ಚರ್ಚೆಪುಟ:ಕೆ ಎಸ್ ಡಿ ಎಲ್ ಚಂದ್ರು

ಕಿರುತೆರೆಗೆ ದಾರಿ ತೋರಿದ ರಂಗಭೂಮಿ

ಹವ್ಯಾಸಿ ರಂಗಭೂಮಿಯಲ್ಲಿ ಸಾಹಿತ್ಯ ಕೃತಿಗಳನ್ನು ರಂಗರೂಪಕ್ಕೆ ತಂದು ಹೆಸರು ಮಾಡಿದವರು ಕೆ.ಎಸ್.ಡಿ.ಎಲ್. ಚಂದ್ರು. ಪೌರಾಣಿಕ ನಾಟಕಗಳಿಂದ ಪ್ರೇರಿತರಾಗಿ, ರಂಗ ಪ್ರಪಂಚದಲ್ಲಿ ತೊಡಗಿಸಿಕೊಂಡವರು. ಅವರ ಬಣ್ಣದ ಬದುಕಿಗೆ ಈಗ 3 ದಶಕದ ಸಂಭ್ರಮ. ಕೇವಲ ರಂಗಭೂಮಿ ಅಲ್ಲದೆ ಸಾಕ್ಷ್ಯಚಿತ್ರ, ಸಿನಿಮಾ ಮತ್ತು ಕಿರುತೆರೆಯಲ್ಲೂ ಚಂದ್ರು ಪರಿಚಿತರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಮೊಟ್ಟ ಮೊದಲ ಬಾರಿಗೆ ಬೀದಿ ನಾಟಕಗಳ ಮೂಲಕ ರಾಜ್ಯದಾದ್ಯಂತ ‘ಗಂಧವತಿ’ ಎಂಬ ನಾಟಕದ ಮೂಲಕ ನಟನೆ ಮತ್ತು ನಿರ್ದೇಶಕನಕ್ಕೆ ಕೈ ಹಾಕಿದರು. ಈವರೆಗೆ ಕಿರುತೆರೆಗೆ ಏಳು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. 9 ಕಿರುಚಿತ್ರ ಅಲ್ಲದೆ ಸಿನಿಮಾಗಳಿಗೂ ಕಟ್‌ ಹೇಳಿದ್ದಾರೆ.

ಸದ್ಯ ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ‘ಮದನ್‌’ ಹೆಸರಿನಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದು ಎರಡು ವರ್ಷದಿಂದ ಪ್ರಸಾರವಾಗುತ್ತಿದೆ. 30 ಸಂವತ್ಸರಗಳ ಬಣ್ಣದ ಬದುಕಿನಲ್ಲಿ ಕಂಡ ಏಳುಬೀಳುಗಳು, ಸಂತಸದ ಕ್ಷಣಗಳನ್ನು ‘ಕಿರುಮಾತಿ’ಗಾಗಿ ಇಲ್ಲಿ ಚಂದ್ರು ಹಂಚಿಕೊಂಡಿದ್ದಾರೆ.

  • ಊರು, ಶಿಕ್ಷಣ, ಅಭಿನಯದ ಹುಚ್ಚು ಹಚ್ಚಿಸಿಕೊಂಡ ಬಗೆ ಹೇಗೆ?

ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ. ಐಟಿಐ ಮಾಡಿದ ನಂತರ ಕೆಎಸ್‌ಡಿಎಲ್‌ನಲ್ಲಿ ಉದ್ಯೋಗಿಯಾಗಿದ್ದೇನೆ. ಚಿಕ್ಕಂದಿನಿಂದ ನಾಟಕಗಳ ಬಗ್ಗೆ ಅಪಾರ ಆಸಕ್ತಿ ಇತ್ತು, ಹವ್ಯಾಸಿ ರಂಗಭೂಮಿ, ಕಾಲೇಜು ರಂಗ ಭೂಮಿ ಹಾಗೂ ಕಾರ್ಮಿಕ ರಂಗಭೂಮಿಯಲ್ಲಿ ಕೆಲಸ ಮಾಡಿದ್ದೇನೆ. ಬೆಂಗಳೂರು ದೂರದರ್ಶನ ಆರಂಭವಾದಾಗಿನಿಂದ ಕಿರುತೆರೆ ಜತೆಗೆ ನಂಟು ಇದೆ.

  • ಕಿರುತೆರೆಗೆ ನಿರ್ದೇಶನ ಮಾಡಿದ ಧಾರಾವಾಹಿಗಳಾವವು?

ಕಥಾ ಪ್ರಪಂಚ (ದೂರದರ್ಶನ), ಚಿತ್ತಾರದ ಬದುಕು, ಮಹಾನದಿ, ಊರ್ವಶಿ, ಚಾಪ್ಲಿನ್‌ ನೀನು ಅಮರ, ಅಕ್ಬರ್‌ ಬೀರಬಲ್‌ ಹಾಗೂ ಹಾಲುಜೇನು.

  • ಕಿರುತೆರೆಯಲ್ಲಿ ನೀವು ಯಾವ ರೀತಿಯ ಪಾತ್ರಗಳನ್ನು ಇಷ್ಟಪಡುತ್ತೀರಿ?

ಈಗ ನಾನು ಮಾಡುತ್ತಾ ಇರೋದು ಖಳನಾಯಕನ ಪಾತ್ರ. ನನ್ನ ಪಾತ್ರಕ್ಕೆ ತಕ್ಕ ಹಾಗೆ ನಾನು ಇರೋದರಿಂದ ವೀಕ್ಷಕರು ಗುರುತಿಸಿದ್ದಾರೆ. ‘ಅರುಂಧತಿ’ ಧಾರಾವಾಹಿಯಲ್ಲಿ ಮಂತ್ರವಾದಿಯ ಪಾತ್ರ ಮಾಡಿದ್ದೆ. ಈ ಟಿವಿಯಲ್ಲಿ ಪ್ರಸಾರವಾಗಿತ್ತು.

  • ನಿಮ್ಮ ಹೆಸರಿನ ಹಿಂದೆ ಕೆಎಸ್‌ಡಿಎಲ್‌ ಇದೆ ಯಾಕೆ?

ನಾನು ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್‌ ಅಂಡ್‌ ಡಿಟರ್ಜಂಟ್‌ನಲ್ಲಿ ಉದ್ಯೋಗಿಯಾಗಿದ್ದೇನೆ. ಅದಕ್ಕೆಂದೆ ಕೆಎಸ್‌ಡಿಎಲ್‌ ಎಂದು ಸೇರಿಸಿಕೊಂಡಿದ್ದೇನೆ. ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು, ಐಒಬಿ ಚಂದ್ರು ರೀತಿ ಗುರುತಿಸಿಕೊಳ್ಳಲು ಹಾಗೆ ಮಾಡಿಕೊಂಡಿದ್ದೇನೆ? ಮೂಲ ಹೆಸರು ಜಿ.ಎಚ್‌.ಚಂದ್ರಶೇಖರ್‌.

  • ಉದ್ಯೋಗಿಯಾಗಿದ್ದರೂ ನಟನೆ, ನಿರ್ದೇಶನ ಎಲ್ಲ ಹೇಗೆ ನಿರ್ವಹಿಸುತ್ತೀರಿ?

ನನಗೆ ಸಂಸ್ಥೆ ಎಲ್ಲ ರೀತಿಯಲ್ಲಿ ಸಹಕಾರ ನೀಡಿದೆ. ನನ್ನ ರಜೆಗಳನ್ನು ಸರಿದೂಗಿಸಿಕೊಂಡು ಅಭಿನಯಿಸುತ್ತೇನೆ. ತುಂಬಾ ಒಳ್ಳೆಯ ಅವಕಾಶಗಳು ಬಂದಾಗ ಖಂಡಿತಾ ಉಪಯೋಗಿಸಿಕೊಳ್ಳುತ್ತೇನೆ.

  • ರಂಗಭೂಮಿ, ಕಿರುತೆರೆ, ಸಿನಿಮಾ ಈ ಮೂರರಲ್ಲಿ ತುಂಬಾ ಇಷ್ಟವಾಗೋದು ಯಾವುದು?

ಹೆಚ್ಚು ಇಷ್ಟವಾಗೋದು ರಂಗಭೂಮಿ, ಏಕೆಂದರೆ ಪ್ರಾಮಾಣಿಕವಾದ ಪ್ರತಿಕ್ರಿಯೆ ಸಿಗೋದು ಅಲ್ಲೇ. ನಾವು ಅಂದುಕೊಂಡದ್ದನ್ನು ಸಾಕಾರಗೊಳಿಸಬಹುದು. ಕಿರುತೆರೆ ಈಗ ಸ್ಪರ್ಧಾತ್ಮಕವಾಗಿದೆ. ಅಲ್ಲಿ ಯಾರಿಗೆ ಹೆಚ್ಚು ವಾಹಿನಿಗಳ ಜತೆಗೆ ಸಂಪರ್ಕ ಇರುತ್ತೆ ಅವರಿಗೆ ಮಾತ್ರ ಅವಕಾಶ ಸಿಗುತ್ತೆ. ರಂಗಭೂಮಿಯಲ್ಲಿ ನಾವೇ ಅವಕಾಶ ಸೃಷ್ಟಿಸಿಕೊಳ್ತೇವೆ.

  • ರಂಗಭೂಮಿ, ಕಿರುತೆರೆ ಅಭಿನಯದಲ್ಲಿ ಯಾವುದು ಹೆಚ್ಚು ಸವಾಲು?

ಎರಡರಲ್ಲೂ ಸವಾಲು ಇರುತ್ತೆ. ಅದರೆ ರಂಗಭೂಮಿಯಲ್ಲಿ ಹೆಚ್ಚು. ಧಾರವಾಹಿಯಲ್ಲಿ ನಿರ್ದೇಶಕ ಹೇಳಿದ್ದಷ್ಟನ್ನೇ ಮಾಡಬೇಕು. ಆದರೆ ಒಂದು ನಾಟಕ ಮಾಡಬೇಕೆಂದರೆ ಯಾವುದೇ ಆದಾಯದ ನಿರೀಕ್ಷೆ ಇಲ್ಲದೆ ಖರ್ಚು ಮಾಡಿ ತೊಡಗಿಸಿಕೊಳ್ಳಬೇಕು. ನೂರಾರು ಜನರನ್ನು ಒಂದೇ ಬಾರಿ ಸೇರಿಸಿ ತಾಲೀಮು ಮಾಡಿ ಪ್ರಸ್ತುತಪಡಿಸಬೇಕು.

ಇದೆಲ್ಲದರ ನಡುವೆ ನಮ್ಮ ಸೃಜನಶೀಲತೆ ಗುರುತಿಸಿಕೊಂಡು ಅದಕ್ಕೆ ಅವಕಾಶ ಗಿಟ್ಟಿಸಿಕೊಳ್ಳಬೇಕು. ಎಲ್ಲರಿಗೂ ಕಿರುತೆರೆಯಲ್ಲಿ ಅವಕಾಶ ಸಿಗುತ್ತೆ ಅನ್ನೋಕೆ ಆಗಲ್ಲ. ಈಗ ಎಲ್ಲವನ್ನೂ ವಾಹಿನಿಗಳೇ ತೀರ್ಮಾನಿಸುತ್ತವೆ. ಕಲಾವಿದರ ಆಯ್ಕೆಯಿಂದ ಹಿಡಿದು ಕಥೆ, ಪ್ರಸಾರ ಎಲ್ಲವೂ ವಾಹಿನಿ ಹಿಡಿತದಲ್ಲಿವೆ. ಮೊದಲಾದರೆ ಆ ಸ್ವಾತಂತ್ರ್ಯ ನಿರ್ದೇಶಕರಿಗೆ ಇತ್ತು. ಹೊಸ ಮುಖಗಳಿಗೆ ಅವಕಾಶ ನೀಡುತ್ತಾರೆ.

  • ರಂಗಭೂಮಿಯ ಪ್ರೇಕ್ಷಕರಿಗೂ ಧಾರಾವಾಹಿಯ ವೀಕ್ಷಕರೂ ನೀಡುವ ಪ್ರತಿಕ್ರಿಯೆ ಭಿನ್ನವಾಗಿರುತ್ತವೆಯೇ?

ಖಂಡಿತ. ನಾಟಕ ನೋಡುತ್ತಾ ತಕ್ಷಣ ನಟರಿಗೆ ಪ್ರತಿಕ್ರಿಯೆ ಸಿಗುತ್ತೆ. ಅದು ಹೆಚ್ಚು ಖುಷಿ ಕೊಡುತ್ತೆ. ಧಾರಾವಾಹಿ ಹಾಗಲ್ಲ. ಅಲ್ಲಿ ಪಾತ್ರಗಳಿಗೆ ಪ್ರತಿಕ್ರಿಯೆ ದೊರೆಯುತ್ತದೆ.

  • ಮುಂದಿನ ಆಲೋಚನೆ?

ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಿದವನಲ್ಲ. ಅವಕಾಶಗಳನ್ನು ಸೃಷ್ಟಿಸಿಕೊಂಡು ಬಂದವನು. ನಾನೇ ಅವಕಾಶಗಳ ಬೆನ್ನುಹತ್ತಿ ಹೋಗುವುದಿಲ್ಲ.

  • ಹೊಸ ಧಾರಾವಾಹಿಯ ನಟರಿಗೆ ನಿಮ್ಮ ಕಿವಿಮಾತುಗಳೇನು?

ಇಂದು ಮೂರು ನಾಲ್ಕು ತಿಂಗಳಿಗೊಂದು ಧಾರಾವಾಹಿ ಪ್ರಸಾರವಾಗುತ್ತವೆ. ನೂರಾರು ಹೊಸ ಕಲಾವಿದರಿಗೆ ಅವಕಾಶ ಸಿಗುತ್ತೆ. ನಟನೆಯ ಕಡೆಗೆ ಹೆಚ್ಚು ಗಮನ ಕೇಂದ್ರೀಕರಿಸಬೇಕು, ಬದ್ಧತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಪ್ರತಿಫಲ ಸಿಗುತ್ತದೆ. ಶ್ರದ್ಧೆ ಇಟ್ಟುಕೊಂಡರೆ ಎಂದಾದರೂ ಹೆಸರು ಮಾಡಬಹುದು.

  • ನಿಮ್ಮ ಕೆಲಸಗಳಿಗೆ ಮನೆ ಸದಸ್ಯರಿಂದ ಸಹಕಾರವಿದೆಯೇ?

ನಿಜವಾಗಿ ಹೇಳೋದಾರೆ ಇಷ್ಟು ವರ್ಷದ ನನ್ನ ವೃತ್ತಿ ಮತ್ತು ಪ್ರವೃತ್ತಿ ಜೀವನದಲ್ಲಿ ಮನೆಯವರ ಸಹಕಾರ ವಿಶೇಷವಾಗಿ ಪತ್ನಿ ರಾಜಲಕ್ಷ್ಮಿ ನೆರವು ಇಲ್ಲದೆ ಇದ್ದರೆ ಇಷ್ಟು ಸಾಧನೆ ಮಾಡಲಾಗುತ್ತಿರಲಿಲ್ಲ.

  • ಕಿರುತೆರೆಯಿಂದ ಚಲನಚಿತ್ರಗಳಿಗೆ ಹೋಗೋದಿಕ್ಕೆ ಯತ್ನಿಸುವ ನಟರ ಬಗ್ಗೆ ಏನು ಹೇಳ್ತೀರಿ?

ಎಲ್ಲರ ಕೊನೆಯ ಗುರಿ ದೊಡ್ಡಪರದೆಯ ಕಡೆಗೆ. ಆದರೆ ಅವಕಾಶ ಸಿಗಬೇಕಾದರೆ ಗಂಭೀರವಾಗಿ ತೊಡಗಿಸಿ ಕೊಳ್ಳಬೇಕು. ಅವುಗಳನ್ನು ಪ್ರಾಮಾಣಿಕವಾಗಿ ಬೆನ್ನು ಹತ್ತಬೇಕು. ನಮ್ಮಲ್ಲಿ ಪ್ರತಿಭೆ ಇದ್ದರೆ ಯಶಸ್ಸು ಖಂಡಿತ. ಇಲ್ಲಿ ಅಡ್ಡದಾರಿ ಇಲ್ಲ. ಅವು ಉಳಿಯೋದಿಲ್ಲ. ಇಂದು ನಟರಾಗಿ ಹೆಸರು ಮಾಡಿದವರು ಅವಮಾನ ಸಹಿಸಿಕೊಂಡಿರುತ್ತಾರೆ. ಅದರಿಂದಲೇ ಈಗ ಹೆಸರು ಮಾಡಿರುತ್ತಾರೆ.

  • ನಟನೆ ಬಿಟ್ಟು ಬೇರೆ ಹವ್ಯಾಸ

ಓದುವ ಹವ್ಯಾಸ ಇದೆ. ಸಾಹಿತ್ಯದ ಬಗ್ಗೆ ಆಸಕ್ತಿ ಇದೆ. ರಂಗಭೂಮಿ ಜತೆಗೆ ಹೆಚ್ಚು ಒಡನಾಟ ಇರುತ್ತೆ.

  • ಇಷ್ಟು ವರ್ಷದ ಪಯಣದಲ್ಲಿ ನೆನಪಿಸಿಕೊಳ್ಳೊ ಘಟನೆ ಯಾವುದು?

ಎನ್‌.ಎಸ್‌. ರಾಜಶೇಖರ್‌ ಅನ್ನೋ ಖ್ಯಾತ ನಿರ್ದೇಶಕರು ಕಥೆ ಹುಡುಕ್ತಾ ಇದ್ದರು. ಆಗ ಅವರಿಗೆ ‘ಹೃದಯ ಹೃದಯ’ ಚಿತ್ರದ ಕತೆ ಕೊಟ್ಟೆ. ಶಿವರಾಜ್‌ ಕುಮಾರ್ ಅದರಲ್ಲಿ ನಟಿಸಿದ್ದಾರೆ. ಅದರಲ್ಲಿ ಸಹನಿರ್ದೇಶಕ ಕೆಲಸ ಮಾಡಿದೆ. ಆ ವೇಳೆ ವರನಟ ಡಾ.ರಾಜ್‌ ಅವರ ಜತೆ ಚರ್ಚೆ ಮಾಡಿದ್ದು, ಅವರ ಕುಟುಂಬದ ಸದಸ್ಯರ ಜತೆ ಒಡನಾಟಕ್ಕೆ ಅವಕಾಶ ಸಿಕ್ಕಿದ್ದು, ಯಾವತ್ತಿಗು ಮರೆಯಲಾಗದ ಅನುಭವ.

Start a discussion about ಕೆ ಎಸ್ ಡಿ ಎಲ್ ಚಂದ್ರು

Start a discussion
Return to "ಕೆ ಎಸ್ ಡಿ ಎಲ್ ಚಂದ್ರು" page.