ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿರುವ ಕ್ರೀಟ್ ದ್ವೀಪದ ಪೂರ್ವ ಭಾಗದಲ್ಲಿಯ ಮೆರಬೆಲ್ಲೊ ಖಾರಿ ಪ್ರದೇಶದಲ್ಲಿರುವ ಒಂದು ಉನ್ನತ ಸ್ಥಳ ಮತ್ತು ಸಾಧಾರಣ ಬಂದರು. ಕಂಚಿನ ಯುಗದ ಮಿನೋವನ್ ಸಂಸ್ಕೃತಿಯ ಕೊನೆಯ ಹಂತದ (ಪ್ರ.ಶ.ಪು. 1400-1100) ಅವಶೇಷಗಳು 1901-04ರಲ್ಲಿ ಇಲ್ಲಿ ಶೋಧಿಸಲ್ಪಟ್ಟವು. ಈ ದ್ವೀಪದ ನಾಸಸ್ ಎಂಬಲ್ಲಿ ಅರ್ಥರ್ ಜಾನ್ ಎವಾನ್ಸ್‌ 1899ರಲ್ಲಿ ನಡೆಸತೊಡಗಿದ ಉತ್ಖನನಗಳಿಂದ ಈ ಸಂಸ್ಕೃತಿ ಮೊದಲು ಬೆಳಕಿಗೆ ಬಂತು.


ಗೂರ್ನಿಯದಲ್ಲಿ ಎತ್ತರದಲ್ಲಿ ಮುಂಚಾಚಿದ ಕಲ್ಲುಬಂಡೆಯ ಕೆಳಗೆ ಮಿನೋವನ್ ಸಂಸ್ಕೃತಿಯ ಆದಿ (ಪ್ರ.ಶ. ಪು. 2500-2000) ಮತ್ತು ಮಧ್ಯ ಹಂತದ ಶ್ಮಶಾನವೂ ಸುತ್ತಣ ಪ್ರದೇಶದಲ್ಲಿ ಇತರ ಅವಶೇಷಗಳೂ ಇವೆ. ಒಂದು ದಿಣ್ಣೆಯ ಮೇಲೆ ಪ್ರ.ಶ.ಪು. ಸು. 1750-1550ರ ಕಾಲದ ಚದರ ಕಲ್ಲುಗಳಿಂದ ಕಟ್ಟಿದ ಅರಮನೆಯಿತ್ತು. ಇದರ ವಾಸ್ತು ನಾಸಸ್ನಲ್ಲಿಯ ಅರಮನೆಯನ್ನು ಹೋಲುವಂಥದು. ಇದು ಹಾಳು ಬಿದ್ದ ಮೇಲೆ ಇದರ ಸುತ್ತಲಿನ ಪ್ರದೇಶ ಒಂದು ಕೈಗಾರಿಕಾ ನಗರವಾಗಿ (ಪ್ರ.ಶ.ಪು. 1500-1450) ಬೆಳೆಯಿತು. ಇಲ್ಲಿ ಸಣ್ಣ ಕಲ್ಲುಗಳಿಂದ ಕಟ್ಟಿದ ಎರಡು ಅಂತಸ್ತುಗಳ ಮನೆಗಳಿದ್ದವು. ನಗರದ ಮಧ್ಯದ ಎತ್ತರ ಪ್ರದೇಶದಿಂದ ಲಂಬಕೋಣದಲ್ಲಿ ಛೇದಿಸಿದ ಬೀದಿಗಳು, ಒಳಗೂ ಹೊರಗೂ ಹೋಗಿ ಬರಲು ಅನುಕೂಲವಾಗುವ ಹಾಗೆ, ನಗರದ ಕೊನೆಯವರೆಗೂ ಬೆಳಕಿನ ಕಿರಣಗಳಂತೆ ಹಬ್ಬಿದ್ದುವು. ಒಂದು ಮನೆಯಲ್ಲಿ ಎಣ್ಣೆ ಕಡಾಯಿಯೂ ಇನ್ನೊಂದರಲ್ಲಿ ಬಡಗಿಯ ಉಪಕರಣಗಳೂ ಮತ್ತೊಂದರಲ್ಲಿ ಕುಂಬಾರರ ಚಕ್ರವೂ ದೊರಕಿವೆ. ಸಣ್ಣ ಗುಡಿಯಲ್ಲಿ ಮನೆದೇವತೆಯಾದ ಹೆಣ್ಣುದೇವರ, ಪಾರಿವಾಳಗಳ ಮಣ್ಣಿನ ಮೂರ್ತಿಗಳು, ಹಾವಿನಾಕಾರದ ಕೊಳವೆ, ವೇದಿಕೆ, ಕುಂಡ ಮುಂತಾದ ಪೂಜಾಸಾಮಗ್ರಿಗಳಿದ್ದುವು. ಅಷ್ಟಪಾದಿ ಮುಂತಾದ ಜಲಚರ ಪ್ರಾಣಿಗಳ ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟ ಮೃತ್ಪಾತ್ರೆಗಳು ಗಮನಾರ್ಹ. ಪ್ರ.ಶ.ಪು. ಸು. 1400ರಲ್ಲಿ ಭೂಕಂಪದಿಂದ ಸಂಭವಿಸಿದ ಬೆಂಕಿಯಿಂದ ಈ ನಗರ ಸುಟ್ಟುಹೋಯಿತು.


ಜಲಚರ ಪ್ರಾಣಿ ಚಿತ್ರಗಳನ್ನು ಮೃತ್ಪಾತ್ರೆಯ ಮೇಲೆ ಬಿಡಿಸುವ ಕಲಾಪದ್ಧತಿ ಇಲ್ಲಿಯೇ ಪ್ರಾರಂಭವಾಯಿತೆಂದು ತೋರುತ್ತದೆ.

"https://kn.wikipedia.org/w/index.php?title=ಗೂರ್ನಿಯ&oldid=668198" ಇಂದ ಪಡೆಯಲ್ಪಟ್ಟಿದೆ