ಚರ್ಚೆಪುಟ:ಕರಿಬಿಬ್

ಎಳ್ಳಮವಾಸ್ಯೆ

ಬದಲಾಯಿಸಿ

ವರ್ಷದ ಜನವರಿ ಅಥವಾ ಡಿಸೆಂಬರ್ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಆಚರಿಸಲ್ಪಡುವ ಸಂಭ್ರಮದ ಆಚರಣೆ ಎಳ್ಳಮಾವಾಸ್ಯೆ. ಈ ತಿಂಗಳುಗಳು ಮುಂಗಾರಿನ ಬೆಳೆಗಳ ಕಟಾವು ಮತ್ತು ಹಿಂಗಾರಿ ಬೆಳೆಗಳ ಬಿತ್ತನೆಗಳೆರಡೂ ಏಕಕಾಲಕ್ಕೆ ನಡೆಯುವ ಸಂಭ್ರಮದ ಮತ್ತು ಸಂಧಿಗ್ದದ ಸಮಯ. ಒಂದೆಡೆ ಮುಂಗಾರಿನ ಪ್ರಮುಖ ಬೆಳೆಯಾದ ಜೋಳದ ಕಟಾವು ನಡೆಯುತ್ತಿದ್ದರೆ, ಮತ್ತೊಂದೆಡೆ ಹಿಂಗಾರು ಬೆಳೆಗಳಾದ ಶೇಂಗಾ, ಕಡಲಿ, ಸೂರ್ಯಕಾಂತಿ, ಬೇಸಿಗೆ ಸಜ್ಜೆ ಮುಂತಾದ ಬೆಳೆಗಳ ಬಿತ್ತನೆ ನಡೆಯುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಹಾಜರಾಗುವುದು ಎಳ್ಳಮವಾಸ್ಯೆಯ ಸಡಗರ. ಅಂದು ಎಲ್ಲಿ ನೋಡಿದರೂ ರಂಗುರಂಗಿನ ಬಟ್ಟೆ ತೊಟ್ಟ ಹೆಂಗಳೆಯರನ್ನು ಕರೆದೊಯ್ಯುವ ಸಾಲಂಕೃತ ಸಾಲು-ಸಾಲು ಎತ್ತಿನ ಗಾಡಿಗಳು ಎಲ್ಲರ ಗಮನ ಸೆಳೆಯುತ್ತವೆ. ಈ ಆಚರಣೆಯ ದಿವಸ ಎಳ್ಳಿನ ಅಡುಗೆಗಳ ವಿಶೇಷ.

ಅಂದು ಮೊದಲ ಕೋಳಿ ಕೂಗುವಾಗಲೇ ಊರಿಡೀ ಎಚ್ಚೆತ್ತಿರುತ್ತದೆ. ಯುವಕರು ಬಂಡಿ ತೊಳೆದು ಅದರ ಚಕ್ರಕ್ಕೆ ಕೀಲೆಣ್ಣೆ ಹಾಕಿ, ಕೊಲ್ಲಾರಿ ಕಟ್ಟಿ, ಎತ್ತುಗಳ ಮೈ ತೊಳೆದು, ಕೋಡುಗಳಿಗೆ ಬಣ್ಣ ಹಚ್ಚಿ ಕೊಂಬು ಗುಣುಸು ಹಾಕಿ, ಹಣೆ ಗೆಜ್ಜೆ, ಕೊರಳು ಗಂಟೆ ಕಟ್ಟಿ, ಮೈ ತುಂಬ ಚಿತ್ತಾರದ ಜೂಲ ಹಚ್ಚುತ್ತಿದ್ದರೆ… ಅತ್ತ ಹೆಣ್ಣು ಮಕ್ಕಳಿಂದ ಅಡುಗೆಮನೆ ಘಮಘಮಗುಟ್ಟುತ್ತಿರುತ್ತದೆ.

ಎತ್ತು-ಗಾಡಿಗಳನ್ನು ಅಲಂಕರಿಸಿ ಮನೆಯ ಎಲ್ಲರೂ ಸೇರಿ ಹೊಲದತ್ತ ಸಾಗುತ್ತಾರೆ. ಅವರು ತಂತಮ್ಮ ಹೊಲಗಳಿಗೆ `ಚರಗ’ ಆಚರಿಸಲು ಹೊರಟ ಪರಿ ಇದು. ಹಚ್ಚ ಹಸರಿನ ಬೆಳೆ ಹೊತ್ತ ಭೂಮಿ ತಾಯಿಗೆ ಇಂದು `ಸೀಮಂತ’ ಮಾಡಿ ಸಂತಸ ಹಂಚಿಕೊಳ್ಳುವ ಶುಭ ದಿನ ಈ ಎಳ್ಳು ಅಮಾವಾಸ್ಯೆ. ಅಂದು ಹೊಲಕ್ಕೆ ಯಾರೇ ಬಂದರೂ ಅವರು ಅತಿಥಿಗಳು.

ಎಳ್ಳಮವಾಸ್ಯೆಯ ಅಡುಗೆ ವೈವಿಧ್ಯ ಅಪಾರ. ಹಿಂದಿನ ದಿನ ಇಡೀ ರಾತ್ರಿ ತಯಾರಿಸಿದ ಎಳ್ಳು ಹೋಳಿಗೆ, ಎಳ್ಳು ಬಜಿ, ಕಡಕ್ ಸೆಜ್ಜೆ ರೊಟ್ಟಿ, ಕರಿಗಡಬು, ತರಾವರಿ ಮಸಾಲೆ ಉಸುಳಿ, ಖಾರಸಾರು, ಎಣ್ಣೆಗಾಯಿ ಬದನೆಕಾಯಿ ಪಲ್ಯೆ, ಕೆನೆ ಮೊಸರು, `ಚರಗ’ದ ನೈವೇದ್ಯಕ್ಕೆ ತಯಾರಿಸಿದ ಜೋಳ, ಅವರೆ, ಅಕ್ಕಿ ಕಿಚಡಿ. ಈ ಎಲ್ಲಾ ಭಕ್ಷ್ಯಾನ್ನಗಳ ಬಿದಿರು ಬುಟ್ಟಿ ಭರ್ತಿಯಾಗಿ ಬಂಡಿ ಏರಿರುತ್ತವೆ. ಹೊಲಕ್ಕೆ ಸಾಗುವ ಬಂಡಿಗಳ ಸಂಭ್ರಮ ಮಾತಿಗೆ ನಿಲುಕದ್ದು. ನಾ ಮುಂದೆ- ತಾ ಮುಂದೆ ಎಂಬ ಸ್ಪರ್ಧೆಯೂ ನಡೆಯುತ್ತದೆ. ಹೊಸದಾಗಿ ಮದುವೆಯಾದ ಜೋಡಿಗಳೂ ಅಂದು ಈ ಆಚರಣೆಯಲ್ಲಿ ಪಾಲ್ಗೊಳ್ಳಬೇಕು.

‘ಕಡಬು ಬಜಿ’ ಇಂದಿನ ಅತ್ಯಂತ ವಿಶೇಷ ತಿನಿಸು. ಪ್ರತಿಯೊಂದು ಕಾಳು, ಕಾಯಿ ಪಲ್ಲೆ ಮತ್ತು ತರಕಾರಿಗಳನ್ನು ಸೇರಿಸಿ ಬೇಯಿಸಿದ್ದೇ ಕಡಬು ಬಜಿ. ಎಲ್ಲ ಪದಾರ್ಥಗಳನ್ನೂ ಸಹ ಸೇರಿಸುವುದರಿಂದ ಇದು ಅತ್ಯಂತ ರುಚಿಯಾಗಿರುತ್ತದೆ. ಅಲ್ಲದೆ ಜೋಳದ ಕಬ್ಬು (ಕಾಂಡ) ತಿನ್ನುವುದು ಇಂದಿನ ದಿನದ ಪದ್ಧತಿ. ಬೇರೆ ದಿನಗಳಲ್ಲಿಯೂ ತಿನ್ನುತ್ತಾರೆ ಆದರೆ ಎಳ್ಳಮವಾಸ್ಯೆಯಂದು ತಿಂದರೆ ತುಂಬಾ ರುಚಿಯಾಗಿರುತ್ತದೆ ಎಂಬುದು ಹಿರಿಯರ ಅನಿಸಿಕೆ.

ಹೊಲಕ್ಕೆ ಸಾಗಿದ ನಂತರ ಬನ್ನಿ ಗಿಡದ ಕೆಳಗಡೆ ಭರಮ ದೇವರೆಂದು ಕರೆಯುವ ಐದು ಕಲ್ಲುಗಳನ್ನು ಇಟ್ಟು ಪೂಜಿಸುತ್ತಾರೆ. ನೈವೇದ್ಯವನ್ನು ಹೊಲದ ನಾಲ್ಕು ದಿಕ್ಕಿಗೂ `ಉಲ್ಲುಲ್ಲಗೋ… ಚಳಂಬ್ರಿಗೋ’ ಎನ್ನುತ್ತಾ ಉಗ್ಗುತ್ತಾರೆ. ಹೊಲದಲ್ಲಿ ಬೆಳೆದಿರುವ ಜೋಳದ ತೆನೆಗಳಿಗೆ ಅರಿಶಿನ -ಕುಂಕುಮ ಇಟ್ಟು, ಆರತಿ ಬೆಳಗಿ ಮನೆಯ ಹ್ಗಿರಿಯರು ಅಥವಾ ಹೆಣ್ಣು ಮಕ್ಕಳು ಪೂಜಿಸುತ್ತಾರೆ, ಅಲ್ಲದೆ ಹೊಲದಲ್ಲಿರುವ ಬಾವಿ, ಬೋರ್ ವೆಲ್ ಗಳಿಗೂ ಸಹ ಪೂಜಿಸಲಾಗುತ್ತದೆ. ಹೊಲದಲ್ಲಿರುವ ಇತರ ಬೆಳೆಗಳಿಗೂ ಸಹ ಪೂಜಿಸಲಾಗುತ್ತದೆ. ಎಳ್ಳಮವಾಸ್ಯೆಯ ಮತ್ತೊಂದು ವಿಶೇಷವೆಂದರೆ ಅಂದು ಜೇನು ತಿಂದರೆ ಒಳ್ಳೆಯದೆಂಬ ಭಾವನೆಯಿದೆ. ಗಂಡಸರು ಹೊಲದಲ್ಲಿ ಜೇನು ಕಟ್ಟಿದ್ದರೆ ಕಿತ್ತು ತಂದು ತುಪ್ಪವನ್ನು ಎಲ್ಲರಿಗೂ ಹಂಚುತ್ತಾರೆ. ಹೊಲದಲಿ ಜೇನಿರುವ ಸ್ಥಳ ಮುಂಚಿತವಾಗಿ ತಿಳಿದಿದ್ದರೂ ಸಹ ಎಳ್ಳಮವಾಸ್ಯೆಯ ದಿವಸವೇ ಕೀಳುವುದು ಪದ್ಧತಿ. ಇದಾದ ನಂತರ `ಹುಲಸಾಗಿ ಬೆಳೆ ಬರಲಿ’ ಎಂದು ಭೂಮಿ ತಾಯಿಗೆ ಉಡಿ ತುಂಬಿ ಎಲ್ಲರೂ ಒಂದೆಡೆ ಕುಳಿತು ಊಟ ಮಾಡುತ್ತಾರೆ. ಸಂಜೆಯಾಗುತ್ತಿದ್ದಂತೆ ಚಕ್ಕಡಿಗಳು ಮತ್ತೆ ಒಂದೊಂದಾಗಿ ಊರ ದಾರಿ ಹಿಡಿಯುತ್ತವೆ.

Return to "ಕರಿಬಿಬ್" page.