ರಸ್ತೆ ವ್ಯಾಪ್ತಿ ಮತ್ತು ಒತ್ತುವರಿ - ಸುಪ್ರೀಮ್ ಕೋರ್ಟ್ ಏನು ಹೇಳಿದೆ

ವಿಷಯ ಸಂಗ್ರಹ ಮತ್ತು ಅನುವಾದ ಎನ್.ಶ್ರೀಧರ ಬಾಬು, ವಕೀಲರು, ತುಮಕೂರು email: adv_sbn@aol.in Web :- http://sridharababu.blogspot.com

ವಿಸ್ತರಣೆ ಎಂಬ ಮನುಜನ ಮನದಾಳದ ಆಸೆ ಎಲ್ಲರಲ್ಲೂ ಇರುವುದು ಸಹಜ. ಈ ವಿಸ್ತರಣೆ ಯನ್ನು ರಾಜ ಮಹಾರಾಜರು ಮಾಡಿದಾಗ ಅದು ರಾಜ್ಯದ ಶಕ್ತಿಯ ಅಭಿವೃದ್ದಿ ಎಂದು ಪ್ರತಿಬಿಂಬಿಸಲ್ಪಟ್ಟಿತ್ತು. ಆದರೆ ಜನಸಾಮಾನ್ಯರು ತಮ್ಮ ಆಸ್ತಿ ವಿಸ್ತರಣೆಯನ್ನು ಸರ್ಕಾರಿ ಜಾಗದಲ್ಲಿಯಾಗಲಿ ಬೇರೆಯವರ ಜಾಗದಲ್ಲಿಯಾಗಲಿ ಮಾಡಿದರೆ ಅದು ಒತ್ತುವರಿ ಜಾಗವೆಂದು ಕರೆಯಲ್ಪಟ್ಟಿತು. ಈಗಲೂ ಕೆಲವು ಘಟಭದ್ರರು ರಾಜಮಹಾರಾಜರ ಪಂಕ್ತಿಯಲ್ಲಿ ಇರಬೇಕೆಂಬುವ ಹಮ್ಮಿನೊಂದಿಗೆ ಒತ್ತುವರಿಯನ್ನು ಒಪ್ಪಿಕೊಳ್ಳಲಾಗದೆ ರಾಜಕೀಯ ನೆರಳಲ್ಲಿ ಇರುವುದು ಒಂದು ಸೋಜಿಗದ ಸಂಗತಿ ಎಂದರೆ ತಪ್ಪಾಗಲಾರದು. ರಸ್ತೆ ಮತ್ತು ಅದರ ವ್ಯಾಪ್ತಿ, ಮುನಿಸಿಪಾಲಿಟಿ ಮತ್ತು ಅದರ ಆದ್ಯ ಕರ್ತವ್ಯದ ಬಗ್ಗೆ ವ್ಯಾಜ್ಯಗಳು ಉದಯವಾಗುತ್ತಲೇ ಇವೆ. ಇವುಗಳ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಅಧಿಕಾರವರ್ಗದಲ್ಲಿ ಕಾನೂನು ಅರಿವು ಮತ್ತು ಬೆಳಕು ಚೆಲ್ಲುವ ದೃಷ್ಠಿಯಿಂದ ಈ ವಿಷಯ ಸಂಗ್ರಹ ಮಾಡಿರುತ್ತೇನೆ. ಈ ವಿಷಯಗಳೇ ಅಲ್ಲದೆ ಇನ್ನೂ ಸಹಸ್ರಾರು ಕಾನೂನು ಅಂಶಗಳು ಇವೆ. ಈ ಬಗ್ಗೆ ಎಲ್ಲರೂ ವ್ಯಾಜ್ಯ ಸೃಷ್ಠಿಸುವ ಮೊದಲು ಆಲೋಚನಾಸಕ್ತರಾದರೆ ಒಳಿತು.


ಮುನಿಸಿಪಾಲಿಟಿ ಟ್ರಸ್ಟಿ ಸ್ಥಾನದಲ್ಲಿ ಕಾನೂನು ಪುಟಗಳನ್ನು ೧೯೦೦ ಇಸವಿಯ ಮುಂಚೆಗೆ ತಿರುವಿದಾಗ ಮುನಿಸಿಪಾಲಿಟಿ ಕರ್ತವ್ಯವನ್ನು ನೆನಪಿಸಿ ಹೊರಡಿಸಿದ ತೀರ್ಪಿನ ಪೈಕಿ ಅಟಾರ್ನಿ ಜನರಲ್ - ಸುಂದರ್ ಲ್ಯಾಂಡ್ ಕಾರ್ಪೋರೇಷನ್ ೧೮೭೫-೭೬ ರಲ್ಲಿ ಮಹತ್ವದ ತೀರ್ಪನ್ನು ನೀಡಿ ಮುನಿಸಿಪಾಲಿಟಿಯು ಸಾರ್ವಜನಿಕ ಪಾರ್ಕುಗಳು, ತೋಟಗಳು, ವೃತ್ತಗಳು ಮತ್ತು ರಸ್ತೆಗಳನ್ನು ಟ್ರಷ್ಠಿ ಯಂತೆ ಜವಾಬ್ದಾರಿ ಯುತವಾಗಿ ನಿರ್ವಹಿಸುವಂತೆ ಆದೇಶಿಸಲಾಗಿದೆ. ಈಗಲೂ ಅನೇಕ ನ್ಯಾಯಾಲಯಗಳ ತೀರ್ಪುಗಳಲ್ಲಿ ಈ ಆದೇಶವು ಉಲ್ಲೇಖಿತವಾಗುತ್ತಿದೆ.

ಸಾರ್ವಜನಿಕ ಹಿತಾಸಕ್ತಿ ಮತ್ತು ಕಟ್ಟಡ ಲೈಸೆನ್ಸ್

ಕರ್ನಾಟಕದ ಉಡುಪಿ ಮುನಿಸಿಪಾಲಿಟಿ ಮೇಲೆ ಕೆ.ಆರ್.ಶನೈ ಎಂಬುವವರು ಸುಪ್ರೀಮ್ ಕೋರ್ಟಿನ ಮುಂದೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಉಡುಪಿ ಮುನಿಸಿಪಾಲಿಟಿ ವಸತಿ ಪ್ರದೇಶದಲ್ಲಿ ಸಿನಿಮಾ ಹಾಲ್ ಕಟ್ಟಲು ಲೈಸೆನ್ಸ್ ನೀಡಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾಗಿ ನಡೆದು ಕೊಂಡಿದೆ ಎಂಬುದು ಅವರ ಅರೋಪ. ಮಾನ್ಯ ನ್ಯಾಯಾಲಯ ಸದರಿ ಬಿಲ್ಡಿಂಗ್ ಪ್ಲಾನ್ ಮತ್ತು ಬೈಲಾ ಉಲ್ಲಂಘಿಸಿ ಲೈಸೆನ್ಸ್ ನೀಡುವುದು ಕಾನೂನು ಭಾಹಿರ ಕ್ರಮ ಎಂದು ಸದರಿ ಲೈಸೆನ್ಸ್ ರದ್ದು ಪಡಿಸಿತ್ತು. ಈ ಕೇಸಿನ ಪೂರ್ಣ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ಲಾ ರಿಪೋರ್ಟರ್ ಎ.ಐ.ಆರ್. ೧೯೭೪ ಎಸ್.ಸಿ. ೨೧೭೭ ರಲ್ಲಿ ನೋಡಬಹುದಿರುತ್ತದೆ.

ಬೆಂಗಳೂರು ಮೆಡಿಕಲ್ ಟ್ರಸ್ಟ್ ಮತ್ತು ಬಿ.ಎಸ್. ಮುದ್ದಪ್ಪ ರವಾರ ನಡುವೆ ಮಾನ್ಯ ಸುಪ್ರೀಮ್ ಕೋರ್ಟಿನ ಮುಂದೆ ಇದ್ದ ವ್ಯಾಜ್ಯ ಪ್ರಕರಣವನ್ನು ಪರಿಹರಿಸಿದ ನ್ಯಾಯಾಲಯ ಪಾರ್ಕಿನ ಪ್ರದೇಶದಲ್ಲಿ ಕಾಲೇಜು ನಿರ್ಮಾಣಮಾಡಿ ಪರಿಸರ ಹಾಳು ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿತ್ತು. ಈ ಕೇಸಿನ ಪೂರ್ಣ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ಲಾ ರಿಪೋರ್ಟರ್ ಎ.ಐ.ಆರ್. ೧೯೯೧ ಎಸ್.ಸಿ. ೧೯೦೨ ರಲ್ಲಿ ನೋಡಬಹುದಿರುತ್ತದೆ.

ಖಾಸಗಿಯವರ ಪಾರ್ಕಿಂಗ್ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವುದು ಖಾಸಗಿ ವ್ಯಾಜ್ಯವಾಗಲಾರದು ಅದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ ಎಂಬ ತೀರ್ಪನ್ನು ಮಾನ್ಯ ಸುಪ್ರೀಮ್ ಕೋರ್ಟಿನ ಮುಂದೆ ಬಂದ ದೆಬಶೀಶ್ ರಾಯ್ ಮತ್ತು ಕಲ್ಕತ್ತಾ ಮುನಿಸಿಪಲ್ ಕಾರ್ಪೊರೇಷನ್ (೨೦೦೫ (೧೨) ಎಸ್.ಸಿ.ಸಿ. ೩೧೭) ರಲ್ಲಿ ನೀಡಲಾಗಿದೆ. ಪ್ಲಾನಿನಲ್ಲಿ ಪಾರ್ಕಿಂಗ್ ಜಾಗ ತೋರಿಸಿ ಅಲ್ಲಿಯೂ ಮಳಿಗೆ ನಿರ್ಮಾಣ ಮಾಡುವವರಿಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ಬಿಲ್ಡಿಂಗೂ ನಮ್ಮ ಜಾಗ ಎನ್ನುವ ಹಾಗಿಲ್ಲ ಯಾವುದೇ ಸಾರ್ವಜನಿಕರೂ ಈ ಬಗ್ಗೆ ಪ್ರಶ್ನಿಸಬಹುದಾಗಿದೆ.

ಹೆದ್ದಾರಿ ರಸ್ತೆ ಬದಿಯ ಜಾಗದ ಬಗ್ಗೆ

ಮಂಗಳೂರು ಮುನಿಸಿಪಾಲಿಟಿ ಮತ್ತು ಮಹದೇವಜಿ ರವರ ನಡುವೆ ನಡೆದ ವ್ಯಾಜ್ಯದಲ್ಲಿ ಮಾನ್ಯ ಸುಪ್ರೀಮ್ ಕೋರ್ಟಿ ಮಹತ್ವದ ಅಂಶದ ಬಗ್ಗೆ ಬೆಳಕು ಚೆಲ್ಲಿತ್ತು. ಹೆದ್ದಾರಿ ಅಳತೆಯು ಬಳಕೆಯು ಎಲ್ಲಿವರೆಗೆ ಉಪಯೋಗದಲ್ಲಿದೆಯೋ ಅದು ಒಳಗೊಂಡಿದೆ. ಪಕ್ಕದ ಜಮೀನು ರಸ್ತೆಯ ಬಾಗದಲ್ಲಿ ಸೇರ್ಪಡೆಯಾಗುತ್ತದೆ ಕಾರಣ ಅದು ರಸ್ತೆ ನಿರ್ವಹಣೆಗೆ ಅವಶ್ಯವಾಗಿರುತ್ತದೆ. ಈ ಕೇಸಿನ ಪೂರ್ಣ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ಲಾ ರಿಪೋರ್ಟರ್ ಎ.ಐ.ಆರ್. ೧೯೬೫ ಎಸ್.ಸಿ. ೧೧೪೭ ರಲ್ಲಿ ನೋಡಬಹುದಿರುತ್ತದೆ.

ಸುಪ್ರೀಮ್ ಕೋರ್ಟಿನ ಮುಂದೆ ಬಂದ ಇನ್ನೊಂದು ವ್ಯಾಜ್ಯದಲ್ಲಿ ಅಂದರೆ ಉತ್ತರ ಪ್ರದೇಶ ರಾಜ್ಯ ಮತ್ತು ಅತಾ ಮಹಮದ್ ಎಂಬ ಕೇಸಿನಲ್ಲಿ ಇನ್ನು ಮುಂದುವರಿದು ಮುನಿಸಿಪಾಲಿಟಿ ರಸ್ತೆಯನ್ನು ರಸ್ತೆಯನ್ನಾಗಿ ಮಾತ್ರ ಉಪಯೋಗಿಸಬೇಕು ಬೇರಾವುದಕ್ಕೂ ಅಲ್ಲ. ಫುಟ್ಪಾತು, ವಾಣಿಜ್ಯ ಮಳಿಗೆಗಳ ಮುಂದೆ ಇರುವ ವರಾಂಡ ಸಾರ್ವಜನಿಕ ರಸ್ತೆಯ ವ್ಯಾಪ್ತಿಯಲ್ಲಿ ಸೇರುತ್ತದೆ. ಈ ಕೇಸಿನ ಪೂರ್ಣ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ಲಾ ರಿಪೋರ್ಟರ್ ಎ.ಐ.ಆರ್. ೧೯೮೦ ಎಸ್.ಸಿ. ೧೭೮೫ ರಲ್ಲಿ ನೋಡಬಹುದಿರುತ್ತದೆ.

ಗೋಬಿಂದ್ ಪ್ರಶಾದ್ ಮತ್ತು ನವದೆಹಲಿ ಮುನಿಸಿಪಲ್ ಕಮಿಟಿ ನಡುವೆ ನಡೆದ ವ್ಯಾಜ್ಯದಲ್ಲಿ ಮಾನ್ಯ ಸುಪ್ರೀಮ್ ಕೋರ್ಟ್ ಇನ್ನು ಮುಂದುವರಿದು ವಾಣಿಜ್ಯ ಮಳಿಗೆಗಳನ್ನು ಮತ್ತು ಇತರೆ ಸಾರ್ವಜನಿಕರ ಬಳಕೆಯ ಕಟ್ಟಡ ಕಟ್ಟುವ ಮಾಲೀಕನು ಸಾರ್ವಜನಿಕರು ಬಳಸುವ ಜಾಗ, ಪ್ಯಾಸೇಜ್, ವರಾಂಡ, ಫುಟ್ ಪಾತ್, ಓಣಿ ಬಿಡುತ್ತಾನೆಯೋ ಆದು ಸಾರ್ವಜನಿಕ ರಸ್ತೆಯಾಗುತ್ತದೆ. ಸದರಿ ಜಾಗವನ್ನು ಸಾರ್ವಜನಿಕವಾಗಿ ಉತ್ತಮ ಉಪಯೋಗಕ್ಕೆ ಘೋಷಣೆಯಾದರೆ ಸದರಿ ಜಾಗದ ಮಾಲೀಕನು ಅದಕ್ಕೆ ಪರಿಹಾರ ಕೋರಲು ಬರುವುದಿಲ್ಲ. ಈ ಕೇಸಿನ ಪೂರ್ಣ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ಲಾ ರಿಪೋರ್ಟರ್ ಎ.ಐ.ಆರ್. ೧೯೯೩ ಎಸ್.ಸಿ. ೨೩೧೩ ರಲ್ಲಿ ನೋಡಬಹುದಿರುತ್ತದೆ.

ರಾಜಕಾರಣಿಗಳ ಶಿಫಾರಸ್ಸು ಕಾನೂನು ಉಲ್ಲಂಘನೆಗಾಗಿ ಮಾಡಬಾರದು

ತಮಿಳುನಾಡಿನ ನದಿ ತೀರದಲ್ಲಿ ಹೋಟೆಲ್ ಉಧ್ಯಮವನ್ನು ಸ್ಥಾಪಿಸಲು ಹೊರಟ ಪ್ಲೆಸೆಂಟ್ ಸ್ಟೇ ಹೋಟೆಲ್ ಮತ್ತು ಅದಕ್ಕೆ ವಿರೋದ ಪಡಿಸಿದ ಸ್ಥಳೀಯ ಯೋಜನಾ ಪ್ರಾಧಿಕಾರ ಮತ್ತು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳ ಶಿಫಾರಸ್ಸು ಬರುತ್ತದೆ. ನಗರ ಕಟ್ಟಡ ನಿರ್ಮಾಣಗಳಲ್ಲಿ ಪರಿಸರದ ಹಾನಿ ಮಾಡುತ್ತ ಯೋಜನಾ ಬೆಳವಣಿಗೆಗೆ ಅಡ್ಡ ಬರುವ ಈ ಬಗ್ಗೆಯ ಉನ್ನತ ಶಿಫಾರಸ್ಸುಗಳನ್ನು ಮಾನ್ಯ ಸುಪ್ರೀಮ್ ಕೋರ್ಟ್ ಖಂಡಿಸಿರುತ್ತದೆ. ಈ ಕೇಸಿನ ಪೂರ್ಣ ಭಾಗವನ್ನು ಹೆಚ್ಚಿನ ಮಾಹಿತಿಗಾಗಿ ಲಾ ರಿಪೋರ್ಟರ್ ೧೯೯೫ (೬) ಎಸ್.ಸಿ.ಸಿ ೧೨೭ ರಲ್ಲಿ ನೋಡಬಹುದಿರುತ್ತದೆ.

ಅನಧಿಕೃತ ಕಟ್ಟಡ ಬೆಳೆಯಲು ಬಿಟ್ಟ ಅಧಿಕಾರಿಗಳನ್ನು ಕ್ರಮ ಕೈಗೊಳ್ಳಿ

ಡಾ ಕಜೂರಿಯ ಕೇಸಿನಲ್ಲಿ (ಎ.ಐ.ಆರ್. ೧೯೯೬ ಎಸ್.ಸಿ. ೨೫೩) ಮಾನ್ಯ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿನಲ್ಲಿ ಹೀಗೆ ಹೇಳಲಾಗಿದೆ. ಎಲ್ಲಿ ಅನಧಿಕೃತ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತದೆಯೋ ಅಲ್ಲಿ ಸಂಬಂದಿಸಿದ ಕಟ್ಟಡಗಳ ಉದಯಕ್ಕೆ ಕಾರಣರಾದ ಅಧಿಕಾರಿಗಳನ್ನು ಹಾಗೆ ಬಿಡಲಾಗುತ್ತಿದೆ ಇದು ನಡೆಯಬಾರದು, ಅಂತಹ ಕಟ್ಟಡ ನಿರ್ಮಾಣ ಮಾಡಿ ಅನುಬವದಲ್ಲಿರುವವನಿಗಿಂತಲೂ, ಅದನ್ನು ಮೇಲೇಳಲು ಬಿಟ್ಟ ಅಧಿಕಾರಿಯನ್ನು ಕಾನೂನಿನ ರೀತ್ಯ ಶಿಕ್ಷೆಗೆ ಗುರಿಪಡಿಸುವುದು, ಸದರಿ ಕಾನೂನು ಭಾಹಿರ ನಿರ್ಮಾಣಗಳ ಮೂಲ ಸರಿಪಡಿಸಿದಂತೆ ಆಗುತ್ತದೆ, ಇಲ್ಲವಾದರೆ ಮುಂದೆ ಅಧಿಕಾರಿಗಳು ಜವಾಬ್ದಾರಿ ಇಲ್ಲದೆ ನಡೆದುಕೊಳ್ಳುವುದಕ್ಕೆ ದಾರಿಯಾಗುತ್ತದೆ.


ಎಂ.ಐ. ಬಿಲ್ಡರ್ಸ್ ಮತ್ತು ರಾದೇ ಶ್ಯಾಮ್ ಸಾಹು ( ೧೯೯೯ (೬) ಎಸ್.ಸಿ.ಸಿ. ೪೬೪ ) ರಲ್ಲಿ ಹೇಳಿರುವಂತೆ ವಾಣಿಜ್ಯ ಕಟ್ಟಡಗಳು ಅನಧಿಕೃತ ಕಟ್ಟಡಗಳಲ್ಲಿ ನಡೆಯುವುದು ಸ್ಥಳೀಯವಾಗಿ ಹೆಚ್ಚಿನ ಹೊರೆಯಾಗುತ್ತದೆ ಪ್ರಾರ್ಥಮಿಕ ಕಾರ್ಯವಾಗಿ ನ್ಯಾಯಾಲಯವು ಅಂತಹ ನಕಾರಾತ್ಮಕ ಬೆಳವಣಿಗೆಯ ನ್ನು ತೆರವು ಗೊಳಿಸುವುದಕ್ಕೆ ಆಧ್ಯತೆ ನೀಡಿ ಅದರಿಂದ ಉಂಟಾಗಬಹುದಾದ ಪರಿಸರ ಸಮಸ್ಯೆಗಳಾದ ಹೆಚ್ಚು ಜನಸಂದಣಿ ಮತ್ತು ಸಂಚಾರ ತಡೆಯಬಹುದಾಗಿದ್ದು ಈ ಬಗ್ಗೆ ಸದರಿ ಅನಧಿಕೃತ ಕಟ್ಟಡ ನಿರ್ಮಾಣವಾದ ಬಗ್ಗೆ ತನಿಕೆಯನ್ನು ನಡೆಸಿ ಅಪರಾಧಿಗಳನ್ನು ಕಾನೂನಿನ ಪರಿಮಿತಿಗೆ ತರುವಂತೆ ಮತ್ತು ಕೇವಲ ಹೊಡೆದುಹಾಕುವಿಕೆಗೆ ಮಾತ್ರ ತೀರ್ಪು ಸೀಮಿತಗೊಳಿಸದಂತೆ ನಿರ್ದೇಶನ ನೀಡಿದೆ.

ಎಂ.ಸಿ. ಮೆಹೆತಾ ಮತ್ತು ಯೂನಿಯಾನ್ ಆಫ್ ಇಂಡಿಯಾ ( ೧೬-೦೨-೨೦೦೬ ರಲ್ಲಿನ ತೀರ್ಪು) ಮಾನ್ಯ ಸುಪ್ರೀಮ್ ಕೋರ್ಟ್ ಬಹಳ ವಿಸ್ತಾರವಾಗಿ ಚರ್ಚಿಸಿದೆ. ವಸತಿ ಮತ್ತು ವಾಣಿಜ್ಯದ ಕಟ್ಟಡಗಳ ವಿಸ್ತಾರ ಮತ್ತು ಬಳಕೆ ಸಾಂದ್ರತೆ ಕುಡಿಯುವ ನೀರು, ಚರಂಡಿ ಮತ್ತು ಶೌಚ ವ್ಯವಸ್ಥೆಗಳ ಬಗ್ಗೆ ಹೆಚ್ಚು ಒತ್ತಡ ತರುತ್ತದೆ. ಮಾಸ್ಟರ್ ಪ್ಲಾನುಗಳು ಮುಂದಾಲೋಚನೆಯಲ್ಲಿ ತಜ್ಞರ ಸಹಾಯದಿಂದ ಆರೋಗ್ಯಕರ ಜೀವನ, ಉತ್ತಮ ಪರಿಸರ, ಶ್ವಾಸಯುಕ್ತ ಜಾಗ, ಭೂ ಉಪಯೋಗದ ಸಾಂದ್ರತೆ, ವಾಣಿಜ್ಯ, ಗೃಹ-ಕೈಗಾರಿಕೆ ಮತ್ತು ವಸತಿ ಉಪಯೋಗದ ಪ್ರತ್ಯೇಕತೆ, ಹೀಗೆ ಅನೇಕ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ತಯಾರು ಮಾಡಲಾಗಿರುತ್ತದೆ. ಅದರ ಜಾರಿ ಮಾಡುವುದು ಕಠಿಣವಾದರೂ ಅದರ ಉಲ್ಲಂಘನೆಯಿಂದ ಪರಿಸರದ ಮತ್ತು ಆರೋಗ್ಯ ಹಾನಿಯು ಕಾನೂನು ಪಾಲಕ ಪ್ರಜೆಗೆ ಒದಗಿರುವುದು ನ್ಯಾಯಾಲಯದ ಗಮನಕ್ಕೆ ಬಂದರೆ ಮೂಕ ಪ್ರೇಕ್ಷಕವಾಗದು. ಹೆಚ್ಚುವರಿ ಸಮಸ್ಯೆಗಳು ಈ ಬಗ್ಗೆ ತೊಡಕಾಗದು. ಅನಧಿಕೃತ ಕಟ್ಟಡಗಳ ಮತ್ತು ದುರುಪಯೋಗದ ಸಮಸ್ಯೆಗಳನ್ನು ತಡೆಯಲು ಬಹಳಷ್ಟು ಕಾನೂನು ರೂಪಿತವಾಗಿದ್ದರೂ ಅಂತಹ ಕಾನೂನು ಭಾಹಿರ ಕಾಮಗಾರಿಗಳು ಮತ್ತು ದುರ್ಬಳಕೆಗಳು ಹೆಚ್ಚುತ್ತಲೇ ಇವೆ, ಇದು ಕಾನೂನು ಜಾರಿಗೊಳಿಸದೆ ಇರುವುದು ಮತ್ತು ಕೋರ್ಟಿನ ಆದೇಶಗಳನ್ನು ಪಾಲಿಸದೆ ಇರುವುದು ತೋರುತ್ತದೆ, ಇದು ಕನೂನು ಕಡಗಣನೆಯಾಗಿದೆ. ಆದ್ದರಿಂದ ಈ ಸ್ಥಿತಿಗೆ ಕಾರಣರಾದ ಅಧಿಕಾರಿಗಳನ್ನು ಗುರುತಿಸಿ ಕ್ರಮಕೈಗೊಳ್ಳುವುದು ನಡೆಯ ಬೇಕಿರುತ್ತದೆ. ಏಕೆಂದರೆ ಅಧಿಕಾರಿಗಳ ಕುಮ್ಮಕ್ಕು ಇಲ್ಲದೆ ಇಂತಹ ಸ್ಥಿತಿ ಉದ್ಬವವಾಗದು ಎಂಬ ಇನ್ನು ಅನೇಕ ಕಟ್ಟೋರ ಶಬ್ದಗಳಲ್ಲಿ ಎಚ್ಚರಿಕೆಯನ್ನು ರಾವಾನಿಸಿದೆ.


ಮುನಿಸಿಪಾಲಿಟಿ ಮೇಲೆ ನಷ್ಟ ಪರಿಹಾರ ದಾವೆ

ಕರ್ನಾಲ್ ಮುನಿಸಿಪಲ್ ಕಮಿಟಿ ಮತ್ತು ನಿರ್ಮಲದೇವಿ ಕೇಸಿನಲ್ಲಿ (ಎ.ಐ.ಆರ್. ೧೯೯೬ ಎಸ್.ಸಿ. ೮೯೨) ಎಂಬ ಕೇಸಿನಲ್ಲಿ ಒತ್ತುವರಿ ಮಾಡಿ ಕಟ್ಟಲಾಗಿದ್ದ ಅಂಗಡಿಯ ತೆರವು ಗೊಳಿಸಲು ನೋಟೀಸು ನೀಡಲಾಗಿತ್ತು, ಅದನ್ನು ತೆರವು ಗೊಳಿಸದೆ ಇದ್ದದಕ್ಕೆ ನಗರಸಭೆ ವತಿಯಿಂದ ತೆರವು ಗೊಳಿಸಲಾಯಿತು. ಸದರಿ ಕಾರಣಕ್ಕೆ ಮುನಿಸಿಪಾಲಿಟಿಯಿಂದ ನಷ್ಟ ಪರಿಹಾರ ಕೋರಿ ದಾವೆ ಹೂಡಿದರು, ಸದರಿ ದಾವೆಯನ್ನು ಕೆಳ ನ್ಯಾಯಾಲಯ ವಜಾಮಾಡಿತ್ತು, ಅಪೀಲಿನಲ್ಲಿ ಜಿಲ್ಲಾ ನ್ಯಾಯಾಲಯ ೨೦ ಸಾವಿರ ಪರಿಹಾರ ನೀಡಿತ್ತು. ಹೈಕೋರ್ಟಿನ ಮುಂದೆಯೂ ಮುನಿಸಿಪಾಲಿಟಿ ಅಪೀಲು ವಜಾ ಆಯಿತು ನಂತರ ಸುಪ್ರೀಮ್ ಕೋರ್ಟ್ ಮೊರೆ ಹೋದ ಮುನಿಸಿಪಾಲಿಟಿಗೆ ಜಯ ಒದಗಿತು. ಸದರಿ ಕೇಸಿನಲ್ಲಿ ಮುನಿಸಿಪಾಲಿಟಿಯ ತೆರವು ಗೊಳಿಸುವ ಸದರಿ ಹಕ್ಕನ್ನು ಎತ್ತಿ ಹಿಡಿದ ನ್ಯಾಯಾಲಯ ಅಂತಹ ಕೇಸಿನಲ್ಲಿ ತೆರವು ಗೊಳಿಸುವ ಖರ್ಚನ್ನು ಸದರಿ ಒತ್ತುವರಿದಾರನಿಂದ ವಸೂಲಿ ಮಾಡಲು ಸೂಚಿಸಿತು. ಮುನಿಸಿಪಾಲಿಟಿ ತನ್ನ ಕಾಯ್ದೆ ಒಳಗಿನ ಅಧಿಕಾರವನ್ನು ಉಪಯೋಗಿಸಿರುವುದರಿಂದ ನಷ್ಟ ಪರಿಹಾರ ನೀಡುವುದು ಕಾನೂನು ಭಾಹಿರ ಎಂದು ತೀರ್ಪು ನೀಡಿದೆ.


ಸಿವಿಲ್ ಕೋರ್ಟಿನ ಮಧ್ಯಂತರ ತಡೆ ಆಜ್ಞೆ ಮತ್ತು ಅನಧಿಕೃತ ಕಟ್ಟಡ

ಸೈಯದ್ ಮುಜ಼ಾಫರ್ ಆಲಿ ಮತ್ತು ಮುನಿಸಿಪಲ್ ಕಾರ್ಪೊರೇಷನ್ ಡೆಲ್ಲಿ ರವರ (೧೯೯೫ (೪) ಎಸ್.ಸಿ.ಸಿ. ೪೨೬ ) ಕೇಸಿನಲ್ಲಿ ಪ್ಲಾನಿನ ಪ್ರಕಾರ ಕಟ್ಟದೆ ಹೋದರೆ ಕಟ್ಟಡ ಕೆಡವುವುದು ಪರಿಹಾರವಲ್ಲ. ಸಲ್ಪ ಮತ್ತು ಮನ್ನಿಸಬಹುದಾದ ಬದಲಾವಣೆ ಇದ್ದರೆ ಅದನ್ನು ದಂಡ ಹಾಕಿ ಸಕ್ರಮ ಮಾಡಿಕೊಳ್ಳಬಹುದಾಗಿದ್ದು. ಮನ್ನಿಸಲಾಗದ ಮತ್ತು ತೀವ್ರತರವಾದ ಅಕ್ರಮಗಳು ಕಂಡು ಬಂದಲ್ಲಿ ಅರ್ಜಿದಾರರು ನ್ಯಾಯಾಲಯಕ್ಕೆ ಸೂಕ್ತ ರೀತಿಯಲ್ಲಿ ಹೇಗೆ ತನ್ನ ಕಟ್ಟಡ ವಲಯ ನಿಯಮಾವಳಿ ಮತ್ತು ಇತರೆ ಕಾನೂನು ಹೇಗೆ ಉಲ್ಲಂಘನೆ ಮಾಡಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗುತ್ತದೆ. ಅಂತಹ ಸಂಧರ್ಬದಲ್ಲಿ ಮಾತ್ರ ತಾತ್ಕಾಲಿಕ ತಡೆ ಆಜ್ಞೆ ಪಡೆಯಲು ಅರ್ಜಿದಾರನು ಅರ್ಹನೆಂದು ನಿರ್ದೇಶಿಸಲಾಗಿದೆ.

ಶಿವಕುಮಾರ್ ಚಡ್ಡ ಮತ್ತು ಮಿನಿಸಿಪಲ್ ಕಾರ್ಪೊರೇಷನ್ ಡೆಲ್ಲಿ ರವರ ಕೇಸಿನಲ್ಲಿ (೧೯೯೩ (೩) ಎಸ್.ಸಿ.ಸಿ. ೧೬೧) ಮುನಿಸಿಪಾಲಿಟಿಯು ಅನಧಿಕೃತ ಕಟ್ಟಡ ತೆರವು ಗೊಳಿಸುವ ವೇಳೆಯಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸುವ ಮೂಲದಾವೆಗಳಲ್ಲಿ ಹೇಗೆ ಕೆಳ ನ್ಯಾಯಾಲಯ ಕಾನೂನು ರೀತಿಯಲ್ಲಿ ಸ್ಪಂದಿಸಬೇಕು ಎಂಬ ನಿರ್ದೇಶನವನ್ನು ನೀಡಿದೆ. ಅಂತಹ ಕೇಸುಗಳಲ್ಲಿ ಕೇವಲ ಮಧ್ಯಂತರ ಆಜ್ಞೆ ಪಡೆಯಲಿಕ್ಕಾಗಿಯೇ ಬರುವ ಬಗ್ಗೆ ಗಮನಹರಿಸಿದ ನ್ಯಾಯಾಲಯ, ಎದುರುದಾರರಿಗೆ ನೋಟೀಸು ನೀಡದೆ ಮಧ್ಯಂತರ ಆಜ್ಞೆ ನೀಡಬಾರದೆಂದು ಹೇಳಿದೆ. ಅಂತಹ ಬಹಳಷ್ಟು ಕೇಸುಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಮಧ್ಯಂತರ ಆಜ್ಞೆಗಳಿಂದ ತೊಂದರೆ ಆಗುತ್ತದೆ ಎಂದು ಅಭಿಪ್ರಾಯ ಪಟ್ಟಿದೆ. ಎಂದು ವಿಮರ್ಶಿಸಿರುವ ಮುಂಬಯ್ ಹೈಕೋರ್ಟ್ ವಿನಾಯಕ್ ಎಸ್. ಬಾಪಟ್ ಮತ್ತು ಎಸ್.ಪಿ. ಚಂದ್ರಾಪುರ (ಎ.ಐ.ಆರ್. ೨೦೦೫ ಬಿಓಎಂ ಆರ್ ೩೨೮) ಕೇಸಿನಲ್ಲಿ ಉಲ್ಲೇಖಿಸಿರುವಂತೆ ನ್ಯಾಯಾಲಯ ಇಂತಹ ಸಂಧರ್ಬದಲ್ಲಿ ಏನು ಮಾಡಬೇಕು, ಯಾವ ಯಾವ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ಉಲ್ಲೇಖಿಸುತ್ತ ಮುನಿಸಿಪಲ್ ಅಧಿಕಾರಿಗಳೇ ಶಾಮೀಲಾಗಿ ಕೇಸಿನ ವಿಳಂಬಕ್ಕೆ ಕಾರಣವಾದರೆ ಸೂಕ್ತ ಕ್ರಮಕ್ಕಾಗಿ ನ್ಯಾಯಾಲಯ ಮುಂದಾಗುವಂತೆ ಸೂಚಿಸಿರುವುದಲ್ಲದೆ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿಯ ರಕ್ಷಕನೆಂದು ಪ್ರತಿಬಿಂಬಿಸುತ್ತ ಸದರಿ ಮಾರ್ಗ ಅನುಸರಿಸಿದರೆ ಉತ್ತಮ ಎಂದು ಅಭಿಪ್ರಾಯ ಪಟ್ಟಿದೆ.

ಫುಟ್ ಪಾತ್ ವ್ಯಾಪಾರಿಗಳು ಮತ್ತು ಅವರ ಮೂಲಭೂತ ಹಕ್ಕು

ಬಾಂಬೆ ಹಾಕರ್ಸ್ ಯೂನಿಯನ್ ಮತ್ತು ಬಾಂಬೆ ಮುನಿಸಿಪಾಲ್ ಕಾರ್ಪೊರೇಷನ್ (೧೯೮೫ (೩) ಎಸ್.ಸಿ.ಆರ್. ೫೨೮) ನಡುವೆ ನಡೆದ ವ್ಯಾಜ್ಯದಲ್ಲಿ ಮಾನ್ಯ ಸುಪ್ರೀಮ್ ಕೋರ್ಟ್ ಹೀಗೆಂದಿದೆ ಯಾವುದೇ ವ್ಯಕ್ತಿಯು ಸಾರ್ವಜನಿಕರಿಗೆ ತೊಂದರೆ ನೀಡುತ್ತ, ಸಾರ್ವಜನಿಕರನ್ನು ಕಾಡುತ್ತಾ, ಸಾರ್ವಜನಿಕವಾಗಿ ನ್ಯೂಸೆನ್ಸ್ ಮಾಡುತ್ತ ವ್ಯಾಪಾರ ವಹಿವಾಟು ಮಾಡುವ ಹಕ್ಕು ಇಲ್ಲ. ಸಾರ್ವಜನಿಕ ರಸ್ತೆ ಹೆಸರಿನಲ್ಲಿಯೇ ಹೇಳುವಂತೆ ಸಾರ್ವಜನಿಕವಾಗಿ ಬಳಕೆಯಾಗ ಬೇಕು. ರಸ್ತೆಗಳು ವ್ಯಾಪಾರಕ್ಕಾಗಿ ನಿರ್ಮಾಣವಾದುದ್ದಲ್ಲ. ವ್ಯಾಪಾರವನ್ನು ರಸ್ತೆಯಲ್ಲಿ ಜರುಗಲು ಬಿಟ್ಟರೆ s ಸಾರ್ವಜನಿಕ ಸಮಸ್ಯೆಗಳು ಉದ್ಬವವಾಗುತ್ತದೆ.

ನಂತರದ ಓಲ್ಗಾ ಟೆಲಿಸ್ ಮತ್ತು ಬಾಂಬೆ ಮುನಿಸಿಪಲ್ ಕಾರ್ಪೊರೇಷನ್ ಕೇಸಿನಲ್ಲಿ (ಎ.ಐ.ಆರ್. ೧೯೮೬ ಎಸ್.ಸಿ. ೧೮೦) ಬಂದ ತೀರ್ಪಿನಲ್ಲಿ ನೋಟೀಸು ನೀಡದೆ ತೆರವು ಕಾರ್ಯಾಚರಣೆ ಮಾಡುವುದು ಸಂವಿಧಾನ ಭಾಹಿರ ಎಂದು ತೀರ್ಪು ಹೊರಬಿದ್ದಿತಾದರೂ ಮಾನ್ಯ ನ್ಯಾಯಾಲಯ ಕೆಲವು ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ ತುಲನೆ ಮಾಡುತ್ತ ಪರ್ಯಾಯ ವ್ಯಸ್ಥೆಯ ಕಡೆ ಒಲವು ತೋರಿತ್ತು. ಒಟ್ಟಿನಲ್ಲಿ ಮೇಲ್ಕಂಡ ಎರಡು ಕೇಸಿನಲ್ಲಿ ಸ್ಥಳೀಯ ವಾಸ್ತವಿಕತೆಗೆ ಅನುಗುಣವಾಗಿ ಪರ್ಯಾಯ ವ್ಯವಸ್ಥೆ ರೂಪಿಸುವಂತೆ ನಿರ್ದೇಶನ ನೀಡಿತ್ತು.


ಈ ಎಲ್ಲಾ ವಿವಾದಗಳಿಗೆ ಅಂತಿಮ ತೆರೆ ಬಿದ್ದದ್ದು ಸುಪ್ರೀಮ್ ಕೋರ್ಟಿನ ಪೂರ್ಣ ಪ್ರಮಾಣದ ಆರು ನ್ಯಾಯಾಧೀಶರಿದ್ದ ನ್ಯಾಯಾಲಯದಲ್ಲಿ ಸೋದನ್ ಸಿಂಗ್ ಇತರರು ಮತ್ತು ನ್ಯೂ ಡೆಲ್ಲಿ ಮುನಿಸಿಪಲ್ ಕಮಿಟಿ (ಎ.ಐ.ಆರ್. ೧೯೮೯ ಎಸ್.ಸಿ. ೧೯೮೮) ಕೇಸಿನಲ್ಲಿ ಫುಟ್ ಪಾತ್ ವ್ಯಾಪಾರ ಬಹಳ ಹಿಂದಿನಿಂದಲೂ ಮನುಜ ಜೀವನಕ್ಕಾಗಿ ಮಾಡಿಕೊಂಡ ಕಸುಬಾಗಿದ್ದು ಅದನ್ನು ಸಕಾರಣಬದ್ದವಾಗಿ ನಿಯಂತ್ರಣ ಮತ್ತು ನಿರ್ವಹಣೆ ಮಾಡಬಹುದೇ ಹೊರತು, ವ್ಯಾಪಾರವನ್ನೇ ನಿರ್ಬಂದಿಸುವಂತಿಲ್ಲ ಅದು ಮೂಲಭೂತ ಹಕ್ಕು ಇತರರಿಗೆ ತೊಂದರೆ ಆಗದ ರೀತಿಯಲ್ಲಿ ಬಳಕೆ ಆಗಬೇಕು. ಎಂಬ ತೀರ್ಪನ್ನು ನೀಡಿತ್ತು. ಬಾಂಬೆ ಹಾಕರ್ಸ್ ಕೇಸಿನಲ್ಲಿ ಒಂದು ಜಾಗದಿಂದ ಒಂದು ಜಾಗಕ್ಕೆ ತಿರುಗಾಡುತ್ತ ಫುಟ್ ಪಾತ್ ವ್ಯಾಪಾರಿಗಳು ವ್ಯಾಪಾರ ಮಾಡಿಕೊಳ್ಳಬೇಕೇ ಹೊರತು ಒಂದೇ ಜಾಗದಲ್ಲಿ ಕುಳಿತು ಹಕ್ಕು ಪ್ರತಿಪಾದಿಸುವ ಹಾಗಿಲ್ಲ ಎಂಬ ವಾದವನ್ನು ಒಂದು ಕಡೆಯ ವಾದವನ್ನಾಗಿ ಪರಿಗಣಿಸಿದ ಮಾನ್ಯ ನ್ಯಾಯಾಲಯ ಈ ವ್ಯಾಪಾರವನ್ನು ಸರಿಯಾಗಿ ನಿಯಮ ಬದ್ದವಾಗಿ ಬಿಟ್ಟರೆ ಸಣ್ಣ ವ್ಯಾಪಾರಸ್ಥರ ಜೀವನ ನಿರ್ವಹಣೆಯು ನಡೆಯುವುದಲ್ಲದೆ ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ದಿನ ನಿತ್ಯದ ವಸ್ತುಗಳ ಲಭ್ಯತೆಯು ಆಗುವುದು, ಸಾರ್ವಜನಿಕ ವಾಗಿ ಬಳಕೆಯಾಗ ಬೇಕಾದ ರಸ್ತೆಯಲ್ಲಿ ಫುಟ್ ಪಾತ್ ವ್ಯಾಪಾರಿಗಳು ಸಾರ್ವಜನಿಕರಲ್ಲೇ ಬರುತ್ತಾರೆ, ರಸ್ತೆಯ ಉಪಯೋಗದ ಹಕ್ಕು ಎಲ್ಲರಿಗೂ ಸಮಾನವಾಗಿ ಇದೆ. ಅದನ್ನು ನಿಯಂತ್ರಿಸುವುದು ಸಮಾನವಾಗಿ ನಡೆಯಬೇಕು ಎಂಬ ಸಿದ್ದಾಂತವನ್ನು ಪ್ರತಿಪಾದಿಸಿರುತ್ತದೆ. ಮಾನ್ಯ ನ್ಯಾಯಾಲಯ ಎಚ್ಚರಿಕೆಯ ಮಾತನ್ನು ನೀಡಿರುತ್ತದೆ. ಎಲ್ಲಾ ರಸ್ತೆಯಲ್ಲೂ ಫುಟ್ ಪಾತ್ ವ್ಯಾಪಾರವನ್ನು ಮಾಡುವ ಬೇಡಿಕೆಯ ಹಕ್ಕನ್ನು ನಿರಾಕರಿಸುತ್ತ ಚಿಕ್ಕದಾದ ರಸ್ತೆಗಳಲ್ಲಿ, ಆಸ್ಪತ್ರೆ ಬಳಿಯಲ್ಲಿ, ಭದ್ರತೆ ಆವಶ್ಯ ಇರುವ ಜಾಗಗಳಲ್ಲಿ, ಮತ್ತು ಶಾಶ್ವತವಾಗಿ ಒಂದು ಜಾಗದ ಹಕ್ಕು ನೀಡುವುದು, ಬೇಡವೆಂದು ಕೆಲವು ಕಡೆ ವಾರಕ್ಕೆ ಒಂದು ದಿನ ಜನ ಸಂದಣಿಯಿಲ್ಲದ ಸಮಯದಲ್ಲಿ ವ್ಯಾಪಾರ ಮಾಡಿಕೊಳ್ಳಲು ಅನುವು ಮಾಡಿಕೊಡಲು ಸೂಚಿಸಿತು. ಬಡತನ ರಸ್ತೆ ಒತ್ತುವರಿಗೆ ಕಾರಣ ವಾಗ ಬಾರದು ಎಂಬ ಎಚ್ಚರಿಕೆಯನ್ನು ನೀಡಿದೆ. ಹೆಚ್ಚು ಬೆಲೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಲು ಮತ್ತು ಸ್ಮಗಲಿಂಗ್ ವಸ್ತುಗಳನ್ನು ಮಾರಲು ಬಿಡಬಾರದೆಂದು ತಿಳಿಸಿದ ನ್ಯಾಯಾಲಯ ಬಂಡವಾಳ ಹೂಡಲು ಅಶಕ್ತರಾದ ವ್ಯಕ್ತಿಗಳಿಗೆ, ಕಡಿಮೆ ಬೆಲೆಯ ದಿನ ನಿತ್ಯದ ಅವಶ್ಯ ವಸ್ತುಗಳಿಗೆ ಸೀಮಿತವಾಗಿ ಸದರಿ ಸಿದ್ದಾಂತವನ್ನು ಪ್ರತಿಪಾದಿಸಲಾಗಿರುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಹಳ್ಳಿಗಳಲ್ಲಿ ಉತ್ತಮ ಉದ್ಯೋಗಗಳನ್ನು ಸೃಷ್ಠಿಸುವಂತೆ ಹಳ್ಳಿಯಿಂದ ವಲಸೆ ತಡೆಯುವುದಕ್ಕೆ ಯೋಜನೆ ರೂಪಿಸುವಂತೆಯೂ ತಿಳಿಸಲಾಗಿತ್ತು. ಅಲ್ಲಿವರೆಗೆ ನ್ಯಾಯಾಲಯಗಳು ಸಾರ್ವಜನಿಕರ ಹಕ್ಕುಗಳನ್ನು ರಕ್ಷಿಸುವಂತೆ ನಿರ್ದೇಶಿಸಿರುತ್ತದೆ.

ಅಹಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್ ಮತ್ತು ದಿಲ್ ಬಾಗ್ ಸಿಂಗ್ ಮತ್ತು ಇತರರು (೧೯೯೨ (೨) ಎಸ್.ಸಿ.ಆರ್. ೩೨೨) ಇದ್ದ ಕೇಸೊಂದರಲ್ಲಿ ಫುಟ್ ಪಾತ್ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ನೀಡಲಾಗಿತ್ತು ಆದರೆ ಸದರಿ ಕೇಸಿನ ಕೆಲವು ವ್ಯಾಪಾರಿಗಳು ಸದರಿ ಪರ್ಯಾಯ ವ್ಯವಸ್ಥೆಗೆ ಅಡ್ಡಲಾಗಿ ಸ್ಥಳೀಯ ನ್ಯಾಯಾಲಯದಲ್ಲಿ ತಡೆ ಆಜ್ಞೆ ಪಡೆದಿದ್ದರು ಈ ವಿಚಾರವನ್ನು ಅಹಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್ ಸುಪ್ರೀಮ್ ಕೋರ್ಟಿನ ಗಮನಕ್ಕೆ ತಂದಾಗ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಸದರಿ ತಡೆ ಆಜ್ಞೆ ತೆರವು ಗೊಳಿಸಿ ಪರ್ಯಾಯ ವ್ಯವಸ್ಥೆ ಸುಗಮ ಜಾರಿಗೆ ಅನುವು ಮಾಡಿಕೊಟ್ಟಿತ್ತು.


ದಿನಾಂಕ ೧೨-೦೮-೨೦೦೪ ರಲ್ಲಿ ಕೇಂದ್ರ ಸರ್ಕಾರ ನ್ಯಾಷನಲ್ ಪಾಲಿಸಿ ಫಾರ್ ಅರ್ಬನ್ ಸ್ಟ್ರೀಟ್ ವೆಂಡರ್ಸ್ ಎಂಬ ಪಾಲಿಸಿ ರೂಪಿಸಿ ಎಲ್ಲ ರಾಜ್ಯಗಳಿಗೂ ಕಳಿಸಿಕೊಟ್ಟಿದೆ. ಸುಮಾರು ಒಂದು ಕೋಟಿ ಜನರಿರುವ ಫುಟ್ ಪಾತ್ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಕ್ಕೆ ಬುನಾದಿ ಹಾಕಿದೆ ಹೀಗೆ ಒತ್ತುವರಿದಾರರ ಪಟ್ಟಿಯಲ್ಲಿದ್ದ ಪುಟ್ ಪಾತ್ ವ್ಯಾಪಾರಿಗಳು ಸುಪ್ರೀಮ್ ಕೋರ್ಟಿನ ಮಾನವೀಯ ತೀರ್ಪಿನ ಎಚ್ಚರಿಕೆಗಳನ್ನೂ ಗಮನದಲ್ಲಿರಿಸಿಕೊಂಡು ಪರ್ಯಾಯ ವ್ಯವಸ್ಥೆಯತ್ತ ಗಮನಹರಿಸಿ ತಮ್ಮ ವ್ಯಾಪಾರಿಹಕ್ಕನ್ನು ಕಾಪಾಡಿಕೊಳ್ಳುವುದು ಉತ್ತಮ ಹೆಜ್ಜೆಯಾಗುತ್ತದೆ.

ಕೊನೆಗೊಂದು ಮಾತು

ಈ ಮೇಲಿನ ಎಲ್ಲಾ ಅಂಶಗಳ ಜೊತೆಗೆ ಸಿ.ಡಿ.ಪಿ ಜಾರಿಗೊಳಿಸಬೇಕಾದರೆ ಭೂಸ್ವಾಧೀನ ನಡೆಯ ಬೇಕು ಎಂಬ ಕಾನೂನು ಮತ್ತು ಸುಪ್ರೀಮ್ ಕೋರ್ಟ್ ತೀರ್ಪು ಇದೆ. ಸರ್ವೆ ನಕ್ಷೆಯ ಪ್ರಕಾರ ಇರುವ ರಸ್ತೆ ಅಳತೆಯನ್ನು ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಿರಿದು ಮಾಡಲಾಗದು. ಸಾರ್ವಜನಿಕ ಆಸ್ತಿಯನ್ನು ಕೇವಲ ಉಪಯೋಗದಿಂದಲೇ ಒಡೆತನ ಸ್ಥಾಪಿಸುವುದಕ್ಕೆ ಇತೀಚಿನ ಸುಪ್ರೀಮ್ ಕೋರ್ಟ್ ತೀರ್ಪು ತೆರೆ ಎಳೆದಿದೆ. ವಸತಿ ವಲಯದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಕಾನೂನು ಭಾಹಿರವಾಗುತ್ತದೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ವಾಣಿಜ್ಯ ಸಂಕೀರ್ಣ ವಲಯ ನಿಯಮಾವಳಿ ಉಲ್ಲಂಘನೆ ಆಗುತ್ತದೆ. ಸೈಟಿಗೆ ಅನುಗುಣವಾಗಿ ಮತ್ತು ಕಟ್ಟಡದ ಎತ್ತರಕ್ಕೆ ಅನುಗುಣವಾಗಿ ರಸ್ತೆ ಬದಿಯಲ್ಲಿ ಹೆಚ್ಚಿಗೆ ಸೆಟ್ ಭ್ಯಾಕ್ ಬಿಡಬೇಕಾಗುತ್ತದೆಂಬುದು ವಾಸ್ತವ ಕಾನೂನು. ಕೆಲವು ರಸ್ತೆಗಳಿಗೆ ಕನಿಷ್ಟ ಸೆಟ್ ಭ್ಯಾಕ್ ನಿಗದಿ ಪಡಿಸಿ ನಗರಾಭಿವೃದ್ದಿ ಪ್ರಾಧಿಕಾರ ವಲಯ ನಿಯಮಾವಳಿ ಜಾರಿ ಮಾಡಬಹುದಿರುತ್ತದೆ. ಈ ಎಲ್ಲಾ ಕಾನೂನುಗಳ ನಡುವೆ ಮಾನವೀಯತೆಯ ಕಾನೂನು ಉನ್ನತವಾದುದ್ದಾಗಿದ್ದು ಏಕಾಏಕಿ ಹೊಡೆದು ಹಾಕದೆ ನೋಟೀಸು ನೀಡಿ ಎಲ್ಲರ ಆಕ್ಷೇಪಣೆಗಳನ್ನು ಆಲಿಸಿ ಸೂಕ್ತ ಆದೇಶ ಬರೆಯಬಹುದಾದ ಎದೆಗಾರಿಕೆ ಮತ್ತು ತಿಳುವಳಿಕೆ ಅಧಿಕಾರಿಗಳಿಗೆ ಬರಬೇಕಿದೆ. ಅಂತಹ ಆದೇಶಗಳಿಂದ ಹೆಚ್ಚಿನ ಹಾನಿ ಆಗದೆ ಇದ್ದರೆ ಊರಿನ ಬೆಳವಣಿಗೆಗಾಗಿ ತಮ್ಮ ಜಾಗದ ದಾನ ಆದರೆ ಒಳಿತಲ್ಲವೆ?


ಎನ್.ಶ್ರೀಧರ ಬಾಬು ವಕೀಲರು

Return to "ಕಾನೂನು" page.