ಗೋಲಾರಿ ಫಾಲ್ಸ್
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಗೋಲಾರಿ ಫಾಲ್ಸ್
ಜಲಪಾತಗಳ ತವರೂರು ಎನಿಸಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿಗೂ ಅದೆಷ್ಟೋ ಜಲಪಾತಗಳು ಬೆಳಕಿಗೆ ಬಂದಿಲ್ಲ. ಅಂಥವುಗಳಲ್ಲಿ ಗೋಲಾರಿ ಫಾಲ್ಸ್ ಕೂಡ ಒಂದು. ಈ ಜಲಪಾತ ಕಾರವಾರ ತಾಲ್ಲೂಕಿನ ತೋಡೂರು ಗ್ರಾಮದ ದಟ್ಟಾರಣ್ಯ ಪ್ರದೇಶದಲ್ಲಿದೆ. ಬೆಟ್ಟದ ತುದಿಯಿಂದ ಶ್ವೇತ ಸುಂದರಿಯಂತೆ ಬಳಕುತ್ತಾ ಬಂಡೆಗಲ್ಲಿನ ನಡುವೆ ಅಂಕುಡೊಂಕಾಗಿ ಹರಿಯುವ ಈ ಜಲಧಾರೆಯ ಸೌಂದರ್ಯ ನಯನ ಮನೋಹರ. ಸುಮಾರು 65 ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಧಾರೆಯ ಸೊಬಗನ್ನು ಸವಿಯಲು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆಯ ಮಧ್ಯ ಭಾಗದವರೆಗೆ ಈ ಜಲಪಾತದಲ್ಲಿ ನೀರು ಹರಿಯುತ್ತದೆ. ದಟ್ಟ ಅರಣ್ಯ ಪ್ರದೇಶದಲ್ಲಿರುವ ಇದನ್ನು ತಲುಪುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಇಲ್ಲಿಗೆ ಹೋಗಲು ಸರಿಯಾದ ಹಾದಿಯಿಲ್ಲ. ಕಾಡಿನ ಮಧ್ಯದಿಂದ ಕಾಲ್ನಡಿಗೆಯಲ್ಲಿ ಕಲ್ಲುಬಂಡೆಗಳನ್ನು ಹತ್ತಿ, ಹಳ್ಳಗಳನ್ನು ದಾಟುತ್ತಾ ಗಿಡಗಂಟಿಗಳ ಮಧ್ಯೆ ನುಸುಳುತ್ತಾ ಸಾಗಬೇಕು. ಇಷ್ಟೆಲ್ಲ ಸಾಧ್ಯವಾದರೆ ಮಾತ್ರ ಈ ಸುಂದರಿ ನೋಡಲು ಲಭ್ಯ. ಅದನ್ನು ತಲುಪುತ್ತಿದ್ದಂತೆ ರೋಮಾಂಚನ ಆಗುವುದು. ದಣಿವಾದರೂ ಗುರಿಮುಟ್ಟಿದ್ದೆವು ಎಂಬ ಸಂತೃಪ್ತ ಭಾವ ಖುಷಿ ತರಬಲ್ಲದು. ಮಳೆಗಾಲದ ವೇಳೆಯಲ್ಲಿ ಅರಣ್ಯಪ್ರದೇಶದಲ್ಲಿ ಸುರಿಯುವ ಮಳೆ ಹಳ್ಳದ ಮೂಲಕ ಸಾಗಿ, ಭೀಮನಬುಗುರಿ ಹಾಗೂ ಸಾವನಾಳ ಎನ್ನುವ ಪ್ರದೇಶದಿಂದ ಹರಿದು ಬಂದು ಗೋಲಾರಿ ಜಲಪಾತ ದಿಂದ ಧುಮುಕುತ್ತದೆ. ನಂತರ ಈ ನೀರು ಮುಂದೆ ಹಳ್ಳವಾಗಿ ಸಮುದ್ರಕ್ಕೆ ಸೇರುತ್ತದೆ. ಪ್ರವಾಸಿಗರ ಸ್ವರ್ಗ: ಇತ್ತೀಚಿನ ವರ್ಷಗಳಲ್ಲಿ ಈ ಜಲಪಾತ ಬಾಹ್ಯ ಜಗತ್ತಿಗೆ ಪರಿಚಯವಾಗುತ್ತಿದ್ದು, ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಮಳೆಗಾಲದಲ್ಲಿ ಇದರ ಸೊಬಗು ಇಮ್ಮಡಿಯಾಗಿರುತ್ತದೆ. ಹಾಗಾಗಿ ಆ ವೇಳೆಯಲ್ಲಿ ಪ್ರವಾಸಿಗರು ಗುಂಪು ಗುಂಪಾಗಿ ಬರುತ್ತಾರೆ. ಹೀಗೆ ಬರುವವರಲ್ಲಿ ಯುವಕರು ಹಾಗೂ ಮಧ್ಯವಯಸ್ಕರೇ ಹೆಚ್ಚು. ಸುರಕ್ಷಿತವಾದ ಪ್ರದೇಶದಲ್ಲಿ ನೀರಿಗಿಳಿದು ಆಟವಾಡುತ್ತಾ ಸಮಯ ಕಳೆಯುತ್ತಾರೆ. ಬಳಿಕ ತಾವು ತಂದ ಊಟ ಹಾಗೂ ತಿಂಡಿ ತಿನಿಸುಗಳನ್ನು ಸವಿದು ವಾಪಸಾಗುತ್ತಾರೆ. ಈ ಫಾಲ್ಸ್ ಬಳಿ ಯಾವುದೇ ರೀತಿಯ ಸೌಕರ್ಯಗಳಿಲ್ಲ. ಪ್ರವಾಸಿಗರು ಊಟ ತಿಂಡಿಗಳನ್ನು ಕಟ್ಟಿ ತರಬೇಕು. ಚಾರಣ ಪ್ರಿಯರಿಗೆ ನೆಚ್ಚಿನ ತಾಣ: ಗೋಲಾರಿ ಫಾಲ್ಸ್ ಸೌಂದರ್ಯಕ್ಕೆ ಮಾತ್ರ ಹೆಸರುವಾಸಿಯಲ್ಲ. ಬದಲಾಗಿ ಚಾರಣ ಪ್ರಿಯರ ನೆಚ್ಚಿನ ತಾಣವೂ ಹೌದು. ಚಾರಣಪ್ರಿಯರು ಇಲ್ಲಿನ ಬಂಡೆಗಲ್ಲುಗಳನ್ನು ಏರಿ ಮೇಲೆ ಸಾಗುತ್ತಾ ದಾರಿ ಮಧ್ಯದಲ್ಲಿ ಹರಿಯುವ ಹಳ್ಳವನ್ನು ದಾಟಬೇಕು. ಅಲ್ಲದೇ ಬೆಟ್ಟದಲ್ಲೇ ಈ ಜಲಧಾರೆ ಇರುವುದರಿಂದ ಗಿಡ ಮರಗಳ ಪೊದೆಯೊಳಗೆ ಸಾಗಿ ಫಾಲ್ಸ್ ತಲುಪಬೇಕು. ಇದರಿಂದ ಚಾರಣಕ್ಕಾಗಿಯೇ ಸಾಕಷ್ಟು ಜನ ಬರುತ್ತಾರೆ. ಹೀಗೆ ಬರಬೇಕು: ಕಾರವಾರದಿಂದ 17 ಕಿ.ಮೀ. ಅಂತರದಲ್ಲಿರುವ ತೋಡೂರು ಗ್ರಾಮಕ್ಕೆ ಸಾಗಬೇಕು. ಅಲ್ಲಿಂದ ಸುಮಾರು ನಾಲ್ಕು ಕಿ.ಮೀ.ನಷ್ಟು ಕಚ್ಚಾ ರಸ್ತೆಯಲ್ಲಿ ಸಾಗಿದರೆ ಅರಣ್ಯ ಪ್ರದೇಶ ಸಿಗುತ್ತದೆ. ವಾಹನಗಳಿದ್ದರೆ ಇಲ್ಲಿಯೇ ನಿಲ್ಲಿಸಿ ಸುಮಾರು 2–3 ಕಿ.ಮೀ ಅರಣ್ಯ ಪ್ರದೇಶದಲ್ಲಿ ಕಲ್ಲು ಬಂಡೆಗಳನ್ನು ಹತ್ತಿಳಿಯುತ್ತಾ ಮಧ್ಯದಲ್ಲಿ ಹರಿಯುವ ಹಳ್ಳಗಳನ್ನು ದಾಟುತ್ತಾ ಚಾರಣದ ಮೂಲಕ ಸಾಗಿದರೆ ಅಲ್ಲೇ ಸಿಗುತ್ತದೆ ಗೋಲಾರಿ ಫಾಲ್ಸ್ .