ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಆಸ್ಕೆಲ್ಮಿಂಥೀಸ್ ವಿಭಾಗದ ಒಂದು ವರ್ಗ. ನೆಮ್ಯಾಟೋ ಮಾರ್ಫ ಪರ್ಯಾಯನಾಮ. ಕೂದಲಿನ ಎಳೆಯಂತೆ ಕಾಣುವ ವಿಶಿಷ್ಟ ರೀತಿಯ ಹುಳು ಗಳನ್ನು ಒಳಗೊಂಡಿದೆ. ಈ ಹುಳುಗಳು 15-20 ಸೆಂಮೀ ಉದ್ದವಾಗಿಯೂ ತುಂಬ ತೆಳುವಾಗಿಯೂ ಇರುವುದರಿಂದ ಇವಕ್ಕೆ ಕುದುರೆ ಕೂದಲು ಹುಳು ಗಳೆಂಬ ರೂಢಿನಾಮವಿದೆ. ಈ ವರ್ಗದಲ್ಲಿ ಗೋರ್ಡಿಯಾಯ್ಡಿಯ ಮತ್ತು ನೆಕ್ಟೊನೆಮಟಾಯ್ಡಿಯ ಎಂಬ ಎರಡು ಗಣಗಳಿವೆ. ಮೊದಲಿನ ಗಣಕ್ಕೆ ಸೇರಿದ ಹುಳುಗಳು ಸಿಹಿನೀರಿನಲ್ಲೂ ಎರಡನೆಯ ಗಣಕ್ಕೆ ಸೇರಿದವು ಸಾಗರದ ಉಪ್ಪುನೀರಿನಲ್ಲೂ ವಾಸಿಸುತ್ತವೆ. ಎರಡು ಬಗೆಯ ಡಿಂಭಗಳು ಕೀಟಗಳ ಇಲ್ಲವೆ ಇತರ ರೀತಿಯ ಸಂಧಿಪದಿಗಳ ದೇಹದಲ್ಲಿ ಪರಾವಲಂಬಿಗಳಾಗಿ ಜೀವಿಸುತ್ತವೆ. ಪ್ರೌಢ ಜೀವಿಗಳು ಮಾತ್ರ ಸ್ವತಂತ್ರಜೀವನ ನಡೆಸುತ್ತವೆ.

ಗೋರ್ಡಿಯೇಸಿಯ


ಮೇಲೆ ಹೇಳಿದಂತೆ ತೆಳುವಾದ ಹಾಗೂ ಕೂದಲಿನಂತೆ ಕಾಣುವ ಉದ್ದವಾದ ದೇಹ, ಹೊರಚರ್ಮವನ್ನು ಸಂಪೂರ್ಣವಾಗಿ ಆವರಿಸಿರುವ ಮತ್ತು ಹೊರಚರ್ಮ ದಿಂದಲೇ ಉತ್ಪತ್ತಿಯಾಗಿರುವ ದಪ್ಪವಾದ ಕ್ಯೂಟಿಕಲ್ ಪದರ, 3 ಇಲ್ಲವೆ 4 ಪ್ರತ್ಯೇಕ ನಾಲೆಗಳಾಗಿ ವಿಭಾಗವಾಗಿರುವ ದೇಹಾಂತರಾವಕಾಶ, ಡಿಂಭಗಳಲ್ಲಿ ಸಂಪೂರ್ಣವಾಗಿ ರೂಪುಗೊಂಡಿದ್ದು ಪ್ರೌಢ ಜೀವಿಗಳಲ್ಲಿ ಕ್ಷೀಣವಾಗಿರುವ ಜೀರ್ಣಾಂಗ, ಸರಳವಾದ ಕೊಳವೆಯಂತಿರುವ ಜಠರ, ರಕ್ತಪರಿಚಲನೆ, ಉಸಿರಾಟ ಮತ್ತು ವಿಸರ್ಜನೆಯ ಅಂಗಗಳು ಇಲ್ಲದಿರುವುದು, ಅನ್ನನಾಳದ ಸುತ್ತ ಉಂಗುರದಂತಿರುವ ನರಮಂಡಲ-ಇವು ಗೋರ್ಡಿಯೇಸಿಯ ವರ್ಗದ ಜೀವಿಗಳ ಮುಖ್ಯ ಲಕ್ಷಣಗಳು.


ಗೋರ್ಡಿಯೇಸಿಯಕ್ಕೆ ಸೇರಿದ ಜೀವಿಗಳು ಭಿನ್ನಲಿಂಗಿಗಳು. ಜನನಾಂಗಗಳು ದೇಹದುದ್ದಕ್ಕೂ ವ್ಯಾಪಿಸಿವೆ. ನೀರಿನಲ್ಲಿ ಬೆಳೆಯುವ ಜೊಂಡಿನ ಮೇಲೆ ಉದ್ದುದ್ದನೆಯ ಸರಪಳಿಗಳ ರೀತಿಯಲ್ಲಿ ಇವು ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಯೊಡೆದು ಹೊರಬರುವ ಡಿಂಭಗಳು ಯಾವುದಾದರೂ ಜಲವಾಸಿ ಕೀಟದ ದೇಹವನ್ನು ಸೇರಿ ತಮ್ಮ ಜೀವನದ ಪ್ರಥಮ ಹಂತವನ್ನು ಕಳೆಯುತ್ತವೆ. ಅನಂತರ ಜೀರುಂಡೆ, ಮಿಡತೆ ಇತ್ಯಾದಿ ಇನ್ನೊಂದು ಬಗೆಯ ಆತಿಥೇಯ ಕೀಟದ ದೇಹದೊಳಕ್ಕೆ ಸಾಗುತ್ತವೆ. ಇಲ್ಲಿ ತಮ್ಮ ಡಿಂಭಾವಸ್ಥೆಯನ್ನು ಪೂರ್ಣಗೊಳಿಸಿ ಪ್ರೌಢಾವಸ್ಥೆ ತಲಪಿ ಜಲಮಾಧ್ಯಮಕ್ಕೆ ಬರುತ್ತವೆ.