ವಿಲಿಯಮ್ ಲಾಯ್ಡ್‌ ಗ್ಯಾರಿಸನ್

(ಗ್ಯಾರಿಸನ್ ವಿಲಿಯಮ್ ಲಾಯ್ಡ್‌ ಇಂದ ಪುನರ್ನಿರ್ದೇಶಿತ)

ವಿಲಿಯಮ್ ಲಾಯ್ಡ್‌ ಗ್ಯಾರಿಸನ್(ಡಿಸೆಂಬರ್ 10, 1805 –ಮೇ 24, 1879) ಅಮೆರಿಕದಲ್ಲಿ ಗುಲಾಮಗಿರಿಯ ವಿರುದ್ಧ ಹೋರಾಟ ನಡೆಸಿದವರಲ್ಲೊಬ್ಬ.

ವಿಲಿಯಮ್ ಲಾಯ್ಡ್‌ ಗ್ಯಾರಿಸನ್
Portrait of William Lloyd Garrison by Nathaniel Jocelyn, oil on panel, 1833, National Portrait Gallery, Washington, D.C.
ಜನನ(೧೮೦೫-೧೨-೧೦)೧೦ ಡಿಸೆಂಬರ್ ೧೮೦೫
Newburyport, Massachusetts, U.S.
ಮರಣMay 24, 1879(1879-05-24) (aged 73)
ರಾಷ್ಟ್ರೀಯತೆAmerican
ವೃತ್ತಿAbolitionist
ಗಮನಾರ್ಹ ಕೆಲಸಗಳುEditor of The Liberator
ಸಂಗಾತಿHelen Eliza Benson
ಮಕ್ಕಳು7
Signature
 
Garrison circa 1850

ಮೆಸಾಚುಸೆಟ್ಸ್‌ನ ನ್ಯೂಬರಿಪೋರ್ಟಿನಲ್ಲಿ 1805ರ ಡಿಸೆಂಬರ್ 12ರಂದು ಜನಿಸಿದ. ತಂದೆ ಅಬಿಜಾ ಹಡಗು ಚಾಲಕ, ಕುಡುಕ. ಗ್ಯಾರಿಸನ್ ಮಗುವಾಗಿದ್ದಾಗಲೇ ಇವನ ತಂದೆ ಮನೆ ತೊರೆದ. ತಾಯಿ ಸುಶೀಲೆ, ರೂಪವಂತೆ. ಗ್ಯಾರಿಸನ್ನಿಗೆ ಹೆಚ್ಚು ಶಿಕ್ಷಣವೇನೂ ದೊರೆಯಲಿಲ್ಲ. ಆದರೆ ತನಗೆ ದೊರೆತ ಅವಕಾಶಗಳನ್ನೆಲ್ಲ ಇವನು ಸದುಪಯೋಗಪಡಿಸಿಕೊಂಡ. ನ್ಯೂಬರಿಪೋರ್ಟ್ ಮತ್ತು ಬಾಲ್ಟಿಮೋರ್ನಲ್ಲಿ ಚಪ್ಪಲಿ ತಯಾರಿಕೆ ಯನ್ನು ಕಲಿಯಲು ಇವನನ್ನು ಸೇರಿಸಲಾಗಿತ್ತು. ಅನಂತರ ಇವನು ಅಲಮಾರು ತಯಾರಕನೊಬ್ಬನಲ್ಲಿ ತರಬೇತುದಾರನಾಗಿದ್ದ. ನಡುವೆಯೇ ಇವನು ಓಡಿಹೋದ.

ಪತ್ರಿಕೋದ್ಯಮ

ಬದಲಾಯಿಸಿ

ನ್ಯೂಬರಿಪೋರ್ಟ್ ಹೆರಾಲ್ಡ್‌ ಪತ್ರಿಕೆಯಲ್ಲಿ ಮೊಳೆ ಜೋಡಿಸುವ ಕೆಲಸ ಕಲಿಯಲು ಇವನನ್ನು ಹಚ್ಚಲಾಯಿತು. ಅದರಲ್ಲೇ ಇವನು ಪಳಗಿದ. ಅನಂತರ ಆ ಪತ್ರಿಕೆಗಾಗಿ ಅಜ್ಞಾತವಾಗಿ ಲೇಖನಗಳನ್ನು ಬರೆದು ಸಂಪಾದಕನ ಮೆಚ್ಚುಗೆ ಗಳಿಸಿದ. ಇತರ ಅನೇಕ ಪತ್ರಿಕೆಗಳಿಗೂ ಲೇಖನ ಬರೆದ. ಮೊಳೆ ಜೋಡಿಸುವ ಕೆಲಸದಲ್ಲೂ ಪರಿಣತಿ ಪಡೆದ ಗ್ಯಾರಿಸನ್ನಿಗೆ ಮೇಸ್ತ್ರಿಯ ಹುದ್ದೆ ದೊರಕಿತು. ಬರೆವಣಿಗೆಯಲ್ಲಿ ಇವನು ಗಳಿಸಿದ ಸಾಮಥರ್ಯ್‌ ಸಾಮಾನ್ಯವಾದದ್ದಲ್ಲ. ಸಂಪಾದಕ ಸ್ವಲ್ಪಕಾಲ ತನ್ನ ಕೆಲಸ ನಿರ್ವಹಿಸಲಾಗದಾಗ ಪತ್ರಿಕೆ ನಡೆಸುವ ಹೊಣೆ ಇವನದಾಗಿತ್ತು.ಮುದ್ರಣಾಲಯದಲ್ಲಿ ಗ್ಯಾರಿಸನ್ ನಿಜವಾದ ವಿದ್ಯೆ ಸಂಪಾದಿಸಿದ. ಸ್ವಾತಂತ್ರ್ಯದ ಬಗ್ಗೆ ಈತನ ಕಾಳಜಿ ಅಪಾರ. ತುರ್ಕಿಯ ಆಡಳಿತದಿಂದ ವಿಮೋಚನೆ ಹೊಂದಲು ಗ್ರೀಕರು ಕೈಗೊಂಡಿದ್ದ ಹೋರಾಟದಲ್ಲಿ ಇವನಿಗೆ ಸಹಾನುಭೂತಿ ಇತ್ತು. ತಾನೂ ಏಕೆ ಸಿಪಾಯಿಯ ತರಬೇತು ಹೊಂದಿ ಯುದ್ಧಕ್ಕೆ ಧುಮುಕಬಾರದು ಎಂದೂ ಆಲೋಚಿಸುತ್ತಿದ್ದ. 1826ರಲ್ಲಿ ಇವನ ತರಬೇತಿಯ ಅವಧಿ ಮುಗಿಯಿತು. ತಾನೇ ಫ್ರೀ ಪ್ರೆಸ್ ಎಂಬ ಪತ್ರಿಕೆಯೊಂದನ್ನಾರಂಭಿಸಿದ. ಸ್ವದೇಶಾಭಿಮಾನವನ್ನು ಬೆಳೆಸುವುದೇ ಇವನ ಪತ್ರಿಕೆಯ ಮುಖ್ಯೋದ್ದೇಶ. ಆದರೆ ಇವನ ಪತ್ರಿಕೆ ಅತ್ಯಂತ ತೀವ್ರಗಾಮಿಯೆನಿಸಿಕೊಂಡು ನಿಂತುಹೋಯಿತು. ಅನಂತರ ಈತ ಬಾಸ್ಟನಿಗೆ ಹೋಗಿ ಮುದ್ರಣ ಕಾರೇಗಾರ (ಜರ್ನಿಮನ್) ಆದ. ನ್ಯಾಷನಲ್ ಫಿಲಾಂತ್ರಪಿಸ್ಟ್‌ ಎಂಬ ಪತ್ರಿಕೆಯೊಂದು ಇವನ ಸಂಪಾದಕತ್ವದಲ್ಲಿ ಹೊರಡುತ್ತಿತ್ತು. ಮದ್ಯಪಾನವನ್ನು ವರ್ಜಿಸಬೇಕೆಂಬ ಉದ್ದೇಶವಿದ್ದ ಪ್ರಥಮ ಅಮೆರಿಕನ್ ಪತ್ರಿಕೆಯಿದು. ಆ ವರ್ಷದ ಕೊನೆಯೊಳಗೆ ಪತ್ರಿಕೆಯ ಒಡೆತನ ಬದಲಾದ್ದರಿಂದ ಈತ ಅದನ್ನು ಬಿಡಬೇಕಾಯಿತು. 1828ರಲ್ಲಿ ಬೆನಿಂಗ್ಟನಿನಲ್ಲೊಂದು ಪತ್ರಿಕೆ ಪ್ರಾರಂಭಿಸಿದ. ಆ ಪತ್ರಿಕೆಯೂ ಒಂದು ವರ್ಷದೊಳಗೆ ಪರಿಸಮಾಪ್ತಿ ಹೊಂದಿತು.


ಗುಲಾಮಗಿರಿ ನಿರ್ಮೂಲವಾಗಬೇಕೆಂದು ಆಗ ಪ್ರಚಾರ ನಡೆಸುತ್ತಿದ್ದ ಬೆಂಜಮಿನ್ ಲಂಡಿಯ ಪರಿಚಯ ಇವನಿಗೆ ಆಯಿತು. ಗ್ಯಾರಿಸನನಿಗೂ ಈ ವಿಷಯವಾಗಿ ಆಸಕ್ತಿ ಬೆಳೆಯಿತು. ಗುಲಾಮರ ವಿಮೋಚನೆ ಕ್ರಮಕ್ರಮವಾಗಿ ಆಗಬೇಕೆಂಬ, ವಿಮೋಚನೆಗೊಂಡ ಗುಲಾಮರನ್ನು ಅಮೆರಿಕ ಸಂಯುಕ್ತ ಸಂಸ್ಥಾನದಿಂದಾಚೆ ಎಲ್ಲಾದರೂ ನೆಲೆಗೊಳಿಸಬೇಕೆಂಬ ಲಂಡಿಯ ಅಭಿಪ್ರಾಯಕ್ಕೆ ಪ್ರಾರಂಭದಲ್ಲಿ ಗ್ಯಾರಿಸನನ ವಿರೋಧವೇನೂ ಇರಲಿಲ್ಲ. ಲಂಡಿ ಪ್ರಕಟಿಸುತ್ತಿದ್ದ ಜೀನಿಯಸ್ ಆಫ್ ಯೂನಿವರ್ಸಲ್ ಇಮಾನ್ಸಿಪೇಷನ್ ಎಂಬ ಪತ್ರಿಕೆಯ ಸಂಪಾದನ ಕಾರ್ಯದಲ್ಲಿ ಸಹಾಯ ನೀಡಬೇಕೆಂಬ ಲಂಡಿಯ ಆಹ್ವಾನವನ್ನೊಪ್ಪಿಕೊಂಡು ಅವನೊಂದಿಗೆ ಕೆಲಸ ಆರಂಭಿಸಿದ ಮೇಲೆ ಗ್ಯಾರಿಸನನ ವಿಚಾರಗಳು ಕ್ರಮೇಣ ಬದಲಾದವು. ಗುಲಾಮಗಿರಿ ಕೂಡಲೇ ರದ್ದಾಗಬೇಕೆಂದು ಗ್ಯಾರಿಸನ್ ಪ್ರತಿಪಾದಿಸಿದ. ಗುಲಾಮಗಿರಿಯ ದುಷ್ಪರಿಣಾಮಗಳನ್ನು ಮಾತ್ರ ಬಯಲಿಗೆಳೆಯುತ್ತಿದ್ದು, ಅದರ ನಿರ್ಮೂಲನದ ಕರ್ತವ್ಯವನ್ನು ಭವಿಷ್ಯದ ಪೀಳಿಗೆಗಳಿಗೆ ವರ್ಗಾಯಿಸುವ ಧೋರಣೆಗಳನ್ನು ಇವನು ಒಪ್ಪಲಿಲ್ಲ. ತನ್ನ ವಿಚಾರಗಳ ಪ್ರಚಾರಕ್ಕೆ ಇವನು ಜೀನಿಯಸ್ ಪತ್ರಿಕೆಯನ್ನು ಮಾಧ್ಯಮವನ್ನಾಗಿ ಮಾಡಿಕೊಂಡ. ಗುಲಾಮರ ಒಡೆಯರು ಪತ್ರಿಕೆಯನ್ನೂ ಗ್ಯಾರಿಸನನನ್ನೂ ದ್ವೇಷಿಸತೊಡಗಿದರು. ಗುಲಾಮರ ಸಾಗಣೆಯ ಹಡಗೊಂದರ ಯಜಮಾನ ಹೂಡಿದ ಮಾನನಷ್ಟ ಮೊಕದ್ದಮೆಯಲ್ಲಿ ಇವನಿಗೆ 50 ಡಾಲರುಗಳ ದಂಡ ವಿಧಿಸಲಾಯಿತು. ಗ್ಯಾರಿಸನ್ ದಂಡ ತೆರಲಾರದೆ ಕಾರಾಗೃಹಕ್ಕೆ ಹೋಗಿ ಶಿಕ್ಷೆಯನ್ನು ಭಾಗಶಃ ಅನುಭವಿಸಿದ ಮೇಲೆ ಅಭಿಮಾನಿಯೊಬ್ಬ ದಂಡದ ಹಣ ನೀಡಿದ್ದರಿಂದ ಇವನಿಗೆ ಬಿಡುಗಡೆ ಆಯಿತು. ಲಂಡಿ-ಗ್ಯಾರಿಸನರ ಸಹಯೋಗ ಕೊನೆಗೊಂಡಿತು. ತನ್ನದೇ ಪತ್ರಿಕೆಯೊಂದನ್ನು ಬಾಸ್ಟನಿನಲ್ಲಿ ಆರಂಭಿಸಲು ಗ್ಯಾರಿಸನ್ ಮನಸ್ಸು ಮಾಡಿದ. ಉತ್ತರದ ಪ್ರಮುಖ ಊರುಗಳಲ್ಲಿ ಪ್ರಚಾರೋಪನ್ಯಾಸ ಮಾಡಬೇಕೆಂದು ನಿಶ್ಚಯಿಸಿದ. ಬಾಸ್ಟನಿನಲ್ಲಿ ಇದಕ್ಕಾಗಿ ಸ್ಥಳವೊಂದನ್ನು ಕಷ್ಟಪಟ್ಟು ಸಂಪಾದಿಸಿಕೊಂಡ. ಐಸಾಕ್ ನ್ಯಾಪ್ ಎಂಬುವನೊಂದಿಗೆ ಕೂಡಿ ಲಿಬರೇಟರ್ ಎಂಬ ಪತ್ರಿಕೆ ಹೊರಡಿಸಿದ[] . ಆರಂಭದಲ್ಲಿ ಅದಕ್ಕೆ ಬಂಡವಾಳವಾಗಲೀ ಚಂದಾದಾರರಾಗಲೀ ಇರಲಿಲ್ಲ. ತನ್ನ ಮಾತುಗಳನ್ನು ಜನ ಆಲಿಸುವವರೆಗೂ, ಗುರಿ ಸಾಧಿಸುವವರೆಗೂ ನಿಲ್ಲುವುದಿಲ್ಲವೆಂಬುದು ಇವನ ಛಲವಾಗಿತ್ತು.

ಸುಧಾರಣಾವಾದಿ

ಬದಲಾಯಿಸಿ
 
Photograph of Garrison

ಗ್ಯಾರಿಸನ್ ಶಾಂತಿಪ್ರಿಯ. ನೈತಿಕ ಮಾರ್ಗಗಳಿಂದಲೇ ಗುಲಾಮಗಿರಿಯನ್ನು ನಿರ್ನಾಮಗೊಳಿಸಬೇಕೆಂಬುದು ಈತನ ಇಚ್ಛೆಯಾಗಿತ್ತು. ಉತ್ತರದಲ್ಲಿ ಉಪನ್ಯಾಸ ಮಾಡಿ, ದಕ್ಷಿಣದ ರಾಜ್ಯಗಳ ಮೇಲೆ ಉತ್ತರದವರ ನೈತಿಕ ಒತ್ತಾಯ ಬೀಳುವ ಹಾಗೆ ಮಾಡಲು ಯತ್ನಿಸಿದ. ಉತ್ತರದವರು ಆಸಕ್ತಿ ತೋರಲಿಲ್ಲ. ಗ್ಯಾರಿಸನನಿಗೆ ಕೋಪ ಬಂತು. ಅವರನ್ನು ಹೀಗಳೆದ. 1840ರ ವೇಳೆಗೆ ಈತ ಸಂಪ್ರದಾಯಗಳನ್ನು ಕಿತ್ತೊಗೆಯುವಂಥ ತೀವ್ರವಾದಿಯಾದ. 1832ರಲ್ಲಿ ಇವನು ನ್ಯೂ ಇಂಗ್ಲೆಂಡ್ ಗುಲಾಮಗಿರಿ ವಿರೋಧಿ ಸಂಘ ಸ್ಥಾಪಿಸಿದ. ಈತನ ಥಾಟ್ಸ್‌ ಆನ್ ಆಫ್ರಿಕನ್ ಕಾಲೊನೈಸೇಷನ್ ಎಂಬ ಪುಸ್ತಕ ಪ್ರಕಟವಾದ್ದು ಅದೇ ವರ್ಷ. ಅಮೆರಿಕನ್ ವಸಾಹತು ನಿರ್ಮಾಣ ಸಂಘ ಗುಲಾಮಗಿರಿಯ ಸಾಧನೆಗಾಗಿ ಸ್ಥಾಪಿತವಾಗಿರುವ ಸಂಘವೆಂದು ಈತ ವಾದಿಸಿದ. ತನ್ನ ಸಂಘದ ಪ್ರತಿನಿಧಿಯಾಗಿ ಈತ 1833ರಲ್ಲಿ ಇಂಗ್ಲೆಂಡಿಗೆ ಹೋದದ್ದು ಅಮೆರಿಕನ್ ವಸಾಹತು ನಿರ್ಮಾಣ ಸಂಘದ ದುರುದ್ದೇಶಗಳನ್ನು ಬಯಲಿಗೆಳೆಯುವುದಕ್ಕಾಗಿ. ಅಲ್ಲಿಯ ಗುಲಾಮಗಿರಿ ವಿರೋಧಿಗಳು ಗ್ಯಾರಿಸನನನ್ನು ಪ್ರೀತ್ಯಾದರಗಳಿಂದ ಸ್ವಾಗತಿಸಿದರಲ್ಲದೆ ಇವನ ಯತ್ನಗಳಿಗೆ ತಮ್ಮ ಬೆಂಬಲ ಸೂಚಿಸಿದರು.


ಗ್ಯಾರಿಸನನ ತಾಯಿನಾಡಿನಲ್ಲಿದ್ದ ಗುಲಾಮಗಿರಿಪ್ರಿಯರು ಕ್ರೋಧಗೊಂಡರು. ಅಮೆರಿಕದ ಗುಲಾಮಗಿರಿ ವ್ಯವಸ್ಥೆಯ ವಿರುದ್ಧ ಉಪನ್ಯಾಸ ನೀಡಲು ಜಾರ್ಜ್ ಥಾಮ್ಸನನನ್ನು ನೇಮಿಸಿರುವುದಾಗಿ ಗ್ಯಾರಿಸನ್ ಪ್ರಕಟಿಸಿದ. ಗುಲಾಮಗಿರಿಯ ಪರವಾದವರ ವಿರೋಧ ಇನ್ನೂ ಉಗ್ರವಾಯಿತು. ಆಗ ಸ್ಥಾಪನೆಗೊಂಡ ಅಮೆರಿಕನ್ ಗುಲಾಮಗಿರಿ ವಿರೋಧಿ ಸಂಘಕ್ಕೆ ಸ್ಫೂರ್ತಿ ನೀಡಿದವನು ಗ್ಯಾರಿಸನನೇ. ಥಾಮ್ಸನನ ಭಾಷಣಗಳೂ ಈ ಸಂಘದ ಚಟುವಟಿಕೆಗಳೂ ಗುಲಾಮರೊಡೆಯರನ್ನು ಇನ್ನಷ್ಟು ಕೆರಳಿಸಿದವು. ಥಾಮ್ಸನ್ ಗುಟ್ಟಾಗಿ ಇಂಗ್ಲೆಂಡಿಗೆ ಹಿಂದಿರುಗಬೇಕಾಯಿತು. ಬಾಸ್ಟನಿನಲ್ಲಿ ಸ್ತ್ರೀಯರ ಗುಲಾಮವಿರೋಧಿ ಸಂಘಟವನ್ನುದ್ದೇಶಿಸಿ ಅವನು ಭಾಷಣ ಮಾಡುವುದಾಗಿ ಪ್ರಕಟಿಸಲÁಗಿತ್ತು. ಥಾಮ್ಸನ್ ಅಲ್ಲಿರಲಿಲ್ಲ. ಜನರು ಗ್ಯಾರಿಸನನನ್ನೇ ಹಿಡಿದು ಬೀದಿಯಲ್ಲಿ ಎಳೆದಾಡಿದರು. ಇವನನ್ನು ಬಿಡಿಸಿ ಕಾರಾಗೃಹದಲ್ಲಿಟ್ಟು ರಕ್ಷಣೆ ನೀಡಬೇಕಾಯಿತು.


1839-40ರವರೆಗೂ ಅಮೆರಿಕದ ಗುಲಾಮಗಿರಿ ನಿರ್ಮೂಲವಾದಿಗಳಲ್ಲಿ ಒಗ್ಗಟ್ಟಿತ್ತು. ಅನಂತರ ಇದು ಒಡೆಯಿತು. ಗ್ಯಾರಿಸನ್ ತನ್ನ ಉದ್ದೇಶ ಸಾಧನೆಗಾಗಿ ಸ್ತ್ರೀಯರ ನೆರವನ್ನೂ ಪಡೆದುಕೊಂಡಿದ್ದ. ಅವರೂ ಭಾಷಣ ನೀಡುತ್ತಿದ್ದರು. ಸ್ತ್ರೀಪುರುಷರಿಬ್ಬರೂ ಸಮಾನರೆಂಬುದು ಇವನ ನಂಬಿಕೆಯಾಗಿತ್ತು. ಸ್ತ್ರೀಸ್ವಾತಂತ್ರ್ಯವನ್ನು ವಿರೋಧಿಸುತ್ತಿದ್ದವರ ವಿರೋಧವನ್ನು ಇದರಿಂದ ಕಟ್ಟಿಕೊಳ್ಳಬೇಕಾಯಿತು. ಚರ್ಚೂ ಎದುರುಬಿತ್ತು. ಏಕೆಂದರೆ ಚರ್ಚನ್ನೂ ಇವನು ಟೀಕಿಸಿದ್ದ. 1840ರಲ್ಲಿ ಹೊಸದೊಂದು ಗುಲಾಮಗಿರಿ ವಿರೋಧ ಸಂಘವೂ ಲಿಬರ್ಟಿ ಪಕ್ಷವೂ ಸ್ಥಾಪಿತವಾದುವು. ಲಂಡನಿನಲ್ಲಿ ಆ ವರ್ಷ ನಡೆಯಲಿದ್ದ ಗುಲಾಮಗಿರಿ ವಿರೋಧಿಗಳ ಸಮಾವೇಶಕ್ಕೆ ಈ ಎರಡು ಸಂಸ್ಥೆಗಳೂ ಪ್ರತಿನಿಧಿಗಳನ್ನು ಕಳಿಸಿದುವು. ಆ ಸಮಾವೇಶದಲ್ಲಿ ಸ್ತ್ರೀ ಪ್ರತಿನಿಧಿಗಳಿಗೆ ಅವಕಾಶವಿರಲಿಲ್ಲವೆಂಬ ಕಾರಣದಿಂದಾಗಿ ಗ್ಯಾರಿಸನ್ ಅದರಲ್ಲಿ ಭಾಗವಹಿಸಲೊಪ್ಪಲಿಲ್ಲ.ಅಮೆರಿಕ ಸಂಯುಕ್ತಸಂಸ್ಥಾನದ ಸಂವಿಧಾನ ಗುಲಾಮಗಿರಿಯ ಪರವಾಗಿದೆಯೆಂಬ ಕಾರಣದಿಂದ ಗ್ಯಾರಿಸನ್ ಅದನ್ನೂ ಟೀಕಿಸಿದ. ಸಂವಿಧಾನಕ್ಕೆ ಬೆಂಬಲ ನೀಡುವ ಪ್ರತಿಜ್ಞಾವಚನ ಸ್ವೀಕರಿಸುವುದು ಪಾಪಕರವೆಂಬುದು ಇವನ ಭಾವನೆ. ಸಂವಿಧಾನದ ಪ್ರತಿಯನ್ನು ಇವನು ಸುಟ್ಟ. ಒಕ್ಕೂಟವನ್ನು ಒಡೆಯಬೇಕೆಂದೂ ಇವನು ಪ್ರಚಾರ ಮಾಡತೊಡಗಿದ.

ಅಂತರ್ಯದ್ಧ

ಬದಲಾಯಿಸಿ

1861ರಲ್ಲಿ ದಕ್ಷಿಣ ಸಂಸ್ಥಾನಗಳು ಪ್ರತ್ಯೇಕವಾದವು. ಒಕ್ಕೂಟದ ವಿರುದ್ಧ ಹೋರಾಟ ಆರಂಭಿಸಿದುವು. ಈ ಸಂಘರ್ಷದ ಪರಿಣಾಮವಾಗಿ ಗುಲಾಮಗಿರಿ ವಿಧಿಗಳು ಸಂವಿಧಾನದಿಂದ ತೊಡೆದುಹೋಗುವುವೆಂದು ಇವನಿಗೆ ಮನವರಿಕೆಯಾಯಿತು. ಆದ್ದರಿಂದ ಅಲ್ಲಿಂದ ಮುಂದೆ ಇವನು ಒಕ್ಕೂಟದ ರಕ್ಷಣೆಗಾಗಿ ಕಂಕಣಬದ್ಧನಾದ. ಲಿಂಕನ್ ಇವನನ್ನು ಗೌರವಿಸಿದ. ಗುಲಾಮಗಿರಿಯ ವಿರೋಧವಾಗಿ ಇವನ ನಿರ್ಭಯ ಹೋರಾಟವನ್ನು ಹಲವರು ಮೆಚ್ಚಿಕೊಂಡರು.


ಅಮೆರಿಕದ ಅಂತರ್ಯುದ್ಧ ಕೊನೆಗೊಂಡು ಗುಲಾಮಗಿರಿ ರದ್ದಾದಾಗ, 1865ರಲ್ಲಿ ಗುಲಾಮಗಿರಿ ನಿರ್ನಾಮವಾಗಿ ತನ್ನ ಕರ್ತವ್ಯ ತೀರಿತೆಂದು ಗ್ಯಾರಿಸನ್ ಘೋಷಿಸಿದ. ಅಮೆರಿಕನ್ ಗುಲಾಮಗಿರಿ ವಿರೋಧಿ ಸಂಘವನ್ನು ವಿಸರ್ಜಿಸಬೇಕೆಂದು ಈತ ಸಲಹೆ ಮಾಡಿದ. ವಿಮೋಚನೆಗೊಂಡ ಗುಲಾಮರ ಸ್ವಾತಂತ್ರ್ಯದ ರಕ್ಷಣೆಗಾಗಿ ಪ್ರತ್ಯೇಕ ಸಂಸ್ಥೆಗಳ ಸ್ಥಾಪನೆಯಾಗಲೆಂದು ಈತ ಸೂಚಿಸಿದ. ಏನೇ ಕಷ್ಟ ಬಂದರೂ ಈತ ಸತತವಾಗಿ ನಡೆಸುತ್ತಿದ್ದ ಲಿಬರೇಟರ್ ಪತ್ರಿಕೆ, 35 ವರ್ಷಗಳ ಅನಂತರ ನಿಂತಿತು. 1846 ಮತ್ತು 1867ರಲ್ಲಿ ಈತ ಇಂಗ್ಲೆಂಡಿಗೆ ಭೇಟಿ ನೀಡಿದಾಗ ಪ್ರಜಾಸಮೂಹವೂ ಸರ್ಕಾರವೂ ಇವನಿಗೆ ವೀರೋಚಿತ ಸ್ವಾಗತ ನೀಡಿದವು. ಅನಂತರ ಇವನು ಮುಕ್ತ ವ್ಯಾಪಾರಕ್ಕಾಗಿ ಚಳವಳಿ ಹೂಡಿದ. ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಎಲ್ಲ ಬಗೆಯ ಸುಂಕಗಳೂ ರದ್ದಾಗಬೇಕೆಂಬುದು ಇವನ ವಾದ. 1869ರಲ್ಲಿ ಈತ ಮುಕ್ತ ವ್ಯಾಪಾರ ಸಂಘದ ಅಧ್ಯಕ್ಷನಾದ. 1877ರಲ್ಲಿ ಈತ ಮತ್ತೆ ಇಂಗ್ಲೆಂಡಿಗೆ ಭೇಟಿ ನೀಡಿದ.

ಗ್ಯಾರಿಸನ್ 1879ರ ಮೇ 24ರಂದು ನಿಧನನಾದ.

ಈತ ಕೆಲವು ಪದ್ಯಗಳನ್ನು ಬರೆದಿದ್ದಾನೆ. ಅವು 1843ರಲ್ಲಿ ಸಂಕಲನರೂಪದಲ್ಲಿ ಪ್ರಕಟವಾದವು. ಇವನ ಆಯ್ದ ಲೇಖನೋಪನ್ಯಾಸಗಳ ಸಂಪುಟವೊಂದು ಬೆಳಕು ಕಂಡಿದೆ (1852).

ಉಲ್ಲೇಖಗಳು

ಬದಲಾಯಿಸಿ
  1. Boston Directory, 1831, Garrison & Knapp, editors and proprietors Liberator, 10 Merchants Hall, Congress Street

ಬಾಹ್ಯ ಸಂಪರ್ಕಗಳು

ಬದಲಾಯಿಸಿ