ಚಂದ್ರನಾಥ ಸ್ವಾಮಿ ಗುರುರಾಯ ಬಸದಿ, ಹಿರಿಯಂಗಡಿ

ಶ್ರೀ ಚಂದ್ರನಾಥ ಸ್ವಾಮಿ ಗುರುರಾಯ ಬಸದಿ, ಹಿರಿಯಂಗಡಿ

ಪೀಠಿಕೆ ಬದಲಾಯಿಸಿ

ಹಿರಿಯಂಗಡಿಯಲ್ಲಿ ಒಂಭತ್ತು ಜೈನ ಬಸದಿಗಳಿವೆ. ಅವುಗಳ ಪೈಕಿ ಪ್ರಮುಖ ಬಸದಿಯೆಂದರೆ ಹಲ್ಲರ ಅಥವಾ ಅಮ್ಮನವರ ಬಸದಿ. ಇದರ ಎಡಬದಿಗೆ ಶ್ರೀ ಗುರುರಾಯರ ಬಸದಿ ಇದೆ. ಇದು ಕಾರ್ಕಳ ತಾಲೂಕು, ಕಡಬ ಗ್ರಾಮದ ಹಿರಿಯಂಗಡಿಯಲ್ಲಿದೆ. ಇಲ್ಲಿ ಪೂಜಿಸಲ್ಪಡುವ ಮೂಲ ನಾಯಕ ಶ್ರೀ ಚಂದ್ರನಾಥ ಸ್ವಾಮಿ. ಇದರ ಎಡ ಭಾಗದಲ್ಲಿ ಯಾವ ಬಸದಿಯೂ ಇಲ್ಲ. ಬಸದಿಯು ಕಾರ್ಕಳ ಮಠಕ್ಕೆ ಸೇರಿದುದು. ಬಸದಿಯ ಒಳಭಾಗ ಶಿಲಾಮಯವಾಗಿದ್ದು ಮಾಡು ಹಂಚಿನ ಹೊದಿಕೆಯದ್ದಾಗಿದೆ.

ಪೂಜಾ ವಿಧಿವಿಧಾನ ಬದಲಾಯಿಸಿ

ಈ ಬಸದಿಗೆ ಯಾವುದೇ ಮೇಗಿನ ನೆಲೆ ಮತ್ತು ಅಲ್ಲಿ ತೀರ್ಥಂಕರ ಪೂಜೆ ಇಲ್ಲ. ಬಸದಿಯಲ್ಲಿ ಶ್ಯಾಮ ಯಕ್ಷ ಮತ್ತು ಜ್ವಾಲಾಮಾಲಿನಿ ಯಕ್ಷಿಯರ ಮೂರ್ತಿಗಳಿವೆ. ಪದ್ಮಾವತಿ ಅಮ್ಮನವರ ಮೂರ್ತಿ ಇಲ್ಲ. ಬ್ರಹ್ಮದೇವರ ಮೂರ್ತಿ ಇದೆ.

ವಾಸ್ತುಶಿಲ್ಪ ಬದಲಾಯಿಸಿ

ಬಸದಿಯ ಎದುರು ಮಾನಸ್ತಂಭ ಇದೆ. ಈ ಬಸದಿಯನ್ನು ಪ್ರವೇಶಿಸಿದಾಗ ಇದರ ಎಡ ಮತ್ತು ಬಲ ಬದಿಗಳಲ್ಲಿರುವ ಗೋಪುರಗಳನ್ನು ಕುಳಿತುಕೊಳ್ಳಲು ಉಪಯೋಗಿಸುತ್ತಾರೆ. ಬಸದಿಯಲ್ಲಿ ಕಾರ್ಯಾಲಯ, ಮುನಿಗಳ ಮುನಿವಾಸ ಅಥವಾ ಅಂತಹ ಕೋಣೆಗಳು ಇಲ್ಲ. ಇದರ ಎದುರಿನ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ದ್ವಾರಪಾಲಕರ ಚಿತ್ರಗಳಿವೆ. ಕಲ್ಲಿನ ಮೂರ್ತಿಗಳಿಲ್ಲ. ಗೊಡೆಗಳ ಮೇಲೆ ಯಾವುದೇ ರೀತಿಯ ಚಿತ್ರಗಳು ಕಂಡು ಬರುವುದಿಲ್ಲ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇದೆ. ಅದಕ್ಕೆ ಮುಚ್ಚಿಗೆ ಸಹ ಇದೆ. ಅಲ್ಲಿಂದ ಜಯಘಂಟೆ, ಜಾಗಟೆಗಳನ್ನು ತೂಗು ಹಾಕಲಾಗಿದೆ. ಕಂಬಗಳ ಮೇಲೆ ಶಿಲ್ಪಕಲಾಕೃತಿಗಳು, ರೇಖಾ ಚಿತ್ರಗಳು, ಡಿಸೈನ್ಗಳು ಇತ್ಯಾದಿಗಳೇನು ಇಲ್ಲ. ಈ ಬಸದಿಯಲ್ಲಿ ತೀರ್ಥಮಂಟಪ ಎಂಬುದೇ ಇಲ್ಲ. ಆದರೆ ಘಂಟಾ ಮಂಟಪ ಎನ್ನುವುದು ಇದೆ. ಗಂಧ ಕುಟಿ ಇಲ್ಲ. ಸಂಬಂಧಪಟ್ಟ ಗಣಧರಪಾದ, ಶ್ರುತ, ಬ್ರಹ್ಮದೇವರು ಇತ್ಯಾದಿ ಮೂರ್ತಿಗಳೂ ಸಹ ಇಲ್ಲ. ಅದರೆ ಜ್ವಾಲಾಮಾಲಿನಿ ಯಕ್ಷಿಯ ಸುಂದರ ಮೂರ್ತಿ ಇದೆ. ಅದಕ್ಕೆ ನಿತ್ಯವೂ ಪೂಜೆ ನಡೆಯುತ್ತದೆ. ಇಲ್ಲಿ ಪದ್ಮಾವತಿ ಅಮ್ಮನವರ ಮೂರ್ತಿ ಇಲ್ಲದೆ ಇರುವುದರಿಂದ ಸಂಬಂಧಿಸಿದ ಯಾವುದೇ ಪೂಜೆ, ವಿಧಿ ವಿಧಾನ, ಅಲಂಕಾರ ಪೂಜೆ ಇತ್ಯಾದಿಗಳು ನಡೆಯುವುದಿಲ್ಲ. ಬದಲಾಗಿ ಮಾತೆ ಜ್ವಾಲಾಮಾಲಿನಿಗೆ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಈ ಅಮ್ಮನವರ ಮೂರ್ತಿಯ ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿದೆ.

ಶಿಲಾ ಶಾಸನ ಬದಲಾಯಿಸಿ

ಈ ಬಸದಿಗೆ ಸಂಬಂಧಪಟ್ಟ ಒಂದು ಶಿಲಾಶಾಸನ ಇದೆ.ಈ ಬಸದಿಯ ಮೂಲ ನಾಯಕನ ಮೂರ್ತಿ ಕಪ್ಪುಶಿಲೆಯ ದಾಗಿದ್ದು ಸುಮಾರು ಐದು ಅಡಿ ಎತ್ತರ ಪರ್ಯಂಕಸನ ಭಂಗಿಯಲ್ಲಿದೆ. ಶ್ರೀ ಸ್ವಾಮಿಗೆ ಜಲಾಭಿಷೇಕ, ಗಂಧಾಭಿಷೇಕ ಪೂಜೆಗಳು ನಡೆಯುತ್ತವೆ. ಮೂಲ ಬಿಂಬಕ್ಕೆ ವಜ್ರಲೇಪನ ಮಾಡಿಲ್ಲ. ಸ್ವಾಮಿಗೆ ಪ್ರತಿದಿನ ಬೆಳಗ್ಗೆ ಮಾತ್ರ ಪೂಜೆ ಸೇವೆ ನಡೆಯುತ್ತದೆ. ಇಲ್ಲಿ ಕೆಲವಾರು ಪರ್ವ ದಿನಗಳನ್ನು ಆಚರಿಸುತ್ತಾರೆ. ಬಸದಿಯ ಅಂಗಳದಲ್ಲಿ ಕ್ಷೇತ್ರಪಾಲನ ಸನ್ನಿಧಿಯಿದೆ. ಅದು ಮೂರ್ತಿಯ ರೂಪದಲ್ಲಿರದೆ ಕೇವಲ ಶಿಲಾ ಖಂಡದ ರೂಪದಲ್ಲಿದೆ. ಇಲ್ಲಿಯ ಜಿನಾಲಯಗಳು ರಕ್ಷಣೆ ಈ ಕ್ಷೇತ್ರ ಪಾಲಕನಿಂದ ನಡೆಯುತ್ತದೆ ಎಂದು ಹೇಳುತ್ತಾರೆ. ಯಾವುದೇ ರೀತಿಯ ಬಲಿಕಲ್ಲುಗಳು ಅಥವಾ ಅಷ್ಟದಿಕ್ಪಾಲಕರ ಕಲ್ಲುಗಳು ಇಲ್ಲ.[೧]

ಉಲ್ಲೇಖಗಳು ಬದಲಾಯಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನಮಂದಿರಗಳ ದರ್ಶನ. ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. pp. ೪೨.