ಗೇಲಾರ್ಡಿಯ
ಆಸ್ಟರೇಸೀ (ಕಂಪಾಸಿಟೀ) ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಬಲು ಸುಂದರವಾದ ಹೂ ಬಿಡುವ ಈ ಸಸ್ಯವನ್ನು ಕುಂಡಸಸ್ಯ, ಅಂಚುಸಸ್ಯ, ಮಡಿಸಸ್ಯವಾಗಿ ಬಳಸುತ್ತಾರೆ. ಹೂಗಳಿಗೆ ಉದ್ದವಾದ ತೊಟ್ಟು ಇರುವುದರಿಂದ ಹೂದಾನಿಗಳಲ್ಲಿಟ್ಟು ಗೃಹಾಲಂಕರಣಗಳಲ್ಲಿ ಬಳಸುವುದೂ ಉಂಟು. ಗೇಲಾರ್ಡಿಯದ ಮೂಲಸ್ಥಾನ ಅಮೆರಿಕ. ಇದರಲ್ಲಿ ಸುಮಾರು 20 ಪ್ರಭೇದಗಳು ಇವೆ. ಇವುಗಳಲ್ಲಿ ಆಂಬ್ಲಿಯೋಡಾನ್, ಪಲ್ಚೆಲ ಮತ್ತು ಅರಿಸ್ಟೇಟ ಎಂಬವು ಅತಿಮುಖ್ಯವಾದುವು. ಇವುಗಳಲ್ಲಿ ಕೆಲವು ಏಕವಾರ್ಷಿಕ ಮೂಲಿಕೆಗಳಾದರೆ ಇನ್ನು ಕೆಲವು ಬಹುವಾರ್ಷಿಕಗಳು. ಗೇಲಾರ್ಡಿಯದ ಎಲೆಗಳಿಗೆ ಒರಟು ಮೈಯೂ ದಂತಿತ ಅಂಚೂ ಉಂಟು. ಇವುಗಳ ಜೋಡಣೆ ಪರ್ಯಾಯ ಮಾದರಿಯದು. ಹೂಗಳು ಬಲುಸೊಗಸಾದ ಮತ್ತು ಆಕರ್ಷಕವಾದ ಚಂಡು ಮಂಜರಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಇವುಗಳ ಬಣ್ಣ ಕಿತ್ತಳೆ, ಕಡುಗೆಂಪು, ಊದಾ, ಹಳದಿ ಮುಂತಾಗಿ ವೈವಿಧ್ಯಮಯ. ಅಲ್ಲದೆ ಹೂಗೊಂಚಲಿನ ಕದಿರುಪುಷ್ಪಕಗಳು ಒಂದು ಬಣ್ಣದವಾದರೆ ಬಿಂಬಪುಷ್ಪಕಗಳು ಇನ್ನೊಂದು ಬಣ್ಣದವಾಗಿದ್ದು ಹೂವಿನ ಚೆಲುವನ್ನು ಹೆಚ್ಚಿಸುತ್ತವೆ. ಹೂಗಳು ಬಹುಕಾಲ ಬಾಡದೆ ಇರುತ್ತವಾದ್ದರಿಂದ ಗೇಲಾರ್ಡಿಯ ಬಲು ಜನಪ್ರಿಯವಾಗಿದೆ.
ಗೇಲಾರ್ಡಿಯ ಗಿಡಗಳನ್ನು ವರ್ಷದ ಯಾವ ಕಾಲದಲ್ಲಾದರೂ ಬೆಳೆಸಬಹುದು. ಇವನ್ನು ಬೀಜಗಳ ಮೂಲಕ ವೃದ್ಧಿಸುವುದೇ ರೂಢಿಯಲ್ಲಿರುವ ಕ್ರಮ. ಬಹುವಾರ್ಷಿಕ ಬಗೆಗಳನ್ನು ಬೇರಿನ ತುಂಡುಗಳಿಂದಲೂ ವೃದ್ಧಿಸಬಹುದು. ಮೊದಲು ಒಟ್ಲು ಪಾತಿಯಲ್ಲಿ ಬೀಜ ಬಿತ್ತಿ, ಸಸಿಗಳನ್ನು ಬೆಳೆಸಿ, ಒಂದು ತಿಂಗಳ ಅನಂತರ ಸಸಿಗಳನ್ನು ಅಪೇಕ್ಷಿತ ಸ್ಥಳಗಳಲ್ಲಿ ನಾಟಿ ಮಾಡಬೇಕು. ಆಗಿಂದಾಗ್ಗೆ ಸೂಕ್ತ ಪರಿಮಾಣಗಳಲ್ಲಿ ಕೊಟ್ಟಿಗೆ ಗೊಬ್ಬರ, ಎಲೆಗೊಬ್ಬರ, ಅಮೋನಿಯಂ ಸಲ್ಫೇಟುಗಳನ್ನು ಹಾಕುತ್ತ ಆರೈಕೆ ಮಾಡಬೇಕು. ನಾಟಿ ಮಾಡಿದ 3-4 ತಿಂಗಳ ಬಳಿಕ ಗಿಡಗಳು ಹೂಬಿಡತೊಡಗುತ್ತವೆ.