ಚಿಕ್ಕ ತಿರುಪತಿಯ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿದೆ. ಚೋಳರ ಕಾಲದಲ್ಲಿ ಇದರ ಜೀರ್ಣೋದ್ಧಾರವಾಗಿದೆಯೆಂದು ಹೇಳಲಾಗಿದೆ. ಪುರಾಣಗಳ ಪ್ರಕಾರ ಶಾಪಗ್ರಸ್ತ ಅಗ್ನಿಗೆ ಈ ಸ್ಥಳದಲ್ಲಿ ಪ್ರತ್ಯಕ್ಷನಾದ ವಿಷ್ಣುವು ಪ್ರಸನ್ನ ವೆಂಕಟೇಶ್ವರನ ರೂಪದಲ್ಲಿ ಅಭಯ ಪ್ರದಾನ ಮಾಡಿದನಂತೆ. ಆ ಕಥೆಯು ಹೀಗಿದೆ.

ಹಿಂದೆ ದ್ವಾಪರ ಯುಗದಲ್ಲಿ ಶ್ವೇತಕಿ ಎಂಬ ಮಹಾ ವೀರನಾದ ರಾಜನು ನೂರು ವರ್ಷಗಳ ಮಹಾಯಜ್ಞವನ್ನು ಮಾಡಿದಾಗ ಶಿವನ ಅನುಗ್ರಹದಿಂದ ಶಿವನ ಅವತಾರ ಸ್ವರೂಪಿಗಳಾದ ದೂರ್ವಾಸ ಮುನಿಗಳೇ ಋತ್ವಿಕರ ಸ್ಥಾನವನ್ನು ವಹಿಸಿದ್ದರು. ದೀರ್ಘಕಾಲ ನಡೆದ ಈ ಯಜ್ಞದಲ್ಲಿ ಹವಿಸ್ಸಿನ ರೂಪದಲ್ಲಿ ಅರ್ಪಿಸಿದ ತುಪ್ಪವನ್ನು ಸೇವಿಸಿ ಅಗ್ನಿಗೆ ಅಜೀರ್ಣವಾಯಿತು. ಅವನು ಬ್ರಹ್ಮನನ್ನು ಪ್ರಾರ್ಥಿಸಲು ನರ ನಾರಾಯಣರ ನೆರವಿನಿಂದ ಖಾಂಡವ ವನವನ್ನು ದಹಿಸಲು ಅವನ ವ್ಯಾಧಿಉಪಶಮನವಾಗುವುದೆಂದು ಹೇಳಿದನು. ಅಗ್ನಿಯು ಬದರೀನಾರಾಯಣನಿಂದ ಪಡೆದ ಚಕ್ರವನ್ನು ಶ್ರೀಕೃಷ್ಣನಿಗೂ, ವರುಣನಿಂದ ಪಡೆದ ಗಾಂಡೀವವನ್ನು ಅರ್ಜುನನಿಗೂ ಕೊಟ್ಟು ಶ್ವೇತಾಶ್ವ ಮತ್ತು ಹನುಮಧ್ವಜದಿಂದ ಸುಸಜ್ಜಿತವಾದ ರಥವನ್ನು ಅವರಿಗೆ ವಹಿಸಿ, ತಾನು ಖಾಂಡವ ವನವನ್ನು ದಹಿಸುವಾಗ ಇಂದ್ರನಿಂದ ಬರಬಹುದಾದ ಅಡಚಣೆಗಳನ್ನು ತಡೆಯಲು ಕೋರಿದನು. ಅದರಂತೆ ಅರ್ಜುನನು ಬಾಣಗಳ ಚಪ್ಪರವನ್ನೇ ಕಟ್ಟಿ ಇಂದ್ರ ಸುರಿದ ಮಳೆಯನ್ನು ತಡೆದನು ಹಾಗೂ ಖಾಂಡವ ವನದಿಂದ ಯಾವ ಪ್ರಾಣಿಯೂ ತಪ್ಪಿಸಿಕೊಂಡು ಹೋಗದಂತೆ ತಡೆದನು. ತಕ್ಷಕ ಎಂಬ ಸರ್ಪವು ತಪ್ಪಿಸಿಕೊಂಡು ಹೋಗುವ ಪ್ರಯತ್ನದಲ್ಲಿ ಮೈಯೆಲ್ಲ ಸುಟ್ಟುಕೊಂಡು ಅಗ್ನಿಗೆ ತೇಜೋಹೀನವಾಗುವಂತೆ ಶಾಪವನ್ನು ಕೊಟ್ಟಿತು. ಇದರಿಂದ ಲೋಕದಲ್ಲಿ ಯಜ್ಞ ಯಾಗಾದಿಗಳೇ ನಿಂತು ಹೋದವು. ದೇವಾದಿ ದೇವತೆಗಳು ತಮ್ಮ ಪಾಲಿನ ಹವಿರ್ಭಾಗ ಲಭಿಸದೆ ಕಂಗಾಲಾದರು. ಕೊನೆಗೆ ಅಗ್ನಿಯು ವಿಷ್ಣುವನ್ನು ಸಂಪ್ರೀತಿಗೊಳಿಸಲು ಉಗ್ರವಾದ ತಪಸ್ಸನ್ನು ಮಾಡಿದನು. ಆಗ ವಿಷ್ಣುವು ಪ್ರಸನ್ನ ವೆಂಕಟೇಶ್ವರನ ರೂಪದಲ್ಲಿ ಪ್ರತ್ಯಕ್ಷನಾಗಿ ಅಗ್ನಿಯ ಶಾಪ ವಿಮೋಚನೆ ಮಾಡಿದನು. ಹಾಗೆ ಚೈತ್ರ ಮಾಸದ ಪುಬ್ಬಾ ನಕ್ಷತ್ರವಿರುವ ದಿನದಂದು ಅಗ್ನಿಗೆ ಅಭಯ ನೀಡಿದ ಶುಭದಿನದಂದು ಚಿಕ್ಕ ತಿರುಪತಿಯಲ್ಲಿ ಬ್ರಹ್ಮ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಚಿಕ್ಕ ತಿರುಪತಿಯನ್ನು ಪ್ರವೇಶಿಸುತ್ತಿದ್ದಂತೆಯೇ ಮಹಾದ್ವಾರವು ಕಾಣಿಸುತ್ತದೆ. ಮಹಾದ್ವಾರದ ಮುಂಭಾಗದಲ್ಲಿ ಕ್ಷೇತ್ರಪಾಲನಾದ ಆಂಜನೇಯನನ್ನು ಪ್ರತಿಷ್ಠಾಪಿಸಲಾಗಿದೆ. ಮಹಾದ್ವಾರವನ್ನು ದಾಟಿ ಸುಮಾರು ನೂರು ಮೀಟರ್ ದೂರದಲ್ಲಿ ದೇವಸ್ಥಾನದ ಭವ್ಯ ರಾಜಗೋಪುರವು ಕಾಣಿಸುತ್ತದೆ. ಮುಂದೆ ಸಾಗಿದರೆ ೩೫ ಅಡಿ ಎತ್ತರದ ಧ್ವಜಸ್ತಂಭವು ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಮುಖಮಂಟಪವನ್ನು ದಾಟಿ ನವರಂಗವನ್ನು ಪ್ರವೇಶಿಸುತ್ತಿದ್ದಂತೆಯೇ ಗರ್ಭಗುಡಿಯಲ್ಲಿರುವ ಅತ್ಯಂತ ಸುಂದರವಾದ ಪ್ರಸನ್ನ ವೆಂಕಟೇಶ್ವರನ ದಿವ್ಯಮೂರ್ತಿಯು ಭಕ್ತರನ್ನು ಆನಂದಪರವಶಗೊಳಿಸುತ್ತದೆ. ಶ್ರೀದೇವಿ ಭೂದೇವಿಯರ ಸಂಗಡ ಒಂದೂವರೆ ಅಡಿ ಎತ್ತರದ ಪದ್ಮ ಪೀಠದ ಮೇಲೆ ನಿಂತಿರುವ ನಯನ ಮನೋಹರವಾದ ಮೂರೂವರೆ ಅಡಿ ಎತ್ತರದ ಪ್ರಸನ್ನ ವೆಂಕಟೇಶ್ವರನ ವಿಗ್ರಹವು ನಗುಮುಖದಿಂದಿದ್ದು ಭಕ್ತರ ಯಾತನೆಗಳನ್ನೆಲ್ಲ ನಿವಾರಣೆ ಮಾಡುವ ಅಭಯ ಮುದ್ರೆಯನ್ನು ತೋರುತ್ತಿದೆ. ಎಡಗೈ ಮೊಣಕಾಲಿನ ಕಡೆಗೆ ತೋರುತ್ತಿದ್ದು, ಭಗವಂತನ ಪಾದಪದ್ಮಗಳಲ್ಲಿ ಸಂಪೂರ್ಣ ಶರಣಾಗತನಾದವನಿಗೆ ಸಂಸಾರ ಸಾಗರದ ಕಷ್ಟ ಕಾರ್ಪಣ್ಯಗಳೆಲ್ಲ ಕೇವಲ ಮೊಣಕಾಲು ಮಟ್ಟದ ನೀರಿನ ಹಾಗೆ ಎಂದು ಸೂಚಿಸುತ್ತಿದ್ದಾರೆ.

ಪ್ರಾಚೀನವಾದ ಮತ್ತು ಅತ್ಯಂತ ಸುಂದರವಾಗಿ ಕೆತ್ತಲಾದ ಉತ್ಸವ ಮೂರ್ತಿಗಳನ್ನು ಸುಖನಾಸಿಯಲ್ಲಿ ಇರಿಸಲಾಗಿದೆ. ಬೆರಳ ಉಗುರುಗಳು ಕೂಡ ಸ್ಪಷ್ಟವಾಗಿ ಕಾಣುವಂತಹ ಕುಸುರಿ ಕೆಲಸವನ್ನು ಇಲ್ಲಿ ನೋಡಬಹುದು. ಈ ವಿಗ್ರಹಗಳ ಚೆಲುವನ್ನು ನೋಡಲು ಎರಡು ಕಣ್ಣುಗಳೂ ಸಾಲವು.

ವೈಖಾಸನ ಆಗಮದ ಪ್ರಕಾರ ಇಲ್ಲಿ ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರತಿನಿತ್ಯ ಬೆಳಗ್ಗೆ ಸುಪ್ರಭಾತ ಸ್ತೋತ್ರಗಳ ಮೂಲಕ, ಯೋಗನಿದ್ರೆಯಲ್ಲಿರುವ ಸ್ವಾಮಿಯನ್ನು ಎಚ್ಚರಗೊಳಿಸಲಾಗುತ್ತದೆ. ಬೆಳಗ್ಗೆ ಒಂಬತ್ತು ಗಂಟೆಗೆ ಮಹಾ ಮಂಗಳಾರತಿ ಮತ್ತು ಷೋಡಶೋಪಚಾರಗಳು ನಡೆಯುತ್ತವೆ. ಸಾಯಂಕಾಲ ಏಳು ಗಂಟೆಗೆ ಅರ್ಚನೆ ಮತ್ತು ಏಕಾಂತ ಸೇವೆಯೊಡನೆ ದಿನದ ಕೈಂಕರ್ಯಗಳು ಮುಕ್ತಾಯಗೊಳ್ಳುತ್ತವೆ. ದೂರದೂರದಿಂದ ಬರುವ ಭಕ್ತರಿಗೆ ನಿರಂತರವಾಗಿ ದರ್ಶನವನ್ನು ನೀಡುವ ಉದ್ದೇಶದಿಂದ ಬೆಳಗಿನಿಂದ ಸಂಜೆಯವರೆಗೂ ದೇವಸ್ಥಾನದ ಬಾಗಿಲು ತೆರೆದೇ ಇರುತ್ತದೆ. ಶನಿವಾರವು ಸ್ವಾಮಿಯ ವಿಶೇಷ ಪೂಜಾ ದಿನವಾಗಿದ್ದು ಅಂದು ದೇವರ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯೂ ಅಧಿಕವಾಗಿರುತ್ತದೆ. ಶ್ರಾವಣ ಮಾಸದ ಶ್ರವಣ ನಕ್ಷತ್ರದಲ್ಲಿ ಸ್ವಾಮಿಯು ಅವತರಿಸಿರುವುದರಿಂದ ಆ ಶ್ರಾವಣ ಮಾಸದ ಎಲ್ಲ ಶನಿವಾರಗಳಂದು ವಿಶೇಷ ಅಲಂಕಾರ ಮಾಡುತ್ತಾರೆ. ಕೊನೆಯ ಶನಿವಾರದಂದು ಲಕ್ಷಕ್ಕೂ ಮೀರಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಕೃಷ್ಣ ಜನ್ಮಾಷ್ಟಮಿ ಮತ್ತು ಶರನ್ನವರಾತ್ರಿ ಹಬ್ಬಗಳಲ್ಲಿಯೂ ವಿಶೇಷ ಉತ್ಸವಗಳು ನಡೆಯುತ್ತವೆ. ಕಾರ್ತಿಕ ಮಾಸದಲ್ಲಿ ವಿಷ್ಣು ದೀಪೋತ್ಸವ ಮತ್ತು ಉತ್ಥಾನ ದ್ವಾದಶಿ ವಿಶೇಷ ಹಬ್ಬಗಳು. ವೈಕುಂಠ ಏಕಾದಶಿ ಕೂಡ ದೇವರ ದರ್ಶನಕ್ಕೆ ಪವಿತ್ರ ಸಮಯ. ರಥಸಪ್ತಮಿಯಲ್ಲಿ ಸ್ವಾಮಿಯು ಸೂರ್ಯಪ್ರಭ ಉತ್ಸವದ ಮೂಲಕ ಭಕ್ತರಿಗೆ ದರ್ಶನ ಕೊಡುತ್ತಾನೆ.

ಪ್ರತಿವರ್ಷ ಚೈತ್ರ ಮಾಸದ ಪುಬ್ಬಾ ನಕ್ಷತ್ರದಲ್ಲಿ ಬ್ರಹ್ಮರಥೋತ್ಸವವು ವೈಭವೋಪೇತವಾಗಿ ನಡೆಯುತ್ತದೆ.