ಘೊಳ್ ಮೀನು
ಪರ್ಸಿಫಾರ್ಮಿಸ್ ಗಣದ ಸೈಯನಿಡೆ ಕುಟುಂಬಕ್ಕೆ ಸೇರಿದ ಸಯೀನ, ಸೂಡೊಸಯೀನ ಜಾತಿಯ ಮೀನುಗಳಿಗೆ ಅನ್ವಯಿಸುವ ಸಾಮಾನ್ಯ ಹೆಸರು (ಜ್ಯೂ ಫಿಶಸ್). ಪ್ರಪಂಚದ ಉಷ್ಣ ಮತ್ತು ಸಮಶೀತೋಷ್ಣ ವಲಯಗಳ ಸಮುದ್ರಗಳಲ್ಲಿ ಕಂಡುಬರುತ್ತವೆ. ಈ ಮೀನುಗಳು ತಮ್ಮ ವಾಯುಚೀಲಗಳಿಂದ ಮಾಡುವ ಶಬ್ದ ತಮಟೆ ಶಬ್ದವನ್ನು ಹೋಲುತ್ತದೆ. ಆದ್ದರಿಂದ ಈ ಹೆಸರು ಬಂದಿದೆ. (ಭಾರತದ ಪಶ್ಚಿಮ ಕರಾವಳಿಯಲ್ಲಿ ಘೊಳ್ ಎಂದರೆ ತಮಟೆ ಎಂದರ್ಥ). ಆಂಗ್ಲ ಭಾಷೆಯಲ್ಲಿ ಇವುಗಳಿಗೆ ಜ್ಯೂ ಫಿಶ್, ಡ್ರಮ್ ಫಿಶ್ ಎಂಬ ಹೆಸರುಗಳಿವೆ. ಭಾರತ, ಬರ್ಮಾ, ಮಲಯ, ಸುಮಾತ್ರ, ಪೂರ್ವ ಆಫ್ರಿಕಾ, ಉತ್ತರ ಮತ್ತು ದಕ್ಷಿಣ ಅಮೇರಿಕಗಳ ಕರಾವಳಿಗಳಲ್ಲಿ ಈ ಮೀನುಗಳು ಕಂಡುಬರುತ್ತವೆ. ಕೆಲವೊಮ್ಮೆ ನದಿ ಮುಖ ಪ್ರದೇಶಗಳ ಮುಖಾಂತರ ಒಳನಾಡಿಗೂ ಬರುವುದುಂಟು.[೧]
ಭಾರತದಲ್ಲಿ ಪ್ರಭೇದಗಳು
ಬದಲಾಯಿಸಿಭಾರತದಲ್ಲಿ ಘೋಳ್ ಮೀನುಗಳು ಸೂಡೋಸಯೀನ ಡಯಕಾಂತಸ್ ಪ್ರಭೇದದವಾಗಿವೆ. ಇದರೊಂದಿಗೆ ಓಟೊಲಿತಾಯ್ಡಿಸ್ (ಕೋತ್ ಮೀನು), ಓಟೋಲಿತಸ್, ಸಯೀನ, ಜಾನಿಯಸ್ (ಧೋಮ ಮೀನುಗಳು) ಸಯಿನಿಡೆ ಕುಟುಂಬಕ್ಕೆ ಸೇರಿದವುಗಳೇ ಆಗಿವೆ.
ಗುರುತು, ಬಣ್ಣ
ಬದಲಾಯಿಸಿಮಧ್ಯಮ ಗಾತ್ರದ ಮೀನುಗಳು. ಸುಮಾರು 120 ರಿಂದ 150 ಸೆಂ,ಮೀ. ವರೆಗೆ ಬೆಳೆಯುತ್ತವೆ. ತೂಕ ಸುಮಾರು 5 ಕೆಜಿ. ಮಹಾರಾಷ್ಟ್ರದ ಕರಾವಳಿಯಲ್ಲಿ 5-11 ಕೆಜಿ ವರೆಗಿನ ಮೀನುಗಳು ದೊರೆತಿವೆ. ದೃಢವಾದ ಆಳವಾದ ಕಚ್ಚನ್ನು ತೋರುವ ಬೆನ್ನಿನ ಈಜುರೆಕ್ಕೆ, ಎರಡು ಮುಳ್ಳುಗಳುಳ್ಳ ಗುದದ ಈಜುರೆಕ್ಕೆ, ಎದೆಯ ಈಜುರೆಕ್ಕೆಗಳ ಕಕ್ಷದಲ್ಲಿ ಮಾಂಸದ ರಚನೆಗಳಿರುವುದು, ಮೊಂಡಾಗಿ ಕತ್ತರಿಸಿದಂತೆ ಇರುವ ಬಾಲದ ಈಜುರೆಕ್ಕೆ — ಇವು ಘೊಳ್ ಮೀನುಗಳ ಗುಣ ಲಕ್ಷಣಗಳು. ವಿವಿಧ ಪ್ರಭೇದಗಳಲ್ಲಿ ಬೇರೆ ಬೇರೆ ರೀತಿಯಾಗಿರುವುದಾದರೂ ಮೂಲತಃ ಕಂದು ಇಲ್ಲವೆ ಬೂದಿ ಬಣ್ಣ, ಅಲ್ಲಲ್ಲಿ ಊದಾ, ನೀಲಿ ಮುಂತಾದ ಬಣ್ಣದ ಚುಕ್ಕೆಗಳಿರುವುದಂಟು.
ಆಹಾರ, ಸಂತಾನೋತ್ಪತ್ತಿ
ಬದಲಾಯಿಸಿಈ ಮೀನುಗಳು ಮಾಂಸಾಹಾರಿಗಳು. ಇತರ ಜಾತಿಯ ಮೀನುಗಳು, ಕಠಿಣ ಚರ್ಮಿಗಳು, ವಲ್ಕವಂತಗಳು, ಮತ್ತು ಮೃದ್ವಂಗಿಗಳನ್ನು ತಿಂದು ಜೀವಿಸುತ್ತವೆ. ಇವುಗಳ ಸಂತಾನೋತ್ಪತ್ತಿಯ ಕಾಲ ಮೇ-ಜುಲೈ.
ಭಾರತದಲ್ಲಿ ಘೊಳ್ ಮೀನುಗಳ ಮೀನುಗಾರಿಕೆ
ಬದಲಾಯಿಸಿಮಹಾರಾಷ್ಟ್ರ ಮತ್ತು ಕಾಠೇವಾಡ ಗಳಲ್ಲಿ ಈ ಮೀನುಗಳನ್ನು ಗಣನೀಯ ಪ್ರಮಾಣದಲ್ಲಿ ಹಿಡಿಯಲಾಗುತ್ತದೆ. ೨೦೦೨ನೆಯ ವರ್ಷದಲ್ಲಿ ಸುಮಾರು 2.68 ಲಕ್ಷ ಟನ್‍ಗಳಷ್ಟು ಮೀನನ್ನು ಹಿಡಿಯಲಾಗಿದೆ. ಇವು ಒಳ್ಳೆಯ ಆಹಾರದ ಮೀನುಗಳು. ಇವುಗಳ ಗಾಳಿಚೀಲ ದಿಂದ ತಯಾರಾಗುವ ಉಪ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆಯಿದ್ದು ಸ್ಥಳೀಯವಾಗಿ ಇದರ ಗಾಳಿಚೀಲವನ್ನು ಮಾವ್ ಗಳೆಂದು ಕರೆಯುತ್ತಾರೆ. ಉತ್ತಮ ಗುಣಮಟ್ಟದ ಮಾವ್‍ಗಳನ್ನು ರಫ್ತು ಮಾಡಲಾಗುತ್ತದೆ. ಇದನ್ನು ವೈನ್ ತಯಾರಿಕಾ ಹಂತದಲ್ಲಿ ಶುದ್ಧಿಕರಣಕ್ಕೆ ಬಳಸಲಾಗುತ್ತದೆ. ಒಣಗಿಸಿದ ಗಾಳಿಚೀಲಗಳನ್ನು ಐಸಿಂಗ್ಲಾಸ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.