ಗೋಕಾಕ ಆಯೋಗ ರಚನೆಯ ಹಿನ್ನಲೆ
ಗೋಕಾಕ ಆಯೋಗವು ರಚನೆಯಾಗುವ ಹಿಂದೆ ಕರ್ನಾಟಕದ ಪ್ರೌಢಶಾಲೆಗಳಲ್ಲಿ ಕಲಿಸುತ್ತಿದ್ದ ವಿವಿಧ ಭಾಷೆಗಳ ವಿಷಯದಲ್ಲಿ ಒಂದು ವಿವಾದವೆದ್ದಿತ್ತು. ವಿವಿಧ ಮಾಧ್ಯಮದ ಪ್ರೌಢಶಾಲೆಗಳಲ್ಲಿ ಕನ್ನಡ, ಇಂಗ್ಲಿಷು, ತಮಿಳು, ತೆಲುಗು, ಮರಾಠಿ ಮುಂತಾದ ಆಡುಮಾತುಗಳ ಜೊತೆಗೆ ಸಂಸ್ಕೃತವೂ ಪ್ರಥಮ ಭಾಷೆಯಾಗಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಸಂಸ್ಕೃತ ಕಲಿಯುವ ವ್ಯವಸ್ಥೆ ಇರದಿದ್ದರೂ, ಪ್ರೌಢಶಾಲೆಗಳಲ್ಲಿ ಆ ಭಾಷೆಯನ್ನು ಮೊದಲ ಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸದಿಂದ ಶಿಕ್ಷಣ ಪ್ರಾರಂಭವಾಗುತ್ತಿತ್ತು. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯು ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಆರಿಸಿಕೊಂಡಿದ್ದರೆ ತುಂಬ ಸುಲಭವಾದ ಪಾಠಗಳನ್ನು ಕಲಿತು, ಸಾಕಷ್ಟು ಹೆಚ್ಚು ಕಲಿತ ಇತರ ಭಾಷೆಗಳ ವಿದ್ಯಾರ್ಥಿಗಳಿಗಿಂತ ತುಂಬ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದ. ಅಲ್ಲದೆ, ವಿದ್ಯಾರ್ಥಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಸಂಸ್ಕೃತ ಅಧ್ಯಾಪಕರು ತುಂಬ ಧಾರಾಳವಾಗಿ ಅಂಕಗಳನ್ನು ಕೊಡುವ ರೀತಿಯಿತ್ತು. ಈಗಲೂ ಇದೆ.
ಸಂಸ್ಕೃತವನ್ನು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯು ಕಲಿಯುವುದು ಮೂರು ವರ್ಷಗಳ ಕಾಲ ಮಾತ್ರ; ಕನ್ನಡ ವಿದ್ಯಾರ್ಥಿ ಪ್ರಾಥಮಿಕ ಮೊದಲ ತರಗತಿಯಿಂದಲೇ, ಅಂದರೆ ಹತ್ತು ವರ್ಷಗಳ ಕಾಲ ಕಲಿಯುತ್ತಾನೆ. ಮೂರು ವರ್ಷ ಮಾತ್ರ ಕಲಿತ ಭಾಷೆಯ ಮಟ್ಟದೊಂದಿಗೆ ಅದನ್ನು ಹೋಲಿಸುವುದು ಸರಿಯಲ್ಲ. ಆಲ್ಲದೆ, ಸಂಸ್ಕೃತ ಪತ್ರಿಕೆಯನ್ನು ವಿದ್ಯಾರ್ಥಿಗಳು ಉತ್ತರಿಸುವುದು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ. ಹೀಗಾಗಿ, ಸಂಸ್ಕೃತವನ್ನು ಮೊದಲ ಭಾಷೆಯಾಗಿ ಆರಿಸಿಕೊಂಡರೆ ಹೆಚ್ಚು ಅಂಕಗಳನ್ನು ಪಡೆಯಬಹುದು ಎಂಬ ಕಾರಣಕ್ಕಾಗಿಯೇ ಭಾಷೆಯನ್ನು ಆರಿಸಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಬರಬರುತ್ತ ಹೆಚ್ಚಾಗುತ್ತ ಸಾಗಿತು. ಇತರ ಮಾತೃಭಾಷೆಯ ಜನರಿಗಿಂತ ನಿರಭಿಮಾನಿಗಳಾದ ಕನ್ನಡಿಗರು ತಮ್ಮ ಮಕ್ಕಳನ್ನು ಸಂಸ್ಕೃತ ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತಿದ್ದರು.ಅದರ ಪರಿಣಾಮವಾಗಿ ಪ್ರೌಢಶಾಲೆಗಳಲ್ಲಿ ಕನ್ನಡವನ್ನು ಮೊದಲ ಭಾಷೆಯಾಗಿ ಓದುವ ವಿದ್ಯಾರ್ಥಿಗಳ ಸಂಖ್ಯೆಯು ಗಣನೀಯವಾಗಿ ಇಳಿಯತೊಡಗಿತು. ಘನತೆಯ ಪ್ರತೀಕಗಳಾದ ಕೆಲವು ಶಾಲೆಗಳಲ್ಲಿಯಂತೂ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಅತ್ಯಲ್ಪವಾಗಿತ್ತು. ಇದರಿಂದ ಕಾಲೇಜುಗಳಲ್ಲಿ ಕನ್ನಡವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಯಿತು.
ಇದರೊಡನೆ ಕನ್ನಡದಂತಹ ಆಡು ನುಡಿಗಳನ್ನು ಮಕ್ಕಳು ಹುಟ್ಟಿದ ಕ್ಷಣದಿಂದಲೇ ಕಿವಿಗೆ ಹಾಕಿಕೊಳ್ಳುತ್ತ ಪ್ರಯತ್ನವಿಲ್ಲದೆ ಆ ಭಾಷೆಯಲ್ಲಿ ವ್ಯವಹರಿಸುವ ಶಕ್ತಿಯನ್ನು ಗಳಿಸಿಕೊಳ್ಳುತ್ತವೆ. ಇದನ್ನೇ ಪ್ರಥಮ ಭಾಷೆಯೆನ್ನುವುದು. ಇಂತಹ ಭಾಷೆಗಳ ಜೊತೆಯಲ್ಲಿ ಪ್ರಪಂಚದಲ್ಲಿ ಯಾರೂ ಮಾತನ್ನೇ ಆಡದ ಸಂಸ್ಕೃತವನ್ನು ಸೇರಿಸುವುದು ಅತ್ಯಂತ ಅವೈಜ್ಞಾನಿಕವಾದ ಪರಿಪಾಠ.
ಈ ಮೇಲಿನ ಕಾರಣಗಳಿಂದ ಕರ್ನಾಟಕದ ಕೆಲವು ಹಿರಿಯ ವಿಚಾರವಂತರು ಸರ್ಕಾರಕ್ಕೆ ಮನವಿ ಸಲ್ಲಿಸಿ ಸಂಸ್ಕೃತವನ್ನು ಮೊದಲ ಭಾಷೆಯ ಸ್ಥಾನದಿಂದ ತೆಗೆಯಬೇಕೆಂದು ಒತ್ತಾಯಿಸಿದರು. ದೀರ್ಘಕಾಲ ಸಂಸ್ಕೃತ ಪರವಾದಿಗಳು ಸಂಸ್ಕೃತಕ್ಕೆ ಮೊದಲಸ್ಥಾನ ನೀಡುವುದರ ಪರವಾಗಿ ಚರ್ಚೆಗಳಲ್ಲಿ ತೊಡಗಿದರು. ಕೊನೆಗೆ ಸಂಸ್ಕೃತ ಆಡುಭಾಷೆಗಳೊಡನೆ ಪ್ರಥಮ ಭಾಷೆಗಳ ಸಾಲಿನಲ್ಲಿ ಕೂರುವುದು ಅವೈಜ್ಞಾನಿಕವೆಂಬುದನ್ನರಿತ ಕರ್ನಾಟಕ ಸರ್ಕಾರವು ೧೯೭೯ರ ಅಕ್ಟೋಬರ್‌ನಲ್ಲಿ ಒಂದು ಆಜ್ಞೆಯನ್ನು ಹೊರಡಿಸಿತು. ಅದರಂತೆ ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಮಾತ್ರ ಓದಲು ಅವಕಾಶವಿತ್ತು.
ಆದರೆ ಇದರಿಂದ ಮತ್ತಷ್ಟು ಜೋರಾಗಿ ವಿವಾದವು ಮುಂದುವರೆಯಿತು. ಈ ವಿವಾದವನ್ನು ಉಚ್ಚ ನ್ಯಾಯಾಲಯಕ್ಕೂ ಒಯ್ಯಲಾಯಿತು. ವಿಧಾನಮಂಡಲದ ಎರಡೂ ಸಭೆಗಳಲ್ಲಿ ಇದರ ಬಗ್ಗೆ ಚರ್ಚೆಯಾಯಿತು. ಆದರೆ ಅಲ್ಲಿಯೇ ವಿವಾದವನ್ನು ತೀರ್ಮಾನಿಸುವುದಕ್ಕಿಂತ, ಆ ವಿಷಯವನ್ನು ತಜ್ಞರ ಸಮಿತಿಯೊಂದಕ್ಕೆ ಒಪ್ಪಿಸಿ, ಅದರ ನಿರ್ಣಯವನ್ನನುಸರಿಸಿ ತೀರ್ಮಾನ ಕೈಗೊಳ್ಳುವುದು ಸೂಕ್ತವೆಂಬ ಸರ್ಕಾರದ ಅಭಿಪ್ರಾಯವನ್ನು ಸದಸ್ಯರು ಅನುಮೋದಿಸಿದರು.
ಇದಕ್ಕೆ ಅನುಗುಣವಾಗಿ ಸರ್ಕಾರವು ಕ್ರಮಾಂಕ ಇಡಿ-೧೧೩/ಎಸ್ ಒ ಎಚ್/೭೯, ದಿನಾಂಕ ೫ನೇ ಜುಲೈ, ೧೯೮೦ರಂದು ಆಜ್ಞೆಯೊಂದನ್ನು ಹೊರಡಿಸಿ ಒಂದು ಸಮಿತಿಯನ್ನು ನೇಮಿಸಿತು. ಡಾ| ವಿ. ಕೃ. ಗೋಕಾಕ ಇದರ ಅಧ್ಯಕ್ಷರು. ಶ್ರೀಯುತರಾದ ಜಿ.ನಾರಾಯಣ, ಎಸ್. ಕೆ. ರಾಮಚಂದ್ರರಾವ್, ತ. ಸು. ಶಾಮರಾವ್, ಕೆ. ಕೃಷ್ಣಮೂರ್ತಿ, ಎಚ್. ಪಿ. ಮಲ್ಲೇದೇವರು ಈ ಸಮಿತಿಯ ಇತರ ಸದಸ್ಯರುಗಳಾದರು. ಆಗ ಶಿಕ್ಷಣ ಇಲಾಖೆಯ ಅಡಿಷನಲ್ ಕಾರ್ಯದರ್ಶಿಗಳಾಗಿದ್ದ ಶ್ರೀ ಎಸ್.ಮಂಚಯ್ಯ ಈ ಸಮಿತಿಯ ಪದವಿಮಿತ್ತ ಕಾರ್ಯದರ್ಶಿಗಳಾಗಿ ನೇಮಕಗೊಂಡರು.
ಸಮಿತಿಯು ಪರಿಶೀಲಿಸಬೇಕಾಗಿದ್ದ ವಿಷಯಗಳು
ಬದಲಾಯಿಸಿಸಮಿತಿಯು ಪರಿಶೀಲನೆ ನಡೆಸಿ ತನ್ನ ಶಿಫಾರಸುಗಳನ್ನು ಮಾಡಲು ಸರ್ಕಾರವು ಅದರ ಮುಂದೆ ಮೂರು ಪ್ರಶ್ನೆಗಳನ್ನು ಇಟ್ಟಿತು. ೧) ಸಂಸ್ಕೃತವು ಶಾಲಾ ಪಠ್ಯವಿಷಯಗಳಲ್ಲಿ ಅಭ್ಯಾಸದ ಒಂದು ವಿಷಯವಾಗಿ ಉಳಿಯಬೇಕೆ? ೨) ಹಾಗೆ ಉಳಿಯಬೇಕಾದರೆ ಕನ್ನಡಕ್ಕೆ ಪರ್ಯಾಯವಾಗದೇ ಅದನ್ನು ಉಳಿಸಿಕೊಳ್ಳುವುದು ಹೇಗೆ? ೩) ತ್ರಿಭಾಷಾ ಸೂತ್ರದಂತೆ ಕನ್ನಡವನ್ನು ಕಡ್ಡಾಯಮಾಡಿ ಮಿಕ್ಕ ಭಾಷೆಗಳಲ್ಲಿ ಯಾವುದಾದರೂ ಎರಡನ್ನು ಆರಿಸಿಕೊಳ್ಳುವ ಸ್ವಾತಂತ್ರ ವನ್ನು ವಿದ್ಯಾರ್ಥಿಗಳಿಗೇ ಬಿಡುವುದು ಸೂಕ್ತವೇ? ಈ ವಿಷಯಗಳ ಬಗ್ಗೆ ತನ್ನ ಶಿಫಾರಸುಗಳನ್ನು ಮೂರು ತಿಂಗಳೊಳಗಾಗಿ ನೀಡಬೇಕೆಂದು ಸರ್ಕಾರವು ಸಮಿತಿಗೆ ಆದೇಶಿಸಿತು.
ಗೋಕಾಕ್ ಸಮಿತಿಯು ರಾಜ್ಯಾದ್ಯಂತ ಸಂಚಾರಮಾಡಿ (ಕೆಲವೇಳೆ ಪ್ರತಿರೋಧ ಎದುರಿಸಿ) ಅಂತಿಮವಾಗಿ ಒಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಅದಕ್ಕನುಗುಣವಾಗಿ ಪ್ರೌಢಶಾಲೆಗಳಲ್ಲಿ ೧೫೦ ಅಂಕಗಳಿಗೆ ಕನ್ನಡವನ್ನು ಏಕೈಕ ಪ್ರಥಮಭಾಷೆಯಾಗಿಯೂ, ೧೦೦ ಅಂಕಗಳಿಗೆ ಮತ್ತೊಂದು ಭಾಷೆಯನ್ನು ದ್ವಿತೀಯ ಭಾಷೆಯಗಿಯೂ ಹಾಗೂ ೫೦ ಅಂಕಗಳಿಗೆ ಮಗುದೊಂದು ಭಾಷೆಯನ್ನು ತೃತೀಯ ಭಾಷೆಯಾಗಿಯೂ ಆರಿಸಿಕೊಳ್ಳುವ ಅವಕಾಶವಿರಬೇಕೆಂಬ ಶಿಫಾರಸು ಮೂಡಿ ಬಂದಿತು. ಆವರೆಗೆ ತೃತೀಯ ಭಾಷೆ ಪರೀಕ್ಷೆಗೆ ಕಡ್ಡಾಯವಾಗಿರಲಿಲ್ಲ. ಆದರೆ ಗೋಕಾಕ್ ಸಮಿತಿಯು ಎಲ್ಲ ಮೂರು ಭಾಷೆಗಳೂ ಪರೀಕ್ಷೆಗೆ ಕಡ್ಡಾಯವಾಗಿರಬೇಕೆಂದು ಅಭಿಪ್ರಾಯ ಪಟ್ಟಿತು. ಎಂಟನೆಯ ತರಗತಿಯಿಂದ ಏಕೈಕ ಪ್ರಥಮ ಭಾಷೆಯಾಗಿ ಕನ್ನಡವನ್ನು ಕಲಿಯಲು ತಕ್ಕಸಿದ್ಧತೆಯಾಗಿ ಪ್ರಾಥಮಿಕ ಮೂರನೆಯ ತರಗತಿಯಿಂದ ಕನ್ನಡವನ್ನು ಒಂದು ಕಡ್ಡಾಯ ಭಾಷೆಯಾಗಿ ಕಲಿಸಬೇಕೆಂದೂ ಸಮಿತಿ ಸೂಚಿಸಿತ್ತು.
ಆಗಿನ ಮುಖ್ಯಮಂತ್ರಿ ಶ್ರೀ ಗುಂಡೂರಾವ್ ಒಂದು ಸಭೆಯಲ್ಲಿ ಮಾತನಾಡುತ್ತ ವರದಿಯ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಲಾಗುವುದೆಂದು ಘೋಷಿಸಿದರು. ಆದರೆ ಸ್ವಲ್ಪ ಕಾಲದಲ್ಲಿಯೇ ವರದಿಯ ವಿರುದ್ಧವಾಗಿ ಅಲ್ಪಸಂಖ್ಯಾತರ ನಾಯಕರೆಂದುಕೊಂಡಿದ್ದ ಹಲವರು ವಿಧಾನಸೌಧಕ್ಕೆ ಲಾರಿಗಳಲ್ಲಿ ಜನರನ್ನು ಕರೆದೊಯ್ದು ಪ್ರದರ್ಶನ ನಡೆಸಿದರು. ಓಟಿಗಾಗಿ ಏನು ಮಾಡಲೂ ಹೇಸದ ಸರ್ಕಾರವು ಅಲ್ಪಸಂಖ್ಯಾತರು ವಿರೋಧಿಸಿಯಾರೆಂದು ಹೆದರಿ ವರದಿಯು ಜಾರಿಯ ಬಗ್ಗೆ ಮತ್ತೆ ಮೌನವಹಿಸಿತು.
ಸರ್ಕಾರದ ಮೌನ ಕನ್ನಡಿಗರಲ್ಲಿ ಅನುಮಾನದ ಹಿರಿಯ ಅಲೆಗಳನ್ನೇ ಏಳಿಸಿತು. ತಡಮಾಡಿದರೆ ಮತ್ತೆ ಒಂದು ವರ್ಷ ಕಾಯಬೇಕು. ಆದ್ದರಿಂದ ಕನ್ನಡದ ವ್ಯಕ್ತಿಗಳು ದೊಡ್ಡ ದನಿಯಲ್ಲಿ ಸರ್ಕಾರದ ಮೇಲೆ ಒತ್ತಾಯತರಲು ಪ್ರಯತ್ನಿಸಿದರು. ವರದಿಯ ಅನುಷ್ಠಾನದಿಂದ ಆಗಬಹುದಾದ ಪರಿಣಾಮಗಳ ಕುರಿತು ಚರ್ಚೆ-ವಿಚಾರಸಂಕಿರಣಗಳಾದವು. ಇಷ್ಟಾದರೂ ಸರ್ಕಾರ ಕ್ರಿಯಾಶೀಲವಾಗಲಿಲ್ಲ. ಜನತೆ ಬೇಸತ್ತು ಹೋರಾಟಕ್ಕೆ ಸಿದ್ಧವಾಯಿತು.
ಚಳವಳಿಯ ಆರಂಭ
ಬದಲಾಯಿಸಿ೧೯೮೨ನೇ ಇಸವಿ ಏಪ್ರಿಲ್ ತಿಂಗಳು ಚಳುವಳಿ ಪ್ರಾರಂಭವಾಯಿತು. ಮುಂದೆ ಹಿರಿದಾಗಿ ಬೆಳೆದ ಚಳುವಳಿಯ ಬೀಜಗಳು ಆಗ ಬಿತ್ತಲ್ಪಟ್ಟವು. ಅದುವರೆಗೆ ಕೇವಲ ಚರ್ಚೆ-ವಿಚಾರ ವಿನಿಮಯಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದ ಸಾಹಿತಿಗಳು, ಕಲಾವಿದರರು ಹಾಗೂ ಬುದ್ಧಿಜೀವಿಗಳು ನೇರ ಹೋರಾಟಕ್ಕೆ ಕೈ ಹಾಕಿದರು. ಶ್ರೀ ಶಂಬಾ ಜೋಷಿಯವರ ನೇತೃತ್ವದಲ್ಲಿ ಧಾರವಾಡದಲ್ಲಿ ಕನ್ನಡ ಕ್ರಿಯಾಸಮಿತಿಯಿಂದ ಮೊದಲು ನೇರ ಹೋರಾಟ ಪ್ರಾರಂಭವಾಯಿತು. ಕುವೆಂಪು ಅವರ ಹಿರಿತನದಲ್ಲಿ ಮೈಸೂರು ಆ ದಾರಿಯನ್ನು ಅನುಸರಿಸಿತು. ಇದರಿಂದ ಸ್ಫೂರ್ತಿಗೊಂಡ ಬೆಂಗಳೂರಿನ ಬುದ್ಧಿಜೀವಿಗಳು ಸಾಹಿತಿಗಳ ಕಲಾವಿದರ ಬಳಗದ ನೇತೃತ್ವದಲ್ಲಿ ಸರ್ಕಾರದ ಮೆಟ್ಟಲುಗಳ ಮುಂಭಾಗದಲ್ಲಿಯೇ ಬೀದಿ ಚಳುವಳಿಯನ್ನು ಪ್ರಾರಂಭಿಸಿದರು.