 ಲಕ್ಷದ 43 ಸಾವಿರ ರೂಪಾಯಿಗಳಷ್ಟು ಬೃಹತ್ ಮೊತ್ತವನ್ನು ಗೌರವಧನವಾಗಿ ಸಂಗ್ರಹಿಸಿತು. ಈ ಬೃಹತ್ ಮೊತ್ತವೇ ಸಮಸ್ಯೆಯ ಮೂಲ ಎನ್ನಬಹುದು.

ಐಪಿಆರ್‌ಎಸ್ ಅನ್ವಯ ಚಿತ್ರಗೀತೆಗಳಿಗೆ ಮೂವರು ಕಾನೂನು ಬದ್ಧ ಹಕ್ಕುದಾರರಿರುತ್ತಾರೆ. ಗೀತ ರಚನೆಕಾರ, ಸಂಗೀತಗಾರ ಮತ್ತು ಸಂಗೀತ ಸಂಸ್ಥೆ. ಇವರ ನಡುವೆ ಶೇ. 50 ಸಂಗೀತ ಸಂಸ್ಥೆಗಳಿಗೆ, ಶೇ. 25 ಸಂಗೀತ ನಿರ್ದೇಶಕನಿಗೆ, ಶೇ.12.5 ಗೀತರಚನೆಕಾರ ನಿಗೆ ಹಂಚಿಕೆಯಾಗುತ್ತದೆ. ಉಳಿದ ಹಣ ಆಡಳಿತಾತ್ಮಕ ವೆಚ್ಚಕ್ಕೆ ಬಳಕೆಯಾಗುತ್ತದೆ. ಐಪಿಆರ್‌ಎಸ್‌ನ ಅಸ್ತಿತ್ವವನ್ನೇ ಪ್ರಶ್ನಿಸಿದ ಸಂಸ್ಥೆ ಇಂಡಿಯನ್ ಮ್ಯೂಸಿಕ್ ಇಂಡಸ್ಟ್ರಿ (ಐಎಂಐ) ಅದು ಸಂಗೀತ ಸಂಸ್ಥೆಗಳ ಅಖಿಲ ಭಾರತ ಮಟ್ಟದ ಒಕ್ಕೂಟ. ಈ ಸಂಸ್ಥೆಯ ಪ್ರಕಾರ ಚಿತ್ರಗೀತೆಗಳು ವಾಣಿಜ್ಯಿಕವಾಗಿ ಬಳಕೆಯಾದಾಗ ಲಭಿಸುವ ಗೌರವಧನಕ್ಕೆ ಗೀತರಚನೆಕಾರರು ಮತ್ತು ಸಂಗೀತ ನಿರ್ದೇಶಕರು ಅರ್ಹರಲ್ಲ. ಏಕೆಂದರೆ ಕೃತಿಸ್ವಾಮ್ಯ ಹಕ್ಕು ಕಾಯಿದೆಯ 53 (ವಿ) ಪ್ರಕಾರ ‘ಯಾವುದೇ ವ್ಯಕ್ತಿಯ ಸೃಜನಶೀಲತೆ ಅದರ ಅನುಷಂಗಿಕ ಕಾರಣಕ್ಕಾಗಿ ಬಳಕೆಯಾದರೆ ಅವರು ಆ ಮಟ್ಟಿಗಿನ ಸಂಭಾವನೆಗೆ ಅರ್ಹರಾಗುತ್ತಾರೆಯೇ ಹೊರತು ಲಾಭಾಂಶಕ್ಕೆ ಅಲ್ಲ’. ಇದಕ್ಕಿರುವ ಜನಪ್ರಿಯ ಉದಾಹರಣೆ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಬರೆದು ಕೊಡುವ ಎಂಜಿನಿಯರ್ ನಕ್ಷೆಗಾಗಿ ಸಂಭಾವನೆ ಪಡೆಯಬಲ್ಲನೇ ಹೊರತು, ಕಟ್ಟಡದ ಯಾವುದೇ ಹಕ್ಕನ್ನು ಪಡೆಯುವುದಿಲ್ಲ. ಇದೇ ಇಲ್ಲಿಯೂ ಅನ್ವಯವಾಗುತ್ತದೆ ಎಂಬುದು ಸಂಗೀತ ಸಂಸ್ಥೆಗಳ ವಾದ. ಈ ವಾದಕ್ಕೆ ಒಕ್ಕೂಟ ನೀಡುವ ತಾರ್ಕಿಕ ಕಾರಣವೆಂದರೆ, ಇವತ್ತು ಭಾರತೀಯ ಸಂಗೀತ 12 ಬಿಲಿಯನ್ ಮೌಲ್ಯದ ವಹಿವಾಟು ಆಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹೂಡಿರುವವರು ಸಂಗೀತ ಸಂಸ್ಥೆಗಳೇ. ‘ಪ್ರತೀ ಕ್ಷಣವೂ ನಾವು ಪೈರಸಿ ಸಮಸ್ಯೆ ಎದುರಿಸುತ್ತಲೇ ಇದ್ದೇವೆ. ಆಗೆಲ್ಲ ಗೀತರಚನೆಕಾರರು, ಸಂಗೀತ ನಿರ್ದೇಶಕರು ನಮ್ಮ ನೆರವಿಗೆ ಬಂದಿಲ್ಲ. ಈಗ ಲಾಭಾಂಶಕ್ಕೆ ಮಾತ್ರ ಅವರು ಏಕೆ ಹಕ್ಕುದಾರರಾಗುತ್ತಾರೆ’ ಎಂಬುದು ಅವರ ವಾದ.

ಹೋರಾಟಕ್ಕೆ ನಾಂದಿಹಾಡಿದ ಸಾರೆಗಾಮ: ಕೇವಲ ಚರ್ಚೆಗಳಲ್ಲಿದ್ದ ಈ ಅಂಶವನ್ನು ನ್ಯಾಯಾಂಗ ಹೋರಾಟಕ್ಕೆ ಬಳಸಿದ್ದು ಭಾರತದಲ್ಲಿ ಅತಿ ಹಳೆಯ ಚಿತ್ರಗೀತೆಗಳ ಹಕ್ಕನ್ನು ಪಡೆದಿರುವ ಸಾರೆಗಾಮ ಸಂಸ್ಥೆ. 2005ರ ಸೆಪ್ಟೆಂಬರ್ 28 ರಂದು ಅದು ಬರಾಸತ್ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯಂತೆ ಚಿತ್ರಗೀತೆಗಳ ಗೌರವಧನ ಸಂಗ್ರಹಿಸಲು ಐಪಿಆರ್‌ಎಸ್ ಅರ್ಹ ಸಂಸ್ಥೆಯಲ್ಲ ಎಂದು ವಾದಿಸಲಾಯಿತು. ಇದನ್ನು ಹಿಂಬಾಲಿಸಿ ಮ್ಯೂಸಿಕ್ ಕಂಪನಿ ಆಫ್ ಇಂಡಿಯಾ ಮತ್ತು ಸೋನಿ ಬಿ.ಎಂ.ಜಿ ಮ್ಯೂಸಿಕ್ ಎಂಟರ್‌ಪ್ರೈಸಸ್ (ಲಿಮಿಟೆಡ್) ಸೆಕ್ಷನ್ 392, 402 ಮತ್ತು 101ರಂತೆ ಸುಸಜ್ಜಿತ ಅರ್ಜಿ ಸಲ್ಲಿಸಿತು. ಅದರಂತೆ 1. ಐ.ಪಿ.ಆರ್.ಎಸ್ ಚಿತ್ರಗೀತೆಗಳ ಗೌರವಧನವನ್ನು ಸಂಗ್ರಹಿಸಲು ಅರ್ಹವಲ್ಲ. ಏಕೆಂದರೆ ಅದು ನಿಜವಾದ ಹಕ್ಕು ದಾರರಲ್ಲದವರನ್ನೂ (ಅಂದರೆ ಗೀತ ರಚನೆಕಾರರು ಮತ್ತು ಸಂಗೀತ ನಿರ್ದೇಶಕರು) ಸದಸ್ಯರನ್ನಾಗಿ ಹೊಂದಿದೆ.

2. ಸರಕಾರದ ನಿಬಂಧನೆಗೆ ಒಳಪಡುವಂಥ ಲೆಕ್ಕ ಪತ್ರವನ್ನು ಸಿದ್ಧಪಡಿಸುತ್ತಿಲ್ಲ.

3. ಬಹಳಷ್ಟು ಜನ ಹಕ್ಕುದಾರರು (ಸಂಗೀತ ಸಂಸ್ಥೆಗಳು) ಇದರ ಸದಸ್ಯರೇ ಅಲ್ಲದ ಕಾರಣ ಪ್ರಾತಿನಿಧಿಕ ಅರ್ಹತೆ ಪಡೆದಿಲ್ಲ-ಹೀಗೆ ಹಲವು ವಿಚಾರಗಳನ್ನು ಮಂಡಿಸ ಲಾಗಿತ್ತು. ಇದನ್ನು ಹಿಂಬಾಲಿಸಿ ಟಿಪ್ಸ್ ಇಂಡಿಸ್ಟ್ರಿಸ್ ಲಿಮಿಟೆಡ್ ಮುಂಬಯಿ ನ್ಯಾಯಾಲಯದಲ್ಲಿ ಸೆಕ್ಷನ್ 111 ಮತ್ತು 150ರ ಅನ್ವಯ ಇದೇ ವಾದವನ್ನೂ ಮಂಡಿಸಿ ಅರ್ಜಿ ಸಲ್ಲಿಸಿತು. ಇವೆಲ್ಲವೂ ವಿಚಾರಣೆ ಹಂತದಲ್ಲಿರುವಾಗಲೇ ಎಲ್ಲವನ್ನು ಒಟ್ಟು ಗೂಡಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಸ್ತೃತ ಅರ್ಜಿ ಸಲ್ಲಿಸಲು ಇಂಡಿಯನ್ ಮ್ಯೂಸಿಕ್ ಇಂಡಸ್ಟ್ರಿ ಸಿದ್ಧತೆ ನಡೆಸುತ್ತಿದೆ. ಇದು ಇಡೀ ಚರ್ಚೆ ಸುದೀರ್ಘ ಕಾನೂನು ಹೋರಾಟದತ್ತ ತಿರುಗುವುದಕ್ಕೆ ಸ್ಪಷ್ಟ ಸೂಚನೆ ನೀಡುತ್ತಿದೆ.

ಕಾನೂನು ಹೋರಾಟವಲ್ಲದೆ ಇನ್ನೇನಾದರೂ ಇದೆಯಾ? ಇದು ಕೇವಲ ಕಾನೂನು ವಿಷಯವಲ್ಲ ಎಂಬ ಗುಮಾನಿ ಚಿತ್ರರಂಗದ ಹಲವರಿಗಿದೆ. ಕಾರಣವಿಷ್ಟೇ. ಜೀ ಟಿವಿಗಳ ಸಮೂಹ ತನ್ನ ಜನಪ್ರಿಯ ರಿಯಾಲಿಟಿ ಷೋ ಕಾರ್ಯಕ್ರಮಕ್ಕಾಗಿ ಐಪಿಆರ್‌ಎಸ್‌ಗೆ ಗೌರವಧನ ಕೊಡಲು ನಿರಾಕರಿಸಿತು. ಇದನ್ನು ಐಪಿಆರ್‌ಎಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿ ಜೀ ಸಮೂಹ ಲೈಸೆನ್ಸ್ ಹಣವನ್ನು ದಂಡದೊಂದಿಗೆ ಪಾವತಿಸುವಂತೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ಸಂಗೀತ ಸಂಸ್ಥೆಯೊಂದು ಪ್ರಾಯೋಜಕವಾಗಿತ್ತು. ಇದು ವ್ಯಾವಹಾರಿಕವಾಗಿ ಆ ಸಂಸ್ಥೆಗೆ ಉಂಟುಮಾಡಿದ ಇರಸು-ಮುರುಸು ಈಗ ಈ ತಿರುವು ಪಡೆದುಕೊಂಡಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ. ಅಷ್ಟೇ ಅಲ್ಲ. ಚಿತ್ರಗೀತೆಗಳ ವಾಣಿಜ್ಯಿಕ ಬಳಕೆಗಾಗಿ ಹಣ ಪಾವತಿಸಬೇಕಾದ ಟಿ.ವಿ.ವಾಹಿನಿಗಳು, ಎಫ್.ಎಂ. ಕೇಂದ್ರಗಳು ಮತ್ತು ಮೊಬೈಲ್ ಕಂಪನಿಗಳು ಈ ಮೂರರ ಜತೆಗೂ ಸಂಗೀತ ಸಂಸ್ಥೆಗಳಿಗೆ ವಾಣಿಜ್ಯಿಕ ಸಂಬಂಧಗಳಿವೆ. ಈ ಕಾರಣಕ್ಕಾಗಿಯೇ ಐಪಿಆರ್‌ಎಸ್ ಎಂಬ ಚಳವಳಿಯನ್ನೇ ಹತ್ತಿಕ್ಕುವ ಪ್ರಯತ್ನ ಇದಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ವಾಸ್ತವವಾಗಿ ಚಿತ್ರಗೀತೆಗಳಿಗೂ ಕೃತಿಸ್ವಾಮ್ಯದ ಹಕ್ಕು ಬೇಕು ಎಂದು ಹೋರಾಟ ಮಾಡಿದವರಾದ ನೌಷದ್, ಸಾಹಿದ್ ಲೂಧಿಯಾನಿ, ಎಂ.ಬಿ ಶ್ರೀನಿವಾಸನ್, ಕೆ.ವಿ. ಮಹಾದೇವನ್, ದಾಶರಥಿ, ಪುಗಳೇಂದಿ. ಆರ್.ಎನ್. ಜಯಗೋಪಾಲ್ ಎಲ್ಲರೂ ಗೀತರಚನೆಕಾರರು ಮತ್ತು ಸಂಗೀತ ನಿರ್ದೇಶಕರೇ. ಈ ಹೋರಾಟದಲ್ಲಿ ಸಂಗೀತ ಸಂಸ್ಥೆಗಳ ಪಾತ್ರವೇ ಇರಲಿಲ್ಲ. ಹಾಗಿದ್ದೂ ಬಂಡವಾಳ ಹೂಡುವವರು ಎಂಬ ಗೌರವ ನೀಡಿ ಈ ಸಂಸ್ಥೆಗೆ ಸೇರಿಸಿಕೊಂಡಿದ್ದಲ್ಲದೆ ಅರ್ಧಭಾಗದ ಗೌರವಧನ ಅವರಿಗೆ ಸಲ್ಲುವಂತೆ ಮಾಡಿದರು. ಚಿತ್ರ ಗೀತೆಯ ಸೃಷ್ಟಿಗೆ ಗೀತರಚನೆಕಾರರು ಮತ್ತು ಸಂಗೀತ ನಿರ್ದೇಶಕರನ್ನೇ ಅವಲಂಬಿಸಿರುವ ಸಂಗೀತ ಸಂಸ್ಥೆಗಳು ಇಷ್ಟು ವರ್ಷದ ಲಾಭ ಪಡೆದು ಈಗ ಭಿನ್ನರಾಗಿ ಹಾಡುವುದು ಸರಿಯಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಕೆಲವು ಸಂಗೀತ ಸಂಸ್ಥೆಗಳೇ ಇಂಡಿಯನ್ ಮ್ಯೂಸಿಕ್ ಇಂಡಸ್ಟ್ರಿ ಪ್ರಯತ್ನಕ್ಕೆ ಅಪಸ್ವರ ಎತ್ತಿವೆ. ವಿವಾದ ನ್ಯಾಯಾಲಯದ ಸುದೀರ್ಘ ಹೋರಾಟವಾಗುವುದನ್ನು ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇತ್ತ ಐಪಿಆರ್‌ಎಸ್‌ನಲ್ಲೂ ಎಲ್ಲವೂ ಸರಿ ಇಲ್ಲ. ಹಂಚಿಕೆಯಲ್ಲಿ ಶೇಕಡಾವಾರು ಲೆಕ್ಕ ಹಾಕುವಾಗ ಗಾಯಕರಿಗೆ ಗೌರವಧನ ಸಲ್ಲುವುದಿಲ್ಲ ಎಂದು ನಿರ್ಧರಿಸಿದಾಗಲೇ ಅಪಸ್ವರ ಕೇಳಿ ಬಂದಿತು. ಬೇರೆ ದೇಶಗಳಲ್ಲಿ ಈ ಮಾದರಿ ಸಂಸ್ಥೆಗಳು ಗಾಯಕರಿಗೂ ಗೌರವಧನ ನೀಡುತ್ತವೆ. ಭಾರತದಲ್ಲಿ ಈ ನಿಲುವು ಉಂಟಾಗಲು ಆಗ ಐಪಿಆರ್‌ಎಸ್ ಧುರೀಣರಾಗಿದ್ದವರ ವೈಯಕ್ತಿಕ ಕಾರಣಗಳು ಕೆಲಸ ಮಾಡಿದ್ದವು ಎಂಬ ಮಾತುಗಳು ಕೇಳಿ ಬಂದಿದ್ದವು. ಲತಾ ಮಂಗೇಶ್ಕರ್ ಅವರೇ ಈ ಕುರಿತು ತೀವ್ರವಾದ ಆಕ್ಷೇಪ ಎತ್ತಿದ್ದರು. ಇಲ್ಲಿಂದಲೇ ಐಪಿಆರ್‌ಎಸ್ ಚಿತ್ರರಂಗದ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವಲ್ಲಿ ವಿಫಲವಾಯಿತು. ಸದಸ್ಯರನ್ನು ಸೇರಿಸಿಕೊಳ್ಳುವಲ್ಲಿ ಕೂಡ ಅಗತ್ಯ ಮಾಹಿತಿ-ಪ್ರಚಾರ ನೀಡುವ ಪ್ರಯತ್ನ ನಡೆಯಲಿಲ್ಲ.

ಚಿತ್ರರಂಗಕ್ಕೆ ಸಂಬಂಧಿಸಿದ ಸಂಸ್ಥೆಗಳನ್ನು ಒಳಗೊಳ್ಳುವ ಪ್ರಯತ್ನ ನಡೆಸಲಿಲ್ಲ . ಕೆಲವೇ ಜನರ ಸಂಸ್ಥೆಯಾಗೇ ಉಳಿದುಕೊಂಡಿತು. ಇವರಲ್ಲಿ ಆಸಕ್ತರಿದ್ದಾಗ ಮಾತ್ರ ಐ.ಪಿ.ಆರ್.ಎಸ್ ನಿಂದ ಬೆಂಬಲ ಸಿಕ್ಕುತ್ತಿದ್ದಾಗ ಅದೊಂದು ಚಳವಳಿಯಾಗಲು ಸಾಧ್ಯವಾಗಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹಣದ ಒಳ ಹರಿವು ಹೆಚ್ಚಾದ ಮೇಲೆ ಸಂಸ್ಥೆಯ ಲೆಕ್ಕ-ಪತ್ರಗಳು ಪಾರದರ್ಶಕವಾಗಲಿಲ್ಲ. ಇವತ್ತು ಸಂಗೀತ ಸಂಸ್ಥೆಗಳು ನ್ಯಾಯಾಲಯದಲ್ಲಿ ಈ ಅಂಶವನ್ನು ಪ್ರಶ್ನಿಸುತ್ತಿವೆ. ಹೀಗೆ ಐಪಿಆರ್‌ಎಸ್ ಕೂಡ ಇಂದಿನ ಸಮಸ್ಯೆಗೆ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಮಾತ್ರವಲ್ಲ ಈಗ ಐಪಿಆರ್‌ಎಸ್‌ನಲ್ಲಿ ಸಂಗೀತ ಸಂಸ್ಥೆಗಳ ನಿಯಂತ್ರಣ ಈಗ ಹೆಚ್ಚಾಗಿದೆ. ಕಾನೂನು ಹೋರಾಟ ನಡೆದರೆ ಪ್ರತಿರೋಧವೇ ಇಲ್ಲದ ಶರಣಾಗತಿ ಉಂಟಾಗಿ, ಗೀತ ರಚನೆಕಾರರು ಮತ್ತು ಸಂಗೀತ ನಿರ್ದೇಶಕರು ಶಾಶ್ವತವಾಗಿ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

ಚಿತ್ರ ಸಾಹಿತಿ ಈಗ ಬಡಪಾಯಿ ಆಗುವನೆ? ಐಪಿಆರ್‌ಎಸ್‌ಮತ್ತು ಮ್ಯೂಸಿಕ್ ಕಂಪನೀಸ್ ಆಫ್ ಇಂಡಿಯಾದ ಹೊಡೆದಾಟದಲ್ಲಿ ಬಲಿಪಶುವಾಗುವವನು ಚಿತ್ರ ಸಾಹಿತಿ. ಚಿತ್ರರಂಗದಲ್ಲಿ ಅತ್ಯಂತ ಶೋಷಿತ ಎಂದರೆ ಚಿತ್ರ ಸಾಹಿತಿಯೇ ! ಹಣಕ್ಕೆ ಕತ್ತರಿ ಎಂದರೆ ಮೊದಲ ಪೆಟ್ಟು ಬೀಳುವುದು ಚಿತ್ರ ಸಾಹಿತಿಗೇ. ಐಪಿಆರ್‌ಎಸ್ ಕೂಡಾ ಬೌದ್ಧಿಕ ಹಕ್ಕುಗಳಡಿ ಸ್ವಾಮ್ಯದ ವಿಷಯ ಮಾತನಾಡುವು ದರಿಂದ ಚಿತ್ರ ಸಾಹಿತಿ ಪಾತ್ರ ಅಲ್ಲಿ ಗೌಣವೇ ಕೃತಿಸ್ವಾಮ್ಯದ ಅಡಿ ಹಕ್ಕುಗಳನ್ನು ಸಂರಕ್ಷಿಸುವ ಪ್ರಯತ್ನವೇ ನಮ್ಮಲ್ಲಿ ಆಗಿಲ್ಲ. ಚಿತ್ರಗೀತೆಗಳಿಗಾದರೂ ಐಪಿಆರ್‌ಎಸ್‌ನಿಂದ ಹಕ್ಕಿನ ರಕ್ಷಣೆ ಇದೆ. ಸಂಭಾಷಣೆಗಳಿಗೆ ಇಂತಹ ಸೌಲಭ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಹಿರಿಯ ಗೀತ ರಚನೆಕಾರ ಜಾವೆದ್ ಅಖ್ತರ್ ಕೆಲವು ಪ್ರಸ್ತಾಪಗಳನ್ನು ಮಾಡಿದ್ದಾರೆ. ಅವರಿಗೆ ಕನ್ನಡ ಚಿತ್ರಸಾಹಿತಿಗಳು ಬೆಂಬಲವಾಗಬೇಕಾದ ಅಗತ್ಯವಿದೆ.

ಭಾರತೀಯ ಕೃತಿ ಸ್ವಾಮ್ಯ ಹಕ್ಕು 1956ರ ವಿಧಿ 52, 53 ಇವತ್ತು ಬಹು ಮಟ್ಟಿಗೆ ಅಪ್ರಸ್ತುತ ಎನ್ನುವ ಹಂತಕ್ಕೆ ತಲುಪಿದೆ. ಅದು ರೂಪುಗೊಂಡಾಗ ಬಹುಮಾಧ್ಯಮಗಳು ಬಂದಿರಲಿಲ್ಲ. ಹಲವರ ಸೃಜನಶೀಲತೆ ಸೇರಿ ಕೃತಿ ರೂಪುಗೊಳ್ಳುವ ಸಾಧ್ಯತೆ ಸೃಷ್ಟಿಯಾಗಿರಲಿಲ್ಲ. ಈಗ ಅದು ಅನಿವಾರ್ಯವಾಗಿದೆ. ಹಲವರಿಗೆ ಹಂಚಿಕೆ ಎನ್ನುವಾಗ ಕಾಯಿದೆಯಲ್ಲಿ ಸ್ಪಷ್ಟ ಸೂತ್ರಗಳಿಲ್ಲದೆ ಅವರವರಿಗೆ ಇಷ್ಟ ಬಂದಂತೆ ಎಂಬಂತಾಗಿದೆ. ಹೀಗಾಗಿ ಚಿತ್ರ ಸಾಹಿತಿಗಳ ದೃಷ್ಟಿಯಿಂದ ವಿಧಿ 52ಎ ನಲ್ಲಿ ಕೆಲವು ಬದಲಾವಣೆಗಳಾಗಬೇಕಾಗಿದೆ. 1952ರ ಸಿನಿಮಾ ಟೋಗ್ರಫಿ ಕಾಯಿದೆ ಅನ್ವಯ ಚಿತ್ರ ಸಾಹಿತಿಗಳಿಗೂ ಸೂಕ್ತ ಹಕ್ಕು (ವಿಧಿ 37 ರಲ್ಲಿ ಸೇರ್ಪಡೆ) ಎಂಬ ಬದಲಾವಣೆ ಆಗಬೇಕಾಗಿದೆ. ಚಿತ್ರವನ್ನು ಕಲಾಕೃತಿ ಎಂದು ಪರಿಗಣಿಸಿದಾಗ ಈ ಕಾಯಿದೆಯ 5ಎ ನಲ್ಲಿ ಚಿತ್ರ ಸಾಹಿತಿಯನ್ನು ಸೃಷ್ಟಿಕರ್ತ ಎಂದು ಕರೆಯುವ ಅಂಶ ಸೇರಿಸಬೇಕು. ಹೀಗಾದಾಗ ಈ ಚಿತ್ರದ ವಾಣಿಜ್ಯಿಕ ಯಶಸ್ಸಿನಲ್ಲಿ ಚಿತ್ರ ಸಾಹಿತಿಗೂ ಹಕ್ಕಿರುತ್ತದೆ. ಅದು ರಿಮೇಕ್ ಅಥವಾ ಡಬ್ ಆದಾಗ ಸೂಕ್ತ ಗೌರವಧನ ಸಿಕ್ಕುತ್ತದೆ. ಬಹಳ ಮುಖ್ಯವಾಗಿ ಈಗ ಪಿಡುಗಾಗಿರುವ ರೀ-ಮಿಕ್ಸ್ ನಿಂದ ರಕ್ಷಣೆ ದೊರೆಯಲಿದೆ.

ಐಪಿಆರ್‌ಎಸ್‌ನಲ್ಲೇ ಸಡಿಲಗೊಳಿಸಿದ ನಿಯಮದಿಂದಾಗಿ ಚಿತ್ರಗೀತೆ ಬಂದ ನಾಲ್ಕು ವರ್ಷದ ನಂತರ ಅದನ್ನು ಯಾರು ಬೇಕಾದರೂ ರೀ-ಮಿಕ್ಸ್ ಮಾಡಬಹುದಾಗಿದೆ. ಈಗ ಅದಕ್ಕೆ 15ಡಿ ಅಡಿ ತರ ಬಯಸಿರುವ ತಿದ್ದುಪಡಿಯಲ್ಲಿ ಕೂಡಾ ಸಂಗೀತ ನಿರ್ದೇಶಕನಿಗೆ ರಕ್ಷಣೆ ಸಿಗಲಿದೆಯೇ ಹೊರತು ಚಿತ್ರ ಸಾಹಿತಿಗೆ ಅಲ್ಲ. ಹೀಗಾಗಿ ಸಿನಿಮಾಟೋಗ್ರಫಿ ಕಾಯಿದೆಯಲ್ಲೇ ಬದಲಾವಣೆ ಮಾಡಿದರೆ ನ್ಯಾಯ ಸಿಕ್ಕುತ್ತದೆ. ಇದರಿಂದ ಚಿತ್ರದ ಎಲ್ಲಾ ವಾಣಿಜ್ಯಿಕ ಬಳಕೆ, ಜಾಹೀರಾತು, ಸಿಡಿಗಳಲ್ಲಿ ಚಿತ್ರ ಸಾಹಿತಿಗಳ ಹೆಸರು ಬಳಸುವುದು ಕಡ್ಡಾಯವಾಗಲಿದೆ. ಖಾಸಗಿ ಮ್ಯೂಸಿಕ್ ಆಲ್ಬಂಗಳು ಪುಂಖಾನು ಪುಂಖವಾಗಿ ಬರುತ್ತಿರುವ ಕಾಲದಲ್ಲಿ ಚಿತ್ರ ಸಾಹಿತಿಗಳಿಗೆ ರಕ್ಷಣೆ ಸಿಗಲಿದೆ. ಹೀಗೆ ‘ರೆ’ಗಳು ಸಾಕಷ್ಟಿವೆ. ಆದರೆ ಇದನ್ನು ಮಾಡುವವರು ಯಾರು? ಉತ್ತರ ಸ್ಪಷ್ಟವಿಲ್ಲ. ಒಂದು ಮಾತಂತೂ ನಿಜ, ಚಿತ್ರ ಸಾಹಿತಿ ಗಳು, ಸಂಗೀತ ನಿರ್ದೇಶಕರು, ಗಾಯಕರು, ತಂತ್ರಜ್ಞರು ಎಲ್ಲರೂ ತಮ್ಮ ಕಾನೂನುಬದ್ಧ ಹಕ್ಕುಗಳ ಬಗ್ಗೆ ಜಾಗೃತರಾಗಬೇಕು. ಯಾರೋ ಹಕ್ಕನ್ನು ಕಾಪಾಡುತ್ತಾರೆ ಎಂಬ ಕಾಲ ಈಗ ದೂರವಾಗಿದೆ.

ಮಾಹಿತಿ ನೆರವು - ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ,ಲೇಖಕರು :ಎನ್.ಎಸ್.ಶ್ರೀಧರ ಮೂರ್ತಿ