ಚಾಮುಂಡಿ ಜನಪದ ಗೀತೆಗಳು
ಚಾಮುಂಡೇಶ್ವರಿ, ಚಾಮುಂಡಿ, ದುರ್ಗೆ ಎಂದೂ ಪರಿಚಿತವಾಗಿರುವ ಈ ದೇವತೆ ತನ್ನ ಭಯಾನಕ ರೂಪದಿಂದ ಪ್ರಸಿದ್ಧಳು. ಏಳು ಮಾತೃಕೆಯರ ಪೈಕಿ ಪ್ರಮುಖವಾದವಳು. ಅವಳು ಯೋಧೆ ದುರ್ಗಾದೇವಿಯ ಪರಿಚಾರಕಿಯರಾದ ಅರವತ್ತುನಾಲ್ಕು ಅಥವಾ ಎಂಬತ್ತೊಂದು ತಾಂತ್ರಿಕ ದೇವತೆಗಳಾದ, ಮುಖ್ಯ ಯೋಗಿನಿಗಳ ಪೈಕಿ ಒಬ್ಬಳಾಗಿದ್ದಾಳೆ. ಪುರಾಣದ ಸ್ತ್ರೀಯಾದ ಈಕೆ ಜನಪದರಿಗೆ ಅತ್ಯಂತ ಆತ್ಮೀಯಾಳಾದ ದೇವತೆ. ಹಾಗಾಗಿ ಜನಪದರು ಚಾಮುಂಡಿಯ ಬದುಕನ್ನು ಕುರಿತು ಹಲವಾರು ಜನಪದಗೀತೆಗಳನ್ನು ಕಟ್ಟಿದ್ದಾರೆ.
ಚಾಮುಂಡಿಯ ಹಿನ್ನೆಲೆ
ಬದಲಾಯಿಸಿ- ಹತ್ತನೆ ಶತಮಾನದ ಶಾಸನಗಳಲ್ಲಿ ಚಾಮುಂಡಿ ಬೆಟ್ಟವನ್ನು 'ಮಬ್ಬೆಲದ ತೀರ್ಥ', 'ಮರ್ಬಳದ ತೀರ್ಥ'ಎಂದು ಕರೆಯಲಾಗಿದೆ. ಮಹಾಬಲಾದ್ರಿ ಚಾಮುಂಡಿಬೆಟ್ಟವಾಗಿ ರೂಪುಗೊಳ್ಳಲು ಹಲವಾರು ಶತಮಾನಗಳೇ ಬೇಕಾಗಿವೆ. ಹಾಗಾಗಿ ಚಾಮುಂಡಿಯನ್ನು" ಮಹಾಬಲಾದ್ರಿಸ್ಥಿತೇ, ಮಾತಂಗ ಕನ್ಯೆ, ಕದಂಬವನವಾಸಿನಿ, ಮರಕತ ಶ್ಯಾಮ, ರಾಜರಾಜೇಶ್ವರಿ, ತ್ರಿಪುರಸುಂದರಿ, ಜಗನ್ಮಾತೆ "ಎಂದೆಲ್ಲ ಕರೆಯಲಾಗಿದೆ. ಕಾಳಿ ಎಂದರೆ ಕಪ್ಪುವರ್ಣದವಳು, ಕೃಷ್ಣಸುಂದರಿ ಎಂಬರ್ಥವಿದೆ.
- ಗ್ರಾಮದೇವತೆ ಚಾಮಾಯಿ ಚಾಮುಂಡಿಯಾಗಿದ್ದಾಳೆ. ಚಾಮುಂಡಿಯ ಶಿಷ್ಟ ಹೆಸರು 'ಚಾಮುಂಡೇಶ್ವರಿ'. ಈಕೆ ಮತ್ತು ಈಕೆಯ ತಂಗಿ ಉತ್ತನಳ್ಳಿ ಮಾರಿ (ಜ್ವಾಲಾಮಾಲಿನಿ) ಮೂಲತ: ಜೈನಯಕ್ಷಿ ಗಳೆಂದೂ, ಜೈನಧರ್ಮ ಕ್ಷೀಣಿಸಿದ ಮೇಲೆ ಅದು ಹಿಂದೂಪುರಾಣದ 'ಚಾಮುಂಡೇಶ್ವರಿ'ಯಾಯಿತೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.
- ಆದಿಶಕ್ತಿಯಾದ ಇವಳನ್ನು ಮಹಾರಾಷ್ಟೃದವರು ಭವಾನಿಯೆಂದು, ಉತ್ತರ ಕರ್ನಾಟಕದವರು ದುರ್ಗೆಯೆಂದು, ಕೇರಳೀಯರು ಭಗವತಿಯೆಂದು, ಬೌದ್ದರು ತಾರಾಯೆಂದು, ಜೈನರು ಪದ್ಮಾವತಿಯೆಂದು, ತೆಲುಗರು ಅಂಬಾಭವಾನಿಯೆಂದು, ತಮಿಳರು ಶಕ್ತಿದೇವತೆಯೆಂದು,ಶ್ರೀಲಂಕಾದವರು ಮಣಿಮೇಖಲೆ ಎಂದು ಕರೆದು ಚಾಮುಂಡಿಯನ್ನು ಆರಾಧಿಸಿದ್ದಾರೆ. ಈಕೆ ತ್ರಿಗುಣಾತ್ಮಕ ಳೆಂದೂ ಆ ಗುಣಗಳಿಂದಲೇ ಸೃಷ್ಠಿ, ಸ್ಥಿತಿ, ಲಯಗಳೆಂಬ ಕಾರ್ಯಗಳು ನಡೆಯುತ್ತವೆಂದೂ ಪುರಾಣಗಳಲ್ಲಿ ಹೇಳಲಾಗಿದೆ. ಜನಪದರು ಈಕೆಯ ಬಗ್ಗೆ ಹಲವಾರು ಗೀತೆಗಳನ್ನು ಸೃಷ್ಠಿ ಮಾಡಿದ್ದಾರೆ. ಅವುಗಳೆಂದರೆ-
ಚಾಮುಂಡಿ ಜನಪದ ಗೀತೆಗಳು
ಬದಲಾಯಿಸಿ- ೧. ಪಟ್ಟಣಕ್ಮುಂಚಾಗಿ ಹುಟ್ಟಿತು ಮೈಸೂರು
ಬೆಟ್ಟದ ಚಾಮುಂಡಿ ದಯದಿಂದ/ದೊರೆಗೊಳು
ಪಟ್ಟಣವಾಳ್ಯಾರು ಅನುಗಾಲ
- ೨. ಬೆಟ್ಟದ ಮೇಲವ್ಳೆ ಬಿಡುಮುಡಿ ಚಾಮುಂಡಿ
ತೊಟ್ಟವ್ಳೆ ಹುಲಿಚರ್ಮವ/ಚಾಮುಂಡಿ
ಮೆಟ್ಟಿ ನಿಂತವ್ಳೆ ರಣದಲ್ಲಿ
- ೩. ತಾಯಿ ಚಾಮುಂಡಿ ಜಾಲ ತುರುಬಿನ ಮೇಲೆ
ಜಾಗರವಾಡವನೆ ಎಳೆನಾಗ/ ಏಳೆಡೆ ಸರ್ಪ
ತಾಯಿ ಚಾಮುಂಡಿಗೆ ಬಿಸಿಲೆಂದು
- ೪. ಒಲಿದು ಬಾರಮ್ಮಯ್ಯಾ ಒಲಿದು ಬಾರೆ
ಮೈಸಾಸುರನನ್ನು ಕೊಂದು/ಮೈಸೂರಿನಲಿ
ನೆಲೆನಿಂತ ಬೆಟ್ಟದ ಚಾಮುಂಡಿ ಒಲಿದು ಬಾರೆ
- ೫. ವಿಷ್ಣು ಬ್ರಮ್ಮ ರುದ್ರ ದೇವಾಧಿದೇವತೆಗಳು
ಹೂಮಳೆ ಕರೆದು ಬಾಯ್ತುಂಬ ಹೊಗಳಿದರಂತೆ
ಬೆಟ್ಟವ ಅವಳ ಹೆಸರಿಗೆ ಪಟ್ಟಾವ ಮಾಡಿದರಂತೆ
ಚಾಮಾಯಿ ನಿಂತ ಬೆಟ್ಟ ಚಾಮುಂಡಿ ಬೆಟ್ಟವಾಯ್ತು
- ೬. ಬೆಟ್ಟ ಬಿಟ್ಟಿಳಿಯುತ ಬಿಟ್ಟವ್ಳೆ ಮಂಡೆಯ
ಉಟ್ಟಿರೋ ಸೀರೆ ಹುಲಿ ಚರ್ಮ/ಚಾಮುಂಡಿ
ತೊಟ್ಟಿರೋ ಒಡವೆ ನವರತುನ
- ೭. ಅಕ್ಕ ಹೊಂಟ್ಯಾಳೆ ಅಕ್ಕಯ್ಯ ಹೊರಟ್ಯಾಳೆ
ಅಡಿಕೆ ಹೊಂಬಾಳೆ ಮುಡಕೊಂಡು/ಚಾಮುಂಡಿ
ಅಕ್ಕ ಹೊಂಟ್ಯಾಳೆ ಜಳಕಕ್ಕೆ
- ೮. ಉಂಗುರದ ಕಾಲ ಊರೂತ ಜಾರೂತ
ಬಂಗಾರದ ನಡುವ ಬಳುಕೂತ/ಚಾಮುಂಡಿ
ಸಿಂಗಾರದ ಕೊಳಕೆ ನಡೆದಾಳು
- ೯. ಕಾರಂಜಿಕೆರೆ ಮೇಲ್ಭಂದು ಚಾಮುಂಡಿ
ತನ್ನ ನವರತ್ನ ಸೀರೆ ಅಳಿದಿಟ್ಟು/ಚಾಮುಂಡಿ
ಮನಸ್ಸಿಗೆ ಬಂದಂಗೆ ಜಳಕವ ಮಾಡ್ಯಾಳೆ
- ೧೦. ಸಪ್ಪಟ್ ಸರೊತ್ತಲ್ ನನ್ನಟ್ಟಿಗ್ ಬಂದೋರ್ಯಾರು
ಹೆಸರೇಳಿ ನಿಮ್ಮ ಕುಲವೇಳಿ /ಮಾಸ್ವಾಮಿ
ನಿಮ್ಗೆ ಮಡ್ಡಿಲ್ಲವೇನೊ ಮನೆಯಾಗೆ
- ೧೧. ನಾನು ಕುರಿ ಕೋಳಿ ತಿನ್ನೋ ಕರಿಜಾತಿ ಚಾಮುಂಡಿ
ನೀವು ಲಿಂಗ ಜಂಗಮರು ಬರಬವುದೇ/ಮಾಸ್ವಾಮಿ
ನಾನೆಂಗೆ ಕದವ ತೆಗೆಯಾಲಿ
- ೧೨. ಆಯ ಉಳ್ಳೋಳು ನೀನು ಚಾಯ ಬಳ್ಳೋಳು ನೀನು
ನಿನದಂಡೆಗೊಬ್ಬ ಬರುವೆನು/ಚಾಮುಂಡಿ
ನೀ ಬೇಗೆದ್ದು ಕದವ ತಗಿಬಾರೆ
- ೧೩. ಚಾಮುಂಡಿ ಮನೆಯ ಸೂರೆಲ್ಲಾ ಮಲ್ಲಿಗೆ
ಜಾಜಿ ಹೂವಿನ ತಲೆದಿಂಬು/ ಹಾಕೊಂಡು
ಜಾಣ ನಂಜಯ್ಯ ಒರಗವನೆ
- ೧೪. ನಂಜನಗೂಡ ಮರ್ತೆ ನೌಲು ಮಂಟಪವ
ಮರ್ತೆ ಇಬ್ಬರು ಹೆಂಡಿರ ಮರ್ತೆ/ಬೆಟ್ಟದ
ಚಾಮುಂಡಿಗೊಲುಮೆ ಕರ್ತು ಮಾತನ್ನಾಡೋ
- ೧೫. ಚಾಮುಂಡಿ ಎಂಬೋಳು ಸೀಮೆಗೆ ದೊಡ್ಡೋಳು
ಮಾಯದ ಬೂದಿ ಸೆರಗಲ್ಲಿ /ಕಟ್ಕೋಂಡು
ನ್ಯಾಯಕೆ ಮುಂದಾಗಿ ಹೊಂಟ್ಯಾಳು
ಪರಿಸಮಾಪ್ತಿ
ಬದಲಾಯಿಸಿಚಾಮುಂಡಿ ಜನಪದರ ದೃಷ್ಠಿಯಲ್ಲಿ ಒಂದು ಸಾಮಾನ್ಯ ಹೆಣ್ಣು. ಅವಳಲ್ಲಿ ದೈವೀಶಕ್ತಿ ಇರುವುದು ನಿಜವಾದರೂ ಅವಳನ್ನು ಅನತಿ ದೂರದಲ್ಲಿಟ್ಟು ಅವರು ನೋಡುವುದಿಲ್ಲ. ಬದಲಾಗಿ ತಮ್ಮ ಮನೆಯವಳಂತೆ ಪರಿಭಾವಿಸಿ, ಅವಳೊಳಗೂ ವಿಷಯಲಾಲಸೆ/ರಸಿಕತೆ ಹುಟ್ಟಿಸಿ ಸಮರ್ಥನೆ ಮಾಡಿ ಕೊಳ್ಳುತ್ತಾರೆ. ಚಾಮುಂಡಿ ವಿವಾಹಿತ ಹೆಣ್ಣಲ್ಲವಾದರೂ, ಅವಳಿಗೊಬ್ಬ ನಲ್ಲನಿದ್ದಾನೆ. ಅವನೊಟ್ಟಿಗೆ ಅವಳು ಸುಖಿಯಾಗಿರುವಳು ಎಂದೆಲ್ಲ ಪರಿಭ್ರಮಿಸಿ ಸಂತೋಷಪಡುತ್ತಾರೆ. ಚಾಮುಂಡಿಯ ಬಗೆಗಿನ ಇಂತಹ ನೂರಾರು ಗೀತೆಗಳು ಜನಪದ ಸಾಹಿತ್ಯದಲ್ಲಿ ಅಚ್ಚಳಿಯದೆ ಉಳಿದಿವೆ.
ಗ್ರಂಥ ಋಣ
ಬದಲಾಯಿಸಿ- ಚಾಮುಂಡಿ ಸಿರಿ ಚಾಮುಂಡಿ -ಡಾ.ಪಿ.ಕೆ.ರಾಜಶೇಖರ
- ಗರತಿಯ ಹಾಡು - ಹಲಸಂಗಿ ಗೆಳೆಯರು
ಉಲ್ಲೇಖ
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2016-03-05. Retrieved 2015-05-28.