ಮಾನವನ ಜೀವನದ ವ್ಯವಹಾರಗಳಿಗೆ ಬೇಕಾಗುವ ಅನೇಕ ವಿಧವಾದ ಗೃಹಗಳ ರಚನಕ್ರಮ (ಹೌಸ್ ಡಿಸೈನ್). ವೈವಿಧ್ಯಯುತವಾದ ಈಗಿನ ವ್ಯವಹಾರಗಳಿಗೋಸ್ಕರ ಬಳಸಲಾಗುತ್ತಿರುವ ಗೃಹಗಳನ್ನು ವಿಶಾಲವಾಗಿ ವಾಸಗೃಹಗಳು, ಸಾರ್ವಜನಿಕ ಗೃಹಗಳು, ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಗೃಹಗಳು ಮತ್ತು ವಿಶೇಷ ರೀತಿಯ ಗೃಹಗಳು ಎಂಬುದಾಗಿ ನಾಲ್ಕು ವಿಧಗಳಾಗಿ ವಿಂಗಡಿಸಬಹುದು. ವಸತಿಗೃಹಗಳು ಜನರ ವಾಸಕ್ಕೋಸ್ಕರ ನಿರ್ಮಿತವಾದವು. ಖಾಸಗಿ ವಾಸದ ಮನೆಗಳು, ಊಟ ವಸತಿಗೃಹಗಳು, ಸರ್ಕಾರಿ ಬಿಡದಿಗಳು ಮುಂತಾದವೆಲ್ಲವೂ ವಾಸಗೃಹಗಳ ಪಂಗಡಕ್ಕೆ ಸೇರುವುವು. ಕೋರ್ಟು ಕಚೇರಿಗಳು, ವಿದ್ಯಾಲಯಗಳು, ಸಾರಿಗೆ ನಿಲ್ದಾಣಗಳು, ಸಾರ್ವಜನಿಕ ಪುಸ್ತಕ ಭಂಡಾರಗಳು, ಆಸ್ಪತ್ರೆಗಳು, ಮನರಂಜನಗೃಹಗಳು, ಉಪಾಹಾರ ಮಂದಿರಗಳು, ಕ್ರೀಡಾಗೃಹಗಳು ಮುಂತಾದ ಅನೇಕ ರೀತಿಯ ಲೋಕೋಪಯೋಗಿ ಗೃಹಗಳು ಎರಡನೆಯ ಬಗೆಯವು. ಕಾರ್ಖಾನೆಗಳು, ವಾಣಿಜ್ಯ ಸರಕುಗಳ ಉತ್ಪತ್ತಿ ಕಾರ್ಯಾಗಾರಗಳು, ವ್ಯಾಪಾರೋದ್ಯಮ ಸೌಧಗಳು ಮುಂತಾದವು ಮೂರನೆಯ ಪಂಗಡಕ್ಕೆ ಸೇರುವುವು. ನಾಲ್ಕನೆಯವು ದೇವಗೃಹಗಳು, ಅರಮನೆಗಳು, ಮತೀಯ ಸೌಧಗಳು, ಸ್ಮಾರಕ ಗೃಹಗಳು ಇತ್ಯಾದಿ. ಈ ಎಲ್ಲ ರೀತಿಯ ಗೃಹಗಳನ್ನು ಆಲೇಖ್ಯದ ದೃಷ್ಟಿಯಿಂದ ಏಳು ಭಾಗಗಳಾಗಿ ವಿಂಗಡಿಸಬಹುದು :

  1. ನಿವೇಶನ
  2. ಪಾಯ,
  3. ನಕಾಶೆ
  4. ಮೇಲ್ಕಟ್ಟಡ,
  5. ಛಾವಣಿ
  6. ದ್ವಾರಗಳು,
  7. ವಾಸ್ತುಶಿಲ್ಪ.
ತಳವಿನ್ಯಾಸ ಮತ್ತು ಆಲೇಖ್ಯವನ್ನುಸರಿಸಿ ನಿರ್ಮಿಸಿದ ಒಂದು ಗೃಹ

ಈ ಲೇಖನದಲ್ಲಿ ವಾಸಗೃಹದ ಆಲೇಖ್ಯದ ವಿಶ್ಲೇಷಣೆ ಮಾತ್ರ ಕೊಟ್ಟಿದೆ. ಉಳಿದ ಗೃಹಪ್ರರೂಪಗಳ ವಿವರಗಳಿಗೆ ಕಟ್ಟಡ ನೋಡಿ.


ನಿವೇಶನ

ಬದಲಾಯಿಸಿ

ವಾಸಗೃಹಗಳ ನಿವೇಶನ ಜನ ಮತ್ತು ವಾಹನಗಳ ಸಂದಣಿಯಿಂದ ದೂರವಾಗಿದ್ದು ದೂಳು, ಅತಿಶಬ್ದ ಮತ್ತು ಇತರ ವಿಧವಾದ ಗಲಭೆಗಳಿಗೆ ಅವಕಾಶವಿಲ್ಲದೆ ಇರುವ ಸ್ಥಳದಲ್ಲಿ ಇರಬೇಕು. ಅದು ಎತ್ತರವಾದ ಪ್ರದೇಶದಲ್ಲಿದ್ದು ಯಥೇಚ್ಛವಾದ ಗಾಳಿಬೆಳಕು ಗಳಿಗೆ ಪುರ್ಣ ಅವಕಾಶವಿದ್ದರೆ ಉತ್ತಮ. ಕಾಡು, ಜೌಗು ಮತ್ತು ಗಣಿ ಪ್ರದೇಶಗಳಿಂದ ದೂರವಾಗಿರಬೇಕು. ಈ ನಿವೇಶನದಿಂದ ಮಳೆಯ ನೀರು, ಬಚ್ಚಲ ನೀರು ಮತ್ತು ಒಳಚರಂಡಿ ನೀರು ನಿರುಪಾಧಿಕವಾಗಿ ಹರಿಯುವುದಕ್ಕೆ ಅನುಕೂಲತೆ ಇರಬೇಕು. ಅತಿವೃಷ್ಟಿ, ಬಿರುಗಾಳಿ, ಪ್ರವಾಹ ಮುಂತಾದ ಅತಿರೇಕಗಳಿಂದ ಈ ನಿವೇಶನ ಪೀಡಿತವಾಗಿರಬಾರದು. ಅಲ್ಲದೆ ಗೃಹದ ಸುತ್ತಲಿರುವ ನೆಲ ಗಿಡಮರಗಳ ಬೆಳೆವಣಿಗೆಗೆ ಯೋಗ್ಯವಾಗಿರಬೇಕು.


ಅಡಿಪಾಯ

ಬದಲಾಯಿಸಿ

ಸಾಧಾರಣವಾದ ವಸತಿಗೃಹಗಳ ಅಡಿಪಾಯದ ವಿನ್ಯಾಸ ಸಾಮಾನ್ಯವಾದ ಮಣ್ಣಿನಲ್ಲಿ ಅಷ್ಟೇನೂ ಕ್ಲಿಷ್ಟಕರವಾಗಿರುವುದಿಲ್ಲ. ಇಂಥ ಗೃಹಗಳಿಗೆ ಕಲ್ಲು ಅಥವಾ ಕಾಂಕ್ರೀಟ್ ಬಳಸಿ ಆಳವಿಲ್ಲದ ಹರಡು ಅಡಿಪಾಯ ಉಪಯೋಗಿಸ ಬಹುದು. ಭರ್ತಿ ಹಾಕಿದ ಮಣ್ಣು ಅಥವಾ ಬಲಹೀನವಾದ ಮಣ್ಣು ಸಿಕ್ಕಿದ ಎಡೆಗಳಲ್ಲಿ ಮ್ಯಾಟ್ ಅಥವಾ ರ್ಯಾಫ್ಟ್‌ ಎಂಬ ತೆಪ್ಪದ ಅಡಿಪಾಯವನ್ನು ಬಳಸಬೇಕಾಗುತ್ತದೆ. ಸಾಮಾನ್ಯವಾಗಿ 5 ಅಥವಾ 7 ವರಸೆಗಳಲ್ಲಿ ಕಲ್ಲುಕಟ್ಟಿ ಅಡಿಪಾಯ ಹಾಕಲಾಗುವುದು.


ವಾಸಿಸುವ ಜನಗಳ ಸಂಖ್ಯೆ, ದರ್ಜೆ, ಬೇಕಾಗುವ ಅನುಕೂಲತೆ ಮುಂತಾದವನ್ನು ವಸತಿಗೃಹಗಳ ನಕಾಶೆ ಅನುಸರಿಸುತ್ತದೆ. ಅತಿ ದೊಡ್ಡ ಕೊಠಡಿಗಳು, ಮೊಗಸಾಲೆಗಳು ಮುಂತಾದವು ಬೇಕಾಗುವುದಿಲ್ಲ. ಸಂಸಾರಕ್ಕೆ ಅವಶ್ಯಕವಾದ ಮಲಗುವ ಕೋಣೆಗಳು, ಅಡುಗೆಮನೆ, ಶೌಚಗೃಹ, ಹಜಾರ ಇವು ವಾಸಗೃಹಗಳ ನಕಾಶೆಯಲ್ಲಿ ಸಾಮಾನ್ಯವಾಗಿ ಇರಬೇಕಾದ ಅಂಶಗಳು.


ಮೇಲ್ಕಟ್ಟಡ

ಬದಲಾಯಿಸಿ

ವಾಸಗೃಹಗಳ ಮೇಲ್ಕಟ್ಟಡ ಸಾಮಾನ್ಯವಾಗಿ ಒಂದು ಅಥವಾ ಎರಡು ಅಂತಸ್ತುಗಳಿಗಿಂತ ಹೆಚ್ಚಾಗಿರುವುದಿಲ್ಲ. ಈಗ ಭಾರಿ ನಗರ ಪ್ರದೇಶಗಳಲ್ಲಿ ಅನೇಕ ಅಂಕಣಗಳುಳ್ಳ ಮತ್ತು ಪ್ರತಿ ಅಂತಸ್ತಿನಲ್ಲಿಯೂ ಸಂಸಾರಕ್ಕೆ ಯೋಗ್ಯವಾದ ಅನೇಕ ಉಪಗೃಹಗಳಿರುವ ಬೃಹತ್ ವಾಸಗೃಹಗಳು ರಚಿತವಾಗುತ್ತಿವೆ (ಫ್ಲ್ಯಾಟ್ಸ್‌). ಸಾಮಾನ್ಯ ಗೃಹಗಳಿಗೆ ಇಟ್ಟಿಗೆಯನ್ನು ಬಳಸುವುದು ವಾಡಿಕೆ. ಆದರೆ ಈ ವಠಾರಗಳಿಗೆ ಉಕ್ಕು ಪ್ರಬಲಿತ ಕಾಂಕ್ರೀಟುಗಳಿಂದ ಆದ ಕಂಬಗಳು ಮತ್ತು ಅಡ್ಡ ತೊಲೆಗಳನ್ನುಳ್ಳ ಹಂದರವನ್ನು ನಿರ್ಮಿಸಿ ತೆಳುವಾದ ಗೋಡೆಗಳನ್ನು ನಿರ್ಮಿಸುತ್ತಾರೆ. ಅಡ್ಡಗೋಡೆಗಳಿಗೆ ಮಣ್ಣು, ಕಲ್ಲು ಅಥವಾ ಮರವನ್ನು ಉಪಯೋಗಿಸುವ ವಿಧಾನ ಕ್ಷಯಿಸಿ ಈಗ ಕೇವಲ ಹಳ್ಳಿಗಳಲ್ಲಿ ಮಾತ್ರ ಇವು ಕಂಡುಬರುತ್ತವೆ.


ಮೇಲ್ಚಾವಣಿ

ಬದಲಾಯಿಸಿ

ವಾಸಗೃಹಗಳ ಛಾವಣಿಯ ರೀತಿ ಆಯಾ ಕಟ್ಟಡಗಳಲ್ಲಿನ ಅಂತಸ್ತುಗಳ ಸಂಖ್ಯೆ, ಪ್ರದೇಶದ ಹವೆ, ಕಟ್ಟಡದ ಉಪಯೋಗ ಮತ್ತು ಅದು ಇರುವ ಭೂವಲಯ ಇವನ್ನು ಅವಲಂಬಿಸಿರುತ್ತದೆ. ಛಾವಣಿಗಳೆಲ್ಲವೂ ಬಹು ಸಾಮಾನ್ಯವಾಗಿ ಚಪ್ಪಟೆಯಾಗಿರುತ್ತವೆ. ಮಳೆ ಅಧಿಕವಾಗಿ ಬೀಳುವ ಅಥವಾ ಮಂಜು ಬೀಳುವ ಪ್ರದೇಶಗಳಲ್ಲಿ ಇಳಿಜಾರು ಚಾವಣಿಗಳನ್ನು ಉಪಯೋಗಿಸಿ ನೀರು ಅಥವಾ ಮಂಜು ಸುಲಭವಾಗಿಯೂ ಜಾಗ್ರತೆಯಾಗಿಯೂ ಹರಿದುಹೋಗುವಂತೆ ಏರ್ಪಡಿಸಬೇಕಾಗುತ್ತದೆ. ಅನೇಕ ಅಂತಸ್ತುಗಳಿರುವ ವಾಸಗೃಹದ ಅತ್ಯಂತ ಮೇಲ್ಮಟ್ಟದ ಛಾವಣಿಯನ್ನು ಸದರಿ ಕಟ್ಟಡದ ಜನರ ದೈನಂದಿನ ಉಪಯೋಗ, ಅಂದರೆ ಬಟ್ಟೆ ಒಣಗಿಸುವುದು, ಕ್ರೀಡೆ ಅಥವಾ ಪಾರ್ಕು ಮುಂತಾದ ಸೌಲಭ್ಯಗಳಿಗೆ ಅನುಕೂಲವಾಗುವಂತೆ ರಚಿಸಬೇಕಾಗುತ್ತದೆ.


ದ್ವಾರಗಳು

ಬದಲಾಯಿಸಿ

ವಾಸಗೃಹಗಳ ದ್ವಾರಗಳು ಗಾಳಿ ಬೆಳಕು ಮತ್ತು ಜನರು ಸಾಮಾನ್ಯವಾಗಿ ಬಳಸುವ ಗೃಹಾಲಂಕರಣ ವಸ್ತುಗಳ ಪ್ರವೇಶಕ್ಕೆ ಅಡ್ಡಿಯಿಲ್ಲದಷ್ಟು ವಿಶಾಲವಾಗಿದ್ದು, ಕಳ್ಳಕಾಕರ ಪ್ರಯತ್ನಗಳನ್ನು ಎದುರಿಸಿ ನಿಲ್ಲುವಷ್ಟು ಬಲಯುತವಾಗಿರ ಬೇಕಾಗುತ್ತದೆ. ಬಿರುಗಾಳಿ, ಮಳೆ, ಹಿಮ ಮುಂತಾದವುಗಳ ಉಪದ್ರವವಿರುವೆಡೆಗಳಲ್ಲಿ ದ್ವಾರಗಳ ಗಾತ್ರ, ನೆಲ ಮತ್ತು ಸಾಮಗ್ರಿಗಳು ಈ ಉಪದ್ರವಗಳ ಬಾಧಕವಿಲ್ಲದಂತೆ ಇರಬೇಕು. ಗೃಹಗಳ ಸಂಯೋಜನೆ ಮತ್ತು ಅಂದದ ದೃಷ್ಟಿಯಿಂದ ದ್ವಾರಗಳ ಗಾತ್ರ, ಸಂಖ್ಯೆ ಮತ್ತು ಆಕಾರಗಳು ಯೋಗ್ಯವಾಗಿ ಇರಬೇಕು.


ವಾಸ್ತುಶಿಲ್ಪ

ಬದಲಾಯಿಸಿ

ವಾಸಗೃಹಗಳ ವಾಸ್ತುಶಿಲ್ಪ ನಿರ್ದಿಷ್ಟವಾಗಿರುವುದಿಲ್ಲ. ಹಿಂದೆ ಖಾಸಗಿ ಗೃಹಗಳು, ಮಾಲೀಕರ ದರ್ಜೆ ಮತ್ತು ಅಭೀಷ್ಟಗಳಿಗೆ ತಕ್ಕಂತೆ ಬಲು ಹೆಚ್ಚಿನ ಅಲಂಕಾರ, ಕೆತ್ತನೆ ಕೆಲಸಗಳು, ಬಣ್ಣಗಳಿಂದ ಕೂಡಿರುತ್ತಿದ್ದುವು. ಈಚೆಗೆ ವಾಸ್ತುಶಿಲ್ಪದ ರೀತಿಯೇ ಬದಲಾವಣೆಯಾಗಿ ಸರಳವಾದ ಸಂಯೋಜನೆ, ರೇಖಾಲಂಕಾರ ಮತ್ತು ವರ್ಣವಿನ್ಯಾಸಗಳಿಗೆ ಹೆಚ್ಚು ಗಮನ ಕೊಡಲಾಗುತ್ತಿದೆ.


ಗೃಹವಾಸ್ತು (ಹಸ್ತಪ್ರತಿಗಳಲ್ಲಿ)

ಬದಲಾಯಿಸಿ

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ವಾಸ್ತುಶಾಸ್ತ್ರದ ಹಸ್ತಪ್ರತಿಗಳು ಕಂಡುಬಂದಿದ್ದು ಕನ್ನಡದಲ್ಲಿ ಅದೊಂದು ಪ್ರತ್ಯೇಕ ಶಾಸ್ತ್ರವಾಗಿ ಬೆಳೆದು ಬಂದಿರುವುದಕ್ಕೆ ಸಾಕ್ಷಿಯಾಗಿದೆ. ಚಾವುಂಡರಾಯನ (ಪ್ರ.ಶ.ಸು. 1150) ‘ಲೋಕೋಪಕಾರ’ ಎಂಬ ಗ್ರಂಥದ ಹಸ್ತಪ್ರತಿಗಳಲ್ಲಿ ವಾಸ್ತುಶಾಸ್ತ್ರಕ್ಕೂ ಸ್ಥಾನ ಕಲ್ಪಿಸಲಾಗಿದೆ. ಇದರಲ್ಲಿ ನಿವೇಶನದ ಆಯ್ಕೆ, ಮನೆಯ ಉದ್ದಗಲಗಳು, ನಕ್ಷತ್ರಗಳ ಪ್ರಭಾವ, ಉಪಯೋಗಿಸಬಾರದಂತಹ ಮರಮುಟ್ಟುಗಳು ಮುಂತಾದ ವಿಚಾರಗಳನ್ನು ಹೇಳಲಾಗಿದೆ.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕುಮಾರವಾಸ್ತು ಸಟೀಕು, ಗೃಹವಾಸ್ತು ಪುಸ್ತಕ, ಜಲವಾಸ್ತು, ಜಲಶಿಲ್ಪ, ಧನವಾಸ್ತುನಿರ್ಣಯ, ವಾಸ್ತುಪ್ರಕಟಣ ಟೀಕು, ವಾಸ್ತುಶಾಸ್ತ್ರ, ವಾಸ್ತುಶಾಸ್ತ್ರ ಸಟೀಕು, ವಾಸ್ತುಪ್ರಕರಣ ಟೀಕು ಎಂಬ ಶೀರ್ಷಿಕೆಯ ಹಸ್ತಪ್ರತಿಗಳಿವೆ. ವಾಸ್ತುಶಾಸ್ತ್ರ ಪ್ರಕಾರದಂತೆ ನಿರ್ಮಿಸಿದ ಮನೆಗಳಿಂದ ವಾಸಿಸುವವರಿಗೆ ಸುಖ ಸಂತೋಷಗಳು ಉಂಟಾಗುತ್ತವೆ ಎಂಬ ಆಶಯವನ್ನು ಈ ಹಸ್ತಪ್ರತಿಗಳು ವ್ಯಕ್ತಪಡಿಸುತ್ತವೆ.

ಕನ್ನಡದಲ್ಲಿ ಸನತ್ಕುಮಾರ ವಾಸ್ತುಶಾಸ್ತ್ರ ಹಸ್ತಪ್ರತಿಗಳು ಜನಪ್ರಿಯವಾಗಿವೆ. ಇದರಲ್ಲಿ ಗೃಹನಿರ್ಮಾಣ ಮಾಡುವಾಗ ವಾಸ್ತುಪುರುಷನ ಯಾವ ಭಾಗದಲ್ಲಿ ಕಂಬ ನಿಲ್ಲಿಸ ಬೇಕೆಂಬುದನ್ನು ವಿವರಿಸಲಾಗಿದೆ. ಈ ರೀತಿ ಮಾನವ ದೇಹದ ಸದ್ಬಳಕೆಯಾಗಬೇಕೆಂಬು ದನ್ನು ಸೂಚಿಸಲಾಗಿದೆ.

ಆಯ ನೋಡಿ ಮನೆ ಕಟ್ಟಬೇಕೆಂಬುದು ಸನತ್ಕುಮಾರ ವಾಸ್ತುಶಾಸ್ತ್ರ ಹಸ್ತಪ್ರತಿಗಳ ಅಭಿಮತ. ಈ ಪ್ರಕಾರ ಆಯದ ಮಾಪನ ಹೀಗಿದೆ - ಮನೆಯ ಒಡೆಯನ ಹಸ್ತಪ್ರಮಾಣದಲ್ಲಿ ಎಷ್ಟು ಅಗಲ ಎಷ್ಟು ಉದ್ದ ಬರುತ್ತದೆಯೋ ಆ ಪ್ರಮಾಣದಲ್ಲಿ ಅಳತೆ ತೆಗೆದುಕೊಂಡು ಗುಣಿಸಿದಾಗ ಬರುವ ಲಬ್ಧವೇ ‘ಪಾದ’. ಈ ಪಾದವನ್ನು 8ರಿಂದ ಗುಣಿಸಿ 12ರಿಂದ ಭಾಗಿಸಿದರೆ ಉಳಿಯುವ ಶೇಷವೇ ಆಯ.

ಮನೆಗೆ ಮರ ಕಡಿಯಬೇಕಾದರೆ ಮೊದಲು ಮರಕ್ಕೆ ಹಾಲು ಜೇನುತುಪ್ಪ ಎರೆದು ಸಕಲ ದೇವತೆಗಳನ್ನು ನೆನೆದು ಮರದ ಕ್ಷಮೆ ಕೇಳಬೇಕು, ಮರ ಕತ್ತರಿಸಲು ಬಳಸುವ ಕೊಡಲಿ ಮತ್ತು ಬಾಚಿಗೆ ನೀರು ಜೇನುತುಪ್ಪ ಲೇಪಿಸಬೇಕು, ಇದರಿಂದ ಮರ ಹದನಾಗಿ ಕತ್ತರಿಸಲು ಬರುತ್ತದೆ ಹಾಗೂ ಮರ ಹುಳಿಯುವುದಿಲ್ಲ ಎಂದು ಸನತ್ಕುಮಾರ ವಾಸ್ತುಶಾಸ್ತ್ರದಲ್ಲಿ ವರ್ಣಿಸಿದೆ.


ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ‘ವಾಸ್ತುಶಾಸ್ತ್ರದ ಪುಸ್ತಕ’ ಎಂಬ ಹಸ್ತಪ್ರತಿಯಲ್ಲಿ ಸೂರ್ಯ ಯಾವ ರಾಶಿಯಲ್ಲಿದ್ದಾಗ ಮನೆ ಕಟ್ಟಬೇಕು, ಯಾವ ನಕ್ಷತ್ರದವರು ಯಾವ ಯಾವ ಮರಗಳನ್ನು ಕತ್ತರಿಸಬಾರದು, ಕತ್ತರಿಸಿದ ಮರ ಬೀಳುವ ಭಂಗಿ, ಹೇಗೆ ಬಿದ್ದರೆ ಅಂಥ ಮರದ ತುಂಡನ್ನು ಮನೆಗೆ ಬಳಸಬಾರದು ಎಂದು ಮರಮುಟ್ಟುಗಳ ಬಗೆಗೆ ವಿಚಾರ ಮಾಡಿದೆ. ದೇವಸ್ಥಾನ, ಕೆರೆಯ ತಡಿ, ಬಾವಿಯ ತಡಿ, ಸುಡುಗಾಡಿನಲ್ಲಿರುವ ಮರವನ್ನು ಕಡಿಯಬಾರದು. ಹಾಳು ಮನೆಯ ಮರ ಮತ್ತು ಒಬ್ಬರು ಕಡಿದುಬಿಟ್ಟ ಮರ ಬಳಸಬಾರದು ಎಂದೂ ಸೂಚಿಸಲಾಗಿದೆ. ಮರದ ಬಣ್ಣ ನೋಡಿ ಆ ಮರದಲ್ಲಿ ವಾಸಿಸಿದ್ದ ಪ್ರಾಣಿಗಳ ಹೆಸರು ಹೇಳುವ ನೈಪುಣ್ಯತೆ ಈ ಶಾಸ್ತ್ರಕಾರರಲ್ಲಿ ಕಂಡುಬರುತ್ತದೆ. ಮರ ಕೃಷ್ಣವರ್ಣ ಇದ್ದರೆ ಹಾವು, ವಿವರ್ಣವಾಗಿದ್ದರೆ ಚೇಳು ಮತ್ತು ಕಪ್ಪೆ, ಗೂಢವರ್ಣವಾಗಿದ್ದರೆ ಕಲ್ಲು ಇದ್ದುದನ್ನು ಭಾವಿಸಬಲ್ಲರು. ಇಂಥ ಮರಗಳು ಮನೆಗೆ ಯೋಗ್ಯವಲ್ಲ ಎಂಬ ಅಂಶ ಉಕ್ತವಾಗಿದೆ.

ಮನೆಯ ನಿವೇಶನ ಆಯ್ಕೆ ಮಾಡುವಾಗ ಹಾಲುಮರ ಇದ್ದ ಕಡೆ, ದೇವಾಲಯದ ಸಮೀಪ, ನೆರಳು ಬರುವ ಜಾಗ, ಜವುಳು ನೆಲ, ನೀರು ಹರಿವ ಸ್ಥಳ, ಶ್ಮಶಾನ, ಊರ ಹೆಬ್ಬಾಗಿಲು, ದನದ ಹಟ್ಟಿ, ಮರಳುನೆಲ, ಕೆಸರು ಹುಟ್ಟುವ ಎಡೆಗಳಲ್ಲಿ ಮನೆ ನಿರ್ಮಿಸಬಾರದೆಂಬುದು ಹೇಳಿದೆ.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: