ಚಟುವಟಿಕೆ ಎಂದರೆ ಜೀವನವನ್ನು ಅರ್ಥಪೂರ್ಣವೂ ಉಪಯುಕ್ತವೂ ಆಗುವಂತೆ ಮಾಡಿಕೊಳ್ಳಲು ವಿದ್ಯಾರ್ಥಿಗಳು, ಇತರರು, ಶಾಲೆಯ ಒಳಗೂ ಹೊರಗೂ ಕೈಗೊಳ್ಳುವ ಕಾರ್ಯಕಲಾಪ (ಆ್ಯಕ್ಟಿವಿಟೀಸ್).[೧][೨] ಶಾಲೆಗಳಲ್ಲಂತೂ ಇವುಗಳ ಪ್ರಾಮುಖ್ಯ ಹೇಳತೀರದು. ಮನಸ್ಸಿಗೆ ಬಂದುದನ್ನು, ಬುದ್ದಿಗೆ ಹೊಳೆದುದನ್ನು, ಮಾಡಿನೋಡುವ ಕುತೂಹಲ ಮಕ್ಕಳಲ್ಲಿ ಸಹಜವಾಗಿರುತ್ತದೆ. ಹಾಗೆ ಮಾಡಿನೋಡಿದಾಗಲೆ ಅಮೂರ್ತವಾಗಿ ತಾವು ಕಲಿತ ವಿಷಯಗಳು ಅವರ ಅನುಭವಕ್ಕೆ ಸೇರಿಹೋಗಿ ಅವರವಾಗುತ್ತವೆ. ಓದುವ ಮಕ್ಕಳಿಗೆ ಒಂದಿಲ್ಲೊಂದು ಬಗೆಯ ಚಟುವಟಿಕೆಯನ್ನು ಒದಗಿಸುವ ಪರಿಹಾರ ಬಹಳ ಹಿಂದಿನಿಂದಲೂ ನಡೆದು ಬರುತ್ತಿದೆ. ಆದರೆ ಚಟುವಟಿಕೆಗಳನ್ನೇ ಬೋಧನಮಾರ್ಗವಾಗಿ ಬಳಸಲು ಪ್ರಾರಂಭಿಸಿದುದು ಈಚೆಗೆ. ಅಂಥ ಶಾಲೆಗಳನ್ನು ಚಟುವಟಿಕೆ ಶಾಲೆಗಳೆಂದೇ ಕರೆಯುತ್ತಾರೆ.

ಪಠ್ಯ ಚಟುವಟಿಕೆಗಳು ಬದಲಾಯಿಸಿ

ಅಭ್ಯಾಸ ಪತ್ರಿಕೆಯಂತೆ ಆಯಾ ವಿಷಯಗಳ ಪಾಠ ಕಲಿಸಲು ಬೇಕಾಗುವ ಚಟುವಟಿಕೆಗಳನ್ನು ಪಠ್ಯಚಟುವಟಿಕೆಗಳೆಂದು ಕರೆಯಲಾಗುತ್ತದೆ. ಗಣಿತ, ಭಾಷೆ, ಸಮಾಜವಿಜ್ಞಾನ, ಶಾಸ್ತ್ರೀಯ ವಿಷಯ, ಚಿತ್ರಕಲೆ, ಇತಿಹಾಸ, ಭೂಗೋಳ ಮುಂತಾದ ವಿಷಯಗಳ ಪಾಠಗಳು ಒಂದಲ್ಲೊಂದು ಹೊಂದಿಕೆಯ ಪೂರ್ವಯೋಜಿತ ಚಟುವಟಿಕೆಯ ಮುಖಾಂತರ ನಡೆಯಬಹುದು. ರೇಖಾಗಣಿತ ಅಥವಾ ಕ್ಷೇತ್ರಫಲ ಲೆಕ್ಕದಲ್ಲಿ ಆಯತದ ಕಲ್ಪನೆಗಾಗಿ ತರಗತಿಯ ವಿದ್ಯಾರ್ಥಿಗಳು ತಮ್ಮ ಕೋಣೆಯಲ್ಲಿ ನಿರೀಕ್ಷಣೆ ಮಾಡುತ್ತ ಉಪಕರಣಗಳನ್ನು ಉಪಯೋಗಿಸುತ್ತ ಅದರ ಉದ್ದ, ಅಗಲಗಳನ್ನು ಅಳೆದು ನೋಡುವ ಚಟುವಟಿಕೆಯಲ್ಲಿ ತೊಡಗಬಹುದು. ಭೂಗೋಳ, ವಿಜ್ಞಾನ, ಭೂಮಿತಿ ವಿಷಯಗಳನ್ನು ಅರಿಯಲು ಶಾಲೆಯ ತೋಟ, ಸುತ್ತಲಿನ ಉದ್ಯಾನವನಗಳೇ ಚಟುವಟಿಕೆಗಳ ಕ್ಷೇತ್ರಗಳಾಗಿರುತ್ತವೆ. ಪಾಠಕ್ಕಿಂತ ಆ ಪಾಠ ನಡೆಯಿಸುವ ಚಟುವಟಿಕೆಯ ವಿಧಾನವೇ ಹೆಚ್ಚಿನದು. ಕೈಕೆಲಸ, ಹೊಲಿಗೆ, ಸಸ್ಯವಿಜ್ಞಾನ ಮುಂತಾದ ವಿಷಯಗಳಲ್ಲಂತೂ ಚಟುವಟಿಕೆಯ ಮುಖಾಂತರವೇ ಸಾಗಬೇಕು. ವಿಜ್ಞಾನ ಬೋಧನೆಯಲ್ಲಂತೂ ಚಟುವಟಿಕೆಯ ಮುಖಾಂತರವೇ ಸಾಗಬೇಕು. ವಿಜ್ಞಾನ ಭೋಧನೆಯಲ್ಲಂತೂ ಪ್ರಯೋಗ ಶಾಲೆಗಳಲ್ಲಿ, ಶಾಲೆಯ ಹೊರಗಡೆಗಳಲ್ಲಿ ನಡೆಸುವ ಅನೇಕಾನೇಕ ಪ್ರಯೋಗಗಳೇ ಸಮರ್ಪಕ ಚಟುವಟಿಕೆಗಳಾಗುತ್ತದೆ.

ಸಹಪಠ್ಯಚಟುವಟಿಕೆಗಳು ಮತ್ತು ಪಠ್ಯೇತರ ಚಟುವಟಿಕೆಗಳು ಬದಲಾಯಿಸಿ

ನವಶಿಕ್ಷಣ ಮಾಲಿಕೆಯಲ್ಲಿ ಅಭ್ಯಾಸ ಕೊಟ್ಟ ಅಭ್ಯಾಸ ಪ್ರಕ್ರಿಯೆಯಂತೆ ಕೆಲ ವಿಷಯಗಳನ್ನು ಕಡ್ಡಾಯವಾಗಿ ಪಠ್ಯವಿಷಯಗಳೆಂತಲೇ ಅಭ್ಯಾಸ ಮಾಡಬೇಕಾಗುತ್ತದೆ. ಶಿಕ್ಷಣ ಪರಿಪೂರ್ಣ ಜೀವನಕ್ಕೆ ಹೊಂದುವಂತಾಗಲು ಆ ವಿಷಯಗಳನ್ನು ಅರಿಯಲು ಶಾಲೆಯ ಹೊರಗೆ ಹೋಗಬೇಕಾಗುತ್ತದಲ್ಲದೆ ಹಾಗೆ ಮಾಡುವುದು ಹೊಸ ಶೈಕ್ಷಣಿಕ ದೃಪ್ಟಿಯಿಂದ ಅತಿ ಅವಶ್ಯ. ಪ್ರವಾಸದಿಂದ ಬರುವ ಅನುಭವವೂ ಜ್ಞಾನವೂ ಯಥೇಚ್ಛ. ಶಾಲೆಯೊಳಗಿನ ಶಿಕ್ಷಣಕ್ಕೆ ಇದು ಪೂರಕವಾಗುತ್ತದೆ. ನಾಡಿನ ಹಾಗೂ ಜನಾಂಗದ ಇತಿಹಾಸ ಪರಂಪರೆ ಮತ್ತು ಸಂಸ್ಕøತಿಯನ್ನು ತಿಳಿದುಕ್ಕೊಳ್ಳಲು ರಾಷ್ಟ್ರೀಯ ದಿನಾಚರಣೆ, ಮಹಾಪುರುಷರ ಜಯಂತಿ, ಭಾಷಣ, ಮನೋರಂಜನೆ ಕಾರ್ಯಕ್ರಮ ಮುಂತಾದ ಚಟುವಟಿಕೆಗಳು ನೆರವಾಗುತ್ತವೆ. ಪ್ರವಾಸ, ವಸ್ತುಸಂಗ್ರಹಾಲಯ ದರ್ಶನ ಇಂಥ ಕಾರ್ಯಕ್ರಮಗಳೂ ಅಗತ್ಯವಾಗುತ್ತವೆ. ಮಾಡುತ್ತ ಕಲಿ; ಕಲಿಯುತ್ತ ಮಾಡು ಎಂಬ ಶಿಕ್ಷಣದ ಹೊಸ ತತ್ವವನ್ನು ಕಾರ್ಯಾಗತ ಮಾಡಲು ವಿದ್ಯಾರ್ಥಿ ಸಂಘ, ವಿದ್ಯಾರ್ಥಿ ಸಧನ, ಮಂತ್ರಿ ಮಂಡಲ, ಚರ್ಚಾಕೂಟ, ಸೇವಾ ಸಂಘ, ಭಾಷಣ ಮಂಡಲ, ಸಹಕಾರ ಸಂಘ, ಸಹಕಾರ ಅಂಗಡಿ, ಬಾಲಚಮೂ ಚಟುವಟಿಕೆ ಮುಂತಾದ ವಿದ್ಯಾರ್ಥಿ ಸಂಸ್ಥೆಗಳು ನೆರವಾಗುತ್ತಿವೆ. ಇಂಥ ಸಂಸ್ಥೆಗಳ ಆಡಳಿತವನ್ನು ವಿದ್ಯಾರ್ಥಿಗಳೇ ತಮ್ಮ ತಮ್ಮೊಳಗೆ ವಹಿಸಿಕೊಂಡು ಸಾಗಿಸುತ್ತಾರೆ. ಇಂಥ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಯ ಕೈ, ಮೈ, ಮನಸ್ಸು ಪಳಗುತ್ತವೆ. ವ್ಯಕ್ತಿತ್ವದ ಓರೆ ಕೋರೆಗಳು ನೇರವಾಗುತ್ತವೆ. ಸಹಬಾಳ್ವೆಯ ಮರ್ಮ ತಿಳಿಯುತ್ತದೆ.

ಶಿಶುವಿಹಾರ ಮತ್ತು ಪ್ರಾಥವಿಕ ಶಾಲೆಗಳಲ್ಲಿ ಚಟುವಟಿಕೆಗಳು ಬಹುಮಟ್ಟಿಗೆ ಮಕ್ಕಳ ಆಸಕ್ತಿಯ ಆಟಗಳ ರೂಪದಲ್ಲಿದ್ದರೆ ಮೇಲ್ದರ್ಜೆಯ ಶಿಕ್ಷಣ ಸಂಸ್ಥೆಗಳಲ್ಲಿ ಅವು ಉದ್ದೇಶಪೂರ್ವಕವೆನಿಸುವ ಕಾರ್ಯಕ್ರಮಗಳ ರೂಪವನ್ನು ತಾಳುತ್ತವೆ; ನಾಟಕ, ನೃತ್ಯ, ಲೇಖನ, ಚರ್ಚೆ, ವಿಚಾರಗೋಷ್ಠಿ, ಪ್ರಕಟನೆ, ಸಂಶೋಧನೆ―ಇವೆಲ್ಲ ಅಂಥ ಚಟುವಟಿಕೆಗಳಲ್ಲಿ ಹಲವು.

ಒಟ್ಟಿನಲ್ಲಿ ಎಲ್ಲ ಹಂತದ ಶಿಕ್ಷಣ ಸಂಸ್ಥೆಗಳಲ್ಲೂ ಒಂದಲ್ಲ ಒಂದು ರೀತಿಯ ಚಟುವಟಿಕೆಯನ್ನು ಅಳವಡಿಸಲು ಅವಕಾಶವಿದೆ. ಇಂದು ಶಿಕ್ಷಣಕ್ಕೆ ಅಂಟಿಕೊಂಡು ಬಂದಿರುವ ಬರೀ ಪುಸ್ತಕದ ಕಲಿವು ಎಂಬ ಅಪಖ್ಯಾತಿಯನ್ನು ಹೋಗಲಾಡಿಸಲು ನಮ್ಮ ಶಿಕ್ಷಣ ಸಂಸ್ಥೆಗಳು ಎಲ್ಲ ವಿಷಯಗಳಲ್ಲೂ ಎಲ್ಲ ಮಟ್ಟದಲ್ಲೂ ಸೂಕ್ತ ರೀತಿಯ ಹಾಗೂ ಫಲದಾಯಕವೆನ್ನಬಹುದಾದ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ.

ಉಲ್ಲೇಖಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: