ಪೀಠಿಕೆ

ಬದಲಾಯಿಸಿ

ತುಳುನಾಡ ವೀರಪುರುಷರಾದ ಕೋಟಿಚೆನ್ನಯರ ತಾಯಿ ದೇಯಿಬೈದ್ಯೆತಿಗೆ ಪುನರ್ ಜೀವನ ನೀಡಿದ ಮನೆಯೇ ಗೆಜ್ಜೆಗಿರಿನಂದನ ಹಿತ್ತಿಲುಮನೆ. ಅದು ಸಾಯನಬೈದ್ಯನ ಮನೆ. ನಾಟಿವೈದ್ಯನಾಗಿದ್ದ ಸಾಯನ ಮನೆ ಆಗಿನ ಕಾಲದ ಒಂದು ಆರೋಗ್ಯ ಕೇಂದ್ರವಾಗಿತ್ತು. ತನ್ನ ಕುಲಕಸುಬಾದ ಮೂರ್ತೆಗಾರಿಕೆ ಆಗಿದ್ದ ಸಾಯನ ನಾಟಿವೈದ್ಯನೂ ಆಗಿದ್ದರು.

ಇತಿಹಾಸ

ಬದಲಾಯಿಸಿ

ಸಾಯನ ಬೈದ್ಯ ಸಂಕಮಲೆ ಬೆಟ್ಟಕ್ಕೆ ಮೂರ್ತೆಗಾರಿಕೆಗಾಗಿ ಹೋಗಿದ್ದ. ತಾಳೆಮರದ ತುದಿಯಲ್ಲಿರುವ ಸಾಯನನಿಗೆ ಹೆಣ್ಣು ಮಗಳೊಬ್ಬಳ ಅಳುವ ಶಬ್ದ ಕೇಳಿಸಿತು. ಅತ್ತಿತ್ತ ಕಣ್ಣಾಡಿಸಿ ಮರದಿಂದ ಇಳಿಯುತ್ತಾನೆ. ಇಳಿಯುತ್ತಲೇ ತಾಳೆಮರವೇರಲು ಕಟ್ಟಿದ ಬಿದಿರಿನ ಗಂಟಿಗೆ ಎರಗಿದ ಹೆಣ್ಣಮಗಳು ರೋಧಿಸುತ್ತಿದ್ದಳು. ಆಕೆಯನ್ನು ವಿಚಾರಿಸಲಾಗಿ ಅವಳು ತನ್ನ ವೃತ್ತಾಂತವನ್ನೆಲ್ಲಾ ಹೇಳಿ ತನ್ನನ್ನು ಗಂಡಾಂತರದಿಂದ ಪಾರುಮಾಡುವಂತೆ ಕೇಳಿಕೊಂಡಳು. ಆಕೆಯನ್ನು ತಂಗಿಯಾಗಿ ಸ್ವೀಕರಿಸಿ ಮನೆಗೆ ಕರೆದುಕೊಂಡು ಬಂದು ಅವಳಿಗೆ ವೈದ್ಯ ವಿದ್ಯೆಯನ್ನು ಕರುಣಿಸಿ ಸಾಕಿ-ಸಲಹಿದ. ಮುಂದೆ ಅವಳನ್ನು ತನ್ನ ಬಾವನಾದ ಕಾಂತಣ್ಣ ಬೈದ್ಯನಿಗೆ ಕೊಟ್ಟು ವಿವಾಹ ಮಾಡಿದ. ದೇಯಿಬೈದ್ಯೆತಿಗೆ ಆಶ್ರಯ ನೀಡಿ ಸಕಲ ನಾಟಿವಿದ್ಯೆಯನ್ನು ನೀಡಿ ಅವಳಿಗೆ ಬದುಕು ನೀಡದ ಮನೆಯೇ ಗಜ್ಜೆಗಿರಿನಂದನ ಹಿತ್ತಿಲುಮನೆ. ಕೋಟಿಚೆನ್ನಯರನ್ನು ಬಲ್ಲಾಳರು ಸಾಯನ ಬೈದ್ಯನ ಮನೆಗೆ ಕಳುಹಿಸಿಕೊಡುತ್ತಾರೆ. ಅವರ ಖರ್ಚು ವೆಚ್ಚಗಳನ್ನು ರಾಜನೇ ನೋಡಿಕೊಂಡು ಕೋಟಿ-ಚೆನ್ನಯರು ಸಾಯನ ಬೈದ್ಯನ ಮನೆಯಲ್ಲಿ ಬೆಳೆಯುತ್ತಾರೆ. ಅರಮನೆಯಿಂದ ಕೆಳ ಒಡಿಕಂಬಳದ ಗದ್ದೆಯನ್ನು ಬೇಸಾಯ ಮಾಡಿಕೊಳ್ಳುವುದಕ್ಕಾಗಿ ನೀಡಲಾಗಿದ್ದರೂ, ಮಾವ ಸಾಯಾನನೊಂದಗೆ ಮೂರ್ತೇಗಾರಿಕೆ ಮತ್ತು ಬೇಸಾಯ ಮಾಡಿಕೊಂಡು ಇದೇ ಮನೆಯಲ್ಲಿ ವಾಸ ಇದ್ದರು.

ಏನಿದೆ ಗೆಜ್ಜೆಗಿರಿ ನಂದನದಲ್ಲಿ

ಬದಲಾಯಿಸಿ

ಸರೋಳಿಮಂಜಕಟ್ಟೆ

ಬದಲಾಯಿಸಿ

ಬಲ್ಲಾಳರು ದೇಯಿಬೈದ್ಯೆತಿಯನ್ನು ಕರೆತರಲು ಕಳುಹಿಸಿದ ದಂಡಿಗೆ ಇರಿಸಿದ ಸರೋಳಿಮಂಜಕಟ್ಟೆ ಈಗಲೂ ಇದೆ. ಶೇಂದಿ ಮಾರಾಟ ಮಾಡುತ್ತಿದ್ದ ಜಾಗವೆಂದು ಅದನ್ನು ಗುರುತಿಸುವುದಾದರೂ, ಅದು ಸುಳ್ಳು ಕಲ್ಪನೆ ಎಂದು ಕಾಣಬರುತ್ತಿವೆ. ಈ ಕಟ್ಟೆಯಲ್ಲಿ ಪವಾಡವೆಂಬಂತೆ ಒಂದರ ನಂತರ ಇನ್ನೊಂದು ಸರೋಳಿಮರ ಅದೇ ಜಾಗದಲ್ಲಿ ಬೆಳೆಯುತ್ತಿದೆ.

ಧೂಮಾವತಿ ದೈವಸ್ಥಾನ

ಬದಲಾಯಿಸಿ

ಸರೋಳಿ ಮಂಜಕಟ್ಟೆ ಮುಂಭಾಗದಲ್ಲಿ ಧೂಮಾವತಿ ದೈವದ ಗುಡಿಯಿದೆ. ದೇಯಿಬೈದ್ಯೆತಿಯ ಮರಣಾನಂತರ ಆಕೆ ಆರಾಧಿಸುತ್ತಿದ್ದ ಧೂಮಾವತಿ ದೈವವನ್ನು ನಂಬಿ ಈಗಲೂ ಸ್ಥಳದಲ್ಲಿ ಆರಾಧನೆ ನಡೆಯುತ್ತಿದೆ.

ದೇಯಿಬೈದ್ಯೆತಿಯ ಸಮಾಧಿ

ಬದಲಾಯಿಸಿ

ಗೆಜ್ಜೆಗಿರಿಯಲ್ಲಿರುವ ದೇಯಿಬೈದ್ಯೆತಿ ಸಮಾಧಿಗೆ ಸುಮರು ೪೫೦ ವರುಷಗಳ ಇತಿಹಾಸವಿದೆ. ಪಡುಮಲೆಯ ಅರಸು ಬಲ್ಲಾಳರಿಗೆ ಚಿಕಿತ್ಸೆ ನೀಡಲೆಂದು ಗೆಜ್ಜೆಗಿರಿಮನೆಯಿಂದ ತೆರಳಿದ್ದ ದೇಯಿಬೈದ್ಯೆತಿ ನಾಟಿ ವೈದ್ಯಕೀಯದ ಮೂಲಕ ಬಲ್ಲಾಳರ ಜೀವ ಉಳಿಸಿದರು. ಅರಸು ಗುಣಮುಖನಾದ ಬಳಿಕ ಮತ್ತೆ ತನ್ನ ಮನೆಗೆ ಮರಳುತ್ತಿದ್ದ ಸಮಯ ಹೆರಿಗೆನೋವು ಕಾಣಿಸಿಕೊಂಡ ಕಾರಣ ಬಲ್ಲಾಳರೇ ಮುಂದೆ ನಿಂತು ಹೆರಿಗೆಗೆ ವ್ಯವಸ್ಥೆ ಮಾಡಿದ್ದರು. ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ೧೬ನೇ ದಿನವೇ ದೇಯಿಬೈದ್ಯೆತಿ ಬೀಡಿನ ಸಮೀಪದ ಕೆರೆಯಲ್ಲಿ ಆಕಸ್ಮಿಕ ಮರಣ ಹೊಂದಿದ್ದರು. ವಿಷಯ ತಿಳಿದ ಅಣ್ಣ ಸಾಯನಬೈದ್ಯರು ಸಹೋದರಿಯ ಕಳೇಬರವನ್ನು ಗೆಜ್ಜೆಗಿರಿಮನೆಗೆ ತಂದು ದಫನ ಮಾಡಿದ್ದರು. ಬಳಿಕ ಅವಳಿ ಹಸುಳೆಗಳನ್ನು ( ಕೋಟಿಚೆನ್ನಯರು) ಕೂಡ ಮನೆಗೆ ತಂದು ಸಾಕಿದ್ದರು. ತಾಯಿ, ಮಾವನ ಮನೆಯಾದ ಗೆಜ್ಜೆಗಿರಿಯಲ್ಲೇ ಮಕ್ಕಳು ಬೆಳೆದು ದೊಡ್ಡವರಾಗಿದ್ದರು. ಅದೇ ಮನೆ ಅವರ ಪಾಲಿಗೆ ಸ್ವಂತ ಮನೆಯೂ, ಕುಟುಂಬದ ಮನೆಯೂ ಆಗಿತ್ತು. ಗೆಜ್ಜೆಗಿರಿನಂದನ ಹಿತ್ತಿಲು ಮನೆ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಒಂದು ಸಮಾಜವು ಬಹಿಷ್ಕರಿಸಿದ ಹೆಣ್ಣು ಮಗಳಿಗೆ ಆಶ್ರಯ ನೀಡಿದ ಮನೆ, ಅವಳಿಗೆ ನಾಟಿವೈದ್ಯ ವಿದ್ಯೆ ನೀಡಿದ ಮನೆ, ಅವಳನ್ನು ಮದುವೆ ಮಾಡಿಕೊಟ್ಟ ಮನೆ, ಅವಳಿಗೆ ಅಪರೂಪದ ದಂಡಿಗೆಯ ರಾಜ ಉಪಚಾರದ ಮರ್ಯಾದೆ ಪಡೆದ ಮನೆ, ಕೋಟಿ-ಚೆನ್ನಯರು ಆಟವಾಡಿದ ಮನೆ, ವಿದ್ಯೆಕಲಿತು ಪರಾಕ್ರಮಿಶಾಲಿಗಳಾಗಿ ಬೆಳೆದ ಪೂಜನೀಯ ಸ್ಥಳವಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. ಶಂಕರ್ ನಾರಯಣ ಡಿ ಪಿ, ಎಪಿಕ್ ಆಫ್ ದಿ ವಾರಿಯರ್ಸ್, ನ್ಯಾಷನಲ್ಸ್ ಫೋಕ್ಲೋರ್ ಸಪೋರ್ಟ್ ಸೆಂಟರ್, ೨೦೦೭.