ಚಿತ್ರಕಾವ್ಯವು ಸಂಸ್ಕೃತ ಸಾಹಿತ್ಯದಲ್ಲಿ ಶಬ್ದ ಚಮತ್ಕಾರ ಪ್ರದರ್ಶನಕ್ಕೆ, ಬುದ್ಧಿಶಕ್ತಿಯ ಕಸರತ್ತುಗಳಿಗೆ ಮೀಸಲಾದ ಕಾವ್ಯಪದ್ಧತಿ.[] ಕ್ರಿಸ್ತ ಶಕಾದಿಯಿಂದಲೂ ಶಬ್ದಚಮತ್ಕಾರಾಂಶದ ವಿಶೇಷ ಕೃಷಿ ನಡೆಯುತ್ತಿದ್ದುದನ್ನು ಅಶ್ವಘೋಷ, ಭರತ, ಪಿಂಗಲ, ಸಂಸ್ಕೃತ-ಪ್ರಾಕೃತ ಶಿಲಾಶಾಸನಕಾರರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಮುಂದೆ ಮಹಾಕವಿಗಳ ಪದವಿಗೆ ಆಸೆ ಮಾಡುವವರೆಲ್ಲರೂ ಚಿತ್ರಕಾವ್ಯದಲ್ಲಿ ತಮ್ಮ ಶಕ್ತಿಯನ್ನು ತೋರಿಸಿದಲ್ಲದೆ ಕೃತಕೃತ್ಯತೆಯನ್ನು ಕಾಣುತ್ತಿರಲಿಲ್ಲ. ಅಶ್ವಘೋಷ ಕಾಳಿದಾಸರಲ್ಲಿ ಕ್ವಚಿತ್ತಾಗಿಯೂ ಭಾರವಿ ಮಾಘಾದಿಗಳಲ್ಲಿ ನಿಯತಸರ್ಗಗಳಲ್ಲಿಯೂ ಚಿತ್ರಕವಿತ್ವದ ನಿದರ್ಶನಗಳಿವೆ. ಕ್ರಮೇಣ ಈ ಸಂಪ್ರದಾಯ ಬೆಳೆದು ಪಂಡಿತ ಜನರಿಗೆ ಪ್ರಿಯತರವಾಗುತ್ತ ಹೋದುದರ ಪರಿಣಾಮವಾಗಿ, ಬಾಣಮಯೂರಾದಿಗಳ ಸ್ತೋತ್ರಶತಕಗಳಲ್ಲಿ, ಘಟಕರ್ಪರಾದಿ ಖಂಡಕಾವ್ಯಗಳಲ್ಲಿ, ಸುಬಂಧು ಮುಂತಾದವರ ಗದ್ಯಕೃತಿಗಳಲ್ಲಿ, ಕಡೆಗೆ ನಲಚಂಪೂ ಮುಂತಾದ ಚಂಪೂಸಾಹಿತ್ಯದಲ್ಲಲ್ಲದೆ ಮುರಾರಿ ಪ್ರಭೃತಿಗಳ ನಾಟಕಗಳಲ್ಲಿ ಕೂಡ ಚಿತ್ರಕಾವ್ಯ ವ್ಯಾಮೋಹ ವ್ಯಾಪಿಸಿತು. 9ನೆಯ ಶತಮಾನದ ವಿಮರ್ಶಕ ಆನಂದ ವರ್ಧನ ಈ ವ್ಯಾಮೋಹವನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದರೂ ಪೂರ್ವದ ಅಲಂಕಾರಿಕರಾದ ದಂಡಿವಾಮನಾದಿಗಳು ಇದಕ್ಕೆ ತಮ್ಮ ಸಮ್ಮತಿಯನ್ನು ಇತ್ತುದೇ ಪಂಡಿತಕವಿಗಳಿಗೆ ಪ್ರಿಯವಾಯಿತೆನ್ನಬೇಕು. ಹೀಗಾಗಿ ಸಂಸ್ಕøತ ಸಾಹಿತ್ಯದ ಮುಂದಿನ ಇತಿಹಾಸವೆಲ್ಲ ಚಿತ್ರಕಾವ್ಯದ ಪ್ರಭಾವದ ಸೆಳೆತದಲ್ಲಿ ಸಿಕ್ಕಿ ಇಂದಿನವರೆಗೂ ಕೃತ್ರಿಮ ಶಬ್ದಪರಿಷ್ಕಾರದ ಒಂದು ಅನ್ಯಾದೃಶ ಆವರಣವನ್ನು ತಳೆದಿದೆ. 12ನೆಯ ಶತಮಾನದಿಂದ 19ನೆಯ ಶತಮಾನದ ವರೆಗೂ ಸಂಸ್ಕøತ ಪಂಡಿತಮಂಡಲಿಗಳಲ್ಲಿ ಅಗ್ರಪೀಠದ ಮರ್ಯಾದೆ ದೊರೆಯುತ್ತಿದ್ದುದು ಚಿತ್ರ ಕವಿಚತುರನಿಗೇ ಹೊರತು ಸರಸಕವಿಗಲ್ಲ. ಇದರಲ್ಲಿ ಶಬ್ದಚಿತ್ರ ಮತ್ತು ಅರ್ಥಚಿತ್ರ ಎಂದು ಪ್ರಧಾನ ವ್ಯತ್ಯಾಸ; ಅನುಪ್ರಾಸ ಯಮಕಾದಿ ಶಬ್ದಾಲಂಕಾರಗಳಿಂದ ಕೂಡಿದ್ದು ಶಬ್ದಚಿತ್ರ. ಉಪಮೆ ಉತ್ಪ್ರೇಕ್ಷಾದಿ ಊಹಾತ್ಮಕ ಅಲಂಕಾರಗಳಿಂದ ಕೂಡಿದ್ದು ಅರ್ಥಚಿತ್ರ.

ಚಿತ್ರಕವಿತೆಯ ಬಗೆಗಳು

ಬದಲಾಯಿಸಿ

1. ಕತ್ತಿ, ತೆಕ್ಕೆಹಾವು, ಮದ್ದಲಿ, ಪದ್ಮ ಮುಂತಾದ ಚಿತ್ರಾಕೃತಿಗಳಲ್ಲಿ ಲೆಕ್ಕಾಚಾರದ ಮನೆಗಳನ್ನು ಮಾಡಿ, ಅವುಗಳಲ್ಲಿ ಒಂದು ನಿರ್ದಿಷ್ಟಕ್ರಮದಿಂದ ಪದ್ಯಾಕ್ಷರಗಳನ್ನು ತುಂಬುವಂತೆ ಬರೆಯುವ ಮಾದರಿ ಒಂದು ಬಗೆ. ಇವಕ್ಕೆ ಖಡ್ಗಬಂಧ, ನಾಗಬಂಧ, ಮುರಜಬಂಧ, ಪದ್ಮಬಂಧ ಮುಂತಾದ ಹೆಸರುಗಳಿವೆ. ಇವನ್ನು ಇಂದಿನ ಚಕ್ರಬಂಧ ಸ್ಪರ್ಧೆಯ ಚಿತ್ರಾಕೃತಿಗಳೊಡನೆ ಹೋಲಿಸಬಹುದು.

ಇಲ್ಲೆಲ್ಲ ಪದ್ಯದ ಅರ್ಥಸ್ವಾರಸ್ಯಕ್ಕಿಂತ ಕವಿಯ ಬುದ್ಧಿಬಲಕ್ಕೇ ಬೆಲೆ. ಉದಾ : ಪದ್ಮಬಂಧ ಪೂರ್ವದಿಂದ ಆರಂಭಿಸಿ ಅನುಕ್ರಮವಾಗಿ ಕೇಂದ್ರದ ಅಕ್ಷರದೊಂದಿಗೆ ಚಿತ್ರದಲ್ಲಿ ತೋರಿಸಿರುವಂತೆ ಸುತ್ತಲೂ ಹಿಂದಕ್ಕೂ ಮುಂದಕ್ಕೂ (1, 2, 3 ಇತ್ಯಾದಿ 12ರ ವರೆಗೆ) ಓದಿದರೆ ಶ್ಲೋಕವಾಗುತ್ತದೆ.

2. ಸ್ಥಾನನಿಯಮಕ್ಕೆ ಅನುಸರಿಸಿ ಭಿನ್ನಾರ್ಥಕವಾದ ಸರೂಪ ಶ್ಲಿಷ್ಟಪದಗಳ ಆವೃತ್ತಿ ಯಮಕಾಲಂಕಾರವೆನಿಸುವುದು. ಇದು ಶಬ್ದಚಿತ್ರದ ಮತ್ತೊಂದು ಬಗೆ. ಪ್ರಾಚೀನ ಲಾಕ್ಷಣಿಕರು ಇದರ ಅನೇಕ ಪ್ರಬೇಧಗಳನ್ನು ನಿರೂಪಿಸಿದ್ದಾರೆ. ಒಂದು ಸಾಮಾನ್ಯ ಉದಾಹರಣೆ : ಯದಾನತೋsಯದಾನತೋ ನಯತ್ಯಯಂ ನ ಯಾತ್ಯಯಂ I

			ಶಿವೇ ಹಿತಾಂ ಶಿವೇಹಿತಾಂ ಸ್ಮರಾಮಿತಾಂ ಸ್ಮರಾಮಿ ತಾಂ II

ಯಾವಾಕೆಯ ಅಭಯದಾನದಿಂದ (ಅಯದಾನತಃ) ಆನತನಾದ ಈ ಭಕ್ತ (ಅಯಂ, ಯದ್+ಆನತೋ) ಯಾವಗಲೂ ಧರ್ಮದೆಲ್ಲೆಯನ್ನು (ನಯಾತ್ಯಯಂ) ಮೀರುವುದಿಲ್ಲವೋ ಆ ಶಿವನ ಮನೋವಲ್ಲಭೆಯಾದ (ಶಿವೇಹಿತಾಂ), ಲೋಕ ಕಲ್ಯಾಣನಿರತನಾದ (ಶಿವೇ ಹಿತಾಂ), ಮನ್ಮಥನಿಂದಲೂ ಅಳೆಯಲಾರದ ಸೌಂದರ್ಯವನ್ನುಳ್ಳ (ಸ್ಮರ+ಅಮಿತಾಂ), ದೇವಿಯನ್ನು ನೆನೆಯುತ್ತೇನೆ.

3. ಎಡದಿಂದ ಬಲಕ್ಕೆ ಓದಲಿ ; ಬಲದಿಂದ ಎಡಕ್ಕೆ ಓದಲಿ, ಒಂದೇ ಸಮವಾದ ಪದ್ಯವಾಗುವುದು ಗತ-ಪ್ರತ್ಯಾಗತ ಅಥವಾ ಅನುಲೋಮ-ಪ್ರತಿಲೋಮ-ಸಮ ಎನಿಸುವ ಚಿತ್ರಕಾವ್ಯ. ಭಾರವಿಯ ಕೆಳಗಿನ ಪದ್ಮಚರಣಗಳು ಉದಾಹರಣೆ:

ನನು ಹೋ ಮಂಥನಾ ರಾಘೋ ಘೋರಾ ನಾಥಮಹೋನು ನ I
ತಯಾದಾತವದಾ ಭೀಮಾ ಮಾಭೀದಾ ಬತ ದಾಯತ II 

4. ಒಂದೇ ಅಕ್ಷರ ಇಡಿಯ ಪದ್ಯಚರಣದಲ್ಲೆಲ್ಲ ಇದ್ದರೆ ಏಕಾಕ್ಷರ :

ಸ ಸಾಸಿಃ ಸಾಸುಸೂಃ ಸಾಸೋ ಯೇಯಾಯೇಯಾಯಯಾಯಯಃ

ಎರಡು ಅಕ್ಷರಗಳು ಮಾತ್ರ ಇದ್ದರೆ ದ್ವ್ಯಕ್ಷರಃ

ಚಾರಚಂಚುಶ್ಚಿರಾರೇಚೀ ಚಂಚಚ್ಚೀರರುಚಾ ರುಚಃ I
ಚಚಾರ ರುಚಿರಶ್ಚಾರು ಚಾರೈರಾಚಾರ ಚಂಚುರಃ II

5. ನಾಲ್ಕನೆಯ ಪಾದದ ಅಕ್ಷರಗಳೆಲ್ಲ ಮೊದಲ ಮೂರು ಪಾದಗಳಲ್ಲಿ ಅಡಗಿರುವುದು ಗೂಢ ಚತುರ್ಥ. ಉದಾ:

ದ್ಯುವಿಯದ್ಗಾಮಿನೀ ತಾರಸಂರಾವವಿಹತಶ್ರುತಿಃ |
ಹೈಮೀಷುಮಾಲಾ ಶುಶುಭೇ ವಿದ್ಯುತಾಮಿನ ಸಂಹತಿಃ ||

6 ಓಷ್ಠ್ಯವರ್ಣಗಳು (ಪವರ್ಗ) ಒಂದೂ ಇಲ್ಲದ ರಚನೆ ನಿರೋಷ್ಠ್ಯ, ದಂಡಿಯ ದಶಕುಮಾರಚರಿತೆಯಲ್ಲಿ ಒಂದು ಅಧ್ಯಾಯ (ವಿಶ್ರುತ ಚರಿತೆ) ಇದಕ್ಕೆ ಉದಾಹರಣೆ. ಕೇವಲ ಶ್ಲೇಷಯಮಕಾದಿಗಳಿಗೆ ಮೀಸಲಾದ ರಚನೆಗಳಲ್ಲಿ ಇಂಥ ಶಬ್ದ ವೈಚಿತ್ರ್ಯ ಮಾರ್ಗಗಳು ಇನ್ನೂ ಹಲವಾರುಂಟು.

ನಿಚಿತಂ ಖಮುಪೇತ್ಯ ನೀರದೈಃ
ಪ್ರಿಯಹೀನಾ ಹೃದಯಾವನೀರದೈಃ

ಎಂದಾರಂಭವಾಗುವ ಘಟಕರ್ಪರಕಾವ್ಯವನ್ನೂ

ಹೃದಯ ಸದಾ ಯಾದವತಃ
ಪಾಪಾಟವ್ಯಾ ದುರೌಸದಾಯಾ ದವತಃ

ಎಂದಾರಂಭವಾಗುವ, ನಲೋದಯ ಕಾವ್ಯವನ್ನೂ ಮುಖ್ಯವಾಗಿ ಹೆಸರಿಸಬೇಕು. ಮುಂದೆ ರತ್ನಾಕರನ ಹರವಿಜಯ ವಾಸುದೇವನ ಯುದಿಷ್ಠರ ವಿಜಯ ಮೊದಲಾದ ಮಹಾಕಾವ್ಯಗಳಲ್ಲೂ ಈ ಪ್ರವೃತ್ತಿಯಿದೆ. ವಿನೋದಕ್ಕಾಗಿ ವಿದ್ವಾಂಸರ ಗೋಷ್ಠಿಗಳಲ್ಲೂ ರಾಜಸಭೆಗಳಲ್ಲೂ ಪ್ರಾಯಿಕವಾಗಿ ನಡೆಯುತ್ತಿದ್ದ ಸಮಸ್ಯೆಗಳು, ಒಗಟೆಗಳು ಮುಂತಾದ ಚತುರೋಕ್ತಿಗಳಲ್ಲೂ ಅರ್ಥ ಚಮತ್ಕಾರ ಇರುತ್ತದೆ. ಜಿನಸೇನನ ಆದಿಪುರಾಣದಲ್ಲಿ (ಸು. 900) ಇವನ್ನೊಳಗೊಂಡ ಒಂದು ಅಧ್ಯಾಯವೇ ಇದೆ.

ಕ್ವ ಕೀದೃಕ್ ಶಸ್ಯತೇ ರೇಖಾ ? (ರೇಖೆ ಎಲ್ಲಿ ಹೇಗಿದ್ದರೆ ಶುಭ ?). ಕರಿಣೀಂಚ ವದಾನ್ಯೇನ ಪರ್ಯಾಯೇಣ (ಹೆಣ್ಣಾನೆ ಮರಿಯ ಹೆಸರೂ ಅದೇ ಆಗಬೇಕು). ಒಂದು ಉತ್ತರವುಳ್ಳ ಇಂಥ ಎರಡು ಪ್ರಶ್ನೆಗಳ ಒಗಟಿಗೆ ಏಕಾಲಾಪಕವೆಂದು ಹೆಸರು. ಕರೇ (s)ಣುಕಾ ಎಂಬುದು ಉತ್ತರ.

ನಿರ್ದಿಷ್ಟ ರೀತಿಯ ಉತ್ತರವನ್ನು ಊಹಿಸುವ ಶಕ್ತಿಯನ್ನಳೆಯುವ ಪ್ರಶ್ನೆಗಳನ್ನು ಪ್ರಶ್ನೋತ್ತರ ಎನ್ನುತ್ತಾರೆ.

ವರಾಶನೇಷು ಕೋ ರುಚ್ಯಃ ? (ಮೃಷ್ಟಾನ್ನದಲ್ಲಿ ರುಚಿಕರ ಯಾವುದು ?) ಕೋ ಗಂಭೀರೋ ಜಲಾಶಯಃ? (ಆಳವಾದ ಜಲಾಶಯ ಯಾವದು ?) ಕಃ ಕಾಂತಸ್ತವ ತನ್ವಂಗಿ ? (ಚೆಲುವೆಯೆ, ನಿನ್ನ ಕಾಂತ ಯಾರು ?) ವದಾದಿ ವ್ಯಂಜನೈಃ ಪೃಥಕ್ (ಆದಿಯ ವ್ಯಂಜನ ಮಾತ್ರ ಬೇರೆಯಾಗುವಂತೆ ಉತ್ತರಿಸು). ಈ ಸಮಸ್ಯೆಗೆ ಉತ್ತರ-ಸೂಪಃ (ತೊವ್ವೆ) ಕೂಪಃ (ಬಾವಿ) ಭೂಪಃ

ಆಪಾತತಃ ಅರ್ಥ ಹೊಂದುವ ಒಗಟಿಯೇ ಪ್ರಹೇಲಿಕಾ. ಇಲ್ಲಿ ಸಂಧಿಯನ್ನು ಸರಿಯಾಗಿ ಬಿಡಿಸಿಕೊಂಡರೆ ಅರ್ಥವಾಗುತ್ತದೆ.

ವಟವೃಕ್ಷಃ ಪುರೋsಯಂ ತೇ ಘನಚ್ಚಾಯಃ ಸ್ಮಿತೋ ಮಹಾನ್ I
ಇತ್ಯುಕ್ತೋsಪಿನ ತಂ ಘರ್ಮೇ ಶ್ರೀತಃ ಕೋsಪಿವದಾದ್ಭುತಮ್ II

ನೋಡು ನಿನ್ನ ಮುಂದೆಯೇ ದೊಡ್ಡ ಆಲದಮರದ ನೆರಳು ಬೇಕಾದಷ್ಟಿದೆ ಎಂದು ತೋರಿಸಿಕೊಟ್ಟರೂ ಬಿಸಿಲಿನಲ್ಲಿ ಬಳಲುತ್ತಿದ್ದ ಯಾವನೂ ನೆರಳಿಗೆ ಹೋಗಲಿಲ್ಲ. ಈ ಸೋಜಿಗವನ್ನು ವಿವರಿಸು-ಇದು ಒಗಟೆ, ವಟವೃಕ್ಷಃ = ವಟೋ (ವಟುವೇ) + ಋಕ್ಷಃ (ಕರಡಿ) ಎಂದು ಬಿಡಿಸಿದರೆ ಒಗಟೆ ಒಡೆಯುತ್ತದೆ. ವಟು ಕಪ್ಪು ಕರಡಿಯ ಬಳಿಗೆ ಹೋಗದಿದ್ದುದರಲ್ಲಿ ಆಶ್ಚರ್ಯವಿಲ್ಲ.

ಹೀಗೆಯೇ ಬಿಂದುಚ್ಯುತಕ, ಮಾತ್ರಾಚ್ಯುತಕ, ಬಿಂದುಮತೀ ಮುಂತಾದ ಒಗಟೆಗಳು, ಬಿಂದು (ಅನುಸ್ವಾರ)ವೇ ಮೊದಲಾದುವನ್ನು ಹಾಕುವ, ಇಲ್ಲವೆ ತೆಗೆಯುವುದರಿಂದ ಬಿಡಿಸುವಂತಿರುತ್ತದೆ. ಆಶುಕವಿತೆ, ಸಮಸ್ಯಾಪೂರಣ ಇವನ್ನೂ ಇಲ್ಲಿ ನೆನೆಯಬಹುದು. ಈಚಿನವರೆಗೂ ಚಿತ್ರಕವಿತ್ವ ಪಂಡಿತರಲ್ಲಿ ತುಂಬ ಪ್ರಿಯವಾಗಿತ್ತು. ಚಾಮರಾಜನಗರದ ರಾಮಶಾಸ್ತ್ರಿಗಳು ಸೀತಾರಾವಣಸಂವಾದ-ಝರೀ ಎಂಬ ಶತಕಾರ್ಥವನ್ನು ಬರೆದಿದ್ದಾರೆ. ಇದರಲ್ಲಿ ರಾವಣ ಸೀತೆಗೆ ಹೇಳುವ ಮಾತು ಅದಕ್ಕೆ ಸೀತೆಯ ಉತ್ತರ, ಎರಡೂ (ಸ್ವಲ್ಪ ವರ್ಣವ್ಯತ್ಯಾಸದಿಂದ) ಒಂದೇ ಪದ್ಯದಿಂದ ಮೂಡುವಂತೆ ರಚನೆಯಿದೆ.

ಜುಷ್ಟೋ ಮಂತ್ರಿಜನೇನ ಸಂಗತಧಿಯಾ ಮದ್ವನ್ನ ಕಶ್ಚಿತ್ ಪ್ರಭುಃ
ಪ್ರಾಪ್ತಾತ್ಯುಜ್ಜ್ವಲ ಕೀರ್ತಿಸಂಹತಿರಹಂ ತೈಸ್ತೈಶ್ಚರಿತ್ರೈರ್ನಿಜೈಃ I
ರಾಮೋ ನಾರ್ಹತಿ ತುಲ್ಯತಾಂ ಜನಕಜೇ ಸಂಗ್ರಾಮಸಿಂಹಸ್ಯ ಮೇ
ಸರ್ವಂ ಸತ್ಯಮರೇ ಪರಂ ತ್ವನುಚಿತಸ್ಸಂನ್ಯಾಸ ಏಕಸ್ತವ II

ನನ್ನ ಮಂತ್ರಿಗಳು ಬುದ್ಧಿವಂತರು, ನನ್ನಂಥ ಪ್ರಭುಗಳೇ ಇಲ್ಲ, ನನ್ನ ಸಾಹಸ ಕೃತಿಗಳಿಂದ ಕೀರ್ತಿ ಬಂದಿದೆ, ಯುದ್ಧದಲ್ಲಿ ವೀರನಾದ ನನಗೆ ರಾಮನೆಂತು ಸರಿಯಾದಾನು ?-ಇದು ರಾವಣನ ಮಾತಾದರೆ ಅದಕ್ಕೆ ಸೀತೆಯ ಉತ್ತರ-ಎಲೋ ರಾವಣ, ನಿನ್ನ ಮಾತೆಲ್ಲ ಸರಿ; ನಿನ್ನ ಸಂನ್ಯಾಸಿ ವೇಷ ಮಾತ್ರ ತಪ್ಪಾಯಿತು; ನಿನ್ನ ಸಂ ಎಂಬ ಉಪವರ್ಗ ಸೇರಿಸಿದ್ದೂ ತಪ್ಪಾಗಿದೆ. ಈ ಶ್ಲೋಕದಲ್ಲಿ ಎಲ್ಲ ಕಡೆಗೂ ಸಂ ಎಂಬುದನ್ನು ಬಿಟ್ಟರೆ ಎರುವ ಅರ್ಥವಿದು. ಬುದ್ಧಿಯಿಲ್ಲದ ಮಂತ್ರಿಗಳಿಂದ ಕೂಡಿದ ನನ್ನಂಥ ಪ್ರಭು ಯಾರೂ ಇಲ್ಲ. ನನ್ನ ಕೃತಿಗಳಿಂದ ಕೀರ್ತಿಗೆ ಹಾನಿ ಬಂದಿದೆ, ನಾನು ಗ್ರಾಮಸಿಂಹ ಎಂದರೆ ನಾಯಿ.

ಹೀಗೆ ಚಿತ್ರಕಾವ್ಯ ಸಂಸ್ಕøತ ಭಾಷೆಯ ವೈಶಿಷ್ಟವನ್ನು ಎತ್ತಿ ತೋರಿಸುವ ಒಂದು ಪಂಡಿತಪ್ರಿಯ ವಿನೋದವಾಗಿದೆ.

ಕನ್ನಡದಲ್ಲಿ ಚಿತ್ರಕಾವ್ಯ

ಬದಲಾಯಿಸಿ

ರುದ್ರಟ ಸಂಸ್ಕøತದಲ್ಲಿ ಹೇಳಿದ್ದನ್ನು ಅನುಸರಿಸಿ ನಾಗವರ್ಮ ತನ್ನ ಕಾವ್ಯಾವಲೋಕನದಲ್ಲಿ ಚಿತ್ರಕಾವ್ಯದ ಲಕ್ಷಣ ಹೇಳಿದ್ದಾನಷ್ಟೇ ಅಲ್ಲ; ಉದಾಹರಣೆಗಳನ್ನೂ ಒದಗಿಸಿದ್ದಾನೆ. ಆನಂದವರ್ಧನನೇ ಮುಂತಾದ ಧ್ವನಿವಾದಿಗಳಂತೆ ಆತ ಚಮತ್ಕಾರಪ್ರಧಾನವಾದ ಎಲ್ಲ ಶಬ್ದಾರ್ಥಾಲಂಕಾರಗಳನ್ನೂ ಚಿತ್ರಕಾವ್ಯವೆನ್ನುವುದಿಲ್ಲ. ಯಾವುದಾದರೊಂದು ರೇಖಾಚಿತ್ರದ ಮನೆಗಳಲ್ಲಿ ಅಳವಡುವಂತೆ ಅಕ್ಷರಗಳನ್ನು ಕೂಡಿಸಿ ರಚಿಸಿದ ಶ್ಲೋಕವೇ ಚಿತ್ರ ; ಅದು ಶರ, ಶೂಲ, ಚಾಪ, ಚಕ್ರ, ಅಸಿ, ಆನೆ, ಕುದುರೆ, ರಥ, ಮುರಜ, ಗೋಮೂತ್ರಿಕೆ, ಪದ್ಮ ಮುಂತಾದ ರೇಖಾಚಿತ್ರವಿರಬಹುದು (ಕಾವ್ಯಾವಲೋಕನ) ಎಂದಿದ್ದಾನೆ. ಆದರೆ ಉದಾಹರಣೆ ಕೊಡುವಾಗ ವಿಶೇಷ ಪ್ರಾಚುರ್ಯವಿರುವ ಕಂದವೃತ್ತಾದಿಗಳಿಗಿಂತ ಹೆಚ್ಚಾಗಿ ಅಷ್ಟು ಪ್ರಚಾರವಿಲ್ಲದ ಸಂಸ್ಕøತ ಅನುಷ್ಟುಪ್ ಛಂದಸ್ಸಿನ ಕನ್ನಡ ಶ್ಲೋಕಗಳನ್ನೇ ಸ್ವಂತವಾಗಿ ರಚಿಸಿ ಉದಾಹರಿಸಿರುವಂತೆ ಭಾಸವಾಗುತ್ತದೆ. ಉದಾಹರಣೆಗೆ, ಶರಚಿತ್ರದ ಉದಾಹರಣೆ :

			ಸುಂದರಾಕಾರಸಂಪನ್ನ
			ನೆಂದುಮೀ ನೃಪನಂದನಂ I
			ನಂದನಂ ಬುಧಕೀರಾಳಿ
			ವೃಂದಕ್ಕೆ ಸಕಲರ್ತುಕಂ II

ಆದರೆ ಈ ರೇಖಾಚಿತ್ರಗಳಿಗೆ ಎಷ್ಟು ಮನೆಗಳು, ಹೇಗೆ ರಚನೆ, ಎಂಬ ಸಾಂಪ್ರದಾಯಿಕ ವಿವರಣೆಗಳು ಇಂದು ಸಿಕ್ಕುತ್ತಿಲ್ಲ. ಕನ್ನಡ ಮಹಾಕವಿಗಳಾದರೂ ಈ ಚಿತ್ರಬಂಧಗಳನ್ನು ಹೆಚ್ಚಾಗಿ ಬಳಸಿದಂತೆ ಕಾಣುವುದಿಲ್ಲ. ಮುಂದಿನ ಲಾಕ್ಷಣಿಕರೂ ಚಿತ್ರಕಾವ್ಯವನ್ನು ವಿವರಿಸುವುದಿಲ್ಲ.

ಆದರೆ ಚಿತ್ರಾಯತನ ಅಥವಾ ಚತ್ತಾಣವೆಂಬ ಹಾಡುಗಬ್ಬದ ಉಲ್ಲೇಖ ಕವಿರಾಜ ಮಾರ್ಗದಲ್ಲಿ ಬರುತ್ತದೆ. ಛಂದೋಂಬುಧಿಯಲ್ಲಿಯೂ ಜಯಕೀರ್ತಿಯ ಛಂದೋನು ಶಾಸನದಲ್ಲಿಯೂ ಚಿತ್ರ ಎಂಬ ತ್ರಿಪದಿ ಛಂದಸ್ಸಿನ ಲಕ್ಷಣ ಬರುತ್ತದೆ. ಸಂಸ್ಕøತ ಮಾನಸೋಲ್ಲಾಸದಲ್ಲಿ, ಕನ್ನಡ ಚಿತ್ರ ಕಥಕರು ಷಟ್ಪದೀಕಥನ ಕಾವ್ಯಗಳನ್ನು ಹೇಳುತ್ತಿದ್ದ ಉಲ್ಲೇಖವಿದೆ. ಚಿಕುಪಾಧ್ಯಾಯನ ಚಿತ್ರಶತಕ ಸಾಂಗತ್ಯದಲ್ಲಿ ಒಗಟೆಯಂಥ ಪದ್ಯಗಳನ್ನೇ ಹೋಲಿಸಬಹುದು. ಉದಾಹರಣೆ ; ಮುತ್ತಿರೆ ನರೆಯೆಂಬ... ಕತ್ತಿಯ ಕಂಡು ಗೇಣಿಂಬ, ಪತ್ತಿಯ ನೂಲೆಂಬ ಕನ್ನಡದೊಳು ರಂಗಮುತ್ತಿನ ಮಾತು ಪಾಸಟಿಯೇ II (ಕರ್ಣಾಟಕ ಕವಿಚರಿತೆ).

ಉಲ್ಲೇಖಗಳು

ಬದಲಾಯಿಸಿ
  1. C.Kunhan Raja. Survey of Sanskrit Literature. Bharatiya Vidya Bhavan. p. 340.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: