ಚತುರೋಪಾಯಗಳು ಎಂದರೆ ಕಾರ್ಯಸಿದ್ಧಿಗಾಗಿ ರಾಜ ಅನುಸರಿಸಬೇಕಾದ ನಾಲ್ಕು ಉಪಾಯಗಳು, ಅನುಕ್ರಮವಾಗಿ 1 ಸಾಮ, 2 ದಾನ, 3 ಭೇದ ಮತ್ತು 4. ದಂಡ. ಭಾರತೀಯ ರಾಜನೀತಿಶಾಸ್ತ್ರದಲ್ಲಿ ರಾಜರ ಪರಸ್ಪರ ಸಂಬಂಧವನ್ನು ಕುರಿತ ತತ್ವಗಳನ್ನು ವಿವೇಚಿಸುವಾಗ ಇವುಗಳ ಉಲ್ಲೇಖವನ್ನು ಪ್ರಾಯಿಕವಾಗಿ ನೋಡುತ್ತೇವೆ. ಕೌಟಿಲ್ಯನ ಅರ್ಥಶಾಸ್ತ್ರ, ಮನುಧರ್ಮಶಾಸ್ತ, ಯಾಜ್ಞ್ಯವಲ್ಕ್ಯ ಸ್ಮøತಿ, ಕಾಮಂದಕೀಯ ನೀತಿಸಾರ ಮುಂತಾದ ಶಾಸ್ತ್ರಗ್ರಂಥಗಳಲ್ಲಿ ಮಾತ್ರವಲ್ಲ ಮಹಾಭಾರತದ ಶಾಂತಿಪರ್ವದಲ್ಲಿ ಬರುವ ರಾಜಧರ್ಮವರ್ಮ ಮತ್ತು ಅಗ್ನಿ ಪುರಾಣ, ಮತ್ಸ್ಯಪುರಾಣ ಮುಂತಾದ ಪುರಾಣಗಳಲ್ಲೂ ಈ ವಿಷಯ ವಿವೇಚಿಸಲ್ಪಟ್ಟಿದೆ.

ಮಿಕ್ಕ ರಾಜರನ್ನು ತನ್ನ ಹಿತಾನುಸಾರ ಇಟ್ಟುಕೊಳ್ಳಲು ಭೂಪತಿಯಾದವ ಮೊದಲು ಸಾಮವನ್ನು ಮಾತ್ರ ಬಳಸಿನೋಡಬೇಕು. ಸಾಮವೆಂದರೆ ಒಳ್ಳೆಯ ಮಾತಿನ ಸಂಧಾನ, ಉಪಕಾರಸ್ಮರಣೆ, ಮೃದುಮಧುರಭಾಷಣ, ಸತ್ಕಾರ, ನಿನ್ನವನೇ ನಾನೆಂದು ಹಿತೈಷಿಯಂತೆ ಹೇಳುವಿಕೆ-ಇವೆಲ್ಲ ಸಾಮದ ಚಾತುರ್ಯ ಪ್ರಕಾರಗಳು, ಸಾಧುಗಳೊಡನೆ ತಥ್ಯವಾದ ಮಾತುಕತೆಗಳನ್ನೇ ಬಳಸಿದರೆ ಅಸಾಧುಗಳೊಡನೆ ಆತಥ್ಯ ಅಥವಾ ಸುಳ್ಳಾದ ನಂಬಿಕೆ ಹುಟ್ಟಿಸಿದರೂ ತಪ್ಪಲ್ಲ. ಆದರೆ ಅಸಾಧುಗಳು ಸಾಮಕ್ಕೆ ಬಗ್ಗದಿರುವುದೇ ಹೆಚ್ಚು.

ಆಗ ಎರಡನೆಯ ಉಪಾಯವಾದ ದಾನವನ್ನು ಪ್ರಯೋಗಿಸಬೇಕು. ಸಾಧುಗಳಿರಲಿ, ಅಸಾಧುಗಳಿರಲಿ, ದಾನಕ್ಕೆ ಒಲಿಯುವುದು ಸಹಜವೇ. ಹಿಂದೆ ವಶಪಡಿಸಿಕೊಂಡ ಧನದ ಮರುಪಾವತಿ ಅಥವಾ ಪ್ರತಿದಾನ, ಹೊಸದಾಗಿ ಅವನ ಮನವೊಲಿಸಲು ಕೊಡುವ ಧನಕನಕಾದಿಗಳು, ಯಾವುದೋ ನಿಬಂಧನೆಗೆ ಒಳಪಟ್ಟು ಅವನಿಗೆ ಕೊಡುವ ವಿಶೇಷ ಸವಲತ್ತು-ಇವೆಲ್ಲ ದಾನೋಪಾಯದಲ್ಲಿ ಸೇರ್ಪಡೆಯಾಗುತ್ತವೆ.

ಸಾಮ, ದಾನಗಳೆರಡರಿಂದಲೂ ಸಾಧಿಸಲಾಗದುದಕ್ಕೆ ಭೇದವನ್ನು ಪ್ರಯೋಗಿಸಬೇಕು. ಭೇದವೆಂದರೆ ಒಡಕನ್ನು ಉಂಟು ಮಾಡುವುದು, ಸ್ನೇಹವನ್ನು ತಪ್ಪಿಸುವುದು. ಇಬ್ಬರಲ್ಲಿ ಒಂದಿಲ್ಲೊಂದು ರೀತಿಯಿಂದ ಕಲಹ ಉಂಟುಮಾಡುವುದು, ಶತ್ರುವಿನ ಅನುಚರರಿಗೂ ಪ್ರಭುವಿಗೂ ತಂತಮ್ಮಲ್ಲಿಯೆ ಮೈಮನಸ್ಸು ಬೆಳೆಸುವುದು-ಇವೇ ಮುಂತಾದವು ಭೇದೋಪಾಯದ ಪರಿಗಳು. ಮುದ್ರಾರಾಕ್ಷಸ ನಾಟಕದಲ್ಲಿ ಚಾಣಕ್ಯ ರಾಕ್ಷಸರಿಬ್ಬರೂ ಭೇದೋಪಾಯವನ್ನು ಹೆಚ್ಚಾಗಿ ಆಶ್ರಯಿಸುತ್ತಾರೆ.

ಈ ಮೂರಕ್ಕೂ ಸಗ್ಗದ ವೈರಿಯನ್ನು ದಾರಿಗೆ ತರಲು ನಾಲ್ಕನೆಯದಾದ ದಂಡೋಪಾಯವೇ ಗತಿ. ದಂಡ ಎಂದರೆ ದಂಡನೆ ಎಂದರ್ಥ, ಅರ್ಥಹರಣ, ಪರಿಪರಿಯ ಕ್ಲೇಶವನ್ನು ತಂದೊಡ್ಡುವುದು, ಯುದ್ಧದಲ್ಲಿ ಸೋಲಿಸುವುದು, ಕೊಲೆ-ಇವೆಲ್ಲ ದಂಡದ ಪ್ರಕಾರಗಳು, ದುಷ್ಟರನ್ನು ಹತೋಟಿಯಲ್ಲಿಡಲು ದಂಡವೇ ಅಗತ್ಯ. ದಂಡಯೋಗ್ಯನಿಗೆ ಸಾಮದಾನಗಳನ್ನು ಬಳಸುವುದು ತಪ್ಪಾಗುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: