ಚಕ್ಕೆ ಬದಲಾಯಿಸಿ

ಸುವಾಸನೆಯುಕ್ತ ಮಸಾಲೆ ಪದಾರ್ಥವಾದ ಚಕ್ಕೆಯನ್ನು ಶ್ರೀಲಂಕಾದಲ್ಲಿ ಅತ್ಯಧಿಕ ಬೆಳೆಯಲಾಗುತ್ತಿದೆ. ಅಲ್ಲಿಗೆ ಹೋಲಿಸಿದರೆ ಭಾರತದಲ್ಲಿ ಬೆಳೆಯುವ ಪ್ರಮಾಣ ಕಡಿಮೆಯೇ. ದಾಲ್ಚಿನಿ ಮರಗಳು ೫೦ ಅಡಿ ಎತ್ತರದವರೆಗೆ ಬೆಳೆಯುತ್ತವೆ. ಚಕ್ಕೆಯ ಬೀಜಗಳನ್ನು ಬಳಸಿ ಮನೆಯ ಹಿತ್ತಲಿನಲ್ಲಿ ಮಡಕೆಗಳಲ್ಲಿಯೂ ಗಿಡಗಳನ್ನು ಬೆಳೆಸಬಹುದು. ೫-೬ ಮೀಟರ್ ನಷ್ಟು ಎತ್ತರದ ಗಿಡಗಳು ಮಡಕೆಗಳು ಅಥವಾ ಪಾಟ್ ಗಳಲ್ಲಿ ಬೆಳೆಯಬಲ್ಲವು. ಇದಕ್ಕಿಂತಲೂ ಎತ್ತರವಾಗಿ ಬೆಳೆಸಬೇಕೆಂದರೆ ಭೂಮಿಯಲ್ಲಿಯೇ ನೆಡಬೇಕು. ಮರದ ಕಾಂಡ ಮತ್ತು ತೊಗಟೆ ತುಂಬಾ ಪರಿಮಳದಿಂದ ಕೂಡಿರುತ್ತದೆ. ಚಕ್ಕೆಯ ಮರ ತನ್ನ ಸುವಾಸನೆಯಿಂದ ಪಕ್ಷಿಗಳನ್ನು ಕೂಡಾ ತನ್ನೆಡೆಗೆ ಸೆಳೆಯುತ್ತದೆ. ಮನೆಯಂಗಳದಲ್ಲಿ ಅಥವಾ ಮಣ್ಣಿನ ಚಟ್ಟಿಗಳಲ್ಲಿ ಬೆಳೆದ ಚಕ್ಕೆಯ ಗಿಡಗಳಿಗೆ ಕೀಟಭಾದೆಯಾಗದಂತೆ ಆಗಾಗ ಬೇವಿನ ಎಣ್ಣೆಯನ್ನು ಸಿಂಪಡಿಸಬೇಕು.

ಚಕ್ಕೆಯು ಮಧುಮೇಹದ ವಿರುದ್ಧ ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ. ದಿನನಿತ್ಯದ ಆಹಾರದಲ್ಲಿ ಚಕ್ಕೆಯನ್ನು ಅರ್ಧ ಟೀ ಚಮಚದಷ್ಟು ಬಳಸುವುದರಿಂದ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ,ಮಧುಮೇಹವನ್ನು ನಿಯಂತ್ರಿಸಬಹುದು.

ಚಕ್ಕೆ ನಮ್ಮಲ್ಲಿ ಮನೆಮದ್ದಿನಂತೆ. ಇದನ್ನು ಹಲ್ಲುನೋವು ನಿವಾರಣೆಗಾಗಿ ಮತ್ತು ಬಾಯಿಯಿಂದ ಬರುವ ದುರ್ವಾಸನೆಯನ್ನು ತಡೆಗಟ್ಟಲು ಹಳ್ಳಿಗಳಲ್ಲಿ ಬಳಸುತ್ತಾರೆ. ಶೀತ, ಜ್ವರ, ಅತ್ಯಂತ ದೀರ್ಘಕಾಲದ ಕೆಮ್ಮು, ನೆಗಡಿ ಮತ್ತು ಗಂಟಲು ನೋವು ನಿವಾರಿಸಲು, ಒಂದು ಟೀ ಚಮಚ ಚಕ್ಕೆ ಪುಡಿಯನ್ನು ೨ ಟೀ ಚಮಚ ಜೇನುತುಪ್ಪದೊಂದಿಗೆ ನಿಯಮಿತವಾಗಿ ಮೂರು ದಿನಗಳವರೆಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ದಾಲ್ಚಿನಿಯು ಮೆದುಳಿನ ಚಟುವಟಿಕೆಗಳನ್ನು ಹೆಚ್ಚಿಸಿ, ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಜೀರ್ಣಕ್ರಿಯೆಗೂ ಬಹಳ ಸಹಕಾರಿ. ಅಜೀರ್ಣ, ವಾಕರಿಕೆ, ವಾಂತಿ ಮತ್ತು ಅತಿಸಾರ ಇವುಗಳನ್ನು ಗುಣಪಡಿಸುವಲ್ಲಿ ಹೆಚ್ಚು ಪರಿಣಾಮಕಾರಿ. ತಲೆನೋವು ಇರುವವರು ಚಕ್ಕೆಯನ್ನು ನುಣುಪಾಗಿ ಪುಡಿ ಮಾಡಿ ಇಟ್ಟುಕೊಳ್ಳಬೇಕು.

"https://kn.wikipedia.org/w/index.php?title=ಚಕ್ಕೆ&oldid=682360" ಇಂದ ಪಡೆಯಲ್ಪಟ್ಟಿದೆ