ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ

ಧಾರ್ಮಿಕ ಕ್ಷೇತ್ರವಾಗಿ ಗಮನ ಸೆಳೆದಿರುವ ಘಾಟಿ ಸುಬ್ರಹ್ಮಣ್ಯ, ತನ್ನ ಸುತ್ತಲಿನ ಸರಳ ಪ್ರಾಕೃತಿಕ ಸೌಂದರ್ಯದಿಂದಲೂ ಗಮನ ಸೆಳೆಯುತ್ತದೆ. ವರ್ಷಕ್ಕೊಮ್ಮೆ ನಡೆಯುವ ದನಗಳ ಜಾತ್ರೆ ಘಾಟಿ ಸುಬ್ರಹ್ಮಣ್ಯದಷ್ಟೇ ಹೆಸರುವಾಸಿ. ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕರ್ನಾಟಕದ ನಾನಾ ಭಾಗಗಳ ರೈತರು ಎತ್ತುಗಳನ್ನು ಮಾರಾಟ ಮಾಡಲು ಹಾಗೂ ಕೊಳ್ಳಲು ಜಾತ್ರೆಗೆ ಬರುತ್ತಾರೆ.

ಸುಬ್ಬರಾಯನ ಘಾಟಿ ಜಾತ್ರೆ ಎಂದೆ ಪ್ರಸಿದ್ಧವಾಗಿರುವ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ದಕ್ಷಿಣ ಭಾರತದ ಪ್ರಮುಖ ದನಗಳ ಜಾತ್ರೆಯಾಗಿದೆ. ಎತ್ತುಗಳ ವಿನಿಮಯ, ಉತ್ತಮ ರಾಸುಗಳ ಕೊಳ್ಳುವಿಕೆಯಿಂದ ಪ್ರಸಿದ್ಧಿಯಾಗಿರುವ ಘಾಟಿ ಸುಬ್ರಹ್ಮಣ್ಯಸ್ವಾಮಿ ದನಗಳ ಜಾತ್ರೆ ನೋಡುವುದಕ್ಕೆ ಎರಡು ಕಣ್ಣು ಸಾಲದು. ದನಗಳ ಜಾತ್ರೆಯನ್ನು ನೋಡಲೆಂದೇ ಇಲ್ಲಿಗೆ ಸಾವಿರಾರು ಪ್ರವಾಸಿಗಳು ಬರುತ್ತಾರೆ. ಜಾತ್ರೆಗೆ ಬರುವ ಅಮೃತ ಮಹಲ್, ಹಳ್ಳಿಕಾರ್ ಸೇರಿದಂತೆ ಹತ್ತಾರು ತಳಿಗಳ ಕಟ್ಟುಮಸ್ತು ಎತ್ತುಗಳನ್ನು ಪ್ರತಿಯೊಬ್ಬ ರೈತನೂ ಆಸೆಗಣ್ಣಿನಿಂದ ನೋಡುತ್ತಾನೆ. ಆ ಎತ್ತುಗಳಿಗೆ ತಾವೇ ಒಡೆಯನಾಗಬೇಕೆಂದು ಪೈಪೋಟಿಗೆ ಬೀಳುವ ರೈತರು ಅವುಗಳನ್ನು ಕೊಳ್ಳಲು ದೊಡ್ಡ ಮೊತ್ತದ ಹಣ ಹೂಡಲು ಸಿದ್ಧರಾಗುತ್ತಾರೆ. ಆ ಸಮಯದಲ್ಲಿ ರಂಗೇರುವ ಎತ್ತುಗಳ ವ್ಯಾಪಾರ ನೋಡುವುದೇ ಚೆನ್ನ.‌

ದಾವಣಗೆರೆ, ಗುಲ್ಬರ್ಗಾ, ಬಿಜಾಪುರ, ಧಾರವಾಡ, ಆಂಧ್ರ ಪ್ರದೇಶದ ಅನಂತಪುರ, ಹಿಂದೂಪುರ, ತಮಿಳುನಾಡಿನ ಹೊಸೂರು ಮೊದಲಾದ ಕಡೆಗಳಿಂದ ರೈತರು ಎತ್ತುಗಳನ್ನು ಕೊಳ್ಳಲು ಆಗಮಿಸುತ್ತಾರೆ. ಪ್ರತಿವರ್ಷವೂ ಈ ಜಾತ್ರೆಯಲ್ಲಿ ರಾಸುಗಳು ದಾಖಲೆ ಬೆಲೆಗೆ ಮಾರಾಟವಾಗುತ್ತವೆ. ‌